ಜಮೀನು ಪರರ ಪಾಲಾಗುವ ಭೀತಿ
ಸರ್ಕಾರಿ ಜಾಗವನ್ನು ಕಬಳಿಸಲು ಕೆಲ ಸ್ಥಳೀಯ ವ್ಯಕ್ತಿಗಳು ಮುಂದಾಗಿದ್ದು, ಇದರಲ್ಲಿ ಕಂದಾಯ ಅಧಿಕಾರಿಗಳ ಭಾಗಿಯಾಗಿ ಕರ್ತವ್ಯ ಲೋಪ ಎಸಗುತ್ತಿದ್ದಾರೆಂದು ಆರೋಪಿಸಲಾಗಿದೆ.
ದಾಬಸ್‌ಪೇಟೆ [ಅ.01]: ಸರ್ಕಾರವೂ ಅಂತರ್ಜಲ ಅಭಿವೃದ್ಧಿಗಾಗಿ ಖಾಸಗಿ ಹಾಗೂ ಸರ್ಕಾರಿ ಜಾಗದಲ್ಲಿ ನೀಲಗಿರಿ ತೆರವು ಮಾಡುವಂತೆ ಕೆಲ ತಿಂಗಳುಗಳ ಹಿಂದೆ ಆದೇಶ ಹೊರಡಿಸಿತು. ಈ ಆದೇಶದನ್ವಯ ತ್ಯಾಮಗೊಂಡ್ಲು ಹೋಬಳಿಯ ಹಸಿರುವಳ್ಳಿ ಗ್ರಾಮದ ಸರಕಾರಿ ಜಮೀನಿನಲ್ಲಿದ್ದ ಸುಮಾರು 60 ಎಕರೆಯಲ್ಲಿದ್ದ ನೀಲಗಿರಿಯನ್ನು ತೆರವುಗೊಳಿಸಲಾಯಿತು. ನೀಲಗಿರಿ ತೆರವುಗೊಳಿಸುತ್ತಿದ್ದಂತೆ, ಈ ಸರ್ಕಾರಿ ಜಾಗವನ್ನು ಕಬಳಿಸಲು ಕೆಲ ಸ್ಥಳೀಯ ವ್ಯಕ್ತಿಗಳು ಮುಂದಾಗಿದ್ದು, ಇದರಲ್ಲಿ ಕಂದಾಯ ಅಧಿಕಾರಿಗಳ ಭಾಗಿಯಾಗಿ ಕರ್ತವ್ಯ ಲೋಪ ಎಸಗುತ್ತಿದ್ದಾರೆಂದು ಹಸಿರುವಳ್ಳಿ ಗ್ರಾ.ಪಂ. ಅಧ್ಯಕ್ಷ ನರಸಿಂಹ ಮೂರ್ತಿ ಆರೋಪಿಸುತ್ತಿದ್ದಾರೆ.
ಹತ್ತಾರು ವರ್ಷಗಳಿಂದ ಈ ಜಾಗದಲ್ಲಿ ನೀಲಗಿರಿ ಮರಗಳಿದ್ದವು, ಅಂತರ್ಜಲ ವೃದ್ಧಿಗಾಗಿ ಸರ್ಕಾರ ನೀಲಗಿರಿ ಮರಗಳನ್ನು ಕಟಾವು ಮಾಡಲು ಆದೇಶ ನೀಡಿತು. ಈ ಆದೇಶದನ್ವಯ ಆರ್ಟ್ ಆಫ್ ಲಿವಿಂಗ್ ಸಹಕಾರದೊಂದಿಗೆ ಹಸಿರುವಳ್ಳಿ ಗ್ರಾಮ ಪಂಚಾಯಿಯ ನೇತೃತ್ವದಲ್ಲಿ ಮರ ತೆರವು ಮಾಡಿ, ಹಣ್ಣಿನ ಗಿಡಗಳನ್ನು ನೆಡಲು ಮುಂದಾಗಿತ್ತು ಎನ್ನಲಾಗಿದೆ.
ಹಾಗಾಗಿ ಹತ್ತಾರು ಟ್ರಾಕ್ಟರ್‌ಗಳಲ್ಲಿ ಉಳುಮೆ ಮಾಡಲು ಸಿದ್ಧವಾಗಿದ್ದರೆ, ಮತ್ತೊಂದೆಡೆ ಈ ಉಳುಮೆ ಮಾಡಿರುವ ಜಾಗದಲ್ಲಿ ಜನರು ಕಸ ಕಡ್ಡಿ ಆಯುವ ಕೆಲಸದಲ್ಲಿ ನಿರತರಾದರು. ಸರ್ಕಾರ ನೀಲಗಿರಿ ತೆರವು ಮಾಡುತ್ತಿದ್ದಂತೆ ಕೆಲ ಸ್ಥಳೀಯ ನುಂಗಣ್ಣರ ಕಣ್ಣು ಸರ್ಕಾರಿ ಭೂಮಿ ಮೇಲೆ ಬಿದ್ದಿದ್ದು, ಅತಿಕ್ರಮ ಪ್ರವೇಶಕ್ಕೆ ಮುಂದಾಗಿದ್ದಾರೆ ಎಂದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಜಮೀನು ನಮ್ಮದೆಂದು ವಾದ ಮಾಡುತ್ತಿರುವ ಮೂರ್ತಿ ಪ್ರತಿಕ್ರಿಯಿಸಿ, ನಮಗೆ 1978ರಲ್ಲೇ ಸರ್ಕಾರದ ಕಡೆಯಿಂದ ದರಾಕಾಸ್ತು ಮಾಡಲಾಗಿದೆ. ಆದರೆ ಅಂದು ಯಾರೂ ಸಹ ತಮ್ಮ ದಾಖಲಾತಿಗಳನ್ನು ಸದೃಢಪಡಿಸಿಕೊಂಡಿಲ್ಲ, ಕಳೆದ 10-15 ವರ್ಷಗಳಿಂದಲೂ ನಾವೆ ಉಳುಮೆ ಮಾಡುತ್ತಿದ್ದೆವು ಇದು ನಮ್ಮ ಜಾಗ. ಸರ್ಕಾರದ ಜಾಗವಲ್ಲ. ನಮಗೆ ಸರ್ವೆ ಮಾಡಿಕೊಟ್ಟು ಜಾಗ ನೀಡಬೇಕು ಎಂದರು.
ಈ ಬಗ್ಗೆ ತಹಸೀಲ್ದಾರ್ ಪ್ರತಿಕ್ರಿಯಿಸಿ, ಅಧಿಕಾರಿಗಳ ಕರ್ತವ್ಯಲೋಪದಿಂದ ಈ ಸಮಸ್ಯೆಗಳು ಎದುರಾಗಿದ್ದು, ಗ್ರಾಮ ಪಂಚಾಯಿತಿಯಿಂದ ಅನೇಕ ಬಾರಿ ಮನವಿ ಮಾಡಿಕೊಂಡರೂ ಸರ್ವೆ ಮಾಡಿಕೊಟ್ಟಿಲ್ಲ ಎಂಬ ದೂರು ಬಂದಿದೆ.
ಪರಿಶೀಲನೆ ನಡೆಸಿ ನೋಡಿದಾಗ ದರಾಕಾಸ್ತ್ ಆದ ನಂತರ ಎಸಿ ಕಚೇರಿಯಲ್ಲಿ ತಡೆಯಾಗಿದೆ. ಸದ್ಯ ಉಳುಮೆ ಮಾಡುತ್ತಿರುವವರು ಆ ಜಾಗದಲ್ಲಿ ಉಳುಮೆ ಮಾಡುವಂತಿಲ್ಲ. ಒಂದು ವೇಳೆ ಉಳುಮೆ ಮಾಡಿದರೆ ಅದು ಸರ್ಕಾರಿ ಅತಿಕ್ರಮ ಪ್ರವೇಶವಾಗುತ್ತದೆ ಎಂದರು.
(ಸಾಂದರ್ಬಿಕ ಚಿತ್ರ)