Siddaramaiah Badami Tour ಮತ್ತೆ ಬಾದಾಮಿಯಿಂದ ಸ್ಫರ್ಧಿಸಲು ಹಿಂದೆ ಸರಿಯುತ್ತಾರಾ ಸಿದ್ದು?
- ಎರಡು ದಿನಗಳ ಸ್ವಕ್ಷೇತ್ರದ ಪ್ರವಾಸದಲ್ಲಿ ಬಾದಾಮಿ ಜನರನ್ನ ಹೃದಯಸ್ಪರ್ಶಿಯಾಗಿ ಅಭಿನಂದಿಸಿದ ಸಿದ್ದರಾಮಯ್ಯ
- ನಾನು ಬರೀ ಶಾಸಕ ಅಲ್ಲಾ, ವಿಪಕ್ಷ ನಾಯಕ ರಾಜ್ಯ ಸುತ್ತಬೇಕು ಎಂದ ಸಿದ್ದು
- ಸಿದ್ದು ಎದುರಲ್ಲೇ ಕಾರ್ಯಕರ್ತರ ಎರಡು ಬಣಗಳ ಮಧ್ಯೆ ವಾಕ್ಸಮರ
- ಬಾದಾಮಿಯಲ್ಲಿನ ಬೆಳವಣಿಗೆಯಿಂದ ಹಿಂದೆ ಸರಿಯೋ ಸಾಧ್ಯತೆ
ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷಿಯಾನೆಟ್ ಸುವರ್ಣನ್ಯೂಸ್
ಬಾಗಲಕೋಟೆ(ಎ.7): ವಿಧಾನ ಸಭೆ ವಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಈ ಬಾರಿ ಮತ್ತೆ ಬಾದಾಮಿಯಿಂದ ಸ್ಪರ್ಧೆ ಮಾಡದೆ ಹಿಂದೆ ಸರಿಯುತ್ತಿದ್ದಾರಾ ಎಂಬ ಶಂಕೆ ಮೂಡಲಾರಂಭಿಸಿದೆ. ಕಳೆದ ಎರಡು ಬಾರಿ ಸ್ವಕ್ಷೇತ್ರ ಬಾದಾಮಿ (Badami) ಪ್ರವಾಸದಲ್ಲಿ ಉಂಟಾಗಿರೋ ವಿವಿಧ ಬೆಳವಣಿಗೆಗಳಿಂದ ಸಿದ್ದರಾಮಯ್ಯನವರಿಗೆ ಇರುಸು ಮುರುಸು ಉಂಟಾಗಿದ್ದು, ಹೀಗಾಗಿ ಬಾದಾಮಿಯಿಂದ ಸ್ಪರ್ಧೆ ಮಾಡೋದು ಅನುಮಾನ ಮೂಡತೊಡಗಿದೆ.
ವಿಧಾನ ಸಭೆ ಅಧಿವೇಶನ ಮುಗಿದ ಬೆನ್ನಲ್ಲೆ ಎರಡು ದಿನಗಳ ಕಾಲ ಸ್ವಕ್ಷೇತ್ರ ಬಾದಾಮಿ ಪ್ರವಾಸ ದಲ್ಲಿದ್ದ ಸಿದ್ದರಾಮಯ್ಯ , ವಿವಿಧ ಅಭಿವೃದ್ದಿ ಕಾಮಗಾರಿಗಳು ಹಾಗೂ ಶಾಲೆಯ ಕಟ್ಟಡ ಉದ್ಘಾಟನೆ ಸೇರಿದಂತೆ ವಿವಿಧ ಸಮಾರಂಭ ದಲ್ಲಿ ಭಾಗವಹಿಸಿದರಲ್ಲದೆ, ಸಾರ್ವಜನಿಕರ ಅಹವಾಲು ಸ್ವೀಕಾರ ಮಾಡಿದರು. ಈ ಸಂದರ್ಭದಲ್ಲಿ ಹೋದ ಕಡೆಗೆಲ್ಲಾ ಜನರಿಗೆ ಕೈಮುಗಿದು, ಅವರು ತಮ್ಮನ್ನು ಗೆಲ್ಲಿಸಿದ್ದಕ್ಕೆ ಕೃತಜ್ಞತೆ ಸಲ್ಲಿಸಿ, ಕೈಮುಗಿದು ಭಾಷಣ ಮಾಡುವ ಪರಿ ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ.
ಇನ್ನು ಬಾದಾಮಿಯ ಪುರಸಭೆ ಕಾರ್ಯಕ್ರಮವೊಂದರಲ್ಲಿ ಭಾಗಿಯಾದ ವೇಳೆ, ಮತ್ತೆ ಬಾದಾಮಿಯಿಂದಲೇ ಸ್ಪರ್ಧೆ ಮಾಡುವಂತೆ ಅಭಿಮಾನಿಗಳ ಮನವಿಗೆ ಸಿದ್ದು ಪ್ರತಿಕ್ರಿಯೆ ನೀಡಿ, ನೋಡೋಣ, ಎಲೆಕ್ಷನ್ ಇನ್ನೂ ಒಂದು ವರ್ಷ ಇದೆ. ಕೂಸು ಹುಟ್ಟುವ ಮುನ್ನವೇ ಕುಲಾಯಿ ಹಾಕೋಳ್ಳೋಕೆ ಆಗುತ್ತಾ ಎಂದರು. ಬಾದಾಮಿ ದೂರ ಅನ್ನೋದು ಬಿಟ್ಟರೆ, ಬಾದಾಮಿ ಜನ ಬಹಳ ಒಳ್ಳೆಯವರು. ಕೇವಲ ಶಾಸಕನಾಗಿದ್ದರೆ ವಾರದಲ್ಲಿ ಎರಡು ದಿನ ಬಂದು ಜನರ ಸಮಸ್ಯೆ ಕೇಳಬಹುದಾಗಿತ್ತು.
Dharwad ಕೆಐಎಡಿಬಿ ಇಲಾಖೆಯಿಂದ ಭೂಸ್ವಾಧೀನ, ಗ್ರಾಮಸ್ಥರ ಆಕ್ರೋಶ
ಆದರೆ ನಾನು ಬರೀ ಎಂಎಲ್ ಎ ಅಲ್ಲ, ವಿಧಾನ ಸಭೆ ವಿಪಕ್ಷ ನಾಯಕ. ಹೀಗಾಗಿ ಬೇರೆ ಬೇರೆ ಕಡೆ ಹೋಗಬೇಕಾಗುತ್ತೆ, ಟೂರ್ ಮಾಡಬೇಕಾಗುತ್ತೆ. ಹೀಗಾಗಿ ಸಮಸ್ಯೆಗಳಿವೆ. ಈ ಮಧ್ಯೆ ಅಸೆಂಬ್ಲಿ ಇತ್ತು, ಪಾದಯಾತ್ರೆ ಇತ್ತು, ಕಳೆದ ತಿಂಗಳಿಂದ ಬರೋಕಾಗ್ಲಿಲ್ಲ. ನಮ್ಮ ಸಮಸ್ಯೆ ಇದೆ ಅಂತ ಹೇಳಿದರೆ ಕ್ಷೇತ್ರದ ಜನ ಕೇಳ್ತಾರಾ,ನಾನೊಬ್ಬ ಶಾಸಕನಾಗಿ ನನಗೂ ಜವಾಬ್ದಾರಿ ಇದೆ, ನನಗೂ ತೃಪ್ತಿ ಆಗಬೇಕಲ್ಲ ಎಂದು ಸಿದ್ದರಾಮಯ್ಯನವರು ಹೇಳಿದರು. ಈ ಕ್ಷೇತ್ರದ ಜನ ಬಹಳ ಪ್ರೀತಿ, ಅಭಿಮಾನದಿಂದ ನೋಡಿಕೊಂಡಿದ್ದಾರೆ, ಸ್ಪರ್ಧೆ ಬಗ್ಗೆ ನೋಡೋಣ ಎಂದು ಹೇಳಿ ಸುಮ್ಮನಾದರು.
ಮಾಜಿ ಸಿಎಂ ಸಿದ್ದರಾಮಯ್ಯ ಎದುರಲ್ಲೆ ನಡೆಯಿತು, ಎರಡು ಬಣಗಳ ಮಧ್ಯೆ ಗಲಾಟೆ: ಮಾಜಿ ಸಿಎಂ ಸಿದ್ದರಾಮಯ್ಯ ಎರಡನೇ ದಿನ ಖಾಸಗಿ ರೆಸಾರ್ಟ್‌ನಲಿ ಜನರಿಂದ ಅಹವಾಲು ಸ್ವೀಕರಿಸೋ ವೇಳೆ ಅಭಿಮಾನಿಗಳ ಎರಡು ಗುಂಪಿನ ಮಧ್ಯೆ ವೈಮನಸ್ಸು ಉಂಟಾಗಿ ವಾಗ್ವಾದ ನಡೆಯಿತು. ಹೆಸ್ಕಾಂ ಸೆಕ್ಷನ್ ಆಫೀಸರ್ ಕೊನೇರಿ ವಿರುದ್ಧ ಕೆಲವರು ದೂರು ಸಲ್ಲಿಸಿದಾಗ ಇನ್ನೂ ಕೆಲವರು ವಿರೋಧ ವ್ಯಕ್ತಪಡಿಸಿದರು. ಈ ವೇಳೆ ಪರ ಹಾಗೂ ವಿರೋಧ ಕಾಯ೯ಕತ೯ರ ಮಧ್ಯೆ ವಾಕ್ಸಮರ ನಡೆಯಿತು. ಗಲಾಟೆ ನಡೆದು ಕೈ ಕೈ ಮಿಲಾಯಿಸೋ ಹಂತಕ್ಕೆ ತಲುಪಿತು. ಬಳಿಕ ಪೋಲಿಸರು ಮದ್ಯಸ್ಥಿಕೆ ವಹಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಇನ್ನು ಕಳೆದ ಬಾರಿ ಬಾದಾಮಿ ಪ್ರವಾಸದಲ್ಲಿದ್ದಾಗ ಸ್ವತಃ ಮಾಜಿ ಸಚಿವ ಬಿ.ಬಿ.ಚಿಮ್ಮನಕಟ್ಟಿ ವೇದಿಕೆಯಲ್ಲೇ ಅಸಮಾಧಾನ ಹೊರ ಹಾಕಿದ್ದರು. ಹೀಗೆ ಕಳೆದ ಎರಡು ಬಾರಿಯ ಪ್ರವಾಸದಲ್ಲಿ ನಡೆದ ಬೆಳವಣಿಗೆಗಳು ಬಾದಾಮಿಯಿಂದ ಮತ್ತೆ ಸ್ಪರ್ಧೆ ಮಾಡಬೇಕೋ ಅಥವಾ ಬೇಡವೋ ಅನ್ನೋ ಯೋಚನೆಯನ್ನು ಸಿದ್ದರಾಮಯ್ಯ ಮಾಡುತ್ತಿದ್ದಾರಂತೆ.
Costal Fishing Boats ಡೀಸೆಲ್ ದರ ಏರಿಕೆ , ಮೀನೂಟ ಪ್ರಿಯರ ಕಣ್ಣೀರು!
ಸಚಿವ ಈಶ್ವರಪ್ಪ ವಿರುದ್ಧ ಗರಂ, ಸಿಎಂ ಇಬ್ರಾಹಿಂಗೆ ಡೋಂಟ್ ಕೇರ್ ಎಂದ ಸಿದ್ದರಾಮಯ್ಯ: ಇನ್ನು ಬಾದಾಮಿ ಪ್ರವಾಸದಲ್ಲಿದ್ದ ಸಿದ್ದರಾಮಯ್ಯ ಮಾಧ್ಯಮಗಳೊಂದಿಗೆ ಮಾತನಾಡಲ್ಲ ಎಂದು ಹೇಳುತ್ತಾ ಗರಂ ಆದ ಘಟನೆ ಸಹ ನಡೆಯಿತು. ಮಾಜಿ ಸಿಎಂ ಸಿದ್ದರಾಮಯ್ಯ ಅಲಖೈದಾ ಮುಖಂಡರಾಗಿದ್ರಾ ಎಂಬ ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯೆ ಕೇಳಿದ್ದಕ್ಕೆ ಸಿದ್ದು ಗರಂ ಆಗಿದ್ರು, ನಾನು ಈಶ್ವರಪ್ಪನ ಬಗ್ಗೆ ರಿಯಾಕ್ಟ್ ಮಾಡಲ್ಲ, ಮತ್ತೇ ಮತ್ತೇ ಬಂದು ಕೇಳಿದರೆ ಏನು ಹೇಳಲಿ. ವೈ ಯೂ ಆರ್ ಆಸ್ಕಿಂಗ್, ಐ ಎಮ್ ನಾಟ್ ರಿಯಾಕ್ಟಿಂಗ್ ಎಂದು ಹೇಳಿ ಗರಂ ಆದರು.
ಇದೇ ಸಮಯದಲ್ಲಿ ಮಾತನಾಡಿದ ಅವರು, ಎಂ ಇಬ್ರಾಹಿಂ ಅವರು ರೋಷನ್ ಬೇಗ್ ಮತ್ತು ಆತನ ಪುತ್ರನನ್ನ ಕರೆ ತಂದು ಹೆಬ್ಬಾಳ , ಶಿವಾಜಿನಗರಕ್ಕೆ ಸ್ಪಧೆ೯ ಮಾಡಿಸುತ್ತಿರೋ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ರೋಷನ್ ಬೇಗ್ ಈಸ್ ನಾಟ್ ಇನ್ ಅವರ್ ಕಾಂಗ್ರೆಸ್ ಪಕ್ಷ. ಅದರ ಬಗ್ಗೆ ಮಾತನಾಡಿ ಏನು ಪ್ರಯೋಜನ, ಹೀ ಈಜ್ ನಾಟ್ ಇನ್ ಅವರ್ ಪಾರ್ಟಿ, ಇಬ್ರಾಹಿಂ ನಾಟ್ ಇನ್ ಅವರ್ ಪಾರ್ಟಿ, ನಾವ್ಯಾಕೆ ಅವರ ಬಗ್ಗೆ ಕಮೆಂಟ್ ಮಾಡಬೇಕು ಎಂದು, ಅವರು ಎಲ್ಲಿಯಾದ್ರೂ ನಿಂತುಕೊಳ್ಳಲಿ. ಈ ಬಗ್ಗೆ ಕೊನೆಗೆ ಜನರೇ ತೀರ್ಮಾನ ಮಾಡುತ್ತಾರೆ ಎಂದರು.
ಸಕ್ಷೇತ್ರದಲ್ಲಿ ಸಿದ್ದರಾಮಯ್ಯಗೆ ಅಭಿಮಾನಿಯಿಂದ ಕುರಿ ಗಿಪ್ಟ್: ಬಾದಾಮಿಯಲ್ಲಿ ಅಭಿಮಾನಿ ಯೊಬ್ಬರು, ಸಿದ್ದರಾಮಯ್ಯನವರಿಗೆ ಕುರಿ ಗಿಫ್ಟ್ ನೀಡಿ ಗಮನ ಸೆಳೆದರು. ಗುರುಸಂಗಪ್ಪ ಕೊಡಲಿ ಎಂಬುವವರು, ಸಿದ್ದರಾಮಯ್ಯ ಅವರಿಗೆ ಕುರಿ ಗಿಫ್ಟ್ ನೀಡಿದರು. ಈ ಸಂದರ್ಭದಲ್ಲಿ ಇದು ಗಂಡು, ಹೆಣ್ಣೋ ಎಂದು ಕೇಳಿದ ಸಿದ್ದರಾಮಯ್ಯ, ಈ ಕುರಿ ನನಗೆ ಕೂಡಬೇಕು ಎಂದು ಹಾಸ್ಯ ಚಟಾಕಿ ಹಾರಿಸಿದರು. ನಂತರ ಕೆಂದೂರ ಕೆರೆಗೆ ನೀರು ಹಾಯಿಸುವ ಯೋಜನೆಗೆ ಚಾಲನೆ ನೀಡಿ ವಾಪಸ್ಸು ಹುಬ್ಬಳ್ಳಿ ಮೂಲಕ ಬೆಂಗಳೂರಿಗೆ ತೆರಳಿದರು.