Hassan: ಸಿಕ್ಸ್ ಪ್ಯಾಕ್ ಗಾಂಧೀಜಿ ಉದ್ಘಾಟನೆಗೆ ಸಿದ್ಧ: ವಿಕೃತ ಪ್ರತಿಮೆ ನಿರ್ಮಾಣಕ್ಕೆ ಆಕ್ರೋಶ
ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಪ್ರತಿಮೆಯನ್ನು ನಿರ್ಮಾಣ ಮಾಡುವಾಗ ಸ್ವಲ್ಪ ಎಡವಟ್ಟು ಆದರೂ ಅದನ್ನು ತಿರಸ್ಕಾರ ಮಾಡಿ, ಬೇರೊಂದು ಪ್ರತಿಮೆ ನಿರ್ಮಾಣ ಮಾಡಲಾಗುತ್ತದೆ. ಆದರೆ, ಹಾಸನದ ಎಂ.ಜಿ. ರಸ್ತೆಯಲ್ಲಿ ಸಿಕ್ಸ್ ಪ್ಯಾಕ್ ಹೊಂದಿದ ಮಹಾತ್ಮ ಗಾಂಧೀಜಿ ಪ್ರತಿಮೆಯನ್ನು ಅಳವಡಿಸಿ ವಿಕೃತಿ ಮೆರೆಯಲಾಗಿದೆ.
ಹಾಸನ (ಜ.25): ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಪ್ರತಿಮೆಯನ್ನು ನಿರ್ಮಾಣ ಮಾಡುವಾಗ ಸ್ವಲ್ಪ ಎಡವಟ್ಟು ಆದರೂ ಅದನ್ನು ತಿರಸ್ಕಾರ ಮಾಡಿ, ಬೇರೊಂದು ಪ್ರತಿಮೆ ನಿರ್ಮಾಣ ಮಾಡಲಾಗುತ್ತದೆ. ಆದರೆ, ಹಾಸನದ ಎಂ.ಜಿ. ರಸ್ತೆಯಲ್ಲಿ ಸಿಕ್ಸ್ ಪ್ಯಾಕ್ ಹೊಂದಿದ ಮಹಾತ್ಮ ಗಾಂಧೀಜಿ ಪ್ರತಿಮೆಯನ್ನು ಅಳವಡಿಸಿ ವಿಕೃತಿ ಮೆರೆಯಲಾಗಿದೆ ಎಂದು ಸ್ಥಳೀಯ ನಾಗರೀಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರನ್ನು ಎಲ್ಲರೂ ಬಳಸುವ ಹಣದಲ್ಲಿ ಮುದ್ರಿಸಿ ಗೌರವಿಸಲಾಗುತ್ತದೆ. ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಅವರ ಫೋಟೋವನ್ನು ಅಳವಡಿಕೆ ಮಾಡಲಾಗುತ್ತದೆ. ವಿಶ್ವಕ್ಕೆ ಶಾಂತಿ ಸಂದೇಶ ಸಾರಿದ ಗಾಂಧೀಜಿಗೆ ಯಾವುದೇ ಕಾರಣಕ್ಕೂ ಅವಮಾನ ಆಗದಂತೆ ದೇಶದಲ್ಲಿ ನಿಗಾವಹಿಸಲಾಗುತ್ತದೆ. ಆದರೆ, ಹಾಸನ ನಗರದ ಎಂ.ಜಿ. ರಸ್ತೆಯ ಬಳಿಯಲ್ಲಿನ ಗಾಂಧಿ ಭವನದ ಬಳಿ ನಿರ್ಮಿಸಲಾದ ಸುಮಾರು ೨೦ ಅಡಿ ಎತ್ತರದ ಗಾಂಧಿ ಪ್ರತಿಮೆಯನ್ನು ವಿಕೃತವಾಗಿ ನಿರ್ಮಿಸಲಾಗಿದೆ. ಗಾಂಧಿ ಪ್ರತಿಮೆಯಲ್ಲಿ ಸಿಕ್ಸ್ ಪ್ಯಾಕ್ ಅಳವಡಿಕೆ ಮಾಡಿದ್ದು, ಮಾಡ್ರನ್ ಗಾಂಧಿ ಎಂದು ಹೇಳಾಗುತ್ತಿದೆ.
ಉದ್ಘಾಟನೆಗೆ ಸಿದ್ಧಗೊಂಡ ಸಿಕ್ಸ್ ಪ್ಯಾಕ್ ಗಾಂಧೀಜಿ: ಹಾಸನದ ಗಾಂಧಿ ಭವನದಲ್ಲಿ ಉದ್ಘಾಟನೆ ಗೆ ಸಿದ್ದಗೊಂಡಿದ್ದ ಸಿಕ್ಸ್ ಪ್ಯಾಕ್ ಗಾಂಧಿ ಪ್ರತಿಮೆ ಎಂದು ಜನರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಸನದ ಎಂಜಿ ರಸ್ತೆಯಲ್ಲಿ ೩ ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿರೋ ಗಾಂಧಿ ಭವನದ ಮುಂದೆ ಪ್ರತಿಮೆ ನಿರ್ಮಾಣ ಮಾಡಲಾಗಿದೆ. ಗಾಂಧಿ ಭವನದ ಆವರಣದಲ್ಲಿ ನಿರ್ಮಿಸಲಾಗಿರು ದಂಡಿ ಮಾರ್ಚ್ ಕಲಾಕೃತಿ ಹಾಗು ಮಹಾತ್ಮ ಗಾಂಧಿ ಪ್ರತಿಮೆಗಳು ವಿಕೃತವಾಗಿವೆ. ವಿಕೃತ ಕಲಾಕೃತಿ ನಿರ್ಮಾಣಕ್ಕೆ ಕಲಾವಿದನ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.
ದೇಹ- ತಲೆ ಭಾಗಕ್ಕೆ ತಾಳೆಯೇ ಇಲ್ಲ:
ಇನ್ನು ಗಾಂಧೀಜಿ ಪ್ರತಿಮೆಯಲ್ಲಿ ದೇಹದ ತಲೆ ಭಾಗ ಹಾಗೂ ದೇಹದ ಇತರೆ ಭಾಗಗಳಿಗೆ ತಾಳೆಯೇ ಇಲ್ಲದಂತೆ ಮೂರ್ತಿಯನ್ನು ನಿರ್ಮಾಣ ಮಾಡಲಾಗಿದೆ. ಬೇಕಾಬಿಟ್ಟಿಯಾಗಿ ಕಲಾಕೃತಿಗಳನ್ನ ಅನನುಭವಿ ಕಲಾವಿದರು ನಿರ್ಮಿಸಿದ್ದಾರೆ. ಕೂಡಲೆ ಮಹಾತ್ಮ ಗಾಂಧಿ ಮೂರ್ತಿ ಸರಿಮಾಡಲು ಜನರ ಆಗ್ರಹ ಮಾಡಿದ್ದಾರೆ. ನಾಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉದ್ಘಾಟನೆ ಮಾಡಬೇಕಿರುವ ಗಾಂಧಿ ಭವನದ ಮುಂದೆ ಇಂತಹ ವಿಕೃತ ಪ್ರತಿಮೆ ನಿರ್ಮಾಣ ಮಾಡಲಾಗಿದ್ದು, ಕೂಡಲೇ ಇಂತಹ ಪ್ರತಿಮೆ ತೆರವುಗೊಳಿಸಿ ಅಥವಾ ಪ್ರತಿಮೆ ಸರಿಪಡಿಸಿ ಎಂದು ಆಗ್ರಹಿಸಿದ್ದಾರೆ.
ಹಾಸನ ಕ್ಷೇತ್ರದಿಂದ ಭವಾನಿ ರೇವಣ್ಣ ಸ್ಪರ್ಧೆ: ಪ್ರೀತಂ ಗೌಡಗೆ ಟಕ್ಕರ್?
ನಾಳೆ ಸಿಎಂ ಉದ್ಘಾಟನೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಾಳೆ ಹಾಸನದಲ್ಲಿ ಮೂರು ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಗಾಂಧಿ ಭವನವನ್ನು ಉದ್ಘಾಟನೆ ಮಾಡಲಿದ್ದಾರೆ. ಆದರೆ, ಈ ಕಟ್ಟಡ ಅಭಿವೃದ್ಧಿ ಕಾಮಗಾರಿಯನ್ನು ಪಡೆದುಕೊಂಡಿದ್ದ ಗುತ್ತಿಗೆದಾರ ಹಣ ಉಳಿಸಲು ಮುಂದಾಗಿದ್ದು, ಹೀಗಾಗಿ ಯಾವುದೇ ಅನುಭವ ಇಲ್ಲದ ಕಟ್ಟಡ ನಿರ್ಮಾಣ ಮಾಡುವವರಿಗೇ ಗಾಂಧೀಜಿ ಪ್ರತಿಮೆ ನಿರ್ಮಾಣ ಮಾಡಲು ಸೂಚನೆ ನೀಡಿದ್ದಾರೆ. ಇನ್ನು ಪ್ರತಿಮೆ ನಿರ್ಮಾಣ ಮಾಡುವ ಕಲಾವಿದರಿಗೆ ಗಾಂಧೀಜಿ ಮೂರ್ತಿ ನಿರ್ಮಾಣಕ್ಕೆ ಕೊಟ್ಟರೆ ಹೆಚ್ಚಿನ ಹಣ ಖರ್ಚಾಗುತ್ತದೆ ಎಂದು ಊಹಿಸಿ ಹಣ ಉಳಿಸಲು ಹೋಗಿ ಹೀಗೆ ಎಡವಟ್ಟು ಮಾಡಿಕೊಮಡಿದ್ದಾರೆ. ಈಗ ವಿಕೃತವಾಗಿರುವ ಗಾಂಧಿ ಪ್ರತಿಮೆ ನಿರ್ಮಾಣದ ವಿರುದ್ಧ ರಾಜ್ಯಾದ್ಯಂತ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೊತೆಗೆ, ಕಾಮಗಾರಿ ಗುತ್ತಿಗೆ ಪಡೆದ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸುವಂತೆ ಒತ್ತಾಯಿಸಿದ್ದಾರೆ.