ಕೊಪ್ಪಳ(ಆ.10): ಬಿಜೆಪಿ ಸರ್ಕಾರದ ವರ್ಷದ ಸಾಧನೆ ಏನು? ಎಂದು ಕಾಂಗ್ರೆಸ್‌ ಕಾರ್ಯಕರ್ತೆ ಶೈಲಜಾ ಹಿರೇಮಠ ಅವರು ಫೇಸ್‌ಬುಕ್‌ನಲ್ಲಿ ಹಾಕಿದ್ದಕ್ಕೆ ಅವರ ಮೇಲೆ ಅಶ್ಲೀಲ ಪದಗಳ ಮೂಲಕ ದಾಳಿ ಮಾಡಲಾಗಿದೆ. ಬಾಯಿಂದ ಹೇಳಿ, ಆರೋಪ ಮಾಡಲಾಗದ ಪದಗಳನ್ನು ಬರೆದು ಕಾಮೆಂಟ್‌ ಮಾಡಿರುವ ಕುರಿತು ಗಂಗಾವತಿ ಪೊಲೀಸ್‌ ಠಾಣೆಯಲ್ಲಿ ಏಳು ಜನರ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ.

ಕಾಂಗ್ರೆಸ್‌ ಕಾರ್ಯಕರ್ತೆ ಶೈಲಜಾ ಹಿರೇಮಠ ಅವರ ವಿರುದ್ಧ ಸೋಷಿಯಲ್‌ ಮೀಡಿಯಾದಲ್ಲಿ ಈ ರೀತಿ ದಾಳಿ ಮಾಡಲಾಗಿದೆ. ಈ ಕುರಿತು ನಗರದ ಕಾಂಗ್ರೆಸ್‌ ಕಾರ್ಯಾಲಯದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಶೈಲ​ಜಾ ಈ ಮಾಹಿತಿಯನ್ನು ನೀಡಿದರು.

ಆ. 31ರಂದು ನಾನು ನನ್ನ ಫೇಸ್‌ಬುಕ್‌ ಪೇಜ್‌ನಲ್ಲಿ ಬಿಜೆಪಿ ಸರ್ಕಾರದ ಒಂದು ವರ್ಷದ ಸಾಧನೆ ಏನು? ಒಬ್ಬರಿಗೆ ಒಂದೇ ಉತ್ತರ ನೀಡಲು ಅವಕಾಶ ಎಂದು ಪೋಸ್ಟ್‌ ಮಾಡಿದ್ದೆ. ಇದಕ್ಕೆ ಮಹಿಳೆಯರು ಕೇಳಲಾಗದಂತಹ ಪೋಸ್ಟ್‌ ಮಾಡಲಾಗಿದೆ. ಇವರಿಗೆಲ್ಲ ಅಕ್ಕತಂಗಿಯರು ಇದ್ದಾರೋ ಇಲ್ಲವೋ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಮಮಂದಿರಕ್ಕೆ ಭೂಮಿ ಪೂಜೆಯಾಗುವ ಹೊತ್ತಿನಲ್ಲೇ ಇತ್ತ ಹನುಮನ ನಾಡಿನಲ್ಲಿ ಸಂಭ್ರಮ

ನನ್ನ ಪೋಸ್ಟ್‌ಗೆ ಬಂದಿರುವ ಕಮೆಂಟ್‌ ನೋಡಿದರೆ ನಾವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದ್ದೇವೋ ಇಲ್ಲವೋ ಎನ್ನುವ ಅನುಮಾನ ಬಂದಿತು. ಈ ರೀತಿಯ ಪೋಸ್ಟ್‌ಗಳನ್ನು ಹಾಕಿದ್ದರಿಂದ ನನಗೆ ಆತ್ಮಹತ್ಯೆ ಮಾಡಿಕೊಂಡು ಬಿಡಬೇಕು ಎನ್ನುವಷ್ಟು ನೋವಾಯಿತು ಎಂದು ನೋವಿನಿಂದ ಹೇಳಿದರು. ಆದರೂ ಜಗ್ಗದೆ ಗಂಗಾವತಿ ಪೊಲೀಸ್‌ ಠಾಣೆಯಲ್ಲಿ ಭೀಮನಗೌಡ ಬಿರದಾರ, ಜಯರಾಮ, ಶ್ರೀನಿವಾಸ, ಯುವರಾಜರೆಡ್ಡಿ ಸೇರಿದಂತೆ ಏಳು ಜನರ ವಿರುದ್ಧ ದೂರು ನೀಡಿದ್ದು, ಎಫ್‌ಐಆರ್‌ ಸಹ ದಾಖಲಾಗಿದೆ ಎಂದರು.

ವಾಕ್‌ ಸ್ವಾತಂತ್ರ್ಯ ಇದೇ ಎಂದು ಈ ರೀತಿ ತೇಜೋವಧೆ ಮಾಡುವುದು ಸರಿಯಲ್ಲ. ಅವಾಚ್ಯ ಶಬ್ದ ಬಳಸಿ ನಿಂದಿಸುವುದು ಮಹಿಳೆಯರಿಗೆ ಮಾಡುವ ಅಪಮಾನ. ಇದರಲ್ಲಿ ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ಕೈವಾಡ ಇದೆ ಎಂದು ಆರೋಪಿಸಿದರು.

ಹೋರಾಟ ತೀವ್ರ

ಕಾಂಗ್ರೆಸ್‌ ಮಹಿಳಾ ಕಾರ್ಯಕರ್ತೆ ಶ್ರೀಶೈಲಜಾ ಹಿರೇಮಠ ಅವರ ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸಿದವರ ವಿರುದ್ಧ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ರಾಜ್ಯವ್ಯಾಪಿ ಹೋರಾಟವನ್ನು ಮಾಡಲಾಗುವುದು ಎಂದು ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿಯವರು ಶ್ರೀರಾಮಭಕ್ತರು, ಸಂಸ್ಕಾರವಂತರು ಎಂದು ಹೇಳಿಕೊಳ್ಳುತ್ತಾರೆ. ಈ ರೀತಿಯ ದಾಳಿ ಮಾಡುವುದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದ್ದಾರೆ.

ಬಿಜೆಪಿ ನಾಯಕರಿಗೆ ಅವಮಾನವಾಗುವ ಪೋಸ್ಟ್‌ ಮಾಡಿದರೆ ತಕ್ಷಣ ಕ್ರಮ ಕೈಗೊಳ್ಳಲಾಗುತ್ತದೆ. ಆದರೆ, ಮಹಿಳೆಗೆ ಅಪಮಾನ ಮಾಡಿರುವ ಕುರಿತು ದೂರು ನೀಡಿ ಮೂರ್ನಾಲ್ಕು ದಿನಗಳಾದರೂ ಸಂಬಂಧಪಟ್ಟವರ ಮೇಲೆ ಕ್ರಮಕೈಗೊಂಡಿಲ್ಲ. ಇದನ್ನು ಇಷ್ಟಕ್ಕೆ ಬಿಡುವುದಿಲ್ಲ, ರಾಜ್ಯ ನಾಯಕರ ಗಮನಕ್ಕೆ ತರಲಾಗುವುದು. ಮಹಿಳೆಯರನ್ನು ಇಷ್ಟೊಂದು ಹೀನಾಯವಾಗಿ ಅವಮಾನಿಸುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಆಗಬೇಕು. ಇಲ್ಲದಿದ್ದರೆ ಸಹಿಸಿಕೊಳ್ಳಲು ಆಗುವುದಿಲ್ಲ ಎಂದು ಕಿಡಿಕಾರಿದ್ದಾರೆ.

ರಾಜ್ಯದಲ್ಲಿ ತುಘಲಕ್‌ ದರ್ಬಾರ್‌ ಇದ್ದು, ಬೇಕಾದವರಿಗೊಂದು ಕಾನೂನು, ಬೇಡವಾದವರಿಗೊಂದು ಕಾನೂನು ಎನ್ನುವಂತೆ ಆಗಿದೆ. ಮಹಿಳೆಯನ್ನು ಕೆಟ್ಟದಾಗಿ ಬಿಂಬಿಸಿದ ಅವರು ಪೋಸ್ಟ್‌ ಮಾಡಿದವರು ಯಾರೆ ಆಗಿದ್ದರೂ ಅವರ ಮೇಲೆ ತಕ್ಷಣ ಕ್ರಮಕೈಗೊಳ್ಳುವಂತೆ ಆಗ್ರಹಿಸಿದರು. ಕಾಂಗ್ರೆಸ್‌ ಜಿಲ್ಲಾಧ್ಯಕ್ಷೆ ಮಾಲತಿ ನಾಯಕ್‌ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜಶೇಖರ ಹಿಟ್ನಾಳ, ಕೃಷ್ಣ ಇಟ್ಟಂಗಿ ಅವರು ಸುದ್ದಿಗೋಷ್ಠಿಯಲ್ಲಿ ಇದ್ದರು.