ದೇವಾಲಯ, ಹೋಟೆಲ್‌ಗಳಲ್ಲಿ ಮಾತ್ರ ಸಾಮಾಜಿಕ ಅಂತರ
ಲಾಕ್‌ಡೌನ್‌ನಲ್ಲಿದ್ದ ಕಟ್ಟಳೆ, ನಿರ್ಬಂಧಗಳು ಸಡಿಲವಾಗಿರುವ ಹಿನ್ನೆಲೆಯಲ್ಲಿ ಜನ ಸಹಜ ಜೀವನಕ್ಕೆ ಹೊಂದಿಕೊಳ್ಳಲಾರಂಭಿಸಿದ್ದಾರೆ. ದೇವಾಲಯಗಳು ಮತ್ತು ಹೋಟೆಲ್‌ಗಳಲ್ಲಿ ಸಾಮಾಜಿಕ ಅಂತರ ಸ್ವಲ್ಪ ಮಟ್ಟಿಗೆ ಪಾಲನೆಯಾಗುತ್ತಿರುವುದು ಕಂಡು ಬರುತ್ತಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಕಡೂರು(ಜೂ.17): ಲಾಕ್‌ಡೌನ್ ಸಂಪೂರ್ಣ ಸಡಿಲಿಕೆಯಿಂದಾಗಿ ಕಡೂರು ತಾಲೂಕಿನಲ್ಲಿ ಜನ ಜೀವನ ಸಹಜ ಸ್ಥಿತಿಯತ್ತ ಮರಳಿದ್ದು ಒಂದು ಕಡೆಯಾದರೆ, ಮತ್ತೊಂದೆಡೆ ಜನರಲ್ಲಿ ಕೊರೋನಾ ಭಯವೂ ಮಾಯವಾದಂತಾಗಿ ಮತ್ತಷ್ಟು ನಿರ್ಲಕ್ಷ್ಯಕ್ಕೆ ಕಾರಣವಾಗಿದೆ.
ಹಿಂದಿನ ಲಾಕ್‌ಡೌನ್‌ನಲ್ಲಿದ್ದ ಕಟ್ಟಳೆ, ನಿರ್ಬಂಧಗಳು ಸಡಿಲವಾಗಿರುವ ಹಿನ್ನೆಲೆಯಲ್ಲಿ ಜನ ಸಹಜ ಜೀವನಕ್ಕೆ ಹೊಂದಿಕೊಳ್ಳಲಾರಂಭಿಸಿದ್ದಾರೆ. ದೇವಾಲಯಗಳು ಮತ್ತು ಹೋಟೆಲ್‌ಗಳಲ್ಲಿ ಸಾಮಾಜಿಕ ಅಂತರ ಸ್ವಲ್ಪ ಮಟ್ಟಿಗೆ ಪಾಲನೆಯಾಗುತ್ತಿರುವುದು ಕಂಡು ಬರುತ್ತಿದೆ. ಆದರೆ ತರಕಾರಿ ಅಂಗಡಿಗಳು, ಮತ್ತಿತರ ಅಂಗಡಿಗಳು, ಕ್ಯಾಂಟೀನ್‌ಗಳಲ್ಲಿ ಮಾತ್ರ ಅಂತರ ಅಷ್ಟಾಗಿ ಪಾಲನೆಯಾಗುತ್ತಿಲ್ಲ. ಕೊರೋನಾ ಭೀತಿಯಿಂದ ಕೆಲವರು ಕಡ್ಡಾಯ ಮಾಸ್ಕ್‌ಗೆ ಮೊರೆ ಹೋಗಿದ್ದರೆ, ಮತ್ತೆ ಕೆಲವರು ಮಾಸ್ಕ್ ಇಲ್ಲದೆ ಸಂಚರಿಸುತ್ತಿದ್ದಾರೆ. ದೇವಾಲಯಗಳಲ್ಲಿ ಅಂತರ ಪಾಲನೆ ಮಾಡುವಂತೆ ಅರ್ಚಕರು, ದೇವಾಲಯದ ಸಿಬ್ಬಂದಿ ಸೂಚನೆ ನೀಡುತ್ತಿರುವ ಹಿನ್ನೆಲೆಯಲ್ಲಿ ಅಂತರ ಪಾಲನೆಯಾಗುತ್ತಿದೆ.
ಹೋಟೆಲ್‌ಗಳಿಗೆ ಸಂಪೂರ್ಣ ರಿಯಾಯ್ತಿ ಸಿಕ್ಕಿದರೂ ಕೂಡಾ ಹೆಚ್ಚಿನ ಪ್ರಮಾಣದಲ್ಲಿ ಗಿರಾಕಿಗಳು ಬರುತ್ತಿಲ್ಲ. ಸಡಿಲಿಕೆ ವಿಶೇಷವೆಂದರೆ ಕೊರೋನಾ ಭಯದ ಹಿನ್ನೆಲೆಯಲ್ಲಿ ಹೋಟೆಲ್ ಗಳು ತೆರೆದಿದ್ದರೂ ಕೂಡಾ ಹೋಟೆಲ್‌ಗಳಿಗೆ ಬರುವವರ ಸಂಖ್ಯೆ ಕ್ಷೀಣಿಸಿದೆ. ಕಡೂರಿನ ಪಟ್ಟಣದ ದೊಡ್ಡ ಹೋಟೆಲ್‌ಗಳಲ್ಲಿ ಎಂದಿನಂತೆ ಪಾರ್ಸೆಲ್ ವ್ಯವಸ್ಥೆ ಇದೆ. ಅಲ್ಲದೆ, ಕಾಫಿ-ಟೀ ಜೊತೆಗೆ ತಿಂಡಿ ವ್ಯವಸ್ಥೆ ಕೂಡ ಇದೆ. ಸಾಮಾಜಿಕ ಅಂತರ ಕಾಪಾಡಿಕೊಳ್ಳಲೂ ಸಹ ವ್ಯವಸ್ಥೆ ಮಾಡಲಾಗಿದೆ.
ಮುಂದಿನ 2 ತಿಂಗಳಲ್ಲಿ ಕಿಸಾನ್ ಕಾರ್ಡ್ ಹಣ ಖಾತೆಗೆ ಜಮಾ
ಲಾಕ್‌ಡೌನ್ ಸಡಿಲಿಕೆ ಹೋಟೆಲ್‌ಗಳಲ್ಲಿ ಮುಕ್ತ ವಾತಾವರಣ ಕಂಡು ಬರುತ್ತಿಲ್ಲ. ಕಾರಣ ಗಿರಾಕಿಗಳ ಸಂಖ್ಯೆ ಕಡಿಮೆಯಾಗಿದೆ. ಹಾಕಿದ ಬಂಡವಾಳ ವಾಪಸ್ ಬರುವುದಿಲ್ಲ ಎಂಬ ರೀತಿಯಲ್ಲಿ ಹೋಟೆಲ್‌ಗಳು ನಡೆಯುತ್ತಿವೆ ಎನ್ನುತ್ತಾರೆ ಗೋಕುಲ ಹೋಟೆಲ್‌ನ ಮಾಲೀಕ ಸುಬ್ರಮಣ್ಯ.
ಅಲ್ಲದೆ, ಶಿವಮೊಗ್ಗ-ಬೆಂಗಳೂರು ಮಾರ್ಗದಲ್ಲಿ ಚಲಿಸಿ ಕಡೂರು ಪಟ್ಟಣದ ಮೂಲಕ ಹೋಗುವ ವಾಹನಗಳು ಎಂದಿನಂತೆ ಹೋಟೆಲ್‌ಗಳ ಮುಂದೆ ನಿಲ್ಲದಿರುವುದು ಕೂಡಾ ಹೋಟೆಲುಗಳ ವ್ಯಾಪಾರಕ್ಕೆ ಸಂಚಕಾರ ತಂದಿದೆ. ಒಟ್ಟಾರೆ ಹೋಟೆಲ್‌ಗಳು, ಪ್ರವಾಸಿ ತಾಣಗಳಿಗೆ ಬರುತ್ತಿರುವವರ ಸಂಖ್ಯೆ ಕಡಿಮೆಯಾಗಲು ಕೊರೋನಾ ಭೀತಿಯೇ ಸ್ಪಷ್ಟಕಾರಣವಾಗಿದೆ. ಆದರೆ, ಜನ ಮಾತ್ರ ಕೊರೊನಾ ಭೀತಿಯಿಲ್ಲದೆ ಮಾಮೂಲಿಯಂತೆ ಓಡಾಡುತ್ತಿದ್ದಾರೆ.
ಹೋಟೆಲ್‌ಗೆ ಬರುವವರ ಸಂಖ್ಯೆ ಕಡಿಮೆಯಾಗಿದೆ. ದೂರದ ಊರುಗಳಿಂದ ಬಂದು ತೆರಳುತ್ತಿದ್ದ ವಾಹನಗಳು ಕೂಡ ನಿಲ್ಲುವುದು ಕಡಿಮೆಯಾಗಿದೆ. ಗ್ರಾಹಕರು ನಿರೀಕ್ಷಿತ ಪ್ರಮಾಣದಲ್ಲಿ ಇಲ್ಲ. ಇದರಿಂದ ವ್ಯಾಪಾರ ಹೇಗೆ ನಡೆಸಬೇಕು ಎಂಬಂತಾಗಿದೆ. ಸ್ವಲ್ಪ ದಿನದ ನಂತರ ಬದಲಾಗಬಹುದು. -ಭಾಸ್ಕ ರ್, ವಿನಾಯಕ ಹೋಟೆಲ್ ಮಾಲೀಕರು.