ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಮಂಜುನಾಥ ನಗರದಲ್ಲಿ ಕರುನಾಡ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಾರಿಟಬಲ್ ಟ್ರಸ್ವ್ ವತಿಯಿಂದ ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನಾವರಣ ಮಾಡಿದರು.
ಪೀಣ್ಯ ದಾಸರಹಳ್ಳಿ (ಡಿ.12): ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಮಂಜುನಾಥ ನಗರದಲ್ಲಿ ಕರುನಾಡ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಾರಿಟಬಲ್ ಟ್ರಸ್ವ್ ವತಿಯಿಂದ ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನಾವರಣ ಮಾಡಿದರು. ಈ ವೇಳೆ ಸಿದ್ದರಾಮಯ್ಯನವರಿಗೆ ಜೋಳದ ದೊಡ್ಡಹಾರವನ್ನು ಹಾಕಿ ಕ್ಷೇತ್ರಕ್ಕೆ ಬರಮಾಡಿಕೊಳ್ಳಲಾಯಿತು. ಬಳಿಕ ಕಳಸ ಮೆರವಣಿಗೆ ಮೂಲಕ ಸಂಗೊಳ್ಳಿ ರಾಯಣ್ಣ ಪ್ರತಿಮೆ ಹತ್ತಿರಕ್ಕೆ ಕರೆತರಲಾಯಿತು.
ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಪ್ರತಿಮೆ ನಿರ್ಮಾಣ ಮಾಡಿದರೆ ಸಾಲದು. ಅವರ ತತ್ವ, ಆದರ್ಶಗಳನ್ನು ಮೈಗೂಡಿಸಿಕೊಂಡು ಅವರಂತೆಯೇ ದೇಶಪ್ರೇಮಿಯಾದಾಗ ಮಾತ್ರ ಸಾರ್ಥಕ ಭಾವ ಮೂಡುತ್ತದೆ. ಪ್ರತೀ ಮನೆಯಲ್ಲಿ ಒಬ್ಬ ದೇಶಪ್ರೇಮಿ ಹುಟ್ಟಬೇಕು ಎಂಬುದು ರಾಯಣ್ಣ ಬಯಕೆ ಆಗಿತ್ತು. ನಾಡಿನ ನೆಲ, ಜಲ, ಭಾಷೆಯ ರಕ್ಷಣೆಗೆ ನಾವೆಲ್ಲ ರಾಯಣ್ಣ ಅವರಂತೆ ಸಿದ್ಧರಾಗಬೇಕು ಎಂಬ ಕಾರಣಕ್ಕೆ ಇಂಥಾ ಮಹಾನ್ ವ್ಯಕ್ತಿಗಳ ಪ್ರತಿಮೆ ಸ್ಥಾಪನೆ ಮಾಡುವಲಾಗಿದೆ ಎಂದರು.
ರಾಜ್ಯದ ಎಸ್‌ಸಿ, ಎಸ್‌ಟಿ ಮೀಸಲಿಗೆ ಕೇಂದ್ರ ಸರ್ಕಾರದಿಂದ ಕೊಕ್ಕೆ: ಸಿದ್ಧರಾಮಯ್ಯ
ಇನ್ನು ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಡಾ.ನಾಗಲಕ್ಷ್ಮಿ ಮಾತನಾಡಿ, ರಾಜ್ಯದಲ್ಲಿ ಭ್ರಷ್ಟಾಚಾರ ಕೋಮುಗಲಭೆ ವಿರುದ್ಧ ತೊಡೆ ತಟ್ಟಿನಿಂತಿರೋದು ನಮ್ಮ ಸಿದ್ದರಾಮಣ್ಣ. ಭ್ರಷ್ಟಾಚಾರದ ವಿರುದ್ಧ ಹೋರಾಡಲು ಸಿದ್ದರಾಮಯ್ಯ ಅವರಿಗೆ ಬೆನ್ನೆಲುಬಾಗಿ ನಿಲ್ಲಲು ಮನೆ ಮನೆಯಲ್ಲೂ ರಾಯಣ್ಣ, ಚನ್ನಮ್ಮ ಹುಟ್ಟಿಹೋರಾಟ ಮಾಡಬೇಕು. ನಾನು ದಾಸರಹಳ್ಳಿಯಲ್ಲಿ ಶಾಸಕಿಯಾಗಿ ಆಯ್ಕೆ ಆಗಲಿ ಬಿಡಲಿ. ಮುಂದಿನ ಎರಡು ವರ್ಷದಲ್ಲಿ ದಾಸರಹಳ್ಳಿ ಕ್ಷೇತ್ರದಲ್ಲಿ ನಾನು ಸೈನಿಕ ಶಾಲೆ ನಿರ್ಮಾಣ ಮಾಡುತ್ತೇನೆ ಎಂದು ಘೋಷಿಸಿದರು.
ಶಾಸಕ ಅರ್.ಮಂಜುನಾಥ್ ಮಾತನಾಡಿ, ಸರಕಾರದಿಂದ ಜಾಗ ನೀಡದಿದ್ದರೆ ಸಂಘದವರು ಖಾಸಗಿಯಾಗಿ ಜಾಗ ಖರೀದಿಸಿದರೆ ಅ ಜಾಗಕ್ಕೆ ತಗಲುವ ವೆಚ್ಚವನ್ನು ನಾನು ನೀಡುತ್ತೇನೆ ಎಂದು ಹೇಳಿದರು. ಸಂಗೊಳ್ಳಿ ರಾಯಣ್ಣ ಒಂದು ಸಮುದಾಯಕ್ಕೆ ಸೇರಿದವರಲ್ಲ. ಅವರು ಎಲ್ಲಾ ಸಮುದಾಯಕ್ಕೆ ಸೇರಿದವರು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಚ್.ಎಂ ರೇವಣ್ಣ, ಮಾಜಿ ಶಾಸಕ ಎಸ್.ಮುನಿರಾಜು, ಗೀತಾಶಿವರಾಂ, ಕೆ.ಸಿ.ಅಶೋಕ್, ಉಮಾದೇವಿ ನಾಗರಾಜ್, ಎಂ.ಜಗದೀಶ್, ಬಿ.ಎಂ.ಜಗದೀಶ್, ಎಬಿಬಿ ಮಂಜುನಾಥ್, ಟ್ರಸ್ವ್ ಅಧ್ಯಕ್ಷ ಹರೀಶ್ ಪಾರ್ಥ, ಎಂ.ಮುನೇಗೌಡ, ಗೋವಿಂದರಾಜು ಇದ್ದರು.
ಸಿದ್ದರಾಮಯ್ಯ ಬಳಿ ಕಾಂಗ್ರೆಸ್ ತತ್ವ ಸಿದ್ದಾಂತವೇ ಇಲ್ಲ: ಸಚಿವ ಕಾರಜೋಳ ವ್ಯಂಗ್ಯ
ಒಂದೇ ನಿಮಿಷಕ್ಕೆ ಭಾಷಣ ಮೊಟಕುಗೊಳಿಸಿದ ಗೀತಾ: ಕಾರ್ಯಕ್ರಮ ಶುರುವಾಗುತ್ತಿದಂತೆ ಮಾತನಾಡಲು ಮೈಕ್ ತೆಗೆದುಕೊಂಡ ಗೀತಾ ಶಿವರಾಂ ಅವರಿಗೆ ರಾಜಕೀಯ ಮುಖಂಡರೊಬ್ಬರು ಮಾತನಾಡಲು ಅವಕಾಶ ನೀಡಬೇಡಿ ಎಂದಿದರು. ಅದನ್ನೇ ಅಸ್ತ್ರವಾಗಿ ಬಳಸಿಕೊಂಡ ಗೀತಾ ಶಿವರಾಂ ಒಂದೇ ನಿಮಿಷಕ್ಕೆ ಭಾಷಣ ಮೊಟಕುಗೊಳಿಸಿ ವೇದಿಕೆಯಿಂದ ತಾರಾತುರಿಯಲ್ಲಿ ಹೊರನಡೆದ ಪ್ರಸಂಗ ನಡೆಯಿತು. ಈ ವೇಳೆಯಲ್ಲಿ ‘ನಾಗಲಕ್ಷ್ಮಿ ಸಿದ್ದರಾಮಯ್ಯ ಬಣ, ಗೀತಾ ಶಿವರಾಂ ಡಿ.ಕೆ. ಶಿವಕುಮಾರ್ ಬಣ ಎಂದು ಸಾರ್ವಜನಿಕರು ಕೂಗಾಡಿದರು. ಇನ್ನು ಸಿದ್ದರಾಮಯ್ಯ ಭಾಷಣ ಮಾಡುತ್ತಿದ್ದ ವೇಳೆ ಕಾರ್ಯಕರ್ತರೊಬ್ಬರು ವೇದಿಕೆ ಮೇಲಿಂದಲೇ ‘ಹೌದು ಹುಲಿಯಾ’ ಎಂದು ಕೂಗಿದಾಗ ಗರಂ ಆದ ಸಿದ್ದರಾಮಯ್ಯ, ಪೊಲೀಸರಿಗೆ ವೇದಿಕೆಯಿಂದ ಅವನನ್ನು ಕೆಳಗಿಳಿಸುವಂತೆ ಸೂಚಿಸಿದರು. ಅಲ್ಲದೆ ಕಾರ್ಯಕ್ರಮ ಆಯೋಜಕರಿಗೆ ಶಿಸ್ತು ಕಾಪಾಡುವಂತೆ ತಿಳಿ ಹೇಳಿದರು.
