ಅನುಭವ ಮಂಟಪ ಶಂಕುಸ್ಥಾಪನೆ ಬಿಎಸ್‌ವೈ ಚುನಾವಣೆ ಗಿಮಿಕ್: ಸಿದ್ದು
ಅನುಭವ ಮಂಟಪಕ್ಕೆ ಹಣ ಎಲ್ಲಿಂದ ತರ್ತಾರೆ|ಸರ್ಕಾರದ ಖಜಾನೆಯಲ್ಲಿ ದುಡ್ಡೇ ಇಲ್ಲ| ಸಂವಿಧಾನ ಸುಟ್ಟು ಹಾಕೋದು ಅಂದರೆ ಮನುಷ್ಯತ್ವ ಸುಟ್ಟು ಹಾಕಿದಂತೆ| ಇಂದು ಒಳ್ಳೆಯವರ ಕೈಯಲ್ಲಿ ಸಂವಿಧಾನ ಉಳಿದಿಲ್ಲ| ಸಂವಿಧಾನ ಉಳಿದರೆ ಮಾತ್ರ ನಾವೆಲ್ಲ ಉಳಿಯಲು ಸಾಧ್ಯ| ಸಂವಿಧಾನ ಉಳಿಸಲು ನಾವು ಜೈಲಿಗೆ ಹೋಗಲೂ ಸಿದ್ಧ: ಸಿದ್ದು|
ಬಸವಕಲ್ಯಾಣ(ಜ.27): ಅನುಭವ ಮಂಟಪ ಶಂಕುಸ್ಥಾಪನೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಚುನಾವಣೆ ಗಿಮಿಕ್. ಸರ್ಕಾರದ ಖಜಾನೆಯಲ್ಲಿ ದುಡ್ಡೇ ಇಲ್ಲ. ಕಲ್ಯಾಣ ಕರ್ನಾಟಕದ ಮುಂದಿನ ಉಪ ಚುನಾವಣೆಯಲ್ಲಿ ಮತರದಾರರನ್ನು ಸೆಳೆಯಲು ಈ ರೀತಿ ಮಾಡಿದ್ದಾರೆ ಎಂದು ಪ್ರತಿ ಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ನಗರದ ಅಕ್ಕಮಹಾದೇವಿ ಕಾಲೇಜು ಆವರಣದಲ್ಲಿ ಸಂವಿಧಾನ ಸಂರಕ್ಷಣಾ ಸಮಿತಿಯಿಂದ ಮಂಗಳವಾರ ನಡೆದ ವಚನ ಸಾಹಿತ್ಯ ಹಾಗೂ ಸಂವಿಧಾನ ಕುರಿತ ಜನ ಜಾಗೃತಿ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ಖಜಾನೆಯಲ್ಲಿ ದುಡ್ಡೇ ಇಲ್ಲ ಎಂದು ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ ಈಗಾಗಲೇ ಹೇಳಿ ಆರ್ಥಿಕ ಕಡಿತಕ್ಕೆ ಮುಂದಾಗಿರೋದು ರಾಜ್ಯದ ಜನತೆಗೆ ಗೊತ್ತಿರುವ ವಿಚಾರ. ಪರಿಸ್ಥಿತಿ ಹೀಗಿರುವಾಗ ಅನುಭವ ಮಂಟಪಕ್ಕೆ .500 ಕೋಟಿ ಹಣ ಎಲ್ಲಿಂದ ತರುತ್ತಾರೆ? ಇದೆಲ್ಲ ಸುಳ್ಳೇ ಸುಳ್ಳು ಎಂದು ಆರೋಪಿಸಿದರು.
ರಾಜ್ಯದಲ್ಲೇ ಪ್ರಥಮವಾಗಿ ‘ಹೆಣ್ಣು ಮಗು ವೃತ್ತ’ ನಿರ್ಮಾಣ : ಎಲ್ಲಿದೆ..?
ಬಸವಕಲ್ಯಾಣ ಉಪ ಚುನಾವಣೆ ಸದ್ಯದಲ್ಲೇ ನಡೆಯಲಿದೆ. ಬಸವಾದಿ ಶರಣರು ನಡೆದಾಡಿದ ಈ ಕ್ಷೇತ್ರದ ಮುಗ್ಧ ಮತದಾರರ ಮೂಗಿಗೆ ತುಪ್ಪ ಸವರುವ ಯತ್ನ ಮಾಡಿರುವ ಯುಡಿಯೂರಪ್ಪ ಹಾಗೂ ಬಿಜೆಪಿಗೆ ಇಲ್ಲಿನವರು ತಕ್ಕ ಉತ್ತರ ನೀಡಲಿದ್ದಾರೆ ಎಂದು ಇದೇ ವೇಳೆ ಸಿದ್ದರಾಮಯ್ಯ ಕಿಡಿಕಾರಿದರು.
ಸಂವಿಧಾನ ಸುಟ್ಟು ಹಾಕೋದು ಅಂದರೆ ಮನುಷ್ಯತ್ವ ಸುಟ್ಟು ಹಾಕಿದಂತೆ. ಇಂದು ಒಳ್ಳೆಯವರ ಕೈಯಲ್ಲಿ ಸಂವಿಧಾನ ಉಳಿದಿಲ್ಲ. ಸಂವಿಧಾನ ಉಳಿದರೆ ಮಾತ್ರ ನಾವೆಲ್ಲ ಉಳಿಯಲು ಸಾಧ್ಯ. ಸಂವಿಧಾನ ಉಳಿಸಲು ನಾವು ಜೈಲಿಗೆ ಹೋಗಲೂ ಸಿದ್ಧ ಎಂದರು.