ಯಡಿಯೂರಪ್ಪ ನೆತ್ತಿಯ ಮೇಲೆ ಕತ್ತಿ ತೂಗಾಡುತ್ತಿದೆ. ಹೀಗಾಗಿ ಅಧಿಕಾರ ಉಳಿಸಿಕೊಳ್ಳಲು ಪರದಾಟ| ಪದೇ ಪದೇ ಶಾಸಕರ ಸಭೆ ಕರೆಯುತ್ತಿದ್ದಾರೆ| ಶಾಸಕರ ಸಭೆಗಳ ಮೂಲಕ ಹೈಕಮಾಂಡ್‌ಗೆ ತಮ್ಮ ಶಕ್ತಿ ಏನು ಎಂಬುದನ್ನು ತೋರಿಸಲು ಹೊರಟಿದ್ದಾರೆ: ಸಿದ್ದು| 

ಬೆಂಗಳೂರು(ಮಾ.27): ಬಸವಕಲ್ಯಾಣ ವಿಧಾನಸಭೆ ಕ್ಷೇತ್ರಕ್ಕೆ ನಡೆಯಲಿರುವ ಉಪ ಚುನಾವಣೆಗೆ ಅಲ್ಪಸಂಖ್ಯಾತ ಸಮುದಾಯದ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಮೂಲಕ ಜೆಡಿಎಸ್‌ ಪಕ್ಷ ಬಿಜೆಪಿಯೊಂದಿಗೆ ರಾಜಕೀಯ ಹೊಂದಾಣಿಕೆ ಮಾಡಿಕೊಂಡಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಶುಕ್ರವಾರ ನಗರದಲ್ಲಿ ಸುದ್ದಿಗಾರರ ಜತೆ ಅವರು ಮಾತನಾಡಿ, ‘ಅಲ್ಪಸಂಖ್ಯಾತರ ಮತಗಳನ್ನು ವಿಭಜನೆ ಮಾಡುವುದು ಇದರ ಉದ್ದೇಶ. ಬಿಜೆಪಿ ಜೊತೆ ಜೆಡಿಎಸ್‌ ಕೈ ಜೋಡಿಸಿರುವುದು ಇದರಿಂದ ಸ್ಪಷ್ಟವಾಗುತ್ತದೆ. ಜೆಡಿಎಸ್‌ನ ಈ ಹುನ್ನಾರವನ್ನು ಅರ್ಥ ಮಾಡಿಕೊಳ್ಳಿ ಎಂದು ತಾವು ಬಸವಕಲ್ಯಾಣ ಕ್ಷೇತ್ರದ ಜನತೆಯಲ್ಲಿ ಮನವಿ ಮಾಡುತ್ತೇನೆ’ ಎಂದರು.

'ಈ ಬಾರಿ ಸಿದ್ದರಾಮಯ್ಯ ಸೋಲು ಖಚಿತ'

ಬಿಎಸ್‌ವೈ ಮೇಲೆ ತೂಗುಕತ್ತಿ: ಸಿದ್ದು

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ನೆತ್ತಿಯ ಮೇಲೆ ಕತ್ತಿ ತೂಗಾಡುತ್ತಿದೆ. ಹೀಗಾಗಿ ಅಧಿಕಾರ ಉಳಿಸಿಕೊಳ್ಳಲು ಪರದಾಡುತ್ತಿರುವ ಅವರು ಪದೇ ಪದೇ ಶಾಸಕರ ಸಭೆ ಕರೆಯುತ್ತಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಸಮಸ್ಯೆಗಳನ್ನು ಆಲಿಸುವ ನೆಪದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪದೇ ಪದೇ ಶಾಸಕರ ಸಭೆ ಕರೆಯುತ್ತಿದ್ದಾರೆ. ಅವರ ನೆತ್ತಿಯ ಮೇಲೆ ಕತ್ತಿ ತೂಗಾಡುತ್ತಿದ್ದು, ಶಾಸಕರ ಸಭೆಗಳ ಮೂಲಕ ಹೈಕಮಾಂಡ್‌ಗೆ ತಮ್ಮ ಶಕ್ತಿ ಏನು ಎಂಬುದನ್ನು ತೋರಿಸಲು ಹೊರಟಿದ್ದಾರೆ ಎಂದು ಹೇಳಿದ್ದಾರೆ.