ಭೇರ್ಯ (ಫೆ.20):  ಎರಡು ವರ್ಷದಲ್ಲಿ ನನ್ನದೇ ಸರ್ಕಾರ ಬರುತ್ತದೆ ಆಗ ಬಡವರಿಗೆ ಅನ್ನಭಾಗ್ಯ ಯೋಜನೆ ಮೂಲಕ 10 ಕೆ.ಜಿ. ಅಕ್ಕಿಯನ್ನು ಉಚಿತವಾಗಿ ಕೋಡುತ್ತೇನೆ. ನನ್ನ ಮೇಲೆ ವಿಶ್ವಾಸವಿಡಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಕೆ.ಆರ್‌. ನಗರ ತಾಲೂಕು ಗಂಧನಹಳ್ಳಿ ಗ್ರಾಮದಲ್ಲಿ ಶ್ರೀಬೀರಲಿಂಗೇಶ್ವರ ದೇವಸ್ಥಾನವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದ ಅವರು, ನಾನು ಅನ್ನಭಾಗ್ಯ ಯೋಜನೆ ಮೂಲಕ ಬಡವರಿಗೆ 7 ಕೆ.ಜಿ. ಅಕ್ಕಿ ಜಾರಿ ಮಾಡಿದ್ದನ್ನು ಈಗಿನ ಬಿಜೆಪಿ ಸರ್ಕಾರ 5 ಕೆಜಿ ಕಡಿತ ಮಾಡಿದ್ದು, ಮುಂದಿನ ದಿನಗಳಲ್ಲಿ 3 ಕೆಜಿ ಮಾಡುವ ಹುನ್ನಾರ ನಡೆಯುತ್ತಿದೆ ಇದನ್ನು ಖಂಡಿಸುತ್ತೇನೆ. ಹಾಗೆನಾದರೂ ಮಾಡಿದರೆ ರಾಜ್ಯದ ಜನತೆಯೊಂದಿಗೆ ಬೀದಿಗಿಳಿದು ಹೋರಾಟ ಮಾಡುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಭ್ರಷ್ಟಬಿಜೆಪಿ ಸರ್ಕಾರ ಬಡವರಿಗೆ ಉಚಿತವಾಗಿ ಅಕ್ಕಿ ಕೊಡಲು ಹಿಂದೇಟು ಹಾಕುತ್ತಿದೆ. ಈಗಿರುವ ಆಹಾರ ಮಂತ್ರಿ ಟಿ.ವಿ., ಪ್ರೀಡ್ಜ್‌, ಬೈಕ್‌ ಇದ್ದರೆ ಬಿಪಿಎಲ… ಕಾರ್ಡ್‌ ರದ್ದು ಮಾಡುತ್ತೇನೆ ಎಂದಿದ್ದಾರೆ, ಆ ಮಂತ್ರಿಗೆ ತಲೆ ಕೆಟ್ಟಿದೆ ಇವರು ಬಡವರ ಹಾಗೂ ಕೂಲಿ ಕಾರ್ಮಿಕರ ವಿರೋಧಿಗಳು ಎಂದು ಯಡಿಯೂರಪ್ಪ ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದರು.

'ಗೋಮಾಂಸ ತಿನ್ಲಿ ಎಂದು ಸಿದ್ದರಾಮಯ್ಯಗೆ ಚಾಲೆಂಜ್‌ ಮಾಡಿಲ್ಲ'

ನಾನಾಗಲಿ ಅಥವಾ ಯಡಿಯೂರಪ್ಪ ಆಗಲಿ ನಮ್ಮ ಮನೆಗಳಿಂದ ಅಕ್ಕಿ ಕೊಡಲ್ಲ, ಸರ್ಕಾರದ ಹಣದಿಂದ, ಯಾಕ್ರಿ ಅಕ್ಕಿ ಕಡಿಮೆ ಮಾಡಿದ್ದೀರಿ ಎಂದರೆ ಕೊರೋನಾ ಎನ್ನುತ್ತಾರೆ. ಆದರೆ, ಕರ್ನಾಟಕ ರಾಜ್ಯದ ಬಜೆಚ್‌ 2.37 ಲಕ್ಷ ಕೋಟಿ, ಬಡವರ ಅಕ್ಕಿಗೆ ಖರ್ಚಾಗುವುದು ಬರಿ 5,600 ಕೋಟಿ ಎಂದರು. ಕೇವಲ ಇನ್ನೂ ಎರಡು ವರ್ಷ ಕಾಯಿರಿ ಮತ್ತೆ ನಮ್ಮ ಸರ್ಕಾರ ಬರುತ್ತದೆ ನಾನೇ ಕೋಡುತ್ತೇನೆ ಎಂದರು.

ಸಂಗೋಳ್ಳಿ ರಾಯಣ್ಣ ಹಾಗೂ ಕನಕದಾಸರು ಇಂದಿನ ಯುವ ಪೀಳಿಗೆಗೆ ಮಾರ್ಗದರ್ಶಕರು, ಯುವಕರು ಮಹಾನ್‌ ವ್ಯಕ್ತಿಗಳ ತತ್ವ ಸಿದ್ಧಾಂತಗಳನ್ನು ಪಾಲಿಸುವಂತೆ ಕರೆ ನೀಡಿದ ಅವರು, ನಾನು ಮುಖ್ಯ ಮಂತ್ರಿಯಾಗಿದ್ದಾಗ ಸಂಗೋಳ್ಳಿ ರಾಯಣ್ಣ ಪ್ರಾಧಿಕಾರ ರಚನೆ ಮಾಡಿ ಅಭಿವೃದ್ಧಿಗಾಗಿ 260 ಕೋಟಿ ಹಣವನ್ನು ಸಹ ಇಟ್ಟಿದೆ, ನಮ್ಮ ಸರ್ಕಾರ ಹೋದ ಮೇಲೆ ಅಭಿವೃದ್ಧಿ ಕಾರ್ಯಕ್ರಮಗಳು ನಡೆಯಲಿಲ್ಲ ಮುಂದಿನ ದಿನಗಳಲ್ಲಿ ಸಂಗೋಳ್ಳಿ ರಾಯಣ್ಣ ಅಭಿವೃದ್ಧಿ ಪ್ರಾಧಿಕಾರದ ಕಾರ್ಯ ನಡೆಯಲಿ, ಇದ್ದಕ್ಕಾಗಿ ಬಿಜೆಪಿ ಸರ್ಕಾರದಲ್ಲಿ ನಮ್ಮ ಕುರುಬ ಸಮಾಜದ ನಾಲ್ವರು ಮಂತ್ರಿಗಳು ಇದ್ದಾರೆ, ಈ ಬಗ್ಗೆ ಮುಖ್ಯಮಂತ್ರಿಗಳ ಜತೆಯಲ್ಲಿ ಚರ್ಚಿಸಿ ಹಣ ಬಿಡುಗಡೆ ಮಾಡಿಸಿ ಕಾಮಗಾರಿ ಪ್ರಾರಂಭಿಸಿ ಎಂದು ವೇದಿಕೆಯಲ್ಲಿದ್ದ ತೋಟಗಾರಿಕೆ ಸಚಿವ ಆರ್‌. ಶಂಕರ್‌ ಅವರಿಗೆ ಹೇಳಿದರು.

ಇನ್ನೂ ಗಂಧನಹಳ್ಳಿ ಗ್ರಾಮ ನಾನು ಲಾಯರ್‌ ಆಗಿದ್ದಾಗನಿಂದಲೂ ಪರಿಚಯ. ಹಾಗಾಗಿ ಗಂಧನಹಳ್ಳಿ ಗ್ರಾಮದ ಜನರು ನನ್ನನ್ನು ಕಂಡರೆ ಬಹಳ ಪ್ರೀತಿ ನನಗೂ ಸಹ ಈ ಗ್ರಾಮದ ಬಗ್ಗೆ ಅಪಾರವಾದ ಪ್ರೀತಿ ವಿಶ್ವಾಸ ಇದೆ. ಗಂಧನಹಳ್ಳಿ ಗ್ರಾಮದಲ್ಲಿ ಇನ್ನು ಮೂಲಭೂತ ಸೌಕರ್ಯಗಳನ್ನೇ ಮಾಡಿಲ್ಲ, ಕುಡಿಯುವ ನೀರಿನ ಘಟಕವನ್ನು ಕೇಳಿದ್ದೀರಿ, ವಿಧಾನಪರಿಷತ್‌ ಸದಸ್ಯ ಆರ್‌. ಧರ್ಮಸೇನ ಅನುದಾನದ ಮೂಲಕ ಮಾಡಿಸುತ್ತೇನೆ ಎಂದು ಹೇಳಿದ ಅವರು, ನಾನೇ ಗಂಧನಹಳ್ಳಿ ಗ್ರಾಮದ ಆಸ್ಪತ್ರೆ, ಪಶುವೈದ್ಯ ಆಸ್ಪತ್ರೆ, ಪ್ರೌಢಶಾಲೆ ಕೊಟ್ಟಿದ್ದು, ಈಗ ಹಾಸ್ಟಲ್ ಕೇಳಿದ್ದೀರಿ ಆದರೆ ಹಾಸ್ಟಲ್ ಬೇಡ ಮೊರಾರ್ಜಿ ದೇಸಾಯಿ ವಸತಿ ಶಾಲೆಯನ್ನೇ ಕೊಡುತ್ತೇನೆ, ಕಪ್ಪಡಿ ಸೇತುವೆ ಎಲ್ಲವನ್ನು ಮಾಡುತ್ತೇನೆ. ಇನ್ನು ಎರಡು ವರ್ಷ ಕಾಯಬೇಕೆಂದರು.

ವಿಧಾನಪರಿಷತ್‌ ಸದಸ್ಯ ಆರ್‌. ಧರ್ಮಸೇನ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಬಿ.ಜೆ. ವಿಜಯಕುಮಾರ್‌, ರಾಜ್ಯ ಅಪೆಕ್ಸ್‌ ಬ್ಯಾಂಕ್‌ ಉಪಾಧ್ಯಕ್ಷ ಜಿ.ಡಿ. ಹರೀಶ್‌ಗೌಡ, ಎಂಡಿಎ ಮಾಜಿ ಅಧ್ಯಕ್ಷ ಎಚ್‌.ಎನ್‌. ವಿಜಯ, ಕೆಪಿಸಿಸಿ ಕಾರ್ಯಕಾರಣಿ ಸದಸ್ಯರಾದ ದೊಡ್ಡಸ್ವಾಮೀಗೌಡ, ಎಸ್‌.ಪಿ. ತಮ್ಮಯ್ಯ, ಜಿಪಂ ಸದಸ್ಯ ಡಿ. ರವಿಶಂಕರ್‌, ಎಐಸಿಸಿ ವಕ್ತಾರೆ ಐಶ್ವರ್ಯ ಮಹದೇವ್‌, ಮೂಳೆ ತಜ್ಞ ಡಾ. ಮೆಹಬೂಬ ಖಾನ್‌, ವಿಧಾನಪರಿಷತ್‌ ಮಾಜಿ ಸದಸ್ಯ ಪುಟ್ಟಸಿದ್ದಶೆಟ್ಟಿ, ಉದ್ಯಮಿ ಜೆ.ಜೆ. ಆನಂದ್‌, ತಾಲೂಕು ಕುರುಬ ಸಂಘದ ಅಧ್ಯಕ್ಷ ಶಿವಣ್ಣ , ಗ್ರಾಪಂ ಅಧ್ಯಕ್ಷೆ ರಾಜಮ್ಮ, ತಾಪಂ ಅಧ್ಯಕ್ಷ ಚಂದ್ರಶೇಖರ್‌, ಸದಸ್ಯರಾದ ಮಂಜುನಾಥ್‌, ಕೆ.ಪಿ. ಯೋಗೇಶ್‌, ಪುರಸಭೆ ಅಧ್ಯಕ್ಷ ಸುಬ್ರಹ್ಮಣ್ಯ, ಗ್ರಾಮದ ಯಜಮಾನ ರಘು, ದೇವರಾಜ, ಗ್ರಾಪಂ ಮಾಜಿ ಅಧ್ಯಕ್ಷ ಜಿ.ಆರ್‌, ಸತೀಶ್‌ ಇದ್ದರು.

ಮತ್ತೆ ಡಿ.ರವಿ ಶಂಕರ್‌ಗೆ ಟಿಕೆಟ್‌ ನೀಡುತ್ತೇನೆ, ಅಧಿಕ ಮತಗಳಿಂದ ಗೆಲ್ಲಿಸಿ

ಕಳೆದ ವಿಧಾನಸಭಾ ಚುನಾವಣೆಯಲ್ಲಿ ದಿ.ಮಂಚನಹಳ್ಳಿ ಮಹದೇವ್‌ ಮಗಳು ಐಶ್ವರ್ಯಳಿಗೆ ಟಿಕೆಟ್‌ ತಪ್ಪಿಸಿ ಡಿ.ರವಿ ಶಂಕರ್‌ಗೆ ನೀಡಿದೆ, ಪಾಪ ಅಲ್ಪ ಮತದಲ್ಲಿ ಸೋತ, ಈ ಬಾರಿ ಹಾಗೇ ಹಾಗಬಾರದು ಮತ್ತೆ ಡಿ. ರವಿಶಂಕರ್‌ಗೆ ಟಿಕೆಟ್‌ ನೀಡುತ್ತೇನೆ, ಅಧಿಕ ಮತಗಳಿಂದ ಗೆಲಿಸುವ ಜವಾಬ್ದಾರಿ ನಿಮ್ಮದು ಎಂದು ಸಿದ್ದರಾಮಯ್ಯ ಹೇಳಿದರು. ಮುಂಬರುವ ಕೆ.ಆರ್‌. ನಗರ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಡಿ. ರವಿಶಂಕರ್‌ ಎಂದು ವೇದಿಕೆಯಲ್ಲಿ ಘೋಷಣೆ ಮಾಡಿದರು.

ನಂತರ ತೋಟಗಾರಿಕೆ ಸಚಿವ ಆರ್‌. ಶಂಕರ್‌ ಹಾಗೂ ಮಾಜಿ ಸಚಿವರಾದ ಸಿ.ಎಚ್‌. ವಿಜಯಶಂಕರ್‌, ಎಚ್‌.ಎಂ. ರೇವಣ್ಣ ಮಾತನಾಡಿದರು.ಗಂಧನಹಳ್ಳಿ ಗ್ರಾಮದ ಯಜಮಾನರು ಎಲ್ಲರನ್ನು ಅಭಿನಂದಿಸಿದರು.