ಶಿರಸಿ ತಾಲೂಕಿನ ಓಂಕಾರ ಕಾಲೋನಿಯ ಬಾವಿಗಳಲ್ಲಿ ದಿಢೀರನೆ ಅಪಾರ ಪ್ರಮಾಣದ ಆಯಿಲ್ ಪತ್ತೆಯಾಗಿದ್ದು, ನೀರಿಗೆ ಬೆಂಕಿ ತಾಗಿದರೆ ಹೊತ್ತಿ ಉರಿಯುತ್ತಿದೆ. ಪಕ್ಕದ ಪವರ್ ಗ್ರಿಡ್‌ನಿಂದ ಆಯಿಲ್ ಸೋರಿಕೆಯಾಗಿರುವ ಶಂಕೆ ವ್ಯಕ್ತವಾಗಿದ್ದು, ತಜ್ಞರು ಪರಿಶೀಲನೆ ನಡೆಸುತ್ತಿದ್ದಾರೆ.

ಶಿರಸಿ (ನ.6): ಉತ್ತರಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ನಿವಾಸಿಗಳಲ್ಲಿ ತೀವ್ರ ಆತಂಕ ಮೂಡಿಸುವ ಘಟನೆ ನಡೆದಿದೆ. ಇಲ್ಲಿನ ಓಂಕಾರ ಕಾಲೋನಿಯಲ್ಲಿರುವ ಬಾವಿಗಳಲ್ಲಿ ಅಪಾರ ಪ್ರಮಾಣದ ಆಯಿಲ್ ಪತ್ತೆಯಾಗಿದ್ದು, ಬಾವಿ ನೀರಿಗೆ ಬೆಂಕಿ ಕಡ್ಡಿ ಗೀರಿದರೆ ಸಾಕು ಇಡೀ ನೀರು ಹೊತ್ತಿ ಉರಿಯುತ್ತಿದೆ. ಶಿರಸಿ ತಾಲೂಕಿನ ದೊಡ್ನಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಒಳಪಡುವ ಓಂಕಾರ ಕಾಲೋನಿಯಲ್ಲಿ ಈ ಘಟನೆ ಸಂಭವಿಸಿದೆ. ಕಾಲೋನಿಯಲ್ಲಿರುವ ಸುಮಾರು ಆರು ಬಾವಿಗಳಲ್ಲಿ ದಿಢೀರನೇ ಬಾವಿ ನೀರಿನ ಜೊತೆ ತೈಲ/ಆಯಿಲ್ ಮಿಶ್ರಣಗೊಂಡಿರುವುದು ಪತ್ತೆಯಾಗಿದೆ. ಬಾವಿಯಿಂದ ನೀರು ಎತ್ತಿ ಪರಿಶೀಲಿಸಿದಾಗ ಆಯಿಲ್ ಮಿಶ್ರಿತವಾಗಿರುವುದು ಕಂಡುಬಂದಿದ್ದು, ಬೆಂಕಿ ಕಡ್ಡಿ ಗೀರಿದಾಗ ಉರಿಯಲು ಆರಂಭಿಸಿದೆ. ಇದನ್ನು ಕಂಡು ಅಚ್ಚರಿಗೊಂಡ ಸ್ಥಳೀಯ ನಿವಾಸಿಗಳು ತಕ್ಷಣವೇ ದೊಡ್ನಳ್ಳಿ ಗ್ರಾಮ ಪಂಚಾಯತಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ದೌಡಾಯಿಸಿದ ಅಧಿಕಾರಿಗಳು

ಸ್ಥಳೀಯರಿಂದ ದೂರು ಸ್ವೀಕರಿಸುತ್ತಿದ್ದಂತೆಯೇ ದೊಡ್ನಳ್ಳಿ ಗ್ರಾಮ ಪಂಚಾಯತಿ ಅಧಿಕಾರಿಗಳು ತಜ್ಞರ ತಂಡದೊಂದಿಗೆ ಸ್ಥಳಕ್ಕೆ ದೌಡಾಯಿಸಿದ್ದಾರೆ. ಬಾವಿಗಳನ್ನು ಪ್ರತ್ಯಕ್ಷವಾಗಿ ವೀಕ್ಷಿಸಿದ ಅಧಿಕಾರಿಗಳು ಹಾಗೂ ತಜ್ಞರು, ನೀರಿನಲ್ಲಿ ಆಯಿಲ್ ತೇಲುತ್ತಿರುವುದನ್ನು ಮತ್ತು ಹೊತ್ತಿ ಉರಿಯುತ್ತಿರುವುದನ್ನು ಕಂಡು ದಂಗಾಗಿದ್ದಾರೆ. ಬಾವಿ ನೀರಿಗೆ ಈ ಪ್ರಮಾಣದಲ್ಲಿ ಆಯಿಲ್ ಎಲ್ಲಿಂದ ಸೇರುತ್ತಿದೆ ಎಂಬ ಖಚಿತ ಮೂಲವನ್ನು ಪತ್ತೆಹಚ್ಚಲು ತಜ್ಞರ ತಂಡ ತೀವ್ರ ಹರಸಾಹಸ ಪಡುತ್ತಿದೆ.

ಪವರ್ ಗ್ರಿಡ್‌ನಿಂದ ಆಯಿಲ್ ಲೀಕೇಜ್ ಶಂಕೆ?

ಓಂಕಾರ ಕಾಲೋನಿಯ ಪಕ್ಕದಲ್ಲೇ ವಿದ್ಯುತ್ ಪ್ರಸರಣ ಸಂಸ್ಥೆಯ ಬೃಹತ್ 'ಪವರ್ ಗ್ರಿಡ್' (Power Grid) ಇದೆ. ಈ ಪವರ್ ಗ್ರಿಡ್‌ನ ಟ್ರಾನ್ಸ್‌ಫಾರ್ಮರ್‌ಗಳಿಂದ ಅಥವಾ ಸಂಗ್ರಹಾಗಾರದಿಂದ ಆಯಿಲ್ ಸೋರಿಕೆಯಾಗಿ (Oil Seepage) ಭೂಮಿಯ ಅಂತರ್ಜಲ ಮಟ್ಟಕ್ಕೆ ಸೇರಿರಬಹುದು ಎಂದು ಸಂಶಯ ವ್ಯಕ್ತವಾಗಿದೆ. ಈ ಶಂಕೆಯ ಹಿನ್ನೆಲೆಯಲ್ಲಿ ಅಧಿಕಾರಿಗಳು ಹಾಗೂ ತಜ್ಞರ ತಂಡ ಪವರ್ ಗ್ರಿಡ್ ಆವರಣಕ್ಕೂ ಭೇಟಿ ನೀಡಿ ಕೂಲಂಕಷ ತಪಾಸಣೆ ನಡೆಸಿದ್ದಾರೆ. ಆದರೆ, ಭೂಮಿಗೆ ಆಯಿಲ್ ಸೇರ್ಪಡೆಯಾದ ಮೂಲ ಸ್ಥಳ ಯಾವುದು ಎಂಬುದು ಸದ್ಯಕ್ಕೆ ಖಚಿತವಾಗಿ ಪತ್ತೆಯಾಗಿಲ್ಲ.

ಟ್ಯಾಂಕರ್ ಮೂಲಕ ತಾತ್ಕಾಲಿಕ ನೀರು ಪೂರೈಕೆ

ಕಾಲೋನಿಯ ಆರು ಬಾವಿಗಳ ನೀರು ಸಂಪೂರ್ಣವಾಗಿ ಆಯಿಲ್ ಮಿಶ್ರಿತವಾಗಿ ಕಲುಷಿತಗೊಂಡಿರುವುದರಿಂದ, ಈ ನೀರನ್ನು ಕುಡಿಯಲು ಅಥವಾ ಗೃಹಬಳಕೆಗೆ ಬಳಸದಂತೆ ನಿವಾಸಿಗಳಿಗೆ ಸೂಚನೆ ನೀಡಲಾಗಿದೆ. ಬಾವಿ ನೀರು ಬಂದ್ ಆಗಿರುವುದರಿoದ ಕಾಲೋನಿಯಲ್ಲಿ ಕುಡಿಯುವ ನೀರಿನ ಅಭಾವ ಸೃಷ್ಟಿಯಾಗಿದ್ದು, ಗ್ರಾಮ ಪಂಚಾಯತಿ ವತಿಯಿಂದ ತಾತ್ಕಾಲಿಕವಾಗಿ ಓಂಕಾರ ಕಾಲೋನಿಯ ನಿವಾಸಿಗಳಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಭೂಮಿಗೆ ಆಯಿಲ್ ಸೇರುತ್ತಿರುವ ಮೂಲವನ್ನು ಪತ್ತೆಹಚ್ಚಲು ಹಾಗೂ ನೀರನ್ನು ಶುದ್ಧೀಕರಿಸಲು ತಜ್ಞರು ತನಿಖೆಯನ್ನು ಮುಂದುವರಿಸಿದ್ದಾರೆ.