ಕೊಪ್ಪಳ: ಹತ್ತು ವರ್ಷವಾದರೂ ಬಾರದ ಹನಿ ನೀರು
* ಸಿಂಗಟಾಲೂರು ಏತ ನೀರಾವರಿ ಕ್ಯಾಂಪೇನ್
* ಯೋಜನೆ ಲೋಕಾರ್ಪಣೆಗೊಂಡರೂ ನೀರಾವರಿಯಾಗುತ್ತಿಲ್ಲ
* ಕೊಪ್ಪಳ ಭಾಗದ ರೈತರ ಪಾಡು ಕೇಳೋರಿಲ್ಲ
ಸೋಮರಡ್ಡಿ ಅಳವಂಡಿ
ಕೊಪ್ಪಳ(ಜೂ.05): ಬಹುವರ್ಷಗಳ ಹೋರಾಟದ ಫಲವಾಗಿ ಸಿಂಗಟಾಲೂರು ಏತನೀರಾವರಿ ಯೋಜನೆ ಅನುಷ್ಠಾನವಾಗಿ, ಲೋಕಾರ್ಪಣೆಯೂ ಆಗಿ ಹತ್ತು ವರ್ಷಗಳು ಕಳೆದಿವೆ. ಆದರೆ, ಹೋರಾಟ ಮಾಡಿದ ಕೊಪ್ಪಳ ಜಿಲ್ಲೆಯ ರೈತರ ಪಾಲಿಗೆ ಇನ್ನು ಹನಿ ನೀರು ದಕ್ಕಿಲ್ಲ.
ಯೋಜನೆ ಲೋಕಾರ್ಪಣೆ ಮಾಡಿದ ಮೇಲೆ ಹರಿ ನೀರಾವರಿ ಮಾಡಬೇಕೋ? ಹನಿ ನೀರಾವರಿ ಮಾಡಬೇಕೋ? ತುಂತುರು ನೀರಾವರಿ ಮಾಡಬೇಕೋ? ಎನ್ನುವ ಚಿಂತನೆಯಲ್ಲಿಯೇ ಕಾಲ ಕಳೆಯಲಾಗುತ್ತದೆ. ಇದು ಅಚ್ಚರಿಯಾದರೂ ಸತ್ಯ. ಈಗ ಇವೆಲ್ಲಕ್ಕೂ ಎಳ್ಳುನೀರು ಬಿಟ್ಟು ಮಧ್ಯಪ್ರದೇಶ ಮಾದರಿಯಲ್ಲಿ ಯೋಜನೆ ಜಾರಿ ಮಾಡಲು ಮುಂದಾಗಿದೆ. ಈ ಕುರಿತು ತಜ್ಞರ ಸಮಿತಿಯನ್ನು ಈಗ ಸರ್ಕಾರ ಮಾಡಿರುವುದು ಈಗಿನ ಸರ್ಕಾರದ ಬಹುದೊಡ್ಡ ಬೆಳವಣಿಗೆಯಾಗಿದೆ.
ಸಿಂಗಟಾಲೂರು ಏತನೀರಾವರಿ ಯೋಜನೆಯಲ್ಲಿ ಬಲಭಾಗದಲ್ಲಿ ನಿರೀಕ್ಷೆ ಮೀರಿ ವಿಜಯನಗರ ಜಿಲ್ಲೆಯಲ್ಲಿ ನೀರಾವರಿಯಾಗಿದೆ. ಬಲಭಾಗದಲ್ಲಿ ಗದಗ ಹಾಗೂ ಕೊಪ್ಪಳ ಜಿಲ್ಲೆಯಲ್ಲಿ ಸುಮಾರು 2.65 ಲಕ್ಷ ಎಕರೆ ನೀರಾವರಿಯಾಗಬೇಕಾಗಿರುವುದು ಇದುವರೆಗೂ ಒಂದೇ ಒಂದು ಎಕರೆಗೆ ನೀರು ಕೊಡಲು ಸಾಧ್ಯವಾಗಿಲ್ಲ.
Koppal: Singatalur Lift Irrigation Project ಜಾರಿಗೆ ಮಧ್ಯಪ್ರದೇಶ ಮಾದರಿ
ಕೋಟಿ ಕೋಟಿ ವ್ಯಯ:
ಕಳೆದ ಸರ್ಕಾರದ ಅವಧಿಯಲ್ಲಿ ಹನಿ ನೀರಾವರಿ ಅಳವಡಿಸಲು ಮುಂದಾಗಿ, ಪ್ರಾಯೋಗಿಕವಾಗಿ ಜಾರಿ ಮಾಡಲು ಮುಂದಾಯಿತು. ಇದಕ್ಕೆ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು. ಪರಿಣಾಮ ಸುಮಾರು .3500 ಕೋಟಿ ವ್ಯಯ ಮಾಡಲಾಗಿದೆ. ಆದರೆ, ಹಾಕಿದ ಪೈಪು ಕಳ್ಳತನವಾಗಿವೆ ಎನ್ನುವ ಷರಾದೊಂದಿಗೆ ಯೋಜನೆ ಬರ್ಖಾಸ್ತು ಮಾಡಲಾಯಿತು.
ಆನಂತರ ಬಂದ ಬಿಜೆಪಿ ಸರ್ಕಾರ ಸಿಂಗಟಾಲೂರು ಏತನೀರಾವರಿ ಯೋಜನೆ ಪೂರ್ಣಗೊಳಿಸುತ್ತೇವೆ. ರೈತರಿಗೆ ನಿರೀಕ್ಷೆ ಮೀರಿ ನೀರು ಕೊಡುತ್ತೇವೆ ಎಂದು ಹೇಳಿದರಾದರೂ ಇದುವರೆಗೂ ನಯಾಪೈಸೆ ಕಾರ್ಯ ಆಗಲಿಲ್ಲ. ಹನಿ ನೀರಾವರಿ ಮಾಡುವುದಾಗಿ ಮಾಡಿ ಯೋಜನೆ ಮಣ್ಣು ಪಾಲಾಗಿರುವುದನ್ನು ತನಿಖೆ ಸಹ ಮಾಡುವ ಕಾರ್ಯ ಮಾಡಲಿಲ್ಲ. ಹೀಗೆ ಕಾಲದೂಡುತ್ತಾ, ಈಗ ಮಧ್ಯಪ್ರದೇಶ ಮಾದರಿಯಲ್ಲಿ ಸಿಂಗಟಾಲೂರು ಏತನೀರಾವರಿ ಯೋಜನೆಯನ್ನು ಬಲಭಾಗದಲ್ಲಿ ಜಾರಿ ಮಾಡಲು ಕ್ರಮವಹಿಸಿ, ತಜ್ಞರ ಸಮಿತಿ ರಚನೆ ಮಾಡಲಾಗಿದೆ. ನಿವೃತ್ತ ಅಭಿಯಂತರರ ನೇತೃತ್ವದಲ್ಲಿ ಸಮಿತಿ ರಚನೆಯಾಗಿದ್ದು, ಸಮಿತಿ ಈಗ ಸಾಧ್ಯಸಾಧ್ಯತೆ ಕುರಿತು ಅಧ್ಯಯನ ಮಾಡಿ, ವರದಿ ಸಲ್ಲಿಸಬೇಕು. ಇದಾದ ಮೇಲೆ ಅದನ್ನು ಅನುಷ್ಠಾನ ಮಾಡುವ ಕುರಿತು ಸರ್ಕಾರ ನಿರ್ಧಾರ ಕೈಗೊಂಡು, ಯೋಜನೆಯನ್ನು ಜಾರಿ ಮಾಡಬೇಕು. ಇದೆಲ್ಲವೂ ಆಗುವುದಕ್ಕೆ ಇನ್ನು ಎಷ್ಟುವರ್ಷ ಬೇಕೋ ದೇವರೇ ಬಲ್ಲ.
ನೀರು ಪೋಲು:
ಸಿಂಗಟಾಲೂರು ಜಲಾಶಯದಲ್ಲಿ 18 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಇದ್ದು, ಈಗಾಗಲೇ ಜಲಾಶಯಕ್ಕೆ ನೀರು ಹರಿದು ಬಂದಿದೆ. ಆದರೆ, ಬಳಕೆಗೆ ಎಡಭಾಗದಲ್ಲಿ ಅವಕಾಶವೇ ಇಲ್ಲ. ಇದರಿಂದ ಬಂದಿರುವ ನೀರು ಪೋಲಾಗುತ್ತದೆ. ಕಾಲುವೆಯ ಮೂಲಕ ಹರಿಸಿ, ಮತ್ತೆ ನದಿಗೆ ಸೇರುತ್ತದೆ. ಪ್ರತಿ ವರ್ಷ ಹೀಗೆ 9-10 ಟಿಎಂಸಿ ನೀರು ಪೋಲಾಗುತ್ತದೆ. ಕಳೆದ ವರ್ಷಗಳಿಂದ ಸುಮಾರು 90-100 ಟಿಎಂಸಿ ಹೀಗೆ ಪೋಲಾಗುತ್ತದೆ ಎನ್ನುವುದು ಕಟುವಾದ ಸತ್ಯ.
Singatalur Lift Irrigation Scheme: ಒಂಬತ್ತು ವರ್ಷದಿಂದ 90 ಟಿಎಂಸಿ ನೀರು ಪೋಲು..!
ಜನಪ್ರತಿನಿಧಿಗಳು ಆಸಕ್ತಿ ತೋರುತ್ತಿಲ್ಲ...
ಈ ಕುರಿತು ಸ್ಥಳೀಯ ಜನಪ್ರತಿನಿಧಿಗಳು ಧ್ವನಿ ಎತ್ತುವುದಿಲ್ಲ. ಸಿಂಗಟಾಲೂರು ಏತನೀರಾವರಿ ಯೋಜನೆ ಅನುಷ್ಠಾನಕ್ಕಾಗಿಯೇ ನಾನು ಪಕ್ಷಾಂತರ ಮಾಡಿರುವುದಾಗಿ ಹೇಳಿಕೊಳ್ಳುವ ಸಂಸದ ಸಂಗಣ್ಣ ಕರಡಿ ಜಾರಿಗೆ ಅಷ್ಟಾಗಿ ಆಸಕ್ತಿ ತೋರಿಸುತ್ತಿಲ್ಲ. ಪ್ರತಿಪಕ್ಷದಲ್ಲಿರುವ ಶಾಸಕ ರಾಘವೇಂದ್ರ ಹಿಟ್ನಾಳ ಅವರು ಸಂಬಂಧವೇ ಇಲ್ಲ ಎನ್ನುವಂತೆ ಇದ್ದಾರೆಯೇ ಹೊರತು ಧ್ವನಿ ಎತ್ತುತ್ತಿಲ್ಲ. ಸಚಿವ ಹಾಲಪ್ಪ ಆಚಾರ್ ಅವರು ಕೊಪ್ಪಳ ಏತನೀರಾವರಿ ಯೋಜನೆ ಅನುಷ್ಠಾನಕ್ಕೆ ನೀಡುವ ಆದ್ಯತೆಯನ್ನು ಸಿಂಗಟಾಲೂರು ಏತನೀರಾವರಿ ಯೋಜನೆಯ ಅನುಷ್ಠಾನಕ್ಕೆ ಆಸಕ್ತಿ ತೋರುತ್ತಿಲ್ಲ. ಯಲಬುರ್ಗಾ ತಾಲೂಕಿಗೂ ನೀರಾವರಿಯಾಗುತ್ತದೆ ಎನ್ನುವುದು ಗೊತ್ತಿದ್ದರೂ ಅವರು ಇದನ್ನು ಅಷ್ಟಾಗಿ ಗಂಭೀರವಾಗಿ ಪರಿಗಣಿಸುತ್ತಲೇ ಇಲ್ಲ. ಯಾವ್ಯಾವುದಕ್ಕೂ ಹೋರಾಟ ಮಾಡುವ ಸಂಘಟನೆ ಮಹಾತ್ವಾಕಾಂಕ್ಷಿ ಯೋಜನೆಯಾದ ಸಿಂಗಟಾಲೂರು ಏತನೀರಾವರಿ ಯೋಜನೆಯಿಂದ ರೈತರಿಗೆ ನೀರು ಕೊಡಿಸುವುದಕ್ಕಾಗಿ ಹೋರಾಟ ಮಾಡುತ್ತಿಲ್ಲ.
ಸಿಂಗಟಾಲೂರು ಏತ ನೀರಾ-ವರಿ ಕ್ಯಾಂಪೇನ್
ಸಿಂಗಟಾಲೂರು ಏತನೀರಾವರಿ ಯೋಜನೆ ಲೋಕಾರ್ಪಣೆಗೊಂಡು ಹತ್ತು ವರ್ಷಗಳೇ ಉರುಳಿವೆ. ಆದರೂ ಎಡಭಾಗದಲ್ಲಿ ಇದುವರೆಗೂ ಹನಿ ನೀರಾವರಿಯಾಗಿಲ್ಲ. ಯೋಜನೆ ಲೋಕಾರ್ಪಣೆಗೊಂಡು ಒಂದು ಭಾಗದಲ್ಲಿ ನೀರಾವರಿಯಾಗದಿರುವ ಯೋಜನೆ ಇದೇ ಇರಬೇಕು. ಇದರ ಕುರಿತು ‘ಕನ್ನಡಪ್ರಭ’ ಸಿಂಗಟಾಲೂರು ಏತನೀರಾವರಿ ಗೋಳು ಎನ್ನುವ ಸರಣಿಯನ್ನು ಇಂದಿನಿಂದ ಪ್ರಾರಂಭಿಸುತ್ತಿದೆ.