ಬೆಂಗಳೂರು(ನ.08): ರಾಜ್ಯದಲ್ಲಿ ಕೆಎಎಸ್‌ ಅಧಿಕಾರಿ ಡಾ. ಬಿ. ಸುಧಾ ಪ್ರಭಾವಿ ಅಧಿಕಾರಿಯಾಗಿದ್ದು, ಆಕೆಗೆ ಕೆಲವು ರಾಜಕಾರಣಿಗಳು ಹಾಗೂ ಐಎಎಸ್‌ ಅಧಿಕಾರಿಗಳ ಶ್ರೀರಕ್ಷೆ ಇದೆ ಎಂದು ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಹಾಂ ಆರೋಪಿಸಿದ್ದಾರೆ.

2019ರಲ್ಲಿ ಜೂನ್‌ ತಿಂಗಳಲ್ಲಿ ಮೊದಲ ಬಾರಿಗೆ ಸುಧಾ ಅವರ ಭ್ರಷ್ಟಚಾರದ ಬಗ್ಗೆ ತನಿಖೆ ನಡೆಸುವಂತೆ ಎಸಿಬಿಗೆ ದಾಖಲೆ ಸಮೇತ ದೂರು ಸಲ್ಲಿಸಿದೆ. ಆದರೆ ಎಸಿಬಿ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ. ಬಳಿಕ 2020 ಜನವರಿಯಲ್ಲಿ ಆಕೆಯ ವಿರುದ್ಧ ನ್ಯಾಯಾಲಯಕ್ಕೆ ಖಾಸಗಿ ದೂರು ದಾಖಲಿಸಿದೆ. ವಿಚಾರಣೆ ನಡೆಸಿದ ನ್ಯಾಯಾಲಯವು ಎಸಿಬಿ ತನಿಖೆಗೆ ಆದೇಶಿಸಿತ್ತು. ತರುವಾಯ ಎಚ್ಚೆತ್ತು ಸುಧಾ ಅವರ ಆಕ್ರಮ ಆಸ್ತಿ ಸಂಪಾದನೆ ಪತ್ತೆಗೆ ಎಸಿಬಿ ತನಿಖೆ ನಡೆಸಿದೆ ಎಂದು ಅಬ್ರಹಾಂ ಹೇಳಿದ್ದಾರೆ.

"

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ದೂರು ನೀಡಿದಾಗಲೇ ಎಸಿಬಿ ತನಿಖೆ ನಡೆಸದೆ ನಿರ್ಲಕ್ಷ್ಯ ವಹಿಸಿದರ ಮರ್ಮವೇನು ಗೊತ್ತಿಲ್ಲ. ಈ ಬೆಳವಣಿಗೆ ಗಮನಿಸಿದರೆ ಸರ್ಕಾರದ ಮಟ್ಟದಲ್ಲಿ ಆಕೆಯ ಪ್ರಭಾವ ಅರ್ಥವಾಗುತ್ತದೆ. ಕಳೆದ 10-12 ವರ್ಷಗಳಿಂದ ತಾನು ಕೆಲಸ ಮಾಡಿದ ಪ್ರತಿ ಇಲಾಖೆಯಲ್ಲಿ ಸುಧಾ ವಿಪರೀತ ಅಕ್ರಮವೆಸೆಗಿದ್ದಾರೆ. ಒಂದು ಫೈಲ್‌ ಮೂವ್‌ ಆಗಬೇಕಾದರೂ ಲಕ್ಷ ಲಕ್ಷ ಲಂಚ ಪಡೆದಿದ್ದಾರೆ. ಆದರೆ ರಾಜ್ಯದಲ್ಲಿ ಯಾವುದೇ ಸರ್ಕಾರ ಬಂದರೂ ಕೆಲವು ಮಂತ್ರಿಗಳು ಆಕೆಯ ರಕ್ಷಣೆಗೆ ನಿಲ್ಲುತ್ತಿದ್ದರು. ಅದೇ ರೀತಿ ಐದಾರು ಐಎಎಸ್‌ ಅಧಿಕಾರಿಗಳು ಬೆಂಬಲವಿದೆ. ಈ ಬಲದಿಂದ ಆಕೆ ಲಗಾಮಿಲ್ಲದೆ ಭ್ರಷ್ಟಾಚಾರ ನಡೆಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಇವರು ಕೆಎಎಸ್ ಅಧಿಕಾರಿಯಲ್ಲ, ಬಿಡಿಎ ಬಂಗಾರಮ್ಮ; ಮಾಡಿದ್ದೆಲ್ಲಾ ಕೋಟಿ ಮೌಲ್ಯದ ಅಕ್ರಮ ಆಸ್ತಿಗಳು

ಗೌರಿಬಿದನೂರಿನಲ್ಲಿ ಸುಧಾ ಅವರನ್ನು ಗೋಣಿಚೀಲದ ತಹಶೀಲ್ದಾರ್‌ ಎಂದೇ ಜನರು ಕರೆಯುತ್ತಿದ್ದರು. ರಾತ್ರಿ ವೇಳೆ ಮರಳು ಲಾರಿಗಳನ್ನು ತಡೆದು ಬೆದರಿಸಿ ಆಕೆ ಹಣ ಸುಲಿಗೆ ಮಾಡುತ್ತಿದ್ದರು. ಭ್ರಷ್ಟಾಚಾರದಲ್ಲಿ ಆಕೆ ಭಯಂಕರ. ಅವರಿಗೆ ಸಿಕ್ಕಾಪಟ್ಟೆಧೈರ್ಯವಿದೆ. ತಾನು ಸಂಪಾದಿಸಿದ್ದ ಹಣವನ್ನು ಪೊಲೀಸ್‌ ಅಧಿಕಾರಿಗಳ ಮನೆಯಲ್ಲೇ ಬಚ್ಚಿಟ್ಟಿದ್ದರು. ಇದಕ್ಕೆ ಇವತ್ತು ನಿವೃತ್ತ ಡಿವೈಎಸ್ಪಿಯೊಬ್ಬರ ಮನೆ ಮೇಲೆ ಎಸಿಬಿ ದಾಳಿ ನಡೆದಿರುವುದು ಉದಾಹರಣೆಯಾಗಿದೆ ಎಂದು ಆರೋಪಿಸಿದರು.

ಕನ್ನಡ ಚಲನಚಿತ್ರಗಳ ನಿರ್ಮಾಣ ಮೂಲಕ ಕಪ್ಪು ಹಣವನ್ನು ಸಕ್ರಮವಾಗಿಸಿಕೊಳ್ಳುತ್ತಿದ್ದರು. .10 ಲಕ್ಷದಲ್ಲಿ ಸಿನಿಮಾ ತಯಾರಿಸಿ .10 ಕೋಟಿ ಲಾಭದ ಲೆಕ್ಕ ತೋರಿಸುತ್ತಿದ್ದರು. ಈ ಬಗ್ಗೆ ತನಿಖೆಗೆ ಒತ್ತಾಯಿಸಿದ್ದೇನೆ. ಸುಧಾ ಹಣಕಾಸು ನಿರ್ವಹಣೆಯನ್ನು ಆಕೆಯ ಪತಿಯೇ ನಡೆಸುತ್ತಿದ್ದ. ಕೆಲವು ಬಾರಿ ಮುಂಬೈನಿಂದ ರೌಡಿಗಳನ್ನು ಕರೆತಂದು ಗಲಾಟೆ ಮಾಡಿಸಿದ್ದಾರೆ. ಹಿಂದೊಮ್ಮೆ ನಾನು ನೀಡಿದ ದೂರಿನ ಮೇರೆಗೆ ಜೆ.ಪಿ.ನಗರದ ಹೋಟೆಲ್‌ ಮೇಲೆ ಪೊಲೀಸರು ದಾಳಿ ನಡೆಸಿ ರೌಡಿಗಳನ್ನು ಬಂಧಿಸಿದ್ದರು ಎಂದು ಹೇಳಿದರು.

KAS ಅಧಿಕಾರಿ ಮನೆಯಲ್ಲಿ ಕಂತೆ ಕಂತೆ ನೋಟು, ರಾಶಿ ಚಿನ್ನ: ದಾಳಿ ನಡೆಸಿದ ಅಧಿಕಾರಿಗಳು ಸುಸ್ತು!

ನನ್ನ ಮೇಲೆ ಪೊಲೀಸರಿಗೆ ಸುಳ್ಳು ಆರೋಪ ಹೊರಿಸಿ ಸುಧಾ ದೂರು ದಾಖಲಿಸಿದ್ದರು. ಸುಧಾ ಆಸ್ತಿ ಸಂಪಾದನೆ ವಿರುದ್ಧ ಸಮಗ್ರ ತನಿಖೆ ನಡೆಸಬೇಕು. ಈ ಬಗ್ಗೆ ನ್ಯಾಯಾಲಯಕ್ಕೆ ಅಧಿಕಾರಿಗಳು ವರದಿ ಸಲ್ಲಿಸಬೇಕಿದೆ. ನ್ಯಾಯಾಲಯದ ಮೇಲುಸ್ತುವಾರಿಯಲ್ಲಿ ತನಿಖೆ ನಡೆದಿರುವುದರಿಂದ ಶಿಕ್ಷೆಯಾಗುವ ಭರವಸೆ ಇದೆ ಎಂದು ಅಬ್ರಹಾಂ ತಿಳಿಸಿದರು.