ಆಲೂರು [ಜ.10] :  ಹಣಕೊಟ್ಟು ಶಾಸಕರನ್ನು ಖರೀದಿಸಿ ನಮ್ಮ ಸರ್ಕಾರವನ್ನು ಬೀಳಿಸಿರಬಹುದು. ಬಿಜೆಪಿ ಸರ್ಕಾರ ಸಹ ಬಹಳ ದಿನ ಉಳಿಯಲಾರದು. ಇಷ್ಟಕ್ಕೆ ನಮ್ಮ ಸರ್ಕಾರ ಮುಗಿದೇ ಹೋಯಿತೆಂದು ಜಿಲ್ಲೆಯ ಜನರು ಧೃತಿ ಗೆಡುವುದು ಬೇಡ. ದೇವೇಗೌಡರ ಕಾಲಾವಧಿಯಲ್ಲೇ ನೀವು ನಮಗೆ ನೀಡಿದ ಋುಣವನ್ನು ತೀರಿಸುತ್ತೇವೆಂದು ಮಾಜಿ ಸಚಿವ ಎಚ್‌.ಡಿ.ರೇವಣ್ಣ ಅವರು ಹೇಳಿದರು.

ತಾಲೂಕಿನ ಮಾದೀಹಳ್ಳಿ ಗ್ರಾಮದಲ್ಲಿ ಬುಧವಾರ ಹಾಸನ ಹಾಲು ಉತ್ಪಾದಕರ ಸಂಘದ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.

ನಾವು ಹಲವು ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೆವು. ಯಡಿಯೂರಪ್ಪ ಸರ್ಕಾರ ನಮ್ಮ ಕಾಲದಲ್ಲಿ ಕೈಗೊಂಡ ರಸ್ತೆ ಮತ್ತಿತರ ಕಾರ್ಯಗಳಿಗೆ ತಡೆಯೊಡ್ಡಿದರೂ ಹೇಗೆ ಕೆಲಸ ಮಾಡಿಸ ಬೇಕೆಂಬುದು ಗೊತ್ತು ಎಂದರು.

ರೈತರ ಸಾಲ ಬಾಕಿ ಇಲ್ಲಿದ ರೀತಿಯಲ್ಲಿ ಮನ್ನಾ ಮಾಡಬೇಕೆಂದು, ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದಾಗ ದೇವೇಗೌಡರು, ನಾನು ಮತ್ತು ಕುಮಾರಸ್ವಾಮಿ ಮೂವರು ಮಾತನಾಡಿಕೊಂಡಿದ್ದೆವು. ಆದರೆ, ಪೂರ್ಣ ಅವಕಾಶ ದೊರೆಯಲಿಲ್ಲ. ಯಡಿಯೂರಪ್ಪ ಅವರು ರೈತರ ಸಾಲಮನ್ನಾ ಮಾಡಿಲಿ ಎಂದು ಸವಾಲು ಹಾಕಿದರು.

ಹಾಸನ ಹಾಲು ಒಕ್ಕೂಟವು ಲೀಟರ್‌ಗೆ 29 ರು. ನೀಡುತ್ತಿದೆ. ರಾಜ್ಯದ ಯಾವ ಒಕ್ಕೂಟಗಳಲ್ಲೂ ಇಷ್ಟುಹಣ ಕೊಡುತ್ತಿಲ್ಲ. ಈ ಭಾಗದ ಕಾಡಾನೆಗಳ ಸಮಸ್ಯೆ ನಿವಾರಣೆಗೆ 200 ಕೋಟಿ ರುಪಾಯಿ ತೆಗೆದಿಟ್ಟು ಆನೆ ಕಾರಿಡಾರ್‌ ಬಾರಿ ಬಗ್ಗೆ ಚರ್ಚಿಸಿದ್ದೆವು. ಪಕ್ಕದ ನಾಗಾವರದಲ್ಲಿ ಕಾಡಾನೆ ಶಿಬಿರ ತೆರೆಯುವ ಬಗ್ಗೆಯೂ ಗಮನ ಹರಿಸಿದ್ದೆವು ಎಂದರು.

ಆನೆ ಹಾವಳಿ ಪ್ರದೇಶಗಳಲ್ಲಿಗ ಮಕ್ಕಳು ಹೊರಗಿನ ಶಾಲೆಗಳಿಗೆ ಹೋಗಲು ಅನಾನುಕೂಲ ಆಗುತ್ತಿರುವುದರಿಂದ ಮೊರಾರ್ಜಿ ಶಾಲೆ ಮಾದರಿಯ ಶಾಲೆಗಳನ್ನು ಪ್ರಾರಂಭಿಸುವ ಚಿಂತನೆ ಇತ್ತು. ಈಗಲೂ ಆ ಪ್ರಯತ್ನ ಮಾಡಲಾಗುವುದು. ಮಾದೀಹಳ್ಳಿ ಸುತ್ತಲ ವ್ಯಾಪ್ತಿಯ ರಸ್ತೆ, ದೇವಸ್ಥಾನ, ಅಂಬೇಡ್ಕರ್‌ ಭವನಗಳ ನಿರ್ಮಾಣಕ್ಕೆ ಈಗಾಗಲೇ 5 ಕೋಟಿ ರು. ನೀಡಲಾಗಿದ್ದು, ಮುಂದೆ ಸಂಸದರ ನಿಧಿ ಸೇರಿ ಬೇರೆ-ಬೇರೆ ಅನುದಾನಗಳ ಮೂಲಕ ಕೆಲಸ ಮಾಡಿಸಿಕೊಡುವುದಾಗಿ ತಿಳಿಸಿದರು.

ಶಾಸಕ ಎಚ್‌.ಕೆ.ಕುಮಾರಸ್ವಾಮಿ ಅವರು ಮಾತನಾಡಿ, ಜೆಡಿಎಸ್‌ ಸರ್ಕಾರದ ಅವಧಿಯಲ್ಲಿ ಮಂಜೂರಾದ ಕೆಲಸಗಳಿಗೆ ಬಿಜೆಪಿ ಸರ್ಕಾರ ತಡೆ ಒಡ್ಡುತ್ತಿದೆ. ನಮ್ಮ ಕ್ಷೇತ್ರದ ಹಲವು ಕಾಮಗಾರಿಗಳಿಗೆ ಅಡ್ಡಿಯಾಗಿದೆ. ಸರ್ಕಾರದ ಮಟ್ಟದಲ್ಲಿ ಹೋರಾಟ ಮಾಡಿ ಅನುದಾನ ತಂದು ಸಮಸ್ಯೆ ಇತ್ಯರ್ಥ ಪಡಿಸುತ್ತೆವೆ ಎಂದರು.

ಮಂಡ್ಯ ಚುನಾವಣೆ ಬಳಿಕ ರಾಜಕೀಯ ವೈರಾಗ್ಯಕ್ಕೆ ಹೋಗಿ ಬಿಟ್ಟರಾ ಕುಮಾರಣ್ಣ...

ಈ ಭಾಗದ ರಸ್ತೆ ದುರಸ್ತಿಗಾಗಿ ಎತ್ತಿನಹೊಳೆ ಯೋಜನೆಯಡಿ 5 ಕೋಟಿ ರು. ಕಾಮಗಾರಿಗೆ ಮಂಜೂರಾತಿ ದೊರೆತಿದೆ. ಸದ್ಯದಲ್ಲಿಯೇ ಕೆಲಸ ಪ್ರಾರಂಭಿಸಲಾಗುವುದು. ಕಾಡಾನೆ ಸಮಸ್ಯೆ ನಿವಾರಣೆಗೆ ಪ್ರಯತ್ನಪಟ್ಟರೂ ಪ್ರಯೋಜನ ಆಗುತ್ತಿಲ್ಲಿವೆಂದು ಬೇಸರ ವ್ಯಕ್ತಪಡಿಸಿದರು.

ಪತ್ರಕರ್ತ ಜೆ.ಆರ್‌.ಕೆಂಚೇಗೌಡ ಮಾತನಾಡಿದರು. ಎಪಿಎಂಸಿ ಅಧ್ಯಕ್ಷ ಕೆಎಸ್‌ಎಸ್‌ ಮಂಜೇಗೌಡ, ಹಾಸನ ಹಾಲು ಒಕ್ಕೂಟದ ನಿರ್ದೇಶಕ ಕೆ.ಸತೀಸ್‌, ಜಯರಾಮ್‌, ಜೆಡಿಎಸ್‌ ಮುಖಂಡರಾದ ನಂಜುಡೇಗೌಡ, ಅಜ್ಜೇಗೌಡ, ತನುಗೌಡ, ಕಾಂತರಾಜು, ಮಹೇಂದ್ರ ಮತ್ತಿತರರು ಭಾಗವಹಿಸಿದ್ದರು. ಹಾಲು ಉತ್ಪಾದಕರ ಸಂಘದ ಆಧ್ಯಕ್ಷ ಲಕ್ಮೇಗೌಡ ಅವರು ಅಧ್ಯಕ್ಷತೆ ವಹಿಸಿದ್ದರು.