ಬೆಂಗಳೂರು(ನ.19): ನಗರದಲ್ಲಿ ದಾದಾಗಿರಿಯಿಂದ ಜನರಲ್ಲಿ ಭೀತಿ ಸೃಷ್ಟಿಸಿದ್ದ ಕುಖ್ಯಾತ ಇಬ್ಬರು ರೌಡಿಗಳಿಗೆ ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಸಿಸಿಬಿ ಹಾಗೂ ವಿಜಯನಗರ ಉಪ ವಿಭಾಗದ ಪೊಲೀಸರು ಪಿಸ್ತೂಲ್‌ ಮೂಲಕ ‘ಪಾಠ’ ಕಲಿಸಿದ್ದಾರೆ.

ಜಯನಗರದ 7ನೇ ಬ್ಲಾಕ್‌ನ ವಿಶ್ವ ಅಲಿಯಾಸ್‌ ಸೈಕೋ ಹಾಗೂ ಕನಕಪುರ ರಸ್ತೆಯ ತಲಘಟ್ಟಪುರದ ಮಂಜುನಾಥ ಅಲಿಯಾಸ್‌ ಬೊಂಡಾ ಮಂಜನಿಗೆ ಗುಂಡೇಟು ಬಿದ್ದಿದ್ದು, ಇಬ್ಬರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಅಪರಾಧ ಪ್ರಕರಣದಲ್ಲಿ ತಮ್ಮ ಬಂಧಿಸಲು ತೆರಳಿದ್ದಾಗ ಸದರಿ ರೌಡಿಗಳು ಹಲ್ಲೆ ನಡೆಸಲು ಮುಂದಾದಾಗ ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

ಹಣಕಾಸು ವಿವಾದಕ್ಕೆ ಕೊಲೆ:

ಹಣಕಾಸು ವಿವಾದ ಹಿನ್ನೆಲೆಯಲ್ಲಿ ಅ.8ರಂದು ಮಂಜುನಾಥ್‌ ಎಂಬಾತನನ್ನು ಬನ್ನೇರುಘಟ್ಟ ರಸ್ತೆಯ ಗೊಟ್ಟಿಗೆರೆ ಬಳಿ ಹತ್ಯೆಗೈದ ವಿಶ್ವ ಅಲಿಯಾಸ್‌ ಸೈಕೋ ಹಾಗೂ ಆತನ ಸಹಚರರು, ಬಳಿಕ ಮೃತದೇಹವನ್ನು ತಂದು ಲಗ್ಗೆರೆ ಹತ್ತಿರದ ಬಿಸಾಡಿ ಹೋಗಿದ್ದರು. ಈ ಕೊಲೆ ಕೃತ್ಯದ ತನಿಖೆ ಕೈಗೆತ್ತಿಕೊಂಡ ವಿಜಯನಗರ ಉಪ ವಿಭಾಗದ ಎಸಿಪಿ ನಂಜುಂಡೇಗೌಡ ಹಾಗೂ ಕಾಮಾಕ್ಷಿಪಾಳ್ಯ ಠಾಣೆ ಇನ್ಸ್‌ಪೆಕ್ಟರ್‌ ಪ್ರಶಾಂತ್‌ ಅವರು ಮೊಬೈಲ್‌ ಕರೆಗಳ ಮಾಹಿತಿ ಆಧರಿಸಿ ವಿಶ್ವನ ಪತ್ತೆಗೆ ಬಲೆ ಬೀಸಿದ್ದರು.

ವಿಜಯಪುರ: ಬೈರಗೊಂಡ ಶೂಟೌಟ್‌, ಮತ್ತೆ ಐವರ ಬಂಧನ

ಬುಧವಾರ ಬ್ಯಾಡರಹಳ್ಳಿ ಸಮೀಪದ ಬ್ರಹ್ಮದೇವರ ಗುಡ್ಡದಲ್ಲಿ ಸೈಕೋ ಅಡಗಿರುವ ಮಾಹಿತಿ ಪಡೆದ ಎಸಿಪಿ ತಂಡ, ಆರೋಪಿ ಬಂಧನಕ್ಕೆ ತೆರಳಿದೆ. ಆಗ ಪೊಲೀಸರ ಮೇಲೆ ಡ್ರ್ಯಾಗರ್‌ನಿಂದ ಹಲ್ಲೆ ನಡೆಸಿ ಪರಾರಿ ಆಗಲು ಸೈಕೋ ಮುಂದಾಗಿದ್ದಾನೆ. ಈ ಹಂತದಲ್ಲಿ ಹೆಡ್‌ ಕಾನ್‌ಸ್ಟೇಬಲ್‌ ಮಂಜುನಾಥ್‌ಗೆ ಪೆಟ್ಟಾಗಿದೆ. ಕೂಡಲೇ ಜಾಗೃತರಾದ ಎಸಿಪಿ ನಂಜುಂಡೇಗೌಡ, ಒಂದು ಬಾರಿ ಗಾಳಿಯಲ್ಲಿ ಗುಂಡು ಹಾರಿಸಿ ಆರೋಪಿಗೆ ಶರಣಾಗುವಂತೆ ಸೂಚಿಸಿದ್ದಾರೆ. ಈ ಮಾತಿಗೆ ಬಗ್ಗದೆ ಮತ್ತೆ ದಾಳಿಗಿಳಿದಾಗ ಆರೋಪಿಗೆ ಗುಂಡು ಹೊಡೆದಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

11 ಕೇಸ್‌:

ಸೈಕೋ ಅಪರಾಧ ಹಿನ್ನೆಲೆಯುವಳ್ಳನಾಗಿದ್ದು, ಆತನ ಮೇಲೆ 11 ಪ್ರಕರಣಗಳು ದಾಖಲಾಗಿವೆ. ಜಯನಗರ ಠಾಣೆಯಲ್ಲಿ ಸೈಕೋ ವಿರುದ್ಧ ರೌಡಿಪಟ್ಟಿತೆರೆಯಲಾಗಿತ್ತು. ಹಣಕಾಸು ವಿಚಾರವಾಗಿ ಮಂಜುನಾಥ್‌ ಮತ್ತು ಸೈಕೋ ಸ್ನೇಹಿತ ಲಕ್ಷ್ಮಣ ಅಲಿಯಾಸ್‌ ಸುಳಿ ಮಧ್ಯೆ ಮನಸ್ತಾಪವಾಗಿತ್ತು. ಆಗ ಗೆಳೆಯನ ಪರವಾಗಿ ಸೈಕೋ, ಮಂಜುನಾಥ್‌ನನ್ನು ಅಪಹರಿಸಿ ಹತ್ಯೆಗೈದಿದ್ದ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಬೊಂಡಾ ಮಂಜನಿಗೆ ಬುಲೆಟ್‌:

ಕೊಲೆ, ಅಪಹರಣ ಹೀಗೆ ಅಪರಾಧ ಕೃತ್ಯಗಳ ಮೂಲಕ ಹಾವಳಿಯಿಡುತ್ತಿದ್ದ ಕುಖ್ಯಾತ ರೌಡಿ ಮಂಜುನಾಥ್‌ ಅಲಿಯಾಸ್‌ ಬೊಂಡಾ ಮಂಜನಿಗೆ ಸಿಸಿಬಿ ಪೊಲೀಸರು ಗುಂಡು ಹೊಡೆದಿದ್ದಾರೆ. ಇತ್ತೀಚಿಗೆ ಅಪಹರಣ ಪ್ರಕರಣದಲ್ಲಿ ಬೊಂಡಾನ ಪತ್ತೆಗೆ ಸಿಸಿಬಿ ಇನ್ಸ್‌ಪೆಕ್ಟರ್‌ ಪುನೀತ್‌ ನೇತೃತ್ವದ ತಂಡ ಹುಡುಕಾಟ ನಡೆಸಿತ್ತು. ಕೋಣನಕುಂಟೆಯ ನಾರಾಯಣನಗರದ ಡಬಲ್‌ ರೋಡ್‌ನಲ್ಲಿ ಆತನ ಇರುವಿಕೆಗೆ ಬಗ್ಗೆ ಮಂಗಳವಾರ ಮಧ್ಯರಾತ್ರಿ ಮಾಹಿತಿ ಸಿಕ್ಕಿದೆ. ತಕ್ಷಣವೇ ಇನ್ಸ್‌ಪೆಕ್ಟರ್‌ ಪುನೀತ್‌, ತಮ್ಮ ತಂಡದೊಂದಿಗೆ ಆರೋಪಿ ಬಂಧನಕ್ಕೆ ತೆರಳಿದ್ದಾರೆ. ಆದರೆ ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಬೊಂಡಾ ಯತ್ನಿಸಿದ್ದಾನೆ. ಆಗ ಹೆಡ್‌ ಕಾನ್‌ಸ್ಟೇಬಲ್‌ ನಾಗರಾಜ್‌ ಅವರಿಗೆ ಪೆಟ್ಟಾಗಿದೆ. ಕೂಡಲೇ ಇನ್ಸ್‌ಪೆಕ್ಟರ್‌ ಪುನೀತ್‌, ಬೊಂಡಾ ಮೇಲೆ ಗುಂಡು ಹಾರಿಸಿದ್ದಾರೆ. ಆಗ ಆತನ ಎಡಗಾಲಿಗೆ ಗುಂಡು ಹೊಕ್ಕು ಕುಸಿದು ಬಿದ್ದಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಜೈಲಲ್ಲೇ ಕುಳಿತು ಹಫ್ತಾ ವಸೂಲಿ:

ಬೊಂಡಾ ಮಂಜನ ವಿರುದ್ಧ ಕೊಲೆ, ಅಪಹರಣ, ಸುಲಿಗೆ, ದರೋಡೆ ಹಾಗೂ ಕೊಲೆ ಯತ್ನ ಸೇರಿದಂತೆ 23 ಪ್ರಕರಣಗಳು ದಾಖಲಾಗಿವೆ. ಬೊಂಡಾ ವಿರುದ್ಧ ತಲಘಟ್ಟಪುರ, ಹುಳಿಮಾವು, ಬನ್ನೇರುಘಟ್ಟ ಹಾಗೂ ಕಗ್ಗಲಿಪುರ ಠಾಣೆಗಳಲ್ಲಿ ರೌಡಿಪಟ್ಟಿ ತೆರೆಯಲಾಗಿತ್ತು. ಲಾಕ್‌ಡೌನ್‌ ವೇಳೆ ಜೈಲಿನಲ್ಲಿ ಕುಳಿತುಕೊಂಡೇ ಬೊಂಡಾ, ರಿಯಲ್‌ ಎಸ್ಟೇಟ್‌ ಏಜೆಂಟ್‌ ರವಿ ಎಂಬಾತನನ್ನು ಸಹಚರರ ಮೂಲಕ ಅಪಹರಿಸಿ ಹಫ್ತಾ ನೀಡುವಂತೆ ಬೆದರಿಕೆ ಹಾಕಿದ್ದ. ಈ ಬಗ್ಗೆ ಬನ್ನೇರುಘಟ್ಟ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.