ಚಿತ್ರದುರ್ಗ [ಜ.23]: ಚಿತ್ರದುರ್ಗ ಜಿಲ್ಲೆಯ ಬಾರ್‌ಗಳಲ್ಲಿ ಇನ್ಮೇಲೆ ಎಲ್ಲೆಂದರಲ್ಲಿ ಕುಳಿತು ಸಿಗರೇಟು ಸೇದುವಂತಿಲ್ಲ. ಇದಕ್ಕಾಗಿ ಪ್ರತ್ಯೇಕ ಧೂಮಪಾನ ವಲಯ ಕಡ್ಡಾಯವಾಗಿ ಆರಂಭಿಸಬೇಕು. ಪ್ರತಿ ಟೇಬಲ್‌ ಗಳಲ್ಲಿ ಧೂಮಪಾನ ಮಾಡುವುದು ಕಂಡು ಬಂದರೆ ಮುಲಾಜಿಲ್ಲದೆ ಕೇಸ್‌ ಹಾಕಿ.

ಬಾರ್‌ಗಳ ಟೇಬಲ್‌ಗಳಲ್ಲಿ ಗುಂಡು ಹಾಕುತ್ತಾ ಕುಳಿತು ಸಿಗರೇಟ್‌ ಸೇದುವವರಿಗೆ ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾ ರವಾನೆ ಮಾಡಿರುವ ಎಚ್ಚರಿಕೆಯ ಸಂದೇಶವಿದು. ಮಂಗಳವಾರ ನಡೆದ ರಾಷ್ಟ್ರೀಯ ತಂಬಾಕು ನಿಯಂತ್ರಣ ಸಮನ್ವಯ ಸಮಿತಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಧೂಮಪಾನ ವಲಯ ನಿರ್ಮಿಸಿಕೊಳ್ಳದಿದ್ದರೆ ಕೋಟ್ಪಾ ಕಾಯ್ದೆ ಉಲ್ಲಂಘನೆಯಾಗುತ್ತದೆ ಎಂದು ತಿಳಿಸಿದರು.

ತಂಬಾಕು ನಿಯಂತ್ರಣ ಹಾಗೂ ಅಬಕಾರಿ ಇಲಾಖೆಯ ಅಧಿಕಾರಿಗಳು ಇಂದಿನಿಂದಲೇ ಬಾರ್‌ ಅಂಡ್‌ ರೆಸ್ಟೋರೆಂಟ್‌ಗಳ ಮೇಲೆ ದಾಳಿ ನಡೆಸಬೇಕು. ನಿಯಮ ಉಲ್ಲಂಘನೆಯಾಗುತ್ತಿದ್ದರೆ, ದಂಡ ಹಾಕುವುದರ ಜೊತೆಗೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಬೇಕು. ಬಾರ್‌ ಅಂಡ್‌ ರೆಸ್ಟೋರೆಂಟ್‌ಗಳಲ್ಲಿ ಪ್ರತಿ ಕೊಠಡಿಯಲ್ಲೂ ಧೂಮಪಾನ ನಿಷೇಧ ಹಾಗೂ ದಂಡ ವಿಧಿಸುವ ಕುರಿತು ಫಲಕ ಹಾಕಬೇಕು ಎಂದು ಸೂಚನೆ ನೀಡಿದರು.

ಮಕ್ಕಳಿಗಾಗಿ 26 ಲಕ್ಷ ಮೌಲ್ಯದ ಸಿಗರೆಟ್‌ ದಾಸ್ತಾನಿಟ್ಟ ತಂದೆ...

ಕಾಲೇಜು, ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿಗಳಿಂದ ತಂಬಾಕು ಉತ್ಪನ್ನಗಳ ಬಳಕೆ ಕುರಿತಂತೆ ಆರೋಗ್ಯ ಇಲಾಖೆ, ಪೊಲೀಸ್‌ ಇಲಾಖೆ ಸಮನ್ವಯದೊಂದಿಗೆ ಬಾಲಕರ ಕಾಲೇಜು ಹಾಗೂ ಹಾಸ್ಟೆಲ್‌ಗಳಲ್ಲಿ ಆಗಾಗ್ಗೆ ಪರಿಶೀಲನೆ ನಡೆಸಿ, ವರದಿ ಸಲ್ಲಿಸಬೇಕು. ಅಲ್ಲದೆ, ಶಾಲಾ-ಕಾಲೇಜು ಸುತ್ತ 100 ಯಾರ್ಡ್‌ ವ್ಯಾಪ್ತಿಯಲ್ಲಿ ಯಾವುದೇ ತಂಬಾಕು ಉತ್ಪನ್ನ ಮಾರಾಟ ಮಾಡುವಂತಿಲ್ಲ. ಆದರೆ, ಶಾಲಾ-ಕಾಲೇಜು ಮೈದಾನಗಳಲ್ಲಿ ತಂಬಾಕು ಉತ್ಪನ್ನಗಳ ಖಾಲಿ ಪಾಕೆಟ್‌ಗಳು ಬಿದ್ದಿರುವುದನ್ನು ಕೂಡಾ ಗಮನಿಸಲಾಗಿದೆ. ಮೈದಾನಗಳೂ ಕೂಡಾ ಆಯಾ ಸಂಸ್ಥೆಯ ವ್ಯಾಪ್ತಿಗೆ ಬರುತ್ತವೆ ಎಂಬುದನ್ನು ಶಾಲಾ-ಕಾಲೇಜುಗಳ ಮುಖ್ಯಸ್ಥರು ಮರೆಯಬಾರದು ಎಂದು ಎಚ್ಚರಿಸಿದರು.

ಸಿಗರೆಟ್‌ ಬಿಟ್ಟರೆ ಈ ಕಂಪನಿ ಕೊಡುತ್ತೆ 6 ದಿನ ಹೆಚ್ಚು ರಜೆ, ವೇತನವೂ ಹೆಚ್ಚು!...

ಬಾಲಕರ ಹಾಸ್ಟೆಲ್‌ಗಳು, ಖಾಸಗಿ ಪಿಜಿಗಳಲ್ಲಿ ತಂಬಾಕು ಉತ್ಪನ್ನಗಳಾದ ಸಿಗರೇಟ್‌, ಗುಟ್ಕಾ, ತಂಬಾಕು ಉತ್ಪನ್ನಗಳ ಬಳಕೆ ಸಾಧ್ಯತೆಗಳಿದ್ದು, ಇದರ ಬಗ್ಗೆಯೂ ನಿಗಾ ವಹಿಸುವುದು ಅಗತ್ಯ. ಹೀಗಾಗಿ, ಜಿಲ್ಲೆಯ ಎಲ್ಲ ಹಾಸ್ಟೆಲ್‌, ಪಿಜಿಗಳಿಗೂ ಕೋಟ್ಪಾ ಕಾಯ್ದೆ ಅನುಷ್ಠಾನ ಅಧಿಕಾರಿಗಳು ಪೊಲೀಸ್‌ ಅಧಿಕಾರಿಗಳೊಂದಿಗೆ ಆಗಾಗ್ಗೆ ಭೇಟಿ ನೀಡಿ ಪರಿಶೀಲನೆ ನಡೆಸುವ ಕಾರ್ಯ ಕೂಡಲೆ ಪ್ರಾರಂಭಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲೆಯ ಖಾಸಗಿ ಮತ್ತು ಸರ್ಕಾರಿ ಬಸ್‌ ನಿಲ್ದಾಣ ಹಾಗೂ ಬಸ್‌ಗಳಲ್ಲಿ ಧೂಮಪಾನ ನಿಷೇಧದ ಕುರಿತು ಫಲಕ ಅಳವಡಿಸಿರುವ ಬಗ್ಗೆ ಪರಿಶೀಲಿಸಿ ವರದಿ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿಗಳು ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಮಾನ್ಯತೆ ನವೀಕರಣ ಮಾಡಬೇಡಿ:

ಜಿಲ್ಲೆಯಲ್ಲಿ ಎಲ್ಲ ಶಾಲೆಗಳಲ್ಲಿ ಗೊಡೆ ಬರಹ ಬರೆಯಿಸಲಾಗಿದೆ ಎಂದು ಶಿಕ್ಷಣ ಇಲಾಖೆ ವರದಿ ನೀಡಿದೆ. ಆದರೆ, ಇದರ ಸತ್ಯಾಸತ್ಯತೆ ಕುರಿತು ಪರಿಶೀಲನೆ ಆಗಬೇಕು. ಎಲ್ಲ ಶಾಲೆಗಳಿಂದಲೂ, ಗೋಡೆ ಬರಹ ಬರೆಯಿಸಿರುವ ಕುರಿತು ಫೋಟೋ ಸಹಿತ ವರದಿ ಪಡೆದು ಸಲ್ಲಿಸಬೇಕು. ಖಾಸಗಿ ಶಾಲೆ, ಕಾಲೇಜುಗಳ ಮಾನ್ಯತೆ ನವೀಕರಣ ಸಂದರ್ಭದಲ್ಲಿ ಗೋಡೆ ಬರಹ ಬರೆಯಿಸಿರುವ ಕುರಿತು ಖಚಿತಪಡಿಸಿಕೊಂಡ ಬಳಿಕವೇ ಮಾನ್ಯತೆ ನವೀಕರಿಸಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.

ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ವಿಭಾಗೀಯ ಸಂಯೋಜಕ ಮಹಾಂತೇಶ್‌ ಮಾತನಾಡಿ, ಜಿಲ್ಲೆಯಲ್ಲಿ ಈವರೆಗೆ 41 ಶಾಲೆ, ಕಾಲೇಜುಗಳನ್ನು ತಂಬಾಕು ಮುಕ್ತ ಎಂದು ಘೋಷಿಸಲಾಗಿದೆ. 98 ಶಾಲೆಗಳಲ್ಲಿ ಅರಿವು ಮೂಡಿಸಲಾಗಿದೆ. ಈ ವರ್ಷ 39 ಕಡೆಗಳಲ್ಲಿ ದಾಳಿ ನಡೆಸಿದ್ದು, ಸೆಕ್ಷನ್‌-4ನಲ್ಲಿ 680 ಪ್ರಕರಣಗಳನ್ನು ದಾಖಲಿಸಿ 55940 ರು. ದಂಡ. ಸೆ-6ಎನಲ್ಲಿ 485 ಪ್ರಕರಣಕ್ಕೆ 39450 ರು. ದಂಡ, ಸೆ.6ಬಿನಲ್ಲಿ 76 ಪ್ರಕರಣಗಳಿಗೆ 7125 ರು. ದಂಡ ಸೇರಿ ಒಟ್ಟು 1241 ಪ್ರಕರಣಗಳಲ್ಲಿ 1.02 ಲಕ್ಷ ರು. ದಂಡ ವಿಧಿಸಲಾಗಿದೆ ಎಂದರು.

ಜಿಲ್ಲಾ ತಂಬಾಕು ನಿಯಂತ್ರಣಾಧಿಕಾರಿ ಡಾ.ರೇಣುಪ್ರಸಾದ್‌, ಜಿಲ್ಲಾ ಸಲಹೆಗಾರ ಪ್ರಭುದೇವ್‌, ಪ್ರಾದೇಶಿಕ ಸಾರಿಗೆ ಅಧಿಕಾರಿ ಜಿ.ಎಸ್‌.ಹೆಗಡೆ, ಜಂಟಿ ಕೃಷಿ ನಿರ್ದೇಶಕ ಸದಾಶಿವ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

ಗಾಂಜಾ ಬಗ್ಗೆ ಎಚ್ಚರ ವಹಿಸಿ

ಜಿಲ್ಲೆಯಲ್ಲಿ ಕೆಲವೆಡೆ ಹೊಲಗಳಲ್ಲಿ ಕದ್ದು, ಮುಚ್ಚಿ ಬೆಳೆಗಳ ಮಧ್ಯೆ ಸಣ್ಣ ಪ್ರಮಾಣದಲ್ಲಿ ಗಾಂಜಾ ಬೆಳೆಯುತ್ತಿರುವ ಬಗ್ಗೆ ಆರೋಪ ಕೇಳಿ ಬರುತ್ತಿದ್ದು, ಅಬಕಾರಿ ಇಲಾಖೆಯ ಅಧಿಕಾರಿಗಳು ಜಿಲ್ಲೆಯಾದ್ಯಂತ ನಿಗಾ ವಹಿಸುತ್ತಿದ್ದಾರೆ. ಇದು ಶಿಕ್ಷಾರ್ಹ ಅಪರಾಧವಾಗಿರುವ ಬಗ್ಗೆ ರೈತರಿಗೆ ಅರಿವು ಮೂಡಿಸಬೇಕಿದೆ. ಅಲ್ಲದೆ, ಇಂತಹ ಪ್ರಕರಣ ಎಲ್ಲಿಯೇ ಕಂಡುಬಂದರೂ ಅಬಕಾರಿ ಇಲಾಖೆಯ ಗಮನಕ್ಕೆ ತರುವಂತೆ ತಿಳುವಳಿಕೆ ಮೂಡಿಸಬೇಕಿದೆ ಎಂದು ಅಬಕಾರಿ ಉಪ ಆಯುಕ್ತ ನಿರ್ಮಲ ಸಭೆಯಲ್ಲಿ ಪ್ರಸ್ತಾಪಿಸಿದರು.