ಉತ್ತರಕನ್ನಡ ಜಿಲ್ಲೆಯ ಶಿರಸಿಯಲ್ಲಿ, ಪರೀಕ್ಷೆ ಸಮಯದಲ್ಲಿ ಟಿವಿ ನೋಡಬೇಡ ಎಂದು ಪೋಷಕರು ಬುದ್ಧಿವಾದ ಹೇಳಿದ್ದಕ್ಕೆ 9ನೇ ತರಗತಿ ವಿದ್ಯಾರ್ಥಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣಿಗೆ ಶರಣಾದ ಬಾಲಕ, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.

ಉತ್ತರಕನ್ನಡ (ಮಾ.13): ಪರೀಕ್ಷೆ ಸಮಯದಲ್ಲಿ ಟಿವಿ ನೋಡಬೇಡ ಎಂದು ಪೋಷಕರು ಬುದ್ಧಿವಾದ ಹೇಳಿದ್ದಕ್ಕೆ ಮನನೊಂದು ವಿದ್ಯಾರ್ಥಿ ನೇಣಿಗೆ ಶರಣಾದ ದಾರುಣ ಘಟನೆ ಉತ್ತರಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಗಣೇಶನಗರದಲ್ಲಿ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮನೆಯಲ್ಲಿ ಟಿವಿ ನೋಡಬೇಡ ಎಂದು ಪೋಷಕರು ಹೇಳಿದ್ದನ್ನೇ ಗಂಭೀರವಾಗಿ ಪರಿಗಣಿಸಿದ 9ನೇ ತರಗತಿಯ ವಿದ್ಯಾರ್ಥಿ ನೇಣಿಗೆ ಶರಣಾಗಿದ್ದಾನೆ. ಶಿರಸಿಯ ಪ್ರತಿಷ್ಠಿತ ಮಾರಿಕಾಂಬ ಪ್ರೌಢಶಾಲೆಯಲ್ಲಿ ಓದುತ್ತಿದ್ದ 15 ವರ್ಷದ ಶುಭಂ ನಾಗೇಶ ನಾಯ್ಕ್ ಮೃತಪಟ್ಟ ದುರ್ದೈವಿ.

ಪರೀಕ್ಷೆಯ ಒತ್ತಡ, ಪೋಷಕರ ನಿರ್ಬಂಧ

ಪ್ರಸ್ತುತ ಪರೀಕ್ಷಾ ಸಮಯವಾಗಿರುವುದರಿಂದ, ಓದಿನತ್ತ ಗಮನಹರಿಸಲಿ ಎಂಬ ಸದುದ್ದೇಶದಿಂದ ಪೋಷಕರು ಶುಭಂಗೆ ಟಿವಿ ನೋಡದಂತೆ ನಿರ್ಬಂಧ ಹೇರಿದ್ದರು. ಇದೇ ವಿಷಯವಾಗಿ ಮನನೊಂದಿದ್ದ ವಿದ್ಯಾರ್ಥಿ, ತಂದೆ-ತಾಯಿ ಮನೆಯಲ್ಲಿ ಇಲ್ಲದ ಸಮಯ ನೋಡಿ ನೇಣಿಗೆ ಶರಣು. ಜೀವನದ ದೊಡ್ಡ ಪರೀಕ್ಷೆಯನ್ನು ಎದುರಿಸಬೇಕಿದ್ದ ಬಾಲಕ, ಸಣ್ಣ ವಿಷಯಕ್ಕೆ ಈ ತೀವ್ರ ನಿರ್ಧಾರ ಕೈಗೊಂಡಿರುವುದು ಪೋಷಕರನ್ನೇ ಬೆಚ್ಚಿಬಿಳಿಸಿದೆ.

ಚಿಕಿತ್ಸೆ ಫಲಕಾರಿಯಾಗದೆ ದುರ್ಮರಣ

ಬಾಲಕ ನೇಣಿಗೆ ಶರಣಾದ ಬಳಿಕ ಪೋಷಕರು ಆತನನ್ನು ಶಿರಸಿಯ ಟಿಎಸ್ಎಸ್(TSS) ಆಸ್ಪತ್ರೆಗೆ ದಾಖಲಿಸಿದರು. ಆದರೆ, ಅಷ್ಟರಲ್ಲಾಗಲೇ ತೀವ್ರವಾಗಿ ಅಸ್ವಸ್ಥನಾಗಿದ್ದ ಶುಭಂ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ಆಸ್ಪತ್ರೆಯ ಆವರಣದಲ್ಲಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಈ ಸಂಬಂಧ ಶಿರಸಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.