*  ಯೋಗಕ್ಕೆ 10000 ಜನ ಸೇರಬಹುದೇ?*  ನಮ್ಮ ಸಭೆಯಿಂದ ಕೋವಿಡ್‌ ಬರುತ್ತಂತೆ: ಸಿದ್ದು ಕಿಡಿ*  ಚೆನ್ನಮ್ಮ, ಕೆಂಪೇಗೌಡ ಜಯಂತಿ ಆರಂಭಿಸಿದೆ

ವಿಜಯಪುರ(ಜೂ.20): ಕಾಂಗ್ರೆಸ್‌ನವರು ಸಭೆ​-ಸಮಾರಂಭ ಮಾಡಿದರೆ ಕೊರೋನಾ ಬರುತ್ತದೆ ಎಂದು ಬಿಜೆಪಿ ಸರ್ಕಾರ ಹೇಳುತ್ತದೆ. ಈಗ ಅವರೇ ಸಭೆ, ಸಮಾರಂಭ ಮಾಡುತ್ತಿದ್ದಾರೆ. ಪ್ರಧಾನಿ ಮೋದಿ ಕಾರ್ಯಕ್ರಮದಲ್ಲಿ ಕೊರೋನಾ ಹಬ್ಬಲ್ವಾ? ಪ್ರಧಾನಿ ಮೋದಿ ಕಂಡು ಕೊರೋನಾ ಓಡಿ ಹೋಗುತ್ತಾ? ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಭಾನುವಾರ ಸುದ್ದಿಗಾರರ ಜತೆಗೆ ಮಾತನಾಡಿ, ಶನಿವಾರ ಬಿಜೆಪಿ ರಾಷ್ಟಾ್ರಧ್ಯಕ್ಷ ನಡ್ಡಾ ಅವರು ಸಾರ್ವಜನಿಕ ಸಭೆ ಮಾಡಿದರು. ಅಲ್ಲೂ ಸಾಕಷ್ಟುಜನ ಸೇರಿದ್ದರು. ಪ್ರಧಾನಿ ನರೇಂದ್ರ ಮೋದಿ ಸೋಮವಾರ ರಾಜ್ಯಕ್ಕೆ ಬರುತ್ತಾರೆ. ಬೆಂಗಳೂರಿನಲ್ಲಿ ಸಭೆ ಮಾಡುತ್ತಾರೆ, ಮೈಸೂರಿನಲ್ಲೂ ಯೋಗ ಮಾಡಲಿದ್ದಾರೆ. ಆ ಯೋಗ ಕಾರ್ಯಕ್ರಮದಲ್ಲಿ ಹತ್ತು ಸಾವಿರಕ್ಕಿಂತ ಹೆಚ್ಚು ಜನ ಸೇರುತ್ತಾರೆ. ನಂತರ ಸಾರ್ವಜನಿಕ ಸಭೆ ಮಾಡಲಿದ್ದಾರೆ. ಅಲ್ಲಿ ಕೊರೋನಾ ಹಬ್ಬಲ್ವಾ? ಮೋದಿ ಅವರನ್ನು ಕಂಡು ಸೂಕ್ಷ್ಮಾಣುಜೀವಿಗಳು ಓಡಿ ಹೋಗುತ್ತಾ? ಎಂದು ವ್ಯಂಗ್ಯವಾಡಿದರು.

VIJAYAPURA MASS WEDDINGನಲ್ಲಿ ಪ್ರಕಾಶ ರಾಠೋಡ ಬದಲಿಗೆ ಪ್ರಕಾಶ ಹುಕ್ಕೇರಿ ಎಂದ ಸಿದ್ದರಾಮಯ್ಯ!

ಚಕ್ರತೀರ್ಥ ಬಂಧಿಸಿ

ವಿಜಯಪುರ: ಪಠ್ಯಪುಸ್ತಕ ವಿವಾದದ ಹಿನ್ನೆಲೆಯಲ್ಲಿ ರೋಹಿತ್‌ ಚಕ್ರತೀರ್ಥರನ್ನು ಬಂಧಿಸಬೇಕು, ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ರಾಜೀನಾಮೆ ನೀಡಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದರು. ಬಿಜೆಪಿಯವರು ಮಹಾನ್‌ ವ್ಯಕ್ತಿಗಳಿಗೆ ಅಪಮಾನ ಮಾಡಿದ್ದಾರೆ. ಇವರು ದೇಶ ಆಳೋಕೆ ಅಯೋಗ್ಯರು. ರೋಹಿತ್‌ ಚಕ್ರತೀರ್ಥ ಪಠ್ಯವನ್ನು ಕೇಸರೀಕರಣ ಮಾಡಲು ಹೊರಟಿದ್ದಾರೆ. ಅವರು ತಿರುಚಿದ ಪಠ್ಯವನ್ನು ಮಕ್ಕಳಿಗೆ ಬೋಧಿಸಬಾರದು. ಆ ಪಠ್ಯವನ್ನು ತಿರಸ್ಕರಿಸಬೇಕೆಂದರು.

ಚೆನ್ನಮ್ಮ, ಕೆಂಪೇಗೌಡ ಜಯಂತಿ ಆರಂಭಿಸಿದೆ

ವಿಜಯಪುರ: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಗೆ ಟಿಪ್ಪು ಸುಲ್ತಾನ್‌ ಮೇಲೆ ಮಾತ್ರ ಪ್ರೀತಿ ಎಂಬ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವಿರುದ್ಧ ತೀವ್ರ ಕಿಡಿಕಾರಿದ್ದಾರೆ. ಕಿತ್ತೂರು ರಾಣಿ ಚೆನ್ನಮ್ಮ, ಕೆಂಪೇಗೌಡ ಜಯಂತಿ ಆಚರಣೆ ಶುರು ಮಾಡಿದ್ದು ನಾನು. ಸರ್ಕಾರಿ ಕಚೇರಿಗಳಲ್ಲೂ ಬಸವಣ್ಣನವರ ಫೋಟೋ ಹಾಕಿಸಿದ್ದೇನೆ. ವಿಜಯಪುರ ವಿವಿಗೆ ಅಕ್ಕಮಹಾದೇವಿ ವಿವಿ ಹೆಸರಿಟ್ಟಿದ್ದು ಯಾರು? ಇದನ್ನೆಲ್ಲ ಅವರು ಮಾಡಿಸಿದ್ದಾ? ಜನರ ಮಧ್ಯೆ ವಿಷಬಿತ್ತುವುದೇ ಆರೆಸ್ಸೆಸ್‌ ಕೆಲಸ ಎಂದು ಕಿಡಿಕಾರಿದ್ದಾರೆ.