ಚಾಮರಾಜನಗರ(ಫೆ.18): ಗೋ ಮಾಂಸ ತಿನ್ನುವಂತೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಚಾಲೆಂಜ್‌ ಮಾಡಿಲ್ಲ ಎಂದು ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್‌ ಹೇಳಿದ್ದಾರೆ. 

ನಗರದಲ್ಲಿ ಬುಧವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಗೋ ಮಾಂಸ ತಿನ್ತೀನಿ ತಿನ್ತೀನಿ ಎಂದು ಅವರೇ ಪದೇ ಪದೆ ಹೇಳುತ್ತಿದ್ದರು. ಅವರ ಹೇಳಿಕೆ ಸರಿಯಿಲ್ಲ ಎಂದು ಹೇಳಿದ್ದೇನೆ ಹೊರತು ಚಾಲೆಂಜ್‌ ಮಾಡಿಲ್ಲ ಎಂದರು. ರಾಮಮಂದಿರಕ್ಕೆ ಹಣ ಕೊಡುವುದಿಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಕೊಡಲ್ಲ ಅಂತಾರೆ, ಅವರ ಮಗ ದೇಣಿಗೆ ಕೊಟ್ಟಿದ್ದಾರೆ. ರಾಮಮಂದಿರ ನಿರ್ಮಾಣಕ್ಕೆ ದೇಶಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಹಣ ಪಡೆದಿರುವ ಲೆಕ್ಕ ಪಾರದರ್ಶಕವಾಗಿದ್ದು ಪ್ರತಿಯೊಂದಕ್ಕೂ ಲೆಕ್ಕ ಕೊಡುತ್ತೇವೆ ಎಂದರು.

ದೇಣಿಗೆ ಕೊಡದ ಮನೆಗಳನ್ನು ಗುರುತು ಮಾಡಿಕೊಳ್ಳಲಾಗುತ್ತಿದೆ ಎಂಬ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವರು, ಕುಮಾರಸ್ವಾಮಿ ದೊಡ್ಡ ಮನುಷ್ಯ ಸುಳ್ಳು ಹೇಳುತ್ತಿದ್ದಾರೆ. ವಿಪಕ್ಷಗಳ ಕೆಲಸವೇ ವಿರೋಧಿಸುವುದು, ಅವರು ಬರೀ ಸುಳ್ಳು ಹೇಳಿದ್ದಾರೆ, ಅವರು ವಿರೋಧಿಸಲಿ ನಾವು ಕೆಲಸ ಮಾಡುತ್ತೇವೆಂದು ಎಂದು ತಿರುಗೇಟು ನೀಡಿದರು.

ರಾಜೀನಾಮೆಗೆ ಮೀನಮೇಷ : ಕೈ ಮುಖಂಡರಿಂದ ಹೆಚ್ಚಿದ ಒತ್ತಡ

ಯಾವುದೇ ಕಾಂಟ್ರವರ್ಸಿ ಇಲ್ಲಾ:

ಗೋಹತ್ಯೆ ನಿಷೇಧ ಮಸೂದೆ ಕುರಿತು ಮಾತನಾಡಿದ ಅವರು, ದೀಪಾವಳಿಗೆ ಗೋಮಾತೆ ಪೂಜಿಸುತ್ತೀರಿ, ಸಂಕ್ರಾಂತಿಗೆ ಪೂಜೆ ಮಾಡ್ತೀರಿ ಮತ್ತೆ ಯಾಕೆ ಗೋಮಾತೆಯನ್ನು ಕಟ್‌ ಮಾಡ್ತೀರಿ ಎಂದು ಪ್ರಶ್ನಿಸಿದ ಅವರು, ಕಾಯ್ದೆಯಲ್ಲಿ ಯಾವುದೇ ಕಾಂಟ್ರವರ್ಸಿ ಇಲ್ಲಾ. ಒಂದು ವರ್ಷ ಸಮಯ ಕೊಡಿ ಗೋಮೂತ್ರ, ಸಗಣಿ ಹಾಗೂ ಇತರೆ ಗೋ ಉತ್ಪನ್ನಗಳು ಹೇಗೆ ಲಾಭದಾಯಕ ಎಂದು ತೋರಿಸುತ್ತೇನೆ. ಹತ್ಯೆ ಮಾಡುವುದರಿಂದ ಏನು ಸಿಗದು. ಈಗಾಗಲೇ 19 ರಾಜ್ಯಗಳಲ್ಲಿ ಗೋಹತ್ಯೆ ನಿಷೇಧವಾಗಿದೆ. ಈ ಕಾಯ್ದೆಯಿಂದ ರೈತರಿಗೆ ಲಾಭವಿದೆ ಎಂದು ಅವರು ಹೇಳಿದರು.