ಮಣ್ಣು ಸರಕಲ್ಲ, ದೈವಸ್ವರೂಪಿ: ಡಾ.ಎಚ್‌.ಎಲ್‌.ನಾಗರಾಜು

ಮಣ್ಣು ಎನ್ನುವುದು ಒಂದು ಸರಕಲ್ಲ. ಮಣ್ಣಿಗೆ ಅದರದೇ ಆದ ಮಹತ್ವವಿದೆ. ಎಂತಹದೇ ಬೀಜ ಹಾಕಿದರೂ ಮೊಳಕೆಯೊಡೆದು ಫಲ ಕೊಡುವ ಶಕ್ತಿ ಇರುವುದು ಮಣ್ಣಿಗೆ ಮಾತ್ರ. ಹಾಗಾಗಿ ಮಣ್ಣಿಗೆ ಒಂದು ಅಗೋಚರ ಶಕ್ತಿ ಇದೆ. ಹಾಗಾಗಿ ಪಂಚಭೂತಗಳಲ್ಲಿ ಮಣ್ಣನ್ನು ಪ್ರಧಾನವಾಗಿ ದೈವದ ಸಂಕಲ್ಪದಂತೆ ಕಾಣುತ್ತೇವೆ ಎಂದು ಅಪರ ಜಿಲ್ಲಾಧಿಕಾರಿ ಡಾ.ಎಚ್‌.ಎಲ್‌.ನಾಗರಾಜು ಹೇಳಿದರು.

Soil is not a commodity it is divine: Dr H  L Nagaraju snr

 ಮಂಡ್ಯ (ಡಿ. 06):  ಮಣ್ಣು ಎನ್ನುವುದು ಒಂದು ಸರಕಲ್ಲ. ಮಣ್ಣಿಗೆ ಅದರದೇ ಆದ ಮಹತ್ವವಿದೆ. ಎಂತಹದೇ ಬೀಜ ಹಾಕಿದರೂ ಮೊಳಕೆಯೊಡೆದು ಫಲ ಕೊಡುವ ಶಕ್ತಿ ಇರುವುದು ಮಣ್ಣಿಗೆ ಮಾತ್ರ. ಹಾಗಾಗಿ ಮಣ್ಣಿಗೆ ಒಂದು ಅಗೋಚರ ಶಕ್ತಿ ಇದೆ. ಹಾಗಾಗಿ ಪಂಚಭೂತಗಳಲ್ಲಿ ಮಣ್ಣನ್ನು ಪ್ರಧಾನವಾಗಿ ದೈವದ ಸಂಕಲ್ಪದಂತೆ ಕಾಣುತ್ತೇವೆ ಎಂದು ಅಪರ ಜಿಲ್ಲಾಧಿಕಾರಿ ಡಾ.ಎಚ್‌.ಎಲ್‌.ನಾಗರಾಜು ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ ಹಾಗೂ ಈಶ  ಫೌಂಡೇಷನ್‌ ವತಿಯಿಂದ ವಿಶ್ವ ಮಣ್ಣು (Soil)  ಆರೋಗ್ಯ (Health)  ದಿನಾಚರಣೆ ಅಂಗವಾಗಿ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಮಣ್ಣು ಉಳಿಸಿ ಅಭಿಯಾನ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸಾವಯವ ಕೃಷಿ ಅಳವಡಿಸಿಕೊಂಡಾಗ ಮಾತ್ರ ಮಣ್ಣಿನ ಫಲವತ್ತತೆ ಕಾಪಾಡಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಯುವ ಜನಾಂಗ ಹಾಗೂ ರೈತರು ಮಣ್ಣಿನ ಫಲವತ್ತತೆ ಹಾಗೂ ಅದರ ಮಹತ್ವವನ್ನು ಅರಿತುಕೊಂಡು ಜಾಗೃತರಾಗಬೇಕು. ಮಣ್ಣಿನ ಫಲವತ್ತತೆಯನ್ನು ಕಾಪಾಡದಿದ್ದರೆ ಮುಂದಿನ ದಿನಗಳಲ್ಲಿ ಎಷ್ಟೇ ರಾಸಾಯನಿಕ ಗೊಬ್ಬರ ಹಾಕಿದರೂ ಹೊಸ ಹೊಸ ತಳಿಗಳನ್ನು ಬೆಳೆಯುವುದಕ್ಕೆ ಮುಂದಾದರೂ ವೈಜ್ಞಾನಿಕ ಸಂಶೋಧನೆ ನಡೆಸಿದರೂ ಆಹಾರ ಉತ್ಪಾದನೆ ಕುಸಿಯಬಹುದು ಎಂದು ಎಚ್ಚರಿಸಿದರು.

ಇತ್ತೀಚೆಗೆ ರಾಸಾಯನಿಕ ಗೊಬ್ಬರಗಳನ್ನು ಹೆಚ್ಚು ಬಳಸುತ್ತಿರುವುದರಿಂದ ಮಣ್ಣಿನ ಫಲವತ್ತತೆ ಕುಸಿಯುತ್ತಿರುವುದರ ಜೊತೆಗೆ ಮನುಷ್ಯನ ಆರೋಗ್ಯದ ಮೇಲೆ ಸಾಕಷ್ಟುದುಷ್ಪರಿಣಾಮಗಳು ಬೀರುತ್ತಿವೆ. ಇದು ಆತಂಕಕಾರಿ ಬೆಳವಣಿಗೆ ಎಂದು ವಿಷಾದಿಸಿದರು.

ಆಹಾರೋತ್ಪನ್ನಗಳನ್ನು ಹೆಚ್ಚು ಪ್ರಮಾಣದಲ್ಲಿ ಉತ್ಪಾದನೆ ಮಾಡಬೇಕೆಂಬ ಉದ್ದೇಶದಿಂದ ಕೃಷಿಯಲ್ಲಿ ಮಿತಿಮೀರಿದ ರಾಸಾಯನಿಕ ಗೊಬ್ಬರಗಳನ್ನು ಬಳಸುತ್ತಿದ್ದೇವೆ. ಇದರಿಂದ ಮಣ್ಣಿನ ಫಲವತ್ತತೆ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿದೆ. ವೈಜ್ಞಾನಿಕ ಅವಿಷ್ಕಾರಗಳು ಹೆಚ್ಚಾದಂತೆಲ್ಲಾ ಮಣ್ಣಿನ ಫಲವತ್ತತೆ ಕುಸಿಯುತ್ತಿದೆ. ಆದ್ದರಿಂದ ಮತ್ತೆ ನಾವು ಹಿಂದಿನ ಕೃಷಿ ಪದ್ಧತಿಗೆ ಅನುಸರಿಸಬೇಕಾದ ಅನಿವಾರ್ಯ ಪರಿಸ್ಥಿತಿಗೆ ಬಂದು ನಿಂತಿದ್ದೇವೆ ಎಂದರು.

ಮಣ್ಣಿನ ಫಲವತ್ತತೆ ಕುಸಿಯುತ್ತಿರುವ ಸಂಬಂಧ ಈಗಾಗಲೇ ವಿಜ್ಞಾನಿಗಳು ವಿಶೇಷವಾಗಿ ಮಣ್ಣಿನ ತಜ್ಞರು ವಿಶೇಷ ತಿಳುವಳಿಕೆ ನೀಡುತ್ತಿದ್ದಾರೆ. ಸಾಕಷ್ಟುಸಂಶೋಧನೆಗಳೂ ನಡೆಯುತ್ತಿವೆ. ಯಾವುದೇ ಅಘಾತಕಾರಿ ಬೆಳವಗೆಗಳಿಗೆ ಆಸ್ಪದ ನೀಡದೆ ಮಣ್ಣಿನ ಸಂರಕ್ಷಣೆಗೆ ಮುಂದಾಗಬೇಕು ಎಂದು ನುಡಿದರು.

ಮಣ್ಣು ಅಭಿಯಾನದಲ್ಲಿ ಜಂಟಿ ಕೃಷಿ ನಿರ್ದೇಶಕರಾದ ವಿ.ಎಸ್‌.ಅಶೋಕ್‌, ಉಪ ಕೃಷಿ ನಿರ್ದೇಶಕಿ ಕೆ.ಮಾಲತಿ, ತಾಲೂಕು ಸಹಾಯಕ ಕೃಷಿ ನಿರ್ದೇಶಕಿ ಸೌಮ್ಯಶ್ರೀ, ಮಣ್ಣು ವಿಜ್ಞಾನಿ ಅಶೋಕ್‌, ಈಶ  ಫೌಂಡೇಷನ್‌ನ ಸುಜಾತ ಕೃಷ್ಣ, ಗೌತಮ, ವಿಕಸನ ಸಂಸ್ಥೆಯ ಮಹೇಶ್‌ ಚಂದ್ರಗುರು ಹಾಗೂ ಶಾಲಾ ವಿದ್ಯಾರ್ಥಿಗಳು ಹಾಜರಿದ್ದರು.

ಬಳಿಕ ಜಿಲ್ಲಾಧಿಕಾರಿ ಕಚೇರಿಯಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಮಣ್ಣು ಅಭಿಯಾನ ಜಾಗೃತಿ ಜಾಥಾ ನಡಯಿತು.

ಮಣ್ಣನ್ನು ಉಳಿಸದಿದ್ದರೆ ಶುದ್ಧ ಆಹಾರ ಸಮಸ್ಯೆ: ಸಿಇಒ

  ಮಂಡ್ಯ :  ಮಣ್ಣು ಹಾಗೂ ಮನುಷ್ಯನಿಗೂ ಅವಿನಾಭಾವ ಸಂಬಂಧವಿದೆ ಎಂದು ಜಿಪಂ ಸಿಇಒ ಶಾಂತಾ ಎಲ್‌.ಹುಲ್ಮನಿ ತಿಳಿಸಿದರು.

ಮಣ್ಣು ಇಲ್ಲದೇ ಜೀವರಾಶಿ ಬದುಕಲು ಸಾಧ್ಯವಿಲ್ಲ. ಆಹಾರ ಎಲ್ಲಿಂದ ಬರುತ್ತದೆ ಎಂದು ಮೂಲ ಪ್ರಶ್ನೆಯನ್ನು ಹುಡುಕಿದಾಗ ಮಣ್ಣು ಎಂಬಂತಹದ್ದು ಬಹಳ ಮುಖ್ಯ ಎಂದು ತಿಳಿಯುತ್ತದೆ. ಈ ಮಣ್ಣನ್ನು ನಾವು ಉಳಿಸದೆ ಹೋದರೆ, ಮುಂದಿನ ಜನಾಂಗಕ್ಕೆ ಶುದ್ಧ ಆಹಾರದ ಸಮಸ್ಯೆ ಉಂಟಾಗುತ್ತದೆ. ರಾಸಾಯನಿಕವಿಲ್ಲದ ಆರೋಗ್ಯವಂತ ಮಣ್ಣನ್ನು ಹುಡುಕುವುದೇ ಕಷ್ಟವಾಗಿದೆ. ಮಣ್ಣನ್ನು ಉಳಿಸುವ ಮೂಲಕ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ನಾವೆಲ್ಲರೂ ಸಂಕಲ್ಪ ಮಾಡಬೇಕಾಗಿದೆ ಎಂದರು.

ಮುಂದಿನ ಜನಾಂಗದ ಹಿತದೃಷ್ಟಿಯಿಂದ ಮಣ್ಣಿನ ಫಲವತ್ತತೆ ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಆದ್ದರಿಂದ ಈ ಅಭಿಯಾನದಲ್ಲಿ ಎಲ್ಲರೂ ಕೈ ಜೋಡಿಸಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು. 

Latest Videos
Follow Us:
Download App:
  • android
  • ios