Asianet Suvarna News Asianet Suvarna News

ಸ್ಮಾರ್ಟ್‌ಸಿಟಿ ಕಾಮಗಾರಿ ಡಿಸೆಂಬರ್‌ ಅಂತ್ಯದೊಳಗೆ ಪೂರ್ಣ: ಸಚಿವ ದಿನೇಶ್‌ ಗುಂಡೂರಾವ್‌

ಮಂಗಳೂರಿನಲ್ಲಿ ಸ್ಮಾರ್ಟ್‌ಸಿಟಿ ಕಾಮಗಾರಿ ಅನುಷ್ಠಾನ ವಿಳಂಬ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಡಿಸೆಂಬರ್‌ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ. 

Smart City work to be completed by the end of December Says Minister Dinesh Gundu Rao gvd
Author
First Published Aug 2, 2023, 1:40 PM IST

ಮಂಗಳೂರು (ಆ.02): ಮಂಗಳೂರಿನಲ್ಲಿ ಸ್ಮಾರ್ಟ್‌ಸಿಟಿ ಕಾಮಗಾರಿ ಅನುಷ್ಠಾನ ವಿಳಂಬ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಡಿಸೆಂಬರ್‌ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ. ಇಲ್ಲಿನ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಮಂಗಳವಾರ ಸ್ಮಾರ್ಟ್‌ಸಿಟಿ ಕಾಮಗಾರಿಯ ಪ್ರಗತಿ ಪರಿಶೀಲನೆಯಲ್ಲಿ ಅವರು ಮಾತನಾಡಿದರು. ಸ್ಮಾರ್ಟ್‌ಸಿಟಿಯಲ್ಲಿ ಈವರೆಗೆ ಆಗಿರುವ ಕಾಮಗಾರಿಯಲ್ಲಿ ಪ್ರಯೋಜನಕ್ಕೆ ಬಂದಿಲ್ಲ, ಬೇರೆ ಕಡೆಗೆ ಹೋಲಿಸಿದರೆ ಇಲ್ಲಿ ಕಾಮಗಾರಿ ತುಂಬ ನಿಧಾನವಾಗಿದೆ. 

ರಾಜ್ಯದ ವಿವಿಧ ನಗರಗಳಲ್ಲಿ ಸ್ಮಾರ್ಟ್‌ಸಿಟಿ ಯೋಜನೆ ಅನುಷ್ಠಾನಗೊಳ್ಳುತ್ತಿದ್ದು, ಎಲ್ಲಿಯೂ ಮಂಗಳೂರಿನಷ್ಟು ವಿಳಂಬವಾಗಿಲ್ಲ. ಕೆರೆಗಳ ಅಭಿವೃದ್ಧಿ ಆದರೂ ಅಲ್ಲಿ ಮೂಲ ಸೌಕರ್ಯಗಳು ಇಲ್ಲ ಎಂಬ ದೂರುಗಳು ಇವೆ. ಕೈಗೆತ್ತಿಕೊಂಡಿರುವ ಯಾವ ಕಾಮಗಾರಿಗಳಲ್ಲೂ ನಿರೀಕ್ಷಿತ ಪ್ರಗತಿ ಕಂಡಿಲ್ಲ. ಮುಂದಿನ ದಿನಗಳಲ್ಲಿ ಪ್ರತ್ಯೇಕವಾಗಿ ಸ್ಮಾರ್ಟ್‌ ಸಿಟಿ ಕಾಮಗಾರಿ ಪರಿಶೀಲನೆ ನಡೆಸಲಾಗುವುದು ಎಂದರು. ಸ್ಮಾರ್ಟ್‌ಸಿಟಿ ಮುಖ್ಯ ಎಂಜಿನಿಯರ್‌ ಅರುಣ್‌ ಪ್ರಭ ಪ್ರತಿಕ್ರಿಯಿಸಿ, ಕೆಲವು ಕಡೆಗಳಲ್ಲಿ ಭೂ ಸ್ವಾಧೀನ ಪ್ರಕ್ರಿಯೆ ನಡೆಯಬೇಕಾಗಿದ್ದು, ಇದು ಮಹಾನಗರ ಪಾಲಿಕೆಯಿಂದ ಆಗಬೇಕಾದ ಕೆಲಸ. ಭೂಸ್ವಾಧೀನ ಬಾಕಿ ಇರುವುದು ರಸ್ತೆ ಕಾಮಗಾರಿಗೆ ಹಿನ್ನಡೆಯಾಗಿದೆ ಎಂದರು.

ಧಾರವಾಡ ಗೌಳಿವಾಡಾ ಜನವಸತಿ ಕಂದಾಯ ಗ್ರಾಮಗಳಾಗಿ ಪರಿವರ್ತನೆ: ಸಚಿವ ಸಂತೋಷ್ ಲಾಡ್

ಶಾಸಕ ವೇದವ್ಯಾಸ್‌ ಕಾಮತ್‌ ಮಾತನಾಡಿ, ಕೋವಿಡ್‌ ಕಾರಣಕ್ಕೆ ಎರಡು ವರ್ಷ ಎಲ್ಲ ಕಾಮಗಾರಿಗಳು ಹಿಂದೆ ಬಿದ್ದಿದ್ದವು. ಕರಾವಳಿಯಲ್ಲಿ ಆರು ತಿಂಗಳು ಮಳೆ ಇರುತ್ತದೆ. ನಡುವೆ ಮರಳಿನ ಸಮಸ್ಯೆ, ಚುನಾವಣೆ ನೀತಿಸಂಹಿತೆ, ಬಳಿಕ ಸರ್ಕಾರ ಕಾಮಗಾರಿಗೆ ತಡೆ ವಿಧಿಸಿದ್ದು ಇತ್ಯಾದಿ ಕಾರಣಗಳಿಂದ ಕಾಮಗಾರಿ ಸ್ವಲ್ಪ ವಿಳಂಬವಾಗಿದೆ ಎಂದರು. ಇದಕ್ಕೆ ಉತ್ತರಿಸಿದ ಉಸ್ತುವಾರಿ ಸಚಿವರು, ನಿಗದಿಯಂತೆ ಡಿಸೆಂಬರ್‌ ಅಂತ್ಯದೊಳಗೆ ಎಲ್ಲ ರಸ್ತೆಗಳನ್ನು ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

806 ಕೋಟಿ ರು. ಅನುದಾನ: ಸ್ಮಾರ್ಟ್‌ ಸಿಟಿ ಯೋಜನೆಯಡಿ ಮಂಗಳೂರು ನಗರದಕ್ಕೆ ಕೇಂದ್ರ ಸರ್ಕಾರದಿಂದ 392 ಕೋಟಿ ರು., ರಾಜ್ಯ ಸರ್ಕಾರದಿಂದ 414 ಕೋಟಿ ರು. ಸೇರಿ ಒಟ್ಟು 806 ಕೋಟಿ ರು.ಅನುದಾನ ಬಿಡುಗಡೆಯಾಗಿದೆ. ಇದರಲ್ಲಿ 350.65 ಕೋಟಿ ರು. ವೆಚ್ಚದಲ್ಲಿ 32 ಕಾಮಗಾರಿ ಮುಕ್ತಾಯಗೊಂಡಿದೆ. 579 ಕೋಟಿ ರು. ಮೊತ್ತದ 23 ಕಾಮಗಾರಿ ಪ್ರಗತಿಯಲ್ಲಿವೆ. 262.79 ಕೋಟಿ ರು.ಗಳ ಪಿಪಿಪಿ (ಸಾರ್ವಜನಿಕ ಖಾಸಗಿ ಸಹಭಾಗಿತ್ವದ) ಕಾಮಗಾರಿ ಪ್ರಗತಿಯಲ್ಲಿವೆ ಎಂದು ಸ್ಮಾರ್ಟ್‌ಸಿಟಿ ಯೋಜನಾ ವ್ಯವಸ್ಥಾಪಕ ನಿರ್ದೇಶಕರಾಗಿರುವ ಜಿಲ್ಲಾ ಪಂಚಾಯಿತಿ ಸಿಇಒ ಡಾ. ಆನಂದ್‌ ತಿಳಿಸಿದರು.

ಕೆರೆ ಆವರಣಕ್ಕೆ ಬರುವ ಜನರಿಗೆ ಕುಳಿತುಕೊಳ್ಳಲು ಆಸನ ವ್ಯವಸ್ಥೆ ಇಲ್ಲ. ಶೌಚಾಲಯದಂತಹ ಮೂಲ ಸೌಕರ್ಯವೂ ಇಲ್ಲ ಎಂದು ಪಾಲಿಕೆ ವಿರೋಧ ಪಕ್ಷದ ನಾಯಕ ನವೀನ್‌ ಡಿಸೋಜ್‌ ಗಮನ ಸೆಳೆದರು. ನಗರದಲ್ಲಿ ವಾಹನ ದಟ್ಟಣೆ ಹೆಚ್ಚುತ್ತಿದ್ದು, ಸಂಚಾರ ನಿರ್ವಹಣೆ ವ್ಯವಸ್ಥೆಯನ್ನು ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಕೈಗೆತ್ತಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು. ಕಮಾಂಡ್‌ ಕಂಟ್ರೋಲ್‌ ರೂಂನ್ನು ಬಸ್‌ ಸಂಚಾರ ಟ್ರ್ಯಾಕಿಂಗ್‌, ಟ್ರಾಫಿಕ್‌ ಸಿಗ್ನಲ್‌ ಸೇರಿದಂತೆ ಬಹು ಉದ್ದೇಶಗಳಿಗೆ ಬಳಕೆ ಮಾಡಬೇಕು. ಹಾಗಾದರೆ ಮಾತ್ರ ಕಮಾಂಡ್‌ ಕಂಟ್ರೋಲ್‌ ರೂಂ ಸ್ಥಾಪನೆ ಸಾರ್ಥಕವಾಗಲು ಸಾಧ್ಯ ಎಂದು ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದರು.

ಆರೋಗ್ಯ, ಶಿಕ್ಷಣ ಕ್ಷೇತ್ರದಲ್ಲಿ ಉಡುಪಿ ಜಿಲ್ಲೆ ಕುಸಿತ: ಸಿದ್ದರಾಮಯ್ಯ ಕಿಡಿ

ವೆನ್ಲಾಕ್‌ ಆಸ್ಪತ್ರೆಗೆ ಭೇಟಿ: ಸಭೆಯ ಬಳಿಕ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಅವರು ನಗರದ ವೆನ್ಲಾಕ್‌ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಸ್ಮಾರ್ಟ್‌ಸಿಟಿ ಕಾಮಗಾರಿಯ ಪ್ರಗತಿ ವೀಕ್ಷಿಸಿದರು. ಆಗಸ್ಟ್‌ 15ರೊಳಗೆ ಎಲ್ಲ ಕೆಲಸಗಳನ್ನು ಪೂರ್ಣಗೊಳಿಸಿದರೆ ಮಾತ್ರ ಆ ದಿನ ಉದ್ಘಾಟನೆ ನೆರವೇರಿಸಲಾಗುವುದು ಎಂದು ಅವರು ಅಧಿಕಾರಿಗಳಿಗೆ ತಿಳಿಸಿದರು.

Follow Us:
Download App:
  • android
  • ios