Shivamogga Airport; ನವೆಂಬರ್ ಮಾಸಾಂತ್ಯಕ್ಕೆ ಸೋಗಾನೆಯಲ್ಲಿ ವಿಮಾನ ನಿಲ್ದಾಣ ಲೋಕಾರ್ಪಣೆ
ಶಿವಮೊಗ್ಗ ಸಮೀಪದ ಸೋಗಾನೆಯಲ್ಲಿ ವಿಮಾನ ನಿಲ್ದಾಣದ ರನ್‌ವೇ, ಟರ್ಮಿನಲ್ ಕಟ್ಟಡ, ವಿಮಾನಸಂಚಾರ ನಿಯಂತ್ರಣ ಘಟಕ ಸೇರಿದಂತೆ ಅನೇಕ ಕಾಮಗಾರಿಗಳು ಭರದಿಂದ ಸಾಗಿದ್ದು, ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಅಂತಿಮ ಹಂತದ ಕಾಮಗಾರಿ ಪ್ರಗತಿಯಲ್ಲಿದೆ.
ವರದಿ : ರಾಜೇಶ್ ಕಾಮತ್, ಏಷ್ಯಾನೆಟ್ ಸುವರ್ಣನ್ಯೂಸ್
ಶಿವಮೊಗ್ಗ (ಸೆ.24): ಶಿವಮೊಗ್ಗ ಸಮೀಪದ ಸೋಗಾನೆಯಲ್ಲಿ ವಿಮಾನ ನಿಲ್ದಾಣದ ರನ್‌ವೇ, ಟರ್ಮಿನಲ್ ಕಟ್ಟಡ, ವಿಮಾನಸಂಚಾರ ನಿಯಂತ್ರಣ ಘಟಕ ಸೇರಿದಂತೆ ಅನೇಕ ಕಾಮಗಾರಿಗಳು ಭರದಿಂದ ಸಾಗಿದ್ದು, ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಅಂತಿಮ ಹಂತದ ಕಾಮಗಾರಿ ಪ್ರಗತಿಯಲ್ಲಿದೆ. ಈ ಎಲ್ಲಾ ಕಾಮಗಾರಿಗಳು ನವೆಂಬರ್ ಮಾಸಾಂತ್ಯಕ್ಕೆ ಪೂರ್ಣಗೊಂಡು ವಿಮಾನ ನಿಲ್ಧಾಣ ಲೋಕಾರ್ಪಣೆಗೆ ಸರ್ವಸನ್ನದ್ಧಗೊಳ್ಳಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಅವರು ಹೇಳಿದರು. ಅವರು ಇಂದು ಸೋಗಾನೆ ವಿಮಾನ ನಿಲ್ದಾಣಕ್ಕೆ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯದ ಅಪರ ಕಾರ್ಯದರ್ಶಿ ಶ್ರೀಮತಿ ಉಷಾಪಾಧಿ, ಗೌರವಗುಪ್ತಾ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸೆಲ್ವಕುಮಾರ್ ಸೇರಿದಂತೆ ರಾಷ್ಟ್ರ ಮತ್ತು ರಾಜ್ಯ ಮಟ್ಟದ ತಂತ್ರಜ್ಞರು, ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪ್ರಗತಿ ಪರಿಶೀಲನೆ ನಡೆಸಿದ ನಂತರ ಮಾಧ್ಯಮದ ಪ್ರತಿನಿಧಿಗಳಿಗೆ ಮಾಹಿತಿ ನೀಡಿದರು. ಯಾವುದೇ ಒಂದು ರಾಜ್ಯ, ಜಿಲ್ಲೆ, ಸಂಸ್ಥೆ ಅಥವಾ ವ್ಯವಸ್ಥೆ ನಿರೀಕ್ಷಿತ ಪ್ರಗತಿ ಸಾಧಿಸಲು ಮೂಲಭೂತ ಸೌಕರ್ಯಗಳು ಇರಬೇಕಾದುದು ಅಗತ್ಯ. ಬಹುದಿನಗಳ ಈ ಕನಸಿನ ಯೋಜನೆಯ ಅನುಷ್ಠಾನಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಸತತ ಪರಿಶ್ರಮ, ಸಂಕಲ್ಪ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಸಹಕಾರವೂ ಕೂಡ ಸ್ಮರಣೀಯವಾದುದು ಎಂದರು.
ವಿಮಾನ ನಿಲ್ದಾಣದ ವ್ಯವಸ್ಥಿತ ನಿರ್ವಹಣೆ, ಸಂಚಾರ ಸಂಪರ್ಕ ಮತ್ತು ಉಸ್ತುವಾರಿ ಕಾರ್ಯಗಳ ಕುರಿತು ಗಮನಹರಿಸಬೇಕಾದ ಅಗತ್ಯವಿದೆ. ನಿಲ್ದಾಣದ ನಿರ್ವಹಣೆ ಕುರಿತು ಉನ್ನತ ಮಟ್ಟದ ಅಧಿಕಾರಿಗಳು ಸಭೆ ಸೇರಿ ನಿರ್ಣಯ ಕೈಗೊಂಡು ಮುಂದಿನ ಕ್ರಮಗಳಿಗೆ ಅನುವು ಮಾಡಿಕೊಡುವಂತೆ ಗೌರವಗುಪ್ತಾ ಅವರಿಗೆ ಮನವಿ ಮಾಡಿದ ಅವರು, ನಿಲ್ದಾಣದ ಉದ್ಘಾಟನೆಗೆ ಜನವರಿ ಮಾಸಾಂತ್ಯದೊಳಗಾಗಿ ಪ್ರಧಾನಮಂತ್ರಿ ಅವರ ಸಮಯವನ್ನು ನಿಗಧಿಗೊಳಿಸಿಕೊಡುವಂತೆ ರಾಜ್ಯ ಸರ್ಕಾರದ ವತಿಯಿಂದ ಕೋರಲಾಗುವುದು ಎಂದರು.
ಶಿವಮೊಗ್ಗ-ಬೆಂಗಳೂರು ಅಲ್ಲದೇ ನೆರೆ ರಾಜ್ಯಗಳ ಹಲವು ಪ್ರಮುಖ ನಗರಗಳ ಸಂಪರ್ಕ ಹಾಗೂ ಸಂಚಾರಕ್ಕೆ ಕ್ರಮ ವಹಿಸುವಂತೆ ವಿಮಾನಯಾನ ಸಂಸ್ಥೆಗಳಿಗೆ ಮನವಿ ಮಾಡಲಾಗಿದೆ. ಅಲ್ಲದೇ ರಾಜ್ಯದ ಉನ್ನತ ಅಧಿಕಾರಿಗಳ ತಂಡ ಸದ್ಯದಲ್ಲಿ ನೆರೆಯ ರಾಜ್ಯ ಮಹಾರಾಷ್ಟ್ರದ ಶಿರಡಿ ವಿಮಾನ ನಿಲ್ದಾಣಗಳಿಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆ ಮತ್ತು ನಿರ್ವಹಣೆಯ ಬಗ್ಗೆ ಮಾಹಿತಿ ಪಡೆದುಕೊಳ್ಳಲಿದೆ ಎಂದರು.
ಏರ್‌ಪೋರ್ಟ್ ರಸ್ತೆ ವಿಸ್ತರಿಸಲು ಏನು ಮಾಡಿದ್ದೀರಿ, ವರದಿ ನೀಡಿ: ಹೈಕೋರ್ಟ್
ಈಗಾಗಲೇ ಗತಿಶಕ್ತಿ ಯೋಜನೆಯಡಿ ಕೇಂದ್ರ ಸರ್ಕಾರವು 65 ಕೋಟಿ ಅನುದಾನ ಬಿಡುಗಡೆ ಮಾಡಿದ್ದು, ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಶೀಥಲೀಕರಣ ಘಟಕಗಳು, ಗೋದಾಮುಗಳು, ಕಿರು ಉದ್ಯಮ ಘಟಕಗಳ ಆರಂಭದಿಂದಾಗಿ ಸರಕು-ಸಾಗಾಟಕ್ಕೆ ಅನುಕೂಲವಾಗಲಿದೆ ಎಂದರು.
ತುಮಕೂರು ಬಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: ಸಚಿವ ನಿರಾಣಿ
ಈ ಸಂದರ್ಭದಲ್ಲಿ ಬ್ರಿಗೇಡಿಯರ್ ಪೂರ್ವಿಮಠ್, ರಾಜೀವ್‌ಕುಮಾರ್ ರೈ, ಹೆಪ್ಸಿಬಾರಾಣಿ ಕೊರ್ಲಪಾಟಿ, ಮುಖ್ಯಮಂತ್ರಿಗಳ ಜಂಟಿ ಕಾರ್ಯದರ್ಶಿ ಹೆಚ್.ಆರ್.ರಾಜಪ್ಪ, ರೈಟ್ಸ್ ಸಂಸ್ಥೆಯ ಇಂಜಿನಿಯರ್ ರವಿ, ಜಿಲ್ಲಾಧಿಕಾರಿ ಡಾ.ಆರ್. ಸೆಲ್ವಮಣಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ. ಕೃಷ್ಣಪ್ರಸಾದ್, ಲೋಕೋಪಯೋಗಿ ಇಲಾಖೆಯ ಅಭಿಯಂತರರಾದ ಕಾಂತರಾಜ್, ಸಂಪತ್‌ಕುಮಾರ್ ಮುಂತಾದ ಅಧಿಕಾರಿಗಳು ಹಾಗೂ ವಿಮಾನಯಾನ ಸಂಸ್ಥೆಯ ತಂತ್ರಜ್ಞರು, ಗುತ್ತಿಗೆದಾರರು ಉಪಸ್ಥಿತರಿದ್ದರು.