Asianet Suvarna News Asianet Suvarna News

ಬೆಂಗ್ಳೂರಲ್ಲಿ ಕಳೆದ 21 ದಿನದಲ್ಲಿ 6 ಶೂಟೌಟ್‌..!

ರೌಡಿಶೀಟರ್‌ಗಳಿಗೆ ನಗರದ ಪೊಲೀಸರಿಂದ ಗುಂಡೇಟಿನ ಪಾಠ| ಸಾರ್ವಜನಿಕರಿಗೆ ತೊಂದರೆ ಕೊಡುವವರಿಗೆ ಮುಲಾಜಿಲ್ಲದೇ ಗುಂಡು| ಹಣ್ಣು-ತರಕಾರಿ ಆನ್‌ಲೈನ್‌ಮಾರಾಟ ಸಂಸ್ಥೆಯಲ್ಲಿ ದರೋಡೆ ಮಾಡಿದ್ದ ಆರೋಪಿಗೆ ಬ್ಯಾಡರಹಳ್ಳಿ ಪೊಲೀಸರಿಂದ ಗುಂಡೇಟು| 
 

Six Times Shootout in Bengaluru Last 21 Days grg
Author
Bengaluru, First Published Jan 22, 2021, 3:29 PM IST

ಬೆಂಗಳೂರು(ಜ.22):  ರೌಡಿಶೀಟರ್‌ಗಳು ಹಾಗೂ ಪುಂಡರ ಹೆಡೆಮುರಿ ಕಟ್ಟುತ್ತಿರುವ ನಗರದ ಪೊಲೀಸರು, ಕಳೆದ 21 ದಿನದಲ್ಲಿ 6 ಶೂಟೌಟ್‌ನಡೆಸಿದ್ದಾರೆ. ಈ ಮೂಲಕ ಸಾರ್ವಜನಿಕರಿಗೆ ತೊಂದರೆ ಕೊಡುವವರಿಗೆ ಮುಲಾಜಿಲ್ಲದೇ ಗುಂಡೇಟಿನ ಪಾಠ ಕಲಿಸುತ್ತಿದ್ದಾರೆ. ಗುರುವಾರ ಸಹ ನಗರದಲ್ಲಿ ದುಷ್ಕರ್ಮಿಯೊಬ್ಬನ ಮೇಲೆ ಗುಂಡು ಹಾರಿಸಿರುವ ಪೊಲೀಸರು, ಈ ಮೂಲಕ ರೌಡಿಗಳಿಗೆ ಖಡಕ್‌ಸಂದೇಶ ರವಾನಿಸಿದ್ದಾರೆ.

ಇತ್ತೀಚಿಗೆ ಹಣ್ಣು-ತರಕಾರಿ ಆನ್‌ಲೈನ್‌ಮಾರಾಟ ಸಂಸ್ಥೆಯ ಗೋದಾಮಿಗೆ ನುಗ್ಗಿ ದರೋಡೆ ನಡೆಸಿದ್ದ ದುಷ್ಕರ್ಮಿಯೊಬ್ಬನಿಗೆ ಬ್ಯಾಡರಹಳ್ಳಿ ಠಾಣೆ ಪೊಲೀಸರು ಗುಂಡು ಹಾರಿಸಿ ಗುರುವಾರ ಬಂಧಿಸಿದ್ದಾರೆ. ಉಲ್ಲಾಳ ಉಪ ನಗರದ ರಾಜೇಶ್‌ಗೆ ಗುಂಡೇಟು ಬಿದ್ದಿದ್ದು, ಈ ದಾಳಿ ವೇಳೆ ಹೆಡ್‌ಕಾನ್‌ಸ್ಟೇಬಲ್‌ಶ್ರೀನಿವಾಸ್‌ಅವರಿಗೆ ಸಹ ಪೆಟ್ಟಾಗಿದೆ. ಕೆಲ ದಿನಗಳ ಹಿಂದೆ ಉಲ್ಲಾಳ ಮುಖ್ಯರಸ್ತೆಯ ಬಿಳೆಕಲ್ಲು ನಿಂಜಾ ಕಾರ್ಟ್‌ಆನ್‌ಲೈನ್‌ಹಣ್ಣು ಮತ್ತು ತರಕಾರಿ ಮಾರಾಟ ಸಂಸ್ಥೆ ಗೋದಾಮಿಗೆ ನುಗ್ಗಿ ರಾಜೇಶ್‌ತಂಡ ದರೋಡೆ ನಡೆಸಿತ್ತು. ಈ ಸಂಬಂಧ ಬ್ರಹ್ಮದೇವರಗುಡ್ಡದಲ್ಲಿ ಆರೋಪಿಯನ್ನು ಬಂಧಿಸಲು ಇನ್ಸ್‌ಪೆಕ್ಟರ್‌ರಾಜೀವ್‌ತೆರಳಿದ್ದಾಗ ಈ ಗುಂಡಿನ ದಾಳಿ ನಡೆದಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್‌ಪಾಟೀಲ್‌ತಿಳಿಸಿದ್ದಾರೆ.

ಪುಂಡ ರಾಜೇಶ್‌ಗೆ ಬಿತ್ತು ಗುಂಡು:

ಉಲ್ಲಾಳ ಉಪನಗರದ ರಾಜೇಶ್‌ವೃತ್ತಿಪರ ಕ್ರಿಮಿನಲ್‌ಆಗಿದ್ದು, ಆತನ ಮೇಲೆ ಅನ್ನಪೂರ್ಣೇಶ್ವರಿ ನಗರ, ಕೆಂಗೇರಿ ಹಾಗೂ ಬ್ಯಾಡರಹಳ್ಳಿ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಕೆಲ ತಿಂಗಳಿಂದ ಕೆಂಗೇರಿ ವ್ಯಾಪ್ತಿಯಲ್ಲಿ ರಾಜೇಶ್‌ಹಾವಳಿ ಹೆಚ್ಚಾಗಿತ್ತು. ಲಾಂಗು ಹಿಡಿದು ಅಂಗಡಿಗಳಿಗೆ ನುಗ್ಗುತ್ತಿದ್ದ ಆತ, ವ್ಯಾಪಾರಿಗಳಿಗೆ ಜೀವ ಬೆದರಿಕೆ ಹಾಕಿ ಸುಲಿಗೆ ನಡೆಸುತ್ತಿದ್ದ. ಇದೇ ರೀತಿ 2020ರ ಜೂನ್‌ತಿಂಗಳಲ್ಲಿ ಆನ್‌ಲೈನ್‌ಮಾರಾಟ ಸಂಸ್ಥೆಯ ನಿಂಜಾ ಕಾರ್ಟ್‌ನ ಕೆಂಗೇರಿ ಗೋದಾಮಿನಲ್ಲಿ ಕೂಡಾ ರಾಜೇಶ್‌ದರೋಡೆ ನಡೆಸಿದ್ದ.

ಬೆಂಗ್ಳೂರಲ್ಲಿ ಒಂದೇ ದಿನ ಡಬಲ್‌ ಶೂಟೌಟ್‌..!

ಈ ಕೃತ್ಯದಲ್ಲಿ ಆತನ ಪೊಲೀಸರಿಗೆ ಸಿಗದೆ ತಪ್ಪಿಸಿಕೊಂಡಿದ್ದ. ಇದೇ ತಿಂಗಳ 16 ರಂದು ಭಾನುವಾರ ರಾತ್ರಿ ಉಲ್ಲಾಳ ಮುಖ್ಯರಸ್ತೆಯಲ್ಲಿರುವ ನಿಂಜಾ ಕಾರ್ಟ್‌ನ ಗೋದಾಮಿಗೆ ಮತ್ತೆ ರಾಜೇಶ್‌ತಂಡ ದಾಳಿ ನಡೆಸಿದೆ. ಈ ವೇಳೆ ಗೋದಾಮಿನಲ್ಲಿದ್ದ ಸಿಬ್ಬಂದಿಗೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಆರೋಪಿಗಳು .9 ಲಕ್ಷ ನಗದು ದೋಚಿದ್ದರು.

ಈ ಕೃತ್ಯದ ತನಿಖೆ ಆರಂಭಿಸಿದ ಇನ್ಸ್‌ಪೆಕ್ಟರ್‌ರಾಜೀವ್‌ತಂಡ, ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲಿಸಿದಾಗ ದರೋಡೆಯಲ್ಲಿ ರಾಜೇಶ್‌ಪಾತ್ರದ ಪತ್ತೆ ಹಚ್ಚಿದೆ. ಈ ಸುಳಿವಿನ ಮೇರೆಗೆ ಆರೋಪಿಗಳಿಗೆ ಪೊಲೀಸರು ಹುಡುಕಾಟ ನಡೆಸಿದ್ದರು. ಆಗ ಬ್ರಹ್ಮದೇವರಗುಡ್ಡದಲ್ಲಿ ರಾಜೇಶ್‌ಅವಿತುಕೊಂಡಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಇನ್ಸ್‌ಪೆಕ್ಟರ್‌, ಆತನನ್ನು ಬಂಧಿಸಲು ತಕ್ಷಣವೇ ತಮ್ಮ ಸಿಬ್ಬಂದಿ ಜತೆ ತೆರಳಿದ್ದಾರೆ. ತನ್ನ ಬಂಧಿಸಲು ಬಂದ ಪೊಲೀಸರ ವಿರುದ್ಧವೇ ಆರೋಪಿ ತಿರುಗಿ ಬಿದ್ದಿದ್ದಾನೆ. ಈ ಹಂತದಲ್ಲಿ ಹೆಡ್‌ಕಾನ್‌ಸ್ಟೇಬಲ್‌ಗೆ ಪೆಟ್ಟಾಗಿದೆ. ಕೂಡಲೇ ಎಚ್ಚೆತ್ತ ಇನ್ಸ್‌ಪೆಕ್ಟರ್‌ರಾಜೀವ್‌, ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಆರೋಪಿಗೆ ಶರಣಾಗುವಂತೆ ಸೂಚಿಸಿದ್ದಾರೆ. ಈ ಮಾತಿಗೆ ಬಗ್ಗದೆ ಹೋದಾಗ ಆತನ ಬಲಗಾಲಿಗೆ ಗುಂಡು ಹೊಡೆದು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಈ ವರ್ಷದಲ್ಲಿ ನಡೆದಿರುವ ಶೂಟೌಟ್‌ಗಳು

ಜ.7-ಶ್ರೀರಾಂಪುರದ ಕಾರ್ತಿಕ್‌ಅಲಿಯಾಸ್‌ಗುಂಡನಿಗೆ ನಂದಿನಿ ಲೇಔಟ್‌ಪೊಲೀಸರಿಂದ ಗುಂಡೇಟು
ಜ.9​​-ಕಾಚಮಾರನಹಳ್ಳಿಯಲ್ಲಿ ಮನೆಗಳ್ಳ ನವೀನ್‌ಮೇಲೆ ವರ್ತೂರು ಠಾಣೆ ಪೊಲೀಸರ ಗುಂಡಿನ ದಾಳಿ
ಜ.18- ಪೊಲೀಸರ ಮೇಲೆ ಗುಂಡು ಹಾರಿಸಿದ್ದ ಮೆಹರಾಜ್‌ಮೇಲೆ ಕೆ.ಜಿ.ಹಳ್ಳಿ ಪೊಲೀಸರ ಗುಂಡಿನ ದಾಳಿ
ಜ.18- ರೌಡಿಶೀಟರ್‌ವಿಜಯ್‌ಅಲಿಯಾಸ್‌ಗೊಣ್ಣೆ ವಿಜಿಗೆ ಗುಂಡೇಟು
ಜ.19- ಅಂದ್ರಹಳ್ಳಿಯ ಪಾತಕಿ ಪ್ರವೀಣ್‌ಮೇಲೆ ಪೀಣ್ಯ ಪೊಲೀಸರ ಗುಂಡಿನ ದಾಳಿ
ಜ.21- ದುಷ್ಕರ್ಮಿ ರಾಜೇಶ್‌ಗೆ ಬ್ಯಾಡರಹಳ್ಳಿ ಠಾಣೆ ಪೊಲೀಸರ ಗುಂಡು
 

Follow Us:
Download App:
  • android
  • ios