Bagalkote Floods: ಮಳೆ ಹಾನಿ ಪರಿಶೀಲನೆ ನಡೆಸಿದ ಸಿದ್ದರಾಮಯ್ಯ
ಬಾಗಲಕೋಟೆ ಜಿಲ್ಲೆಯ ಬಾದಾಮಿ ಮತಕ್ಷೇತ್ರ ವ್ಯಾಪ್ತಿಯಲ್ಲಿ ನಿರಂತರ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳನ್ನು ವೀಕ್ಷಿಸಿದ ಕ್ಷೇತ್ರದ ಶಾಸಕರೂ ಆಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಗತ್ಯ ಕ್ರಮ ಕೈಗೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬಾಗಲಕೋಟೆ (ಸೆ.11) : ಬಾಗಲಕೋಟೆ ಜಿಲ್ಲೆಯ ಬಾದಾಮಿ ಮತಕ್ಷೇತ್ರ ವ್ಯಾಪ್ತಿಯಲ್ಲಿ ನಿರಂತರ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳನ್ನು ವೀಕ್ಷಿಸಿದ ಕ್ಷೇತ್ರದ ಶಾಸಕರೂ ಆಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಗತ್ಯ ಕ್ರಮ ಕೈಗೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು. ಬಾದಾಮಿ ತಾಲೂಕಿನ ಕೊನೆಯ ಗ್ರಾಮ ಗೋವಿನಕೊಪ್ಪ ಚಿಕ್ಕ ಸೇತುವೆ ಮಲಪ್ರಭಾ ನದಿಯಿಂದ ಜಲಾವೃತವಾಗಿರುವುದನ್ನು ವೀಕ್ಷಿಸಿದ ಸಿದ್ದರಾಮಯ್ಯ ನಂತರ ಜಲಾವೃತವಾಗಿರುವ ಬೆಳೆಗಳ ಬಗ್ಗೆಯೂ ಸಂಬಂಧಿಸಿದ ಅಧಿಕಾರಿಗಳಿಂದ ಮಾಹಿತಿ ಪಡೆದು ಪರಿಹಾರ ನೀಡಲು ಸೂಚಿಸಿದರು. ನಂತರ ಮಳೆಯಿಂದ ತೊಂದರೆಗೊಳಗಾದ ಗೋವಿನಕೊಪ್ಪ, ಹೆಬ್ಬಳ್ಳಿ ಗ್ರಾಮಗಳಿಗೆ ಭೇಟಿ ನೀಡಿ ಆಗಿರುವ ಹಾನಿ ಹಾಗೂ ಗ್ರಾಮಸ್ಥರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಮಾಹಿತಿ ಪಡೆದುಕೊಂಡರು.
Siddaramaiah Badami Tour ಮತ್ತೆ ಬಾದಾಮಿಯಿಂದ ಸ್ಫರ್ಧಿಸಲು ಹಿಂದೆ ಸರಿಯುತ್ತಾರಾ ಸಿದ್ದು?
ಪೇರು ಹಣ್ಣು ತಿಂದ ಸಿದ್ದು: ಹುಬ್ಬಳ್ಳಿ(HUbballi) ಮಾರ್ಗವಾಗಿ ಬಾದಾಮಿ((Badami) ಮತಕ್ಷೇತ್ರಕ್ಕೆ ಬಂದಿಳಿದ ಸಿದ್ದರಾಮಯ್ಯ(Siddaramaiah) ಅವರಿಗೆ ಜಿಲ್ಲೆಯ ಗೋವಿನಕೊಪ್ಪ(Govinakoppa)ದ ಬಳಿ ಅಭಿಮಾನಿಗಳು ಹೂವಿನ ಹಾರ ನೀಡಿ ಸ್ವಾಗತಿಸಿದರು. ಹುಬ್ಬಳ್ಳಿ-ಸೋಲ್ಲಾಪುರ(Hubballi-Sollapur) ರಸ್ತೆಯ ಹೆದ್ದಾರಿ ಮಾರ್ಗದಲ್ಲಿ ಸಿದ್ದರಾಮಯ್ಯ ಅವರು ಪಕ್ಕದಲ್ಲಿ ಮಾರಾಟ ಮಾಡುತ್ತಿದ್ದ ಪೇರು ಹಣ್ಣನ್ನು ಪಡೆದು ತಮ್ಮ ಕಾರಿನಲ್ಲಿ ಹಣ್ಣನ್ನು ತಿನ್ನುತ್ತಲೇ ಸಾಗಿದರು. ಈ ಮಾರ್ಗದಲ್ಲಿ ನಿತ್ಯ ನೂರಾರು ಕುಟುಂಬಗಳು ಪೇರು ಹಣ್ಣನ್ನು ಮಾರಿ ಬದುಕು ಕಟ್ಟಿಕೊಳ್ಳುತ್ತಾರೆ ಎಂಬುದು ಮತ್ತೊಂದು ವಿಶೇಷ.
ನಾನು ಹೇಳಿದರೆ ಡೊಳ್ಳು ಕೊಡುವುದಿಲ್ಲಯ್ಯ: ಮತಕ್ಷೇತ್ರದ ಪ್ರವಾಸದಲ್ಲಿರುವ ಸಿದ್ದರಾಮಯ್ಯ ಅವರಿಗೆ ಅಭಿಮಾನಿಗಳು ಮಾರ್ಗದಲ್ಲಿ ತಡೆದು ಡೊಳ್ಳು ಕೊಡಿಸುವಂತೆ ಅಧಿಕಾರಿಗಳಿಗೆ ಹೇಳಿ ಎಂದು ಮನವಿ ಮಾಡಿಕೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ಸಿದ್ದರಾಮಯ್ಯ ನಿಮಗೆ ಡೊಳ್ಳು ಬೇಕಾ? ಆದರೆ, ನಾನು ಹೇಳಿದರೆ ನಿಮಗೆ ಅವರು ಡೊಳ್ಳು ಕೊಡುವುದಿಲ್ಲಯ್ಯಾ. ತಮಗೆ ಯಾರಿಗೆ ಬೇಕೋ ಅವರಿಗೆ ಕೊಡುತ್ತಾರೆ. ಇರಲಿ ನಾನು ನಿಮಗೆ ಡೊಳ್ಳು ಕೊಡುವಂತೆ ಪತ್ರ ಬರೆಯುತ್ತೇನೆ ನೋಡೋಣ ಎಂದು ಹೇಳಿದರು.
ಮಹಾರಾಷ್ಟ್ರದ ಚಾಳಿಗೆ ಮೊದ್ಲು ಮೂಗುದಾರ ಹಾಕ್ರಿ: ಮಹಿಳೆಯ ಮಾತಿಗೆ ದಂಗಾದ ಸಿದ್ದರಾಮಯ್ಯ..!
ಬಿಜೆಪಿಯ ಗೊಡ್ಡು ಬೆದರಿಕೆಗೆ ಅಂಜುವುದಿಲ್ಲ: ಅರ್ಕಾವತಿ ಪ್ರಕರಣ ಸೇರಿದಂತೆ ಇತರೆ ವಿಷಯಗಳನ್ನು ತೆಗೆದರೆ ಕಳ್ಳ-ಸುಳ್ಳ ಯಾರು ಎಂಬುವುದು ಗೊತ್ತಾಗಲಿದೆ ಎಂಬ ಸಿ.ಟಿ.ರವಿ ಹೇಳಿಕೆಗೆ ತಿರುಗೇಟು ನೀಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ಅವರ ಗೊಡ್ಡ ಬೆದರಿಕೆಗಳಿಗೆ ಹೆದರುವುದಿಲ್ಲ ಎಂದಿದ್ದಾರೆ. ಬಾದಾಮಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಷ್ಟುದಿನ ಯಾಕೆ ಇಂತಹ ಪ್ರಕರನಗಳಿಂದ ಬಿಜೆಪಿ ಅವರು ಸುಮ್ಮನಿದ್ದರು ಎಂದು ಪ್ರಶ್ನಿಸಿರಲ್ಲದೇ 3 ವರ್ಷಗಳಿಂದ ಇವರದೆ ಸರ್ಕಾರ ಇತ್ತಲ್ಲ. ಯಾಕೆ ಸುಮ್ಮನಿದ್ದರು ಎಂದು ಕೇಳಿದರಲ್ಲದೇ, ಬಿಜೆಪಿ ಅವರಿಗೆ ನನ್ನ ಕಂಡರೆ ಭಯ. ಹೀಗಾಗಿ ಹೀಗೆ ಹೇಳುತ್ತಿದ್ದಾರೆ ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದರು.
ಸುಧಾಕರ ಎಲ್ಲಿ ನನ್ನ ಮಾತು ಕೇಳ್ತಾನೆ: ಬಾದಾಮಿ ತಾಲೂಕಿನ ಕಿತ್ತಲಿ ಗ್ರಾಮದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸುವ ಸಂದರ್ಭದಲ್ಲಿ ಗ್ರಾಮಸ್ಥರು ಗ್ರಾಮಕ್ಕೆ ಉಪ ಆರೋಗ್ಯ ಕೇಂದ್ರವನ್ನು ಮಾಡಿಸಿಕೊಡಿ ಎಂದು ಮನವಿ ಸಲ್ಲಿಸಿದರಲ್ಲದೇ ಸಚಿವ ಸುಧಾಕರ ನಿಮ್ಮ ಮಾತು ಕೇಳುತ್ತಾರೆ ಎಂದು ಹೇಳಿದಾಗ ನಗುತ್ತಲೇ ಉತ್ತರಿಸಿದ ಸಿದ್ದರಾಮಯ್ಯ ಸುಧಾಕರ ಮಹಾ ಕಳ್ಳ-ಸುಳ್ಳು ಅವನೆಲ್ಲಿ ನನ್ನ ಮಾತು ಕೇಳುತ್ತಾನೆ ಎಂದು ಹೇಳಿ ಅವನನ್ನು ಎಂಎಲ್‌ಎ ಮಾಡಿದ್ದೆ ನಾನು. ಈಗ ಮಂತ್ರಿಯಾಗಲು ಅಲ್ಲಿ ಹೋಗಿದ್ದಾನೆ ಎಂದು ವ್ಯಂಗ್ಯವಾಡಿದರು.
ನಾವೇ ಅಧಿಕಾರಕ್ಕೆ ಬರುತ್ತೇವೆ: ಕಿತ್ತಲಿ ಗ್ರಾಮದಲ್ಲಿ ಮನೆ ಮಂಜುರು ಮಾಡಿಕೊಡುವಂತೆ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ ಗ್ರಾಮಸ್ಥರಿಗೆ ಈ ಸರ್ಕಾರ ಏನು ಮಾಡುವುದಿಲ್ಲ. ಇನ್ನು ಆರೇಳು ತಿಂಗಳು ಕಳೆದು ಹೋದರೆ ಮತ್ತೆ ನಾವೇ ಅಧಿಕಾರಕ್ಕೆ ಬರುತ್ತೇವೆ. ಆಗ ನಿಮ್ಮ ಕೆಲಸ ನಾವೇ ಮಾಡುತ್ತೇವೆ ಎಂದ ಸಿದ್ದರಾಮಯ್ಯ ಅವರಿಗೆ ಅಭಿಮಾನಿಯೊಬ್ಬ ನೀವು ಮುಖ್ಯಮಂತ್ರಿಯಾದರೆ ಕಿತ್ತಲಿ ಗ್ರಾಮವನ್ನು ಪೂರ್ಣವಾಗಿ ಸ್ಥಳಾಂತರ ಮಾಡಿ ಎಂದು ಹೇಳಿದ ಘಟನೆಯೂ ನಡೆಯಿತು.