ಸೀಡಿ ಪ್ರಕರಣದಲ್ಲಿ ಇದೀಗ ಸಿದ್ದರಾಮಯ್ಯ ಎಂಟ್ರಿಯಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಸೀಡಿ ಪ್ರಕರಣದ ಚರ್ಚೆ ಇದೀಗ ಹೊಸ ತಿರುವು ಪಡೆದುಕೊಳ್ಳುವ ಸಾಧ್ಯತೆ ಇದೆ. 

ಬೆಂಗಳೂರು (ಮಾ.19):  ರಾಜ್ಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ಮಾಜಿ ಸಚಿವರ ರಾಸಲೀಲೆ ಸಿ.ಡಿ. ಪ್ರಕರಣದ ಬಗ್ಗೆ ಚರ್ಚಿಸಲು ವಿಧಾನಸಭೆಯಲ್ಲಿ ನಿಲುವಳಿ ಸೂಚನೆ ಮಂಡಿಸಲು ಕಡೆಗೂ ಕಾಂಗ್ರೆಸ್‌ ನಿರ್ಧರಿಸಿದೆ.

ಶುಕ್ರವಾರ ಬೆಳಗ್ಗೆ ಕಲಾಪ ಆರಂಭಕ್ಕೂ ಒಂದು ಗಂಟೆ ಮೊದಲು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ನಿಲುವಳಿ ಸೂಚನೆ ಮಂಡನೆಗೆ ಮನವಿ ಪತ್ರ ನೀಡಲಿದ್ದಾರೆ.

ಸೀಡಿ ಕೇಸ್ : ಯುವತಿ ಗೊತ್ತು - 100 ಕೋಟಿ ಕೊಟ್ರೆ ಆರೋಪ ಒಪ್ಪಿಕೊಳ್ತೀನಿ ಎಂದ ಶಂಕಿತ ಕಿಂಗ್‌ಪಿನ್ ...

ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಅವರದ್ದು ಎನ್ನಲಾದ ಸಿ.ಡಿ. ರಾಜ್ಯಾದ್ಯಂತ ಸುದ್ದಿ ಮಾಡುತ್ತಿದೆ. ಮಾಜಿ ಸಚಿವರು ಇದು ನಕಲಿ ವಿಡಿಯೋ ಎಂದು ಒಂದು ಸಲ ಹೇಳಿದರೆ, ಮತ್ತೊಂದು ಸಲ ಮರ್ಯಾದೆಗೆ ಅಂಜಿ ಬ್ಲ್ಯಾಕ್‌ಮೇಲ್‌ ಮಾಡಿದವರಿಗೆ ಹಣ ನೀಡಿದ್ದೆ ಎಂದು ಹೇಳಿದ್ದಾರೆ. ಹೀಗಾಗಿ ಮಾಜಿ ಸಚಿವರೊಬ್ಬರ ಮೇಲೆ ಆರೋಪ ಹೊರಿಸಿರುವ ಸಿ.ಡಿ. ನಕಲಿಯೇ ಅಥವಾ ಅಸಲಿಯೇ ಎಂಬ ಬಗ್ಗೆ ಚರ್ಚೆ ನಡೆಯಬೇಕು. ಸದನಕ್ಕೆ ಸಿ.ಡಿ. ಸತ್ಯಾಸತ್ಯತೆ ಬಗ್ಗೆ ಮಾಹಿತಿ ಒದಗಿಸಬೇಕು ಎಂದು ಒತ್ತಾಯಿಸಲಿದ್ದಾರೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

ಇನ್ನು ಸಿ.ಡಿ.ಯಲ್ಲಿ ಮಾಜಿ ಸಚಿವರು ಕನ್ನಡಿಗರ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿದಂತೆ ಬಿಂಬಿಸಲಾಗಿದೆ. ಕನ್ನಡಿಗರನ್ನು ಕೆಟ್ಟಭಾಷೆಯಲ್ಲಿ ಅವಹೇಳನ ಮಾಡಿದ್ದಾರೆ. ಹೀಗಾಗಿ ರಾಜ್ಯದ ಗೌರವದ ದೃಷ್ಟಿಯಿಂದ ಸಿ.ಡಿ.ಯು ಅಸಲಿಯೇ ಅಥವಾ ನಕಲಿಯೇ ಎಂಬುದು ಬಯಲಾಗಬೇಕು ಎಂದು ಪ್ರಾಥಮಿಕ ವಿಷಯ ಮಂಡನೆ ವೇಳೆ ಸ್ಪೀಕರ್‌ ಅವರಿಗೆ ಸಿದ್ದರಾಮಯ್ಯ ಮನವಿ ಸಲ್ಲಿಸಲಿದ್ದಾರೆ. ಬಳಿಕ ಚರ್ಚೆಗೆ ಅವಕಾಶ ನೀಡಬೇಕೇ ಅಥವಾ ಬೇಡವೇ ಎಂಬುದನ್ನು ಸ್ಪೀಕರ್‌ ನಿರ್ಧರಿಸಲಿದ್ದಾರೆ ಎಂದು ತಿಳಿದು ಬಂದಿದೆ.