ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ: ಶಾಸಕ ಮಸಾಲಾ ಜಯರಾಮ್
ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಪ್ರಯತ್ನ ಮಾಡಲಾಗಿದೆ. ಪಟ್ಟಣದಲ್ಲಿ ಕಳಪೆ ಗುಣಮಟ್ಟದಲ್ಲಿ ನಿರ್ಮಾಣಗೊಂಡಿರುವ ಒಳ ಚರಂಡಿಯನ್ನು ಸಂಪೂರ್ಣವಾಗಿ ದುರಸ್ಥಿಗೊಳಿಸಿ ಸಾರ್ವಜನಿಕರ ಅನುಕೂಲಕ್ಕೆ ಬಳಸುವ ಸಲುವಾಗಿ ಸರ್ಕಾರದಿಂದ ಸುಮಾರು 10 ಕೋಟಿ ಬಿಡುಗಡೆಯಾಗಿದೆ ಎಂದು ಶಾಸಕ ಮಸಾಲಾ ಜಯರಾಮ್ ಹೇಳಿದರು.
ತುರುವೇಕೆರೆ : ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಪ್ರಯತ್ನ ಮಾಡಲಾಗಿದೆ. ಪಟ್ಟಣದಲ್ಲಿ ಕಳಪೆ ಗುಣಮಟ್ಟದಲ್ಲಿ ನಿರ್ಮಾಣಗೊಂಡಿರುವ ಒಳ ಚರಂಡಿಯನ್ನು ಸಂಪೂರ್ಣವಾಗಿ ದುರಸ್ಥಿಗೊಳಿಸಿ ಸಾರ್ವಜನಿಕರ ಅನುಕೂಲಕ್ಕೆ ಬಳಸುವ ಸಲುವಾಗಿ ಸರ್ಕಾರದಿಂದ ಸುಮಾರು 10 ಕೋಟಿ ಬಿಡುಗಡೆಯಾಗಿದೆ ಎಂದು ಶಾಸಕ ಮಸಾಲಾ ಜಯರಾಮ್ ಹೇಳಿದರು.
ಪಟ್ಟಣದಲ್ಲಿ ತಾಲೂಕು ಕಚೇರಿ ಮುಂಭಾಗದಲ್ಲಿ ಪಟ್ಟಣ ಪಂಚಾಯಿತಿ ವತಿಯಿಂದ ಸುಮಾರು 8 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ನೂತನ ವಾಣಿಜ್ಯ ಸಂಕೀರ್ಣ ಕಟ್ಟಡವನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಅವರು ಹತ್ತಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ವಾಣಿಜ್ಯ ಸಂಕೀರ್ಣ ಕಟ್ಟಡಕ್ಕೆ ಮುಕ್ತಿ ನೀಡಲಾಗಿದೆ. 2007ರಲ್ಲಿ ಭೂಮಿ ಪೂಜೆ ಮಾಡಿ ಕಾಮಗಾರಿ ಸಂಪೂರ್ಣಗೊಳಿಸದೇ ವಾಣಿಜ್ಯ ಸಂಕೀರ್ಣ ಕಟ್ಟಡವನ್ನು ಮುಚ್ಚಲಾಗಿತ್ತು. ತಾವು ಶಾಸಕರಾದ ನಂತರ ಅರ್ಧಕ್ಕೆ ನಿಂತಿದ್ದ ಕಟ್ಟಡಕ್ಕೆ ಅನುದಾನವನ್ನು ನೀಡಿ ಪಟ್ಟಣ ಪಂಚಾಯಿತಿ ಸದಸ್ಯರ ಸಹಕಾರದಿಂದ ಸುಮಾರು 8 ಕೋಟಿ ವೆಚ್ಚದಲ್ಲಿ ಎರಡು ಅಂತಸ್ತಿನ ಕಟ್ಟಡವನ್ನು ನಿರ್ಮಾಣ ಮಾಡಿಸಿರುವುದಾಗಿ ಹೇಳಿದರು.
ಮೊದಲನೆ ನೆಲ ಮಹಡಿಯಲ್ಲಿ ಸುಸಜ್ಜಿತವಾದ ಸುಮಾರು 45 ಕ್ಕೂ ಹೆಚ್ಚು ಅಂಗಡಿ ಮಳಿಗೆಗಳನ್ನು ನಿರ್ಮಾಣ ಮಾಡಲಾಗಿದೆ. ಮೊದಲನೆಯ ಮಹಡಿಯಲ್ಲಿ ವಿಶಾಲವಾದ ಹಾಲ್ ನಿರ್ಮಿಸಲಾಗಿದೆ. ಇದರಿಂದ ಪಟ್ಟಣ ಪಂಚಾಯಿತಿಗೆ ಪ್ರತಿ ವರ್ಷ ಸುಮಾರು 50 ರಿಂದ 60 ಲಕ್ಷ ಆದಾಯ ಬರಲಿದೆ. ಈ ಆದಾಯವನ್ನು ಬಳಸಿ ಪಟ್ಟಣದ ಹೆಚ್ಚಿನ ಅಭಿವೃದ್ಧಿ ಮಾಡಬಹುದು. ನಗರೋತ್ಪನ್ನ ಯೋಜನೆಯಡಿಯಲ್ಲಿ ಈಗಾಗಲೇ 5 ಕೋಟಿ ಹಣ ಬಿಡುಗಡೆಯಾಗಿದೆ. ಎಲ್ಲ ವಾರ್ಡ್‌ಗಳಲ್ಲಿಯೂ ಕಾಂಕ್ರೀಟ್ ರಸ್ತೆ, ಚರಂಡಿ, ನಿರ್ಮಿಸಲಾಗುತ್ತಿದೆ. ವಾಣಿಜ್ಯ ಸಂರ್ಕೀರ್ಣ ಸುತ್ತಮುತ್ತಲಿನ ಬೀದಿ ಬದಿ ವ್ಯಾಪಾರಿಗಳಿಗೆ ಸಂತೆ ಮೈದಾನದಲ್ಲಿ ಸುಸಜ್ಜಿತವಾದ ಮಾರುಕಟ್ಟೆಸ್ಥಾಪನೆ ಮಾಡಲಾಗುತ್ತಿದೆ. ಅಲ್ಲಿ ಕುಡಿಯುವ ನೀರು, ನೆರಳು, ಶೌಚಾಲಯ ಸೇರಿದಂತೆ ಸುಸಜ್ಜಿತವಾದ ಕಾಂಕ್ರೀಟ್ ಪಾತ್ ನಿರ್ಮಿಸಿ ಬೀದಿ ಬದಿ ವ್ಯಾಪಾರಿಗಳಿಗೆ ತೊಂದರೆಯಾಗದಂತೆ ಸೂಕ್ತವಾದ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಟಿ.ಕೆ.ಪ್ರಭಾಕರ್, ಉಪಾಧ್ಯಕ್ಷರಾದ ಎಚ್.ಸಿ.ಶೀಲಾ, ಸದಸ್ಯರಾದ ಯಜಮಾನ್ ಮಹೇಶ್, ಟಿ.ಕೆ.ಚಿದಾನಂದ್, ಅಂಜನ್‌ಕುಮಾರ್, ಆಶಾರಾಣಿ, ಭಾಗ್ಯಮ್ಮ, ನವೀನ್ ಬಾಬು, ಬಿ.ಎಂ.ಶೋಭಾ, ಆನಂದ್, ರವಿ ಸೇರಿದಂತೆ ಇತರೆ ಸದಸ್ಯರು, ಮುಖ್ಯಾಧಿಕಾರಿ ಡಿ.ಲಕ್ಷ್ಮಣ್‌ಕುಮಾರ್, ಎಂಜಿನಿಯರ್ ಬಿ.ಹರೀಶ್, ಪಟ್ಟಣ ಪಂಚಾಯ್ತಿ ಸಿಬ್ಬಂದಿ ವರ್ಗ ಹಾಗೂ ಪಟ್ಟಣದ ನಾಗರಿಕರು ಇದ್ದರು.
ಇದೇ ಸಂದರ್ಭದಲ್ಲಿ ಶಾಸಕ ಮಸಾಲಾ ಜಯರಾಮ್ ಬೀದಿಬದಿ ವ್ಯಾಪಾರಿಗಳಿಗೆ ದೊಡ್ಡ ಗಾತ್ರದ ಕೊಡೆಯನ್ನು ವಿತರಣೆ ಮಾಡಿದರು.