ಅನ್ಯರ ಮೀಸಲು ಕಸಿಯುವ ಕೂಡಲಸಂಗಮ ಸ್ವಾಮೀಜಿ ಹೇಳಿಕೆಗೆ ತೀವ್ರ ಖಂಡನೆ
ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ ಮೀಸಲಾತಿ ನೀಡಬೇಕು ಎಂಬ ಹೋರಾಟಕ್ಕೆ ತಮ್ಮ ವಿರೋಧವಿಲ್ಲ. ಆದರೆ, ಶ್ರೀಗಳು ಬೇರೆ ಜಾತಿ, ಸಮುದಾಯದವರ ಮೀಸಲಾತಿ ಕಿತ್ತುಕೊಂಡು ಲಿಂಗಾಯತರಿಗೆ ನೀಡಬೇಕು ಎಂಬುವುದಕ್ಕೆ ತಮ್ಮ ತೀವ್ರ ವಿರೋಧವಿದೆ. ಶ್ರೀಗಳು ಎಲ್ಲ ಜಾತಿ, ಸಮುದಾಯವನ್ನು ಸಮಾನವಾಗಿ ಕಾಣಬೇಕು ಎಂದ ಎಸ್.ಎಂ.ಪಾಟೀಲ ಗಣಿಹಾರ
ವಿಜಯಪುರ(ಸೆ.24): ಕೂಡಲಸಂಗಮ ಬಸವಜಯ ಮೃತ್ಯುಂಜಯ ಶ್ರೀಗಳು ವಿಜಯಪುರದಲ್ಲಿ ಇತ್ತೀಚಿಗೆ ಪತ್ರಿಕಾಗೋಷ್ಠಿಯಲ್ಲಿ ಪಂಚಮಸಾಲಿ ಲಿಂಗಾಯತರಿಗೆ ಮೀಸಲಾತಿ ನೀಡಲೇಬೇಕು. ಯಾವ ಜಾತಿಯ ಮೀಸಲಾತಿ ಕಸಿದುಕೊಳ್ಳುತ್ತಾರೆಯೋ ಅದು ನಮಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ. ಇಂಥ ಹೇಳಿಕೆ ಶ್ರೀಗಳ ಬಾಯಿಯಿಂದ ಬರಬಾರದು ಎಂದು ಎಸ್.ಎಂ.ಪಾಟೀಲ ಗಣಿಹಾರ ಅವರು ಅಸಮಾಧಾನ ಹೊರಹಾಕಿದರು.
ಶನಿವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ ಮೀಸಲಾತಿ ನೀಡಬೇಕು ಎಂಬ ಹೋರಾಟಕ್ಕೆ ತಮ್ಮ ವಿರೋಧವಿಲ್ಲ. ಆದರೆ, ಶ್ರೀಗಳು ಬೇರೆ ಜಾತಿ, ಸಮುದಾಯದವರ ಮೀಸಲಾತಿ ಕಿತ್ತುಕೊಂಡು ಲಿಂಗಾಯತರಿಗೆ ನೀಡಬೇಕು ಎಂಬುವುದಕ್ಕೆ ತಮ್ಮ ತೀವ್ರ ವಿರೋಧವಿದೆ. ಶ್ರೀಗಳು ಎಲ್ಲ ಜಾತಿ, ಸಮುದಾಯವನ್ನು ಸಮಾನವಾಗಿ ಕಾಣಬೇಕು ಎಂದರು.
ಪಂಚಮಸಾಲಿ ಮೀಸಲಾತಿ ಹೋರಾಟ ಮತ್ತೆ ಶುರು; ಚಡಚಣದಲ್ಲಿ ಬೃಹತ್ ಸಮಾವೇಶ!
ಮೀಸಲಾತಿ ಹೋರಾಟದ ಸಲುವಾಗಿ ಬಹಿರಂಗವಾಗಿ ಇಷ್ಟಲಿಂಗ ಪೂಜೆ ಮಾಡುವುದಾಗಿ ಶ್ರೀಗಳು ಹೇಳಿದ್ದಾರೆ. ಇದು ಸರಿಯಲ್ಲ. ಇಷ್ಟಲಿಂಗ ಪೂಜೆಯನ್ನು ಏಕಾಂತ, ಪ್ರಶಾಂತ ವಾತಾವರಣದಲ್ಲಿ ಮಾಡಬೇಕು. ಅದನ್ನು ಬಹಿರಂಗವಾಗಿ ಮಾಡುವುದು ಸರಿಯಲ್ಲ ಎಂದೂ ಗಣಿಹಾರ ಹೇಳಿದರು.
ಚೈತ್ರಾರನ್ನು ಮಂಪರು ಪರೀಕ್ಷೆಗೆ ಒಳಪಡಿಸಿ:
ಚೈತ್ರಾ ವಂಚನೆ ಪ್ರಕರಣದ ಹಿಂದೆ ಯಾರ್‍ಯಾರು ಇದ್ದಾರೆ ಎಂಬುದು ಬಯಲಿಗೆ ಬರಲು ಚೈತ್ರಾರನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು ಎಂದು ಕಾಂಗ್ರೆಸ್ ವಕ್ತಾರ ಎಸ್.ಎಂ.ಪಾಟೀಲ ಗಣಿಹಾರ ಇದೇ ಸಂದರ್ಭದಲ್ಲಿ ಸರ್ಕಾರವನ್ನು ಒತ್ತಾಯಿಸಿದರು.
ಯಡಿಯೂರಪ್ಪ, ಬೊಮ್ಮಾಯಿ ಅನ್ಯಾಯ ಮಾಡಿದ್ದರಿಂದಲೇ ಬಿಜೆಪಿಗೆ ಹಿನ್ನಡೆ: ಕೂಡಲ ಶ್ರೀ
ಚೈತ್ರಾ ವಂಚನೆ ಪ್ರಕರಣ ಬಯಲಿಗೆ ಬರುತ್ತಿದ್ದಂತೆಯೇ ಅವರ ಜೊತೆಗೆ ಒಡನಾಟ ಹೊಂದಿದ್ದ ಬಿಜೆಪಿ, ಆರ್‌ಎಸ್‌ಎಸ್ ಮುಖಂಡರು ಚೈತ್ರಾ ಯಾರು ಎಂಬುದು ತಮಗೆ ಗೊತ್ತೇ ಇಲ್ಲ ಎಂದು ಹೇಳುತ್ತಿದ್ದಾರೆ. ಆದ್ದರಿಂದ ಅವರಿಗೆ ಮಂಪರು ಪರೀಕ್ಷೆಗೆ ಒಳಪಡಿಸಬೇಕು ಎಂದು ಹೇಳಿದರು.
ಚೈತ್ರಾ ಬಿಜೆಪಿಯ ಸ್ಟಾರ್ ಪ್ರಚಾರಕಿ ಆಗಿದ್ದರು. ಅಲ್ಪಸಂಖ್ಯಾತರ ವಿರುದ್ಧ ಚೈತ್ರಾರನ್ನು ಛೂಬಿಟ್ಟಿದ್ದರು. ಆದರೆ, ಚೈತ್ರಾ ವಂಚನೆ ಹಗರಣ ಬೆಳಕಿಗೆ ಬರುತ್ತಿದ್ದಂತೆಯೇ ಚೈತ್ರಾ ಯಾರೆಂಬುವುದು ಗೊತ್ತಿಲ್ಲ ಎಂದು ಹೇಳುತ್ತಿದ್ದಾರೆ ಎಂದರು.
ಮಾಜಿ ಸಚಿವ ಸಿ.ಟಿ.ರವಿ, ವಾಗ್ಮಿ ಸೂಲಿಬೆಲಿ ಚಕ್ರವರ್ತಿ ಮುಂತಾದವರು ಚೈತ್ರಾಗೆ ನಮಗೆ ಯಾವುದೇ ಸಂಬಂಧವಿಲ್ಲ ಎಂದು ಹೇಳುತ್ತ ಜಾರಿಕೊಳ್ಳುತ್ತಿದ್ದಾರೆ. ಬಿಜೆಪಿ, ಆರ್‌ಎಸ್‌ಎಸ್ ನಾಯಕರು ಚೈತ್ರಾಗೆ ಬೆನ್ನೆಲುಬಾಗಿ ನಿಂತಿದ್ದರು. ಚೈತ್ರಾ ಹಿಂದೆ ಯಾರು ಇದ್ದಾರೆ ಎಂಬುವುದು ಜನತೆಗೆ ಗೊತ್ತಾಗಬೇಕಾದರೆ ಚೈತ್ರಾ ಜೊತೆಗೆ ಯಾರ ನಂಟು ಇತ್ತು ಎಂಬುದನ್ನು ಪತ್ತೆ ಹಚ್ಚಿ ಸಮಗ್ರ ತನಿಖೆ ನಡೆಸಬೇಕು. ಆಗ ವಂಚನೆ ಪ್ರಕರಣದಲ್ಲಿ ಯಾರು ಇದ್ದಾರೆ ಎಂಬುವುದು ಇಡೀ ಚಿತ್ರಣವೇ ಹೊರಬೀಳುತ್ತದೆ ಎಂದು ಹೇಳಿದರು. ನಾಗರಾಜ ಲಂಬು, ವಸಂತ ಹೊನಮೋಡೆ, ಫಯಾಜ್ ಕಲಾದಗಿ, ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.