ಸಿಂಧನೂರು: ಡೆಂಗ್ಯೂ ಜ್ವರಕ್ಕೆ 6 ವರ್ಷದ ಬಾಲಕಿ ಬಲಿ
* ರಾಯಚೂರು ಜಿಲ್ಲೆಯ ಸಿಂಧನೂರು ನಗರದಲ್ಲಿ ನಡೆದ ಘಟನೆ
* ಜಿಲ್ಲೆಯಲ್ಲಿ ದಿನೇ ದಿನೆ ಡೆಂಗ್ಯೂ ಪ್ರಕರಣ ಹೆಚ್ಚಳ
* ಕಳೆದ ವಾರವಷ್ಟೇ ಮಾನ್ವಿಯಲ್ಲಿ 5 ವರ್ಷದ ಬಾಲಕ ಡೆಂಗ್ಯೂ ಜ್ವರಕ್ಕೆ ಬಲಿ
ರಾಯಚೂರು(ಸೆ.19): ಡೆಂಗ್ಯೂ ಜ್ವರಕ್ಕೆ 6 ವರ್ಷದ ಬಾಲಕಿಯೊಬ್ಬಳು ಸಾವನ್ನಪ್ಪಿದ ಘಟನೆ ಜಿಲ್ಲೆಯ ಸಿಂಧನೂರು ನಗರದಲ್ಲಿ ಇಂದು(ಭಾನುವಾರ) ನಡೆದಿದೆ. ನಗರದ ಮಹಿಬೂಬಿಯಾ ಕಾಲೋನಿಯ ಸೋನು (6) ಡೆಂಗ್ಯೂ ಜ್ವರಕ್ಕೆ ಬಲಿಯಾದ ದುರ್ದೈವಿ ಮಗುವಾಗಿದೆ.
ಜಿಲ್ಲೆಯಲ್ಲಿ ದಿನೇ ದಿನೆ ಡೆಂಗ್ಯೂ ಪ್ರಕರಣ ಹೆಚ್ಚಳವಾಗುತ್ತಿವೆ. ಇದರಿಂದ ಜಿಲ್ಲೆಯ ಜನತೆ ಕಂಗಾಲಾಗಿ ಹೋಗಿದ್ದಾರೆ. ಅಂಗನವಾಡಿ ಕಾರ್ಯಕರ್ತೆ ಅನಿತಾ ಎನ್ನುವವರ ಮಗಳು ಸೋನು ಕಳೆದ ಒಂದು ವಾರದಿಂದ ಸಿಂಧನೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು. ಹೆಚ್ಚಿನ ಚಿಕಿತ್ಸೆಗೆ ಬಳ್ಳಾರಿ ವಿಮ್ಸ್ ಗೆ ದಾಖಲಿಸಲಾಗಿತ್ತು.
ಹಲವೆಡೆ ಶೂನ್ಯಕ್ಕಿಳಿದ ಕೊರೋನಾ: ಉಡುಪಿಯಲ್ಲಿ ಡೆಂಗ್ಯೂ ಅಬ್ಬರ
ಆದರೆ, ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಇಂದು ಸಾವನ್ನಪ್ಪಿದ್ದಾಳೆ. ಕಳೆದ ವಾರವಷ್ಟೇ ಮಾನ್ವಿಯಲ್ಲಿ 5 ವರ್ಷದ ಬಾಲಕ ಡೆಂಗ್ಯೂ ಜ್ವರಕ್ಕೆ ಬಲಿಯಾಗಿದ್ದನು. ಇಡೀ ಜಿಲ್ಲೆಯಲ್ಲಿ ವೈರಲ್ ಫೀವರ್ ಹೆಚ್ಚಾಗಿದ್ದು, ಡೆಂಗ್ಯೂ ಪ್ರಕರಣಗಳಿಂದ ಮಕ್ಕಳ ಪೋಷಕರು ಕಂಗಾಲಾಗಿದ್ದಾರೆ.