ಭಕ್ತರಿಲ್ಲದೇ ಭಣಗುಟ್ಟಿದ ಬಾದಾಮಿ ಬನಶಂಕರಿ ಜಾತ್ರೆ
ಪ್ರತಿವರ್ಷ ಲಕ್ಷಕ್ಕೂ ಅಧಿಕ ಜನರ ಹಷೋದ್ಘಾರದಲ್ಲಿ ನಡೆಯುತ್ತಿದ್ದ ಬನಶಂಕರಿ ಜಾತ್ರೆ| ಹುಣ್ಣಿಮೆಯಂದು ಶೃಂಗಾರಗೊಂಡ ತಾಯಿ ಬನಶಂಕರಿದೇವಿ| ರಥಾಂಗ ಹೋಮ ಮತ್ತು ಪಲ್ಲಕ್ಕಿ ಉತ್ಸವ ನಡೆಸುತ್ತಿರುವ ಅರ್ಚಕರು| ದೇವಸ್ಥಾನದ ಒಳಗಡೆ ಪ್ರವೇಶ ಸಿಗದೆ ರಸ್ತೆ ಪಕ್ಕದಲ್ಲಿ ನಿಂದ ಮರಳಿ ತೆರಳಿದ ಭಕ್ತರು|
ಶಂಕರ ಕುದರಿಮನಿ
ಬಾದಾಮಿ(ಜ.29): ಉತ್ತರ ಕರ್ನಾಟಕ ಬಹುದೊಡ್ಡ ಜಾತ್ರೆಗಳಲ್ಲಿ ಒಂದಾದ ಬಾದಾಮಿ ಬನಶಂಕರಿ ಜಾತ್ರೆ ಈ ಬಾರಿ ಕೊರೋನಾ ಹೆಮ್ಮಾರಿಯಿಂದ ಮಂಕಾಗಿತ್ತು. ಇದರ ನಡುವೆ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಜ.15 ರಿಂದ ದೇವಸ್ಥಾನ ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಬನದಮ್ಮನ ಜಾತ್ರೆಯಲ್ಲಿ ಭಕ್ತರು ಇಲ್ಲದೇ ಭಣಗುಟ್ಟುತ್ತಿತ್ತು. ಪ್ರತಿವರ್ಷ ಒಂದು ತಿಂಗಳು ಕಾಲ ನಡೆಯುತ್ತಾ, ಅದೆಷ್ಟೋ ಕಲಾವಿದರಿಗೆ, ಸಣ್ಣಪುಟ್ಟವ್ಯಾಪಾರಸ್ಥರಿಗೆ ಬದುಕು ಕಟ್ಟಿಕೊಡುತ್ತಿದ್ದ ಜಾತ್ರೆ ಈ ಬಾರಿ ನಡೆಯದೇ ಇರುವ ಕಾರಣ ಕೋಟ್ಯಂತರ ರುಪಾಯಿ ವ್ಯವಹಾರ ನಡೆಯದೇ ಅದೆಷ್ಟೋ ಕುಟುಂಬಗಳು ದಿಕ್ಕು ಕಾಣದೇ ದೇವಿ ಮೇಲೆ ಭಾರ ಹಾಕಿ ಕುಳಿತುಕೊಂಡಿದ್ದಾರೆ.
ಜ.28ರಂದು ರಥೋತ್ಸವ ನಡೆಯುತ್ತದೆ ಎಂದು ವಿವಿಧ ಊರುಗಳಿಂದ ಸಾವಿರಾರು ಭಕ್ತರು ಆಗಮಿಸಿದರು. ಆದರೆ ಪೊಲೀಸ್ ಸರ್ಪಕಾವಲಿನ ಕಟ್ಟುನಿಟ್ಟಿನ ಕ್ರಮದಲ್ಲಿ ದೇವಿ ದರ್ಶನ ಸಿಗದೆ ನಿರಾಸೆಯಿಂದ ಮರಳಿದ ಪ್ರಸಂಗಗಳು ನಡೆಯಿತು. ಸುಮಾರು ಒಂದು ಕಿಮೀ ಅಂತರದಲ್ಲಿ ದೇವಸ್ಥಾನದ ನಾಲ್ಕು ದಿಕ್ಕಿನಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿ ಭಕ್ತರು ಬರದೆ ಹಾಗೆ ಮುಂಜಾಗ್ರತೆ ವಹಿಸಿಕೊಳ್ಳಲಾಗಿತ್ತು. ಕೆಲವರು ಸಂಜೆಯಾದರೂ ಬಿಡಬಹುದು ಎಂಬ ನಿರೀಕ್ಷೆಯಲ್ಲಿಯೇ ಅಲ್ಲಲ್ಲಿ ಕುಳಿತುಕೊಂಡಿದ್ದರು.
ಕೊರೋನಾ ಎಫೆಕ್ಟ್: ಬಾದಾಮಿ ಬನಶಂಕರಿ ಜಾತ್ರೆ ರದ್ದು
ಯಥಾವತ್ತಾಗಿ ನಡೆದ ಕಾರ್ಯಗಳು:
ಚಾಲುಕ್ಯರ ಆರಾಧ್ಯ ದೇವತೆ ಬನಶಂಕರಿ ದೇವಿಗೆ ಯಥಾವತ್ತಾಗಿ ಪ್ರತಿವರ್ಷದಂತೆ ಧಾರ್ಮಿಕ ಕಾರ‍್ಯಕ್ರಮಗಳನ್ನು ನಡೆಸಲು ದೇವಸ್ಥಾನದ ಅರ್ಚಕ ಕುಟುಂಬದವರಿಗೆ ಜಿಲ್ಲಾಧಿಕಾರಿಗಳು ಅನುಮತಿ ನೀಡಿದ ಹಿನ್ನೆಲೆಯಲ್ಲಿ ವಿವಿಧ ಹೋಮ ಹವನಾದಿಗಳ ಸಮರ್ಪಣೆಗಳು ಗುರುವಾರ ರಥೋತ್ಸವದ ಮೊದಲೇ ಜರುಗಿದವು. ಮಹಾರಥದ ಎದುರುಗಿರುವ ರಥ ಬೀದಿಯಲ್ಲಿ ರಥಾಂಗ ಹೋಮ ಅರ್ಚಕ ಕುಟುಂಬದವರಿಂದ ನಡೆದು ಸಂಜೆ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಪೂಜಾರ ಮನೆತನದವರು ಮತ್ತು ಆಯಾ ಸಮಾಜದವರು ಪ್ರತಿವರ್ಷ ಸೇವೆ ಮಾಡುತ್ತಾ ಬಂದವರು, ಅರ್ಚಕರು ಮಾತ್ರ ಭಾಗವಹಿಸಿ ಧಾರ್ಮಿಕ ಕಾರ‍್ಯಕ್ರಮಗಳನ್ನು ಪಂಡಿತರೊಂದಿಗೆ ಸೇರಿ ಹಲವಾರು ಹೋಮ ಹವನಾದಿಗಳನ್ನು ದೇವಿಯ ಎದುರಿಗೆ ಮಾಡುವುದರ ಮೂಲಕ ನವರಾತ್ರಿಯನ್ನು ಸರಳವಾಗಿ ಆಚರಿಸಿದರು.
ಈ ಸಂದರ್ಭದಲ್ಲಿ ವಾಹನೋತ್ಸವ ಸೇರಿದಂತೆ ಇನ್ನಿತರ ಪೂಜಾ ಕೈಂಕರಗಳನ್ನು ಹಮ್ಮಿಕೊಳ್ಳಲಾಗಿತ್ತು. ನವರಾತ್ರಿ ಆರಂಭದಲ್ಲಿ ಘಟಸ್ಥಾಪನೆ, ಶಿಬಿಕವಾಹನ ಶಿದ್ಧಿ, ಗಣಪತಿ ಹೋಮ, ವರಾಯಿ ಹೋಮ, ಮಯೂರ ವಾಹನ, ರೇಣುಕಾಂಬ ಹೋಮ, ಶೇಷ ವಾಹನ, ಅನ್ನಪೂರ್ಣಾ ಹೋಮ, ನಂದಿ ವಾಹನ, ರಾಜ್ಯಶ್ಯಾಮಲಾಂಬ ಹೋಮ, ಗಜವಾಹನ, ನವಾವರಣ ಹೋಮ, ಗರುಡ ವಾಹನ ನಡೆದು ಪಲ್ಯೆದ ಹಬ್ಬದಂದು ವನದುರ್ಗಾಂಭ ಹೋಮ, ಪುಷ್ಪ ವಿಮಾನ ವಾಹನ, ರಥೋತ್ಸವ ದಿನದಂದು ನವಚಂಡಿಯಾಗ ಬಲಿಹರಣ ಹಾಗೂ ರಥಾಂಗ ಹೋಮ ನಡೆದವು.
ಬಾದಾಮಿ: ಕಲಾವಿದರ ಬದುಕು ಕಸಿದುಕೊಂಡ ಕೊರೋನಾ ಮಹಾಮಾರಿ
ದೇವಿಗೆ ಪ್ರತಿನಿತ್ಯ ಅಲಂಕಾರ ಸೇರಿದಂತೆ ಇನ್ನಿತರ ವಿಶೇಷ ಪೂಜೆಗಳು ಚರ್ತುವೇಧ ಪಾರಾಯನ ಪ್ರಸಾದ ವಿತರಣೆಯನ್ನು ಇಲ್ಲಿನ ಪೂಜಾರ ಮನೆತನದ ಮಹೇಶ ಪೂಜಾರ ಮಾಲತೇಶಭಟ್ಟ, ವಾಸಣ್ಣಭಟ್ಟ, ವಿದ್ಯಾನಂದ, ನಾಗೇಶ, ಅಭಿಷೇಕ, ಸಜೀವ, ಶ್ಯಾಮಣ್ಣ, ಕಿರಣ, ಉದಯ, ಚಿದಂಬರ, ಅಪ್ಪಣ್ಣ, ಶ್ರೀಕಾಂತ, ರಮೇಶ ಸೇರಿದಂತೆ ಪೂಜಾರ ಬಂಧುಗಳು ಅರ್ಚಕರು ನೆರವೇರಿಸಿದರು.
ಎಲ್ಲವೂ ಭಣಭಣ
ಪ್ರತಿವರ್ಷ ಅಂದಾಜು ಬನಶಂಕರಿ ದೇವಿ ಮಹಾರಥೋತ್ಸವಕ್ಕೆ ಲಕ್ಷಕ್ಕೂ ಅಧಿಕ ಜನರು ಜಮಾನಿಸಿ ದೇವಿ ಕೃಪೆಗೆ ಪಾತ್ರರಾಗುತ್ತಿದ್ದರು. ಆದರೆ, ಸಾರಿ ಮಾತ್ರ ರಥ ಬೀದಿ ಭಕ್ತರು ಇಲ್ಲದೇ ಭಣಗುಡುತ್ತಿತ್ತು. ಇನ್ನೂ ಚಿಕ್ಕಮಕ್ಕಳಿಂದ ಮುದುಕರವರೆಗೂ, ಗೃಹ ಅಲಂಕಾರಿಕ ವಸ್ತು ಸೇರಿದಂತೆ ತರೇವಾರಿ ಅಂಗಡಿಗಳು ಪ್ರತಿವರ್ಷ ಕಾಣುತ್ತಿದ್ದವರು. ಆದರೆ, ಈ ಬಾರಿ ಮಾತ್ರ ಅವು ಇಲ್ಲದೇ ಇಡೀ ರಸ್ತೆ ನಿಶಬ್ಧವಾಗಿತ್ತು. ಇನ್ನೂ ಗುಡಾರ(ಟೆಂಟ್), ಮಕ್ಕಳ ಕಲರವ, ಆ ಗೀಜುಗುಡುವ ಜನಸಂದಣಿ ಇಲ್ಲದೇ ಇಡೀ ಬನಶಂಕರಿಯೇ ಮೌನ ತಾಳಿತು. ಹೀಗಾಗಿ ಇದೇಲ್ಲದಕ್ಕೂ ಕಾರಣವಾದ ಹೆಮ್ಮಾರಿ ಕೊರೋನಾಕ್ಕೆ ಹಿಡಿಶಾಪ ಹಾಕುತ್ತಾ ಮರಳಿ ಹೋಗುತ್ತಿದ್ದ ದೃಶ್ಯ ಎಲ್ಲೆಡೆ ಕಂಡು ಬಂದಿತು.
ಪ್ರತಿವರ್ಷ ಬನಶಂಕರಿ ಜಾತ್ರ ಬಾಳ್ ಸಂಭ್ರಮದಿಂದ ನಡಿತಿತ್ತ. ಆದರೆ, ಈ ಬಾರಿ ಕೊರೋನಾ ನೆಪಹೇಳಿ ದರ್ಶನ ಬಂದ್ ಮಾಡಿದ್ದಾರೆ. ಜಾತ್ರಿಗೆ ಕಳೆಯೇ ಇಲ್ಲವಾಗಿದೆ. ಹೀಗಾಗಿ ದೇವಿ ದರ್ಶನ ಇಲ್ಲದೇ ಹೋಗಬೇಕಾಗಿದೆ ಎಂದು -ಬನಶಂಕರಿ ದೇವಿ ಭಕ್ತ ಹೇಳಿದ್ದಾರೆ.