ಬೆಂಗಳೂರು(ಮಾ.21): ನಾನು ಕುರುಬರ ಎಸ್‌.ಟಿ. ಮೀಸಲಾತಿ ಸಮಾವೇಶದಲ್ಲಿ ಭಾಗವಹಿಸುವುದಿಲ್ಲ ಎಂಬುದು ಮಾಜಿ ಸಚಿವ ಎಚ್‌.ಎಂ.ರೇವಣ್ಣನಿಗೆ ಗೊತ್ತಿತ್ತು. ಆದರೂ, ಎಲ್ಲಾ ಕಡೆ ಸಿದ್ದರಾಮಯ್ಯ ಬರುತ್ತಾರೆ ಎಂದು ಹೇಳಿ ಜನರನ್ನು ಸೇರಿಸಿ ಸಮಾವೇಶವನ್ನು ಯಶಸ್ವಿ ಮಾಡಿದ. ಹೀಗಾಗಿ ಸಮಾವೇಶದ ಯಶಸ್ಸಿನ ಸಂಪೂರ್ಣ ಶ್ರೇಯ ರೇವಣ್ಣಗೆ ಸಲ್ಲಬೇಕು ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಈ ಮೂಲಕ ಕುರುಬರ ಎಸ್‌.ಟಿ. ಸಮಾವೇಶಕ್ಕೆ ತಮ್ಮ ಹೆಸರು ಬಳಸಿಕೊಂಡಿದ್ದಕ್ಕೇ ಹೆಚ್ಚು ಜನ ಸೇರಿದರು ಎಂಬ ಪರೋಕ್ಷ ಸಂದೇಶ ರವಾನಿಸಿದ ಸಿದ್ದರಾಮಯ್ಯ, ಸಮಾವೇಶದ ಯಶಸ್ಸಿನ ಶ್ರೇಯವನ್ನು ಕೆ.ಎಸ್‌.ಈಶ್ವರಪ್ಪರಿಂದ ಕಿತ್ತು ಎಚ್‌.ಎಂ.ರೇವಣ್ಣ ಅವರ ಕೈಗಿಡುವ ಪ್ರಯತ್ನ ಮಾಡಿದರು.

ಎಚ್‌.ಎಂ.ರೇವಣ್ಣ ಸಾಂಸ್ಕೃತಿಕ ಪ್ರತಿಷ್ಠಾನವು ಭಾನುವಾರ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಎಚ್‌.ಎಂ.ರೇವಣ್ಣ ಅಭಿನಂದನೆ ಹಾಗೂ ಗ್ರಂಥಗಳ ಬಿಡುಗಡೆ’ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಯಾವ್ಯಾಗ ಯಾರನ್ನು ಹೇಗೆ ಉಪಯೋಗಿಸಿಕೊಳ್ಳಬೇಕು ಎಂಬುದು ರೇವಣ್ಣನಿಗೆ ಚೆನ್ನಾಗಿ ಗೊತ್ತಿದೆ. ಹೀಗಾಗಿ ಎಸ್‌.ಟಿ. ಸಮಾವೇಶಕ್ಕೆ ನನ್ನ ಹೆಸರು ಬಳಸಿಕೊಂಡರು. ನಾನು ಕುರುಬರ ಎಸ್‌.ಟಿ. ಸಮಾವೇಶಕ್ಕೆ ಬರುವುದಿಲ್ಲ ಎಂಬುದು ಸ್ಪಷ್ಟವಾಗಿ ಗೊತ್ತಿದ್ದರೂ ಹೋದ ಕಡೆಯಲ್ಲೆಲ್ಲಾ ಸಿದ್ದರಾಮಯ್ಯ ಬರುತ್ತಾರೆ ಎಂದು ಹೇಳಿ ಬಂದಿದ್ದರು. ಈ ಮೂಲಕ ಜನರನ್ನು ಸೇರಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು ಎಂದು ಹೇಳಿದರು.

ಈ ಹಿಂದೆ ಅಹಿಂದ ಕಟ್ಟುವಾಗಲೂ ರೇವಣ್ಣ ಮುಂಚೂಣಿಯಲ್ಲಿದ್ದರು. ಈಗ ಕುರುಬರ ಎಸ್‌.ಟಿ. ಸಮಾವೇಶದಲ್ಲೂ ರೇವಣ್ಣನೇ ಮುಂಚೂಣಿಯಲ್ಲಿದ್ದಾರೆ. ಹೋರಾಟದ ಹಿನ್ನೆಲೆಯಿಂದ ಬಂದ ಸಂಘಟನಾ ಚತುರರೂ ಆದ ರೇವಣ್ಣ ಅವರಿಂದಲೇ ಎಸ್‌.ಟಿ. ಸಮಾವೇಶ ಯಶಸ್ವಿಯಾಯಿತು ಎಂದರು.

ಸೀಡಿ ಹಗರಣಕ್ಕೆ ಸಿದ್ದರಾಮಯ್ಯ ಎಂಟ್ರಿ : ಹೊಸ ಚರ್ಚೆಗೆ ನಾಂದಿ

ಇದೇ ವೇಳೆ ತಾವು ಕುರುಬರಿಗೆ ಎಸ್‌.ಟಿ. ಮೀಸಲಾತಿ ನೀಡುವುದಕ್ಕೆ ವಿರೋಧಿಯಲ್ಲ. ಆದರೆ ವಿವಿಧ ಕಾರಣಗಳಿಂದ ಈ ಹೋರಾಟದಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿದ್ದೆ. ಕುರುಬರಿಗೆ ಎಸ್‌.ಟಿ. ಮೀಸಲಾತಿ ಕೊಡಬೇಕು ಎಂಬುದು ನನ್ನ ಒತ್ತಾಯವೂ ಹೌದು. ಸರ್ಕಾರ ಈ ಬಗ್ಗೆ ನೇರವಾಗಿಯೇ ಕ್ರಮ ಕೈಗೊಳ್ಳಬಹುದು ಎಂದು ಹೇಳಿದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿ, ಎಚ್‌.ಎಂ.ರೇವಣ್ಣ, ರಾಜಕಾರಣದಲ್ಲಿ ಮುಂದೆ ಬರಲು ಜಾತಿ ಬೆಂಬಲಕ್ಕಿಂತ ಜನರ ಒಡನಾಟ ಮುಖ್ಯ. ಹಲವರಿಗೆ ಸಾಮರ್ಥ್ಯವಿದ್ದರೂ ಅಧಿಕಾರ ಪಡೆಯಲಾಗಿಲ್ಲ. ಆದರೆ ನಾನು ಸರ್ಕಾರದಲ್ಲಿ ಸಚಿವನಾಗಿ ಅಧಿಕಾರ ಅನುಭವಿಸಿರುವುದು ತೃಪ್ತಿ ತಂದಿದೆ ಎಂದರು.

ವಿಧಾನಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ, ಮಾಜಿ ಸಚಿವರಾದ ರಾಮಲಿಂಗಾರೆಡ್ಡಿ, ಬಿ.ಟಿ.ಲಲಿತಾ ನಾಯಕ್‌, ದಲಿತ ಕವಿ ಸಿದ್ದಲಿಂಗಯ್ಯ, ಕಮ್ಯೂನಿಟಿ ಸೆಂಟರ್‌ ಕಾಲೇಜಿನ ಅಧ್ಯಕ್ಷ ಕೆಂ.ಎಂ.ನಾಗರಾಜ್‌ ಮಾತನಾಡಿದರು.