ಹಾವೇರಿ ತಾಲೂಕಿನ ಕರ್ಜಗಿ ಗ್ರಾಮದಲ್ಲಿ 18 ವರ್ಷದ ಯುವತಿ ಬೇಬಿಜಾನ್ ತಂಬಾಕು ಸೇವನೆ ಬಿಡುವಂತೆ ಮನೆಯವರು ಬುದ್ಧಿ ಹೇಳಿದ್ದಕ್ಕೆ ನೇಣಿಗೆ ಶರಣಾಗಿದ್ದಾಳೆ. ತಂಬಾಕು ಸೇವನೆ ಚಟಕ್ಕೆ ಬಿದ್ದಿದ್ದ ಯುವತಿಗೆ ಪೋಷಕರು ಬುದ್ಧಿ ಹೇಳಿದ್ದೇ ಮಗಳ ಸಾವಿಗೆ ಕಾರಣವಾಗಿದೆ.

ಹಾವೇರಿ (ಫೆ.12): ನೀನು ಇನ್ನೂ ಚಿಕ್ಕ ಯುವತಿ. ನಿನ್ನ ಜೀವನದ ಆಯಸ್ಸು ತುಂಬಾ ಇದೆ. ಹೀಗಾಗಿ, ತಂಬಾಕು ಸೇವನೆ ಮಾಡುತ್ತಾ ನಿನ್ನ ಆರೋಗ್ಯ ಹಾಳುಮಾಡಿಕೊಳ್ಳಬೇಡ ಎಂದು ಮನೆಯವರು ಬುದ್ಧಿ ಹೇಳಿದ್ದಾರೆ. ಆದರೆ, ಮನೆಯವರು ಬುದ್ಧಿ ಹೇಳಿದ್ದಕ್ಕೆ 18 ವರ್ಷದ ಯುವತಿ ಬೇಬಿಜಾನ್ ನೇಣಿಗೆ ಶರಣಾಗಿ ಸಾವಿಗೀಡಾಗಿದ್ದಾಳೆ.

ಈ ಘಟನೆ ಹಾವೇರಿ ತಾಲೂಕಿನ ಕರ್ಜಗಿ ಗ್ರಾಮದ ರೈಲ್ವೆ ಸ್ಟೇಷನ್ ಬಳಿ ನಡೆದಿದೆ. ಮನೆಯವರು ತಂಬಾಕು ತಿನ್ನೋದು ಬಿಡು ಅಂತ ಬುದ್ಧಿವಾದ ಹೇಳಿದ್ದಕ್ಕೆ ಯುವತಿ ನೇಣಿಗೆ ಶರಣಾಗಿದ್ದಾಳೆ. ಮೃತ ಯುವತಿ ಬೀಬಿಜಾನ್ ಸೊಂಡಿ (18) ಎನ್ನುವವರಾಗಿದ್ದಾರೆ. ಹಾವೇರಿ ಸೇರಿದಂತೆ ಇತರೆಡೆ ಮನೆಗೆಲಸ ಮಾಡುತ್ತಿದ್ದ ಯುವತಿ ಕಳೆದ ಕೆಲವು ದಿನಗಳಿಂದ ತಂಬಾಕು ಸೇವನೆ ಚಟಕ್ಕೆ ಅಂಟಿಕೊಂಡಿದ್ದಳು. ತಂಬಾಕು ಸೇವನೆ ಮಾಡುವುದನ್ನು ಬಿಡುವಂತೆ ಬೀಬಿಜಾನ್ ಗೆ ತಂದೆ-ತಾಯಿ ಬುದ್ಧಿವಾದ ಹೇಳಿದ್ದರು.

ಇದನ್ನೂ ಓದಿ: ಬೀದಿನಾಯಿ ಸುರೇಶ್‌ ಸಾವಿಗೆ ಮಿಡಿದ ಊರ ಜನ: ಫ್ಲೆಕ್ಸ್ ಹಾಕಿ ಶ್ರದ್ಧಾಂಜಲಿ ಸಲ್ಲಿಕೆ

ಆದರೆ, ನಾನು ದುಡಿಮೆ ಮಾಡಿ ಹಣ ಸಂಪಾದನೆ ಮಾಡಿ ತಂಬಾಕು ಹಾಕಿಕೊಳ್ಳುವುದಕ್ಕೂ ಅಪ್ಪ-ಅಮ್ಮ ಬಿಡುತ್ತಿಲ್ಲ ಎಂದು ಮನೆಯಲ್ಲಿ ಜಗಳ ಮಾಡಿದ್ದಾಳೆ. ಇದಾದ ಕೆಲವು ದಿನಗಳ ನಂತರ ಮಗಳು ತಂಬಾಕು ಸೇವನೆ ಹೆಚ್ಚಾಗಿದ್ದರಿಂದ ಪುನಃ ಬುದ್ಧಿ ಹೇಳಿದ್ದಾರೆ. ನೀನಿನ್ನೂ ಚಿಕ್ಕವಳು. ನಿನ್ನ ಜೀವನದ ಆಯಸ್ಸು ತುಂಬಾ ಹೆಚ್ಚಾಗಿದೆ. ಆದ್ದರಿಂದ ತಂಬಾಕು ಸೇವನೆ ಬಿಟ್ಟು ನಿನ್ನ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ತಂದೆ ತಾಯಿ ಬೈದು ಮತ್ತೊಮ್ಮೆ ಬುದ್ಧಿವಾದ ಹೇಳಿದ್ದಾರೆ. ಇದರಿಂದ ಮನನೊಂದು ಯುವತಿ ಮನೆಯಲ್ಲಿ ಯಾರೂ ಇಲ್ಲದಿದ್ದಾಗ ನೇಣಿಗೆ ಶರಣಾಗಿದ್ದಾರೆ. ಈ ಘಟನೆ ಕುರಿತಂತೆ ಹಾವೇರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.