ಮಂಡ್ಯದಲ್ಲಿ ಮಾನವೀಯತೆ ಮರೆತ ಮಗನೊಬ್ಬ ತನ್ನ ವೃದ್ಧ ತಾಯಿಯನ್ನು ರಸ್ತೆ ಬದಿಯಲ್ಲಿ ಕೈಬಿಟ್ಟು ಹೋಗಿರುವ ಘಟನೆ ನಡೆದಿದೆ. ಸ್ಥಳೀಯರ ಸಹಾಯದಿಂದ ವೃದ್ಧೆಗೆ ಆಹಾರ ಒದಗಿಸಲಾಗಿದ್ದು, ಸರ್ಕಾರಿ ಅಧಿಕಾರಿಗಳು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಮಂಡ್ಯ (ಜೂ.23): ಮಾನವೀಯತೆ ಮರೆತ ಮಗನೊಬ್ಬನ ಕೃತ್ಯ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಕಿರುಗಾವಲು ಗ್ರಾಮದಲ್ಲಿ ನಡೆದಿರುವ ಈ ದುಃಖದ ಘಟನೆ ಹಲವರ ಮನವನ್ನು ಮಡುಗಟ್ಟಿಸಿದೆ.

ಸ್ಥಳೀಯರ ಮಾಹಿತಿ ಪ್ರಕಾರ, ಸುಮಾರು 70-80 ವರ್ಷದ ವೃದ್ಧೆ ತೀವ್ರ ಮಾನಸಿಕ ಅಸ್ವಸ್ಥಳಾಗಿದ್ದು, 'ನನ್ನ ಮಗ ಬಂದು ಕರೆದುಕೊಂಡು ಹೋಗ್ತಾನೆ' ಎಂಬ ನಂಬಿಕೆಯಲ್ಲಿಯೇ ರಸ್ತೆಯ ಬದಿಯಲ್ಲಿ ಕುಳಿತಿದ್ದಳು. ಆದರೆ ವಾಸ್ತವದಲ್ಲಿ ಆ ತಾಯಿಯನ್ನು ಅಲ್ಲಿಯೇ ಬಿಟ್ಟು, ತನ್ನ ಜವಾಬ್ದಾರಿಯನ್ನು ತಳ್ಳಿ ಹಾಕಿದ ಮಗ ಪರಾರಿಯಾಗಿದ್ದಾನೆ ಎಂಬುದು ವೃದ್ಧೆಗೆ ಗೊತ್ತೇ ಇಲ್ಲ. ಈ ಘಟನೆ ಕಂಡ ಕಿರುಗಾವಲು ಗ್ರಾಮದ ಸ್ಥಳೀಯರು ಆ ವೃದ್ಧೆಗೆ ಆಹಾರ ನೀಡಿ ಸಹಾನುಭೂತಿ ತೋರಿಸಿದ್ದಾರೆ. ವೃದ್ಧೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮುಂದಾಗಿ ತಕ್ಷಣ ಕಾರ್ಯಪ್ರವೃತ್ತವಾಗಿದ್ದು, ತಾಯಿಯ ರಕ್ಷಣೆ ಜವಾಬ್ದಾರಿ ತೆಗೆದುಕೊಂಡಿದೆ.

ಸದ್ಯ ವೃದ್ಧೆಯನ್ನು ಮಂಡ್ಯ ಮಿಮ್ಸ್ (Mandya Institute of Medical Sciences) ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ವೈದ್ಯಕೀಯ ನೆರವಿನೊಂದಿಗೆ ಆವಳಿಗೆ ಮಾನಸಿಕ ತಜ್ಞರ ಸಹಾಯವೂ ಒದಗಿಸಲಾಗುತ್ತಿದೆ. ಈ ಘಟನೆ ಹಿರಿಯ ನಾಗರಿಕರ ಬಗ್ಗೆ ಸಮಾಜ ಹೊಂದಿರುವ ನಿರ್ಲಕ್ಷ್ಯವನ್ನು ಪ್ರತಿಬಿಂಬಿಸುತ್ತದೆ. ಇಂತಹ ಘಟನೆಗಳು ಪುನರಾವೃತ್ತಿಯಾಗದಂತೆ ಸರ್ಕಾರ ಮತ್ತು ಸ್ಥಳೀಯ ಆಡಳಿತ ಸಂಸ್ಥೆಗಳು ಜವಾಬ್ದಾರಿ ತೆಗೆದುಕೊಳ್ಳಬೇಕಿದೆ. ಮಾನವೀಯತೆ ಮರೆತ ಮಗನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆಯೇ ಎಂಬ ಪ್ರಶ್ನೆ ಇದೀಗ ಸಾರ್ವಜನಿಕರಲ್ಲಿ ಉದ್ಭವವಾಗಿದೆ.

View post on Instagram