ಪ್ರತಿ ಕೃಷಿಕನಿಗೆ ಮಣ್ಣು, ನೀರು ಚಿನ್ನವೇ ಸರಿ

ಕೃಷಿಕರಿಗೆ ಮಣ್ಣು ಮತ್ತು ನೀರು ಚಿನ್ನವಿದ್ದಂತೆ. ಕೆರೆಗಳ ಹೂಳೆತ್ತುವುದರಿಂದ ಅಂತರ್ಜಲ ಮಟ್ಟಹೆಚ್ಚುವುದರೊಂದಿಗೆ ಆ ಭಾಗದ ಮಣ್ಣು ಚಿನ್ನವಾಗಿ ಪರಿವರ್ತನೆಯಾಗುತ್ತದೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಶ್ರೀ ಡಿ.ವೀರೇಂದ್ರ ಹೆಗ್ಗಡೆ ಅಭಿಪ್ರಾಯಪಟ್ಟರು.

Soil and water are gold for every farmer snr

 ಮಂಡ್ಯ :  ಕೃಷಿಕರಿಗೆ ಮಣ್ಣು ಮತ್ತು ನೀರು ಚಿನ್ನವಿದ್ದಂತೆ. ಕೆರೆಗಳ ಹೂಳೆತ್ತುವುದರಿಂದ ಅಂತರ್ಜಲ ಮಟ್ಟಹೆಚ್ಚುವುದರೊಂದಿಗೆ ಆ ಭಾಗದ ಮಣ್ಣು ಚಿನ್ನವಾಗಿ ಪರಿವರ್ತನೆಯಾಗುತ್ತದೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಶ್ರೀ ಡಿ.ವೀರೇಂದ್ರ ಹೆಗ್ಗಡೆ ಅಭಿಪ್ರಾಯಪಟ್ಟರು.

ತಾಲೂಕಿನ ಗೋಪಾಲಪುರ ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ 503ನೇ ಕೆರೆ ಮತ್ತು ಶುದ್ಧಗಂಗಾ ಘಟಕ ಹಸ್ತಾಂತರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕೃಷಿಕರಿಗೆ ಮಣ್ಣು ಚಿನ್ನವಾಗಿರುತ್ತದೆ. ಅದಕ್ಕೆ ನೀರೆರೆದರೆ ಮಾತ್ರ ಅದು ಫಲವತ್ತತೆ ಮೈದಳೆಯಲು ಸಾಧ್ಯ. ಮಣ್ಣು ಚಿನ್ನದ ರೀತಿಯಲ್ಲಿದೆ. ಜಲ ಪವಿತ್ರ ಗಂಗೆ ಮಾತ್ರವಲ್ಲ ರೈತರ ಬದುಕಿನ ಉಸಿರನ್ನು ಉಳಿಸುವ ಗಂಗೆಯನ್ನಾಗಿ ಗುರುತಿಸುತ್ತಾರೆ ಎಂದು ಹೇಳಿದರು.

ಸಂಸ್ಥೆ ಯೋಜನಾಧಿಕಾರಿಗಳು, ಅಧಿಕಾರಿಗಳು, ಗ್ರಾಮಸ್ಥರೊಂದಿಗೆ ಕೆರೆಯನ್ನು ಗುರುತಿಸಿ ಹೂಳೆತ್ತುವ ಮೂಲಕ ಉಳಿಸುವ ಕೆಲಸ ಮಾಡುತ್ತಾರೆ. ನಮ್ಮ ಸಂಘಗಳ ಹೆಸರೇ ಸ್ವ ಸಹಾಯ ಸಂಘಗಳು. ಅಂದರೆ ನಮಗೆ ನಾವೇ ಸಂಘವನ್ನು ಮಾಡಿ ಬದುಕಿನ ಆಸರೆಯನ್ನು ಕಂಡುಕೊಳ್ಳುವುದಾಗಿದೆ ಎಂದರು.

ಗ್ರಾಮಸ್ಥರು, ಕೃಷಿಕರು ಸೇರಿ ನಾವೇ ಶ್ರಮಪಟ್ಟು ಅಭಿವೃದ್ಧಿಪಡಿಸಿ ನೀರಿನ ಸಂಗ್ರಹ ಮತ್ತು ಅಂತರ್ಜಲ ಹೆಚ್ಚಳಕ್ಕೆ ಕಾಯಕಲ್ಪ ರೂಪಿಸುತ್ತೇವೆ. ಇದಕ್ಕೆ ನಮ್ಮ ಊರ ಕೆರೆ ಎಂದು ಹೆಸರಿಟ್ಟು ಸ್ವಾಭಿಮಾನದ ರೀತಿಯಲ್ಲಿ ಅನುಕೂಲ ಪಡೆಯಲಾಗುತ್ತದೆ ಎಂದು ತಿಳಿಸಿದರು.

ಈ ಭಾಗದಲ್ಲಿ ಕಾವೇರಿ ನೀರು ಹರಿಯುತ್ತದೆ. ಇದರೊಂದಿಗೆ ಮಳೆ ನೀರನ್ನೂ ಹಿಡಿದಿಟ್ಟುಕೊಳ್ಳುವ ಶಕ್ತಿ ಕೆರೆಗೆ ಬರುತ್ತದೆ. ಕೋಲಾರದಲ್ಲಿ ನೀರಿನ ಬರ ಇದೆ ಎಂಬುದು ಎಲ್ಲರಿಗೂ ತಿಳಿದಿದೆ. ನಾವು ಅಲ್ಲಿನ ಕೆರೆಗಳಿಗೆ ಶಕ್ತಿ ನೀಡುವ ಕೆಲಸ ಮಾಡಿದ್ದೇವೆ. ಇದರಿಂದಾಗಿ ಅಲ್ಲಿ ಅಂತರ್ಜಲ ಹೆಚ್ಚಳವಾಗಿ ಆರು ನದಿಗಳಿಗೆ ನೀರು ಬಂದಿದೆ. 400 ರಿಂದ 500 ಅಡಿಗಳವರೆಗೆ ಅಂತರ್ಜಲ ವೃದ್ಧಿಸಿದೆ ಎಂದು ವರದಿಗಳು ಹೇಳುತ್ತಿವೆ ಎಂದು ವಿವರಿಸಿದರು.

ನಮ್ಮ ಕೆರೆಗಳ ಅಭಿವೃದ್ಧಿಯಿಂದಾಗಿ ಸುತ್ತಮುತ್ತಲ ಬೋರ್‌ವೆಲ್‌ಗಳಲ್ಲಿನ ಎಷ್ಟರ ಮಟ್ಟಿಗೆ ಅಂತರ್ಜಲ ಮಟ್ಟವೃದ್ಧಿಸಿದೆ ಎಂದು ತಿಳಿದರೆ ನಾವು ಮಾಡಿದ ಕೆಲಸ ಸಫಲತೆ ಕಾಣಲು ಸಾಧ್ಯ ಎಂದರು.

ಮಂಡ್ಯ ಜಿಲ್ಲೆಯಲ್ಲಿ 16055 ಸಂಘಗಳಿವೆ. 1.33 ಲಕ್ಷ ಸದಸ್ಯರಿದ್ದಾರೆ. 699 ಕೋಟಿ ಉಳಿತಾಯ ಮಾಡಿದ್ದೇವೆ. ವಾರಕ್ಕೆ 10, 20 ರೂ.ಗಳ ಉಳಿತಾಯ ಮಾಡಿರುವುದೇ 69 ಕೋಟಿಯಷ್ಟಾಗಿದೆ. 460 ಕೋಟಿ ರು ಗಳನ್ನು ಬ್ಯಾಂಕಿನಿಂದ ಸಾಲ ಕೊಡಿಸಿದ್ದೇವೆ ಎಂದು ವಿವರಿಸಿದರು.

ಧರ್ಮಸ್ಥಳ ದೇವಸ್ಥಾನದಿಂದ ಯಾವುದೇ ಸಾಲವನ್ನೂ ಕೊಡುವುದಿಲ್ಲ. ಆದರೆ, ದಾನ ಮಾಡುತ್ತೇವೆ. 560 ಕೋಟಿ ರು ಕೊಟ್ಟಿದ್ದೇವೆ. ಬ್ಯಾಂಕಿನಿಂದ ಸಾಲ ಕೊಡಿಸುವುದು ಮತ್ತು ಫಲಾನುಭವಿಗಳ ಉದ್ದೇಶಕ್ಕೆ ಅನುಗುಣವಾಗಿ ಸಾಲ ಸೌಲಭ್ಯ ಕೊಡಿಸುವುದಲ್ಲದೆ, ಅವರ ಉದ್ದೇಶವೂ ಈಡೇರುತ್ತಿದೆಯೇ ಎಂಬುದರ ಬಗ್ಗೆಯೂ ನಮ್ಮ ಅಧಿಕಾರಿಗಳು ನಿಗಾ ವಹಿಸುತ್ತಾರೆ. ಅದನ್ನು ಚೆನ್ನಾಗಿ ಬಳಕೆ ಮಾಡಿಕೊಂಡಾಗ ನಮಗೂ ಸಾರ್ಥಕತೆ ಲಭಿಸುತ್ತದೆ. ಇದರೊಂದಿಗೆ ಮರುಪಾವತಿಯನ್ನೂ ಸಹ ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಾರೆ ಎಂದು ಹೇಳಿದರು.

ಸಮಾರಂಭದಲ್ಲಿ ಶಾಸಕ ಎಂ. ಶ್ರೀನಿವಾಸ್‌, ಜಿಪಂ ಸಿಇಓ ಶಾಂತ ಎಲ್‌. ಹುಲ್ಮನಿ, ಗ್ರಾಪಂ ಅಧ್ಯಕ್ಷೆ ಬಿ.ಸುಧಾ, ಟ್ರಸ್ಟ್‌ನ ಬಿ. ಜಯರಾಂ ನೆಲ್ಲಿತ್ತಾಯ, ಪಿಡಿಓ ಮಲ್ಲೇಶ್‌, ಅನಿತಾ, ಕೋಮಲ,

ಮಂಡ್ಯ ತಾಲೂಕು ಗೋಪಾಲಪುರ ಗ್ರಾಮದಲ್ಲಿ ಕೆರೆ ಮತ್ತು ಶುದ್ಧ ಗಂಗಾ ಘಟಕವನ್ನು ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಶ್ರೀ ಡಿ.ವೀರೇಂದ್ರ ಹೆಗ್ಗಡೆ ಹಸ್ತಾಂತರ ಮಾಡಿದರು.

ಒಂದು ಹನಿ ನೀರೂ ಪೋಲಾಗದಂತೆ ಉಪಯೋಗಿಸುವುದು ನಮ್ಮ ಕರ್ತವ್ಯವೂ ಆಗಿದೆ.ಆಗ ಮಾತ್ರ ನಮ್ಮ ಶ್ರಮಕ್ಕೆ ಸಾರ್ಥಕತೆ ಬರುತ್ತದೆ. ಎಲ್ಲರೂ ಹಂಚಿ ತಿನ್ನುವುದನ್ನು ಕಲಿಯಬೇಕು. ಇದರಿಂದ ನಾವೂ ಸುಖವಾಗಿರುತ್ತೇವೆ. ಅಕ್ಕ ಪಕ್ಕದವರೂ ಸುಖವಾಗಿರಲು ಸಾಧ್ಯ.

- ಡಾ.ಶ್ರೀ ಡಿ.ವೀರೇಂದ್ರ ಹೆಗ್ಗಡೆ, ಧರ್ಮಸ್ಥಳ ಧರ್ಮಾಧಿಕಾರಿ

Latest Videos
Follow Us:
Download App:
  • android
  • ios