'ಖಾಲಿ ಇರುವ 5 ಸಾವಿರ ವಿವಿಧ ಹುದ್ದೆಗಳ ಭರ್ತಿ'
ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿ ಮಾಡುವ ಬಗ್ಗೆ ಸಚಿವ ಎಸ್ ಟಿ ಸೋಮಶೇಖರ್ ಸೂಚನೆಯೊಂದನ್ನು ನೀಡಿದ್ದಾರೆ. ಇದರಿಂದ ಅನೇಕ ಉದ್ಯೋಗವಕಾಶಗಳು ಲಭಿಸಲಿದೆ.
ತುಮಕೂರು (ಜ.23): ರಾಜ್ಯದ ಸಹಕಾರ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಸಹಕಾರ ಬ್ಯಾಂಕ್/ಸಂಘಗಳಲ್ಲಿ ಖಾಲಿ ಇರುವ 5000 ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದರು.
ನಗರದ ತುಮಕೂರು ಜಿಲ್ಲಾ ಸಹಕಾರಿ ಬ್ಯಾಂಕ್‌ನಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸಹಕಾರ ಬ್ಯಾಂಕ್/ಸಂಘಗಳು ಸೇರಿದಂತೆ ಸಹಕಾರ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಸಂಘಗಳು/ಬ್ಯಾಂಕ್‌ಗಳಲ್ಲಿ 5000 ಖಾಲಿ ಇರುವ ಹುದ್ದೆಗಳ ಭರ್ತಿ ಮಾಡಲಾಗುವುದು. ಈಗಾಗಲೇ 2 ಸಾವಿರ ಹುದ್ದೆಗಳ ಭರ್ತಿಗೆ ಸಹಕಾರ ಇಲಾಖೆ ಅನುಮತಿ ನೀಡಿದೆ ಎಂದು ಅವರು ತಿಳಿಸಿದರು.
ಗುಡ್ ನ್ಯೂಸ್ : ಕೇಂದ್ರ ಯೋಜನೆಗೆ ಶಕ್ತಿ ತುಂಬುವ ಜೊತೆಗೆ ಉದ್ಯೋಗಾವಕಾಶವು ಹೆಚ್ಚಳ .
ಪ್ರತಿ ಗ್ರಾಮ ಪಂಚಾಯಿತಿಗೊಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ(ಪ್ಯಾಕ್ಸ್) ತೆರೆಯಲಾಗುವುದು. ಗುರಿ ಹೊಂದಲಾಗಿದೆ. ಉತ್ತರ ಕರ್ನಾಟಕ ಭಾಗದ ಗ್ರಾಮ ಪಂಚಾಯಿತಿಗಳಲ್ಲಿ 2-3 ಪ್ಯಾಕ್ಸ್‌ಗಳಿವೆ. ಪ್ರತಿ ಪಂಚಾಯಿತಿಗೊಂದು ಪ್ಯಾಕ್ಸ್ ಇದ್ದರೆ ಪ್ರಗತಿ ಸಾಧಿಸಲು ಅನುಕೂಲವಾಗುತ್ತಿದೆ. ರಾಜ್ಯದ ಎಲ್ಲಾ ಡಿಸಿಸಿ ಬ್ಯಾಂಕ್‌ಗಳಿಗಿಂತ ತುಮಕೂರಿನ ಡಿಸಿಸಿ ಬ್ಯಾಂಕುಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಜಿಲ್ಲೆಯಿಂದಲೇ ಪಂಚಾಯಿತಿಗೊಂದು ಪ್ಯಾಕ್ಸ್ ಸ್ಥಾಪನೆಗೆ ಚಾಲನೆ ನೀಡಲಾಗುವುದು. ನಂತರ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ವಿಸ್ತರಿಸಲಾಗುವುದು ಎಂದರು.
ರಾಜ್ಯದ ಅಪೆಕ್ಸ್ ಬ್ಯಾಂಕ್ ಹಾಗೂ 21 ಡಿ.ಸಿ.ಸಿ ಬ್ಯಾಂಕ್ ಒಳಗೊಂಡಂತೆ 5000 ಪ್ಯಾಕ್ಸ್‌ಗಳನ್ನು ಒಂದೇ ತಂತ್ರಾಂಶದಡಿ ತಂದು ಕಾರ್ಯನಿರ್ವಹಿಸುವ ಚಿಂತನೆ ನಡೆದಿದೆ. ಜನರಿಗೆ ತುಂಬಾ ಅನುಕೂಲವಾಗುವಂತಹ ಯಶಸ್ವಿನಿ ಯೋಜನೆಯನ್ನು ಮರು ಜಾರಿಗೆ ತರುವಂತೆ ಎಲ್ಲಾ ಸಹಕಾರ ಸಂಘ, ಬ್ಯಾಂಕ್, ಯುನಿಯನ್‌ಗಳಿಂದ ಕೋರಿಕೆ ಬರುತ್ತಿದೆ. ಈ ಬಗ್ಗೆ ಅಧಿಕಾರಿಗಳೊಡನೆ ಚರ್ಚಿಸಿದ್ದೇನೆ. ಈ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಆರೋಗ್ಯ ಇಲಾಖೆ ಮತ್ತು ಸಹಕಾರ ಇಲಾಖೆಗಳ ನಡುವೆ ಕೆಲ ವ್ಯತ್ಯಾಸಗಳಿದ್ದು, ಸದ್ಯದಲ್ಲೇ ಆರೋಗ್ಯ ಇಲಾಖೆಯ ಸಭೆ ಕರೆದು ಚರ್ಚಿಸಲಾಗುವುದು ಎಂದು ತಿಳಿಸಿದರು.
ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಭೇಟಿ ನೀಡಿ ಪರಿಶೀಲಿಸುತ್ತಿದ್ದು, ಸಹಕಾರ ಇಲಾಖೆ/ಕ್ಷೇತ್ರದ ಸಮಸ್ಯೆಗಳು ಕಂಡುಬಂದಲ್ಲಿ ಅವುಗಳನ್ನು ಸರಿಪಡಿಸಲು ಅಗತ್ಯವಿದ್ದರೆ ನಿಯಮಗಳಿಗೆ ತಿದ್ದುಪಡಿ ತರಲಾಗುವುದು ಎಂದು ತಿಳಿಸಿದರು.
ಕರ್ನಾಟಕ ಪ್ರವಾಸೋದ್ಯಮ ಇಲಾಖೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿ
ಸಹಕಾರ ಇಲಾಖೆಯ ಯೋಜನೆಗಳಾದ ಬಡವರ ಬಂಧು, ಎಸ್.ಸಿ/ಎಸ್.ಟಿ.ಗಳಿಗೆ ಸಾಲ ಸೌಲಭ್ಯ, ಕಾಯಕ ಯೋಜನೆ, ರೈತರಿಗೆ ಅಲ್ಪಾವಧಿ ಸಾಲ, ಮಧ್ಯಮಾವಧಿ ಸಾಲ, ದೀರ್ಘಾವಧಿ ಸಾಲಗಳ ವಿತರಣೆಗೆ ಸುಮಾರು 15300ಕೋಟಿ ರು. ಗುರಿ ಹೊಂದಲಾಗಿದೆ. ಈ ಪೈಕಿ 12543 ಕೋಟಿ ರು. ಸಾಲ ವಿತರಣೆ ಮಾಡಲಾಗಿದ್ದು, ಇದರಿಂದ ಶೇಕಡ 80% ರಷ್ಟುಪ್ರಗತಿ ಸಾಧಿಸಿದಂತಾಗಿದೆ. ಬರುವ ಮಾಚ್‌ರ್ ಅಂತ್ಯದೊಳಗಾಗಿ ಶೇ. 100%ರಷ್ಟುಪ್ರಗತಿ ಸಾಧಿಸುವ ಗುರಿ ಹೊಂದಲಾಗಿದೆ. ರೈತರ ಸಾಲ ಮನ್ನಾಗೆ ಸಂಬಂಧಿಸಿದಂತೆ ಬಾಕಿ ಇರುವ 295 ಕೋಟಿ ರು.ಗಳನ್ನು ಶೀಘ್ರವೇ ಬಿಡುಗಡೆಗೊಳಿಸಲಾಗುವುದು. ಇದರಲ್ಲಿ ತುಮಕೂರು ಡಿಸಿ.ಸಿ ಬ್ಯಾಂಕಿಗೂ 31 ಕೋಟಿ. ರು.ಗಳು ಬರಲಿದೆ ಎಂದರು.
ತುಮಕೂರು ಸಹಕಾರ ಬ್ಯಾಂಕ್ ಅಧ್ಯಕ್ಷ ಕೆ.ಎನ್ ರಾಜಣ್ಣ ಮಾತನಾಡಿ, ಸಚಿವರು ಬ್ಯಾಂಕ್‌ನ ಪ್ರಗತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಮ್ಮ ಜಿಲ್ಲೆಯಲ್ಲಿ ಉತ್ತಮ ಜನಪರ ಕೆಲಸಗಳನ್ನು ಮಾಡುವ ಇಚ್ಛೆ ಇದೆ. ಲಾಕ್‌ಡೌನ್ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರಿಗೆ, ಬೀದಿ ಬದಿ ವ್ಯಾಪಾರಿಗಳಿಗೆ ಅನುಕೂಲವಾಗುವಂತೆ ಸಾಲ ಸೌಲಭ್ಯಗಳನ್ನು ನೀಡಿದ್ದೇವೆ. ಸಹಕಾರ ಕೇತ್ರದಲ್ಲಿ ಯಶಸ್ಸು ಸಾಧಿಸುವ ಯೋಜನೆಗಳನ್ನು ತರಲು ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದರು.
ಸಂಸದ ಜಿ.ಎಸ್.ಬಸವರಾಜು, ಮಾಜಿ ಶಾಸಕ ಸುರೇಶ್ ಗೌಡ, ಸಹಕಾರ ಸಂಘಗಳ ಉಪಾಧ್ಯಕ್ಷ ಕಾಂತರಾಜ್, ಬ್ಯಾಂಕ್ ನಿರ್ದೇಶಕರು, ಸದಸ್ಯರು, ಆಡಳಿತವರ್ಗ ಸೇರಿದಂತೆ ಇತರರು ಉಪಸ್ಥಿತರಿದ್ದರು.