ಸುಳ್ಳು ಹೇಳುವಲ್ಲಿ ಬಿಜೆಪಿಗರು ನಿಸ್ಸೀಮರು: ಸಿದ್ದರಾಮಯ್ಯ
* ಮೂರು ಬಾರಿ ಪ್ರವಾಹ ಬಂದಾಗಲೂ ಯಡಿಯೂರಪ್ಪನವರೇ ಮುಖ್ಯಮಂತ್ರಿಯಾಗಿದ್ದರು
* ಕೋಮಗಲಭೆಯಲ್ಲಿ ಬಿಜೆಪಿ ನಿರತ
* ಸೌಜನ್ಯಕ್ಕಾದರೂ ಪ್ರಧಾನಿ ಮೋದಿ ರಾಜ್ಯದ ಕಡೆ ನೋಡಲಿಲ್ಲ
ಸಂಕೇಶ್ವರ(ಜು.28): ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ನೆರೆ ಪರಿಹಾರ ವಿಷಯದಲ್ಲಿ ಕೇವಲ ಸುಳ್ಳು ಹೇಳುತ್ತಿದ್ದಾರೆ. ರಾಜ್ಯದಲ್ಲಿ ಎಷ್ಟೇ ದೊಡ್ಡ ಪ್ರಮಾಣದ ಪ್ರವಾಹ ಬಂದರೂ ಪ್ರಧಾನಿ ನರೇಂದ್ರ ಮೋದಿ ರಾಜ್ಯದ ಕಡೆ ಕಣ್ಣು ಹಾಯಿಸಿಲ್ಲ ಎಂದು ಮಾಜಿ ಸಿಎಂ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಹುಕ್ಕೇರಿ ತಾಲೂಕಿನ ಹಿರಣ್ಯಕೇಶಿ ನದಿ ಪ್ರವಾಹಕ್ಕೆ ತುತ್ತಾತ ಪ್ರದೇಶಗಳಾದ ಚಿಕ್ಕಾಲಗುಡ್ಡ ಗ್ರಾಮ, ಸಂಕೇಶ್ವರ ಪಟ್ಟಣದ ಕುಂಬಾರ ಗಲ್ಲಿ, ಮಠಗಲ್ಲಿ, ನದಿ ಗಲ್ಲಿಗಳಿಗೆ ಮಂಗಳವಾರ ಭೇಟಿ ನೀಡಿದ ವೇಳೆ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಯಡಿಯೂರಪ್ಪ ರಾಜೀನಾಮೆ ಕೊಡುವುದು ಗೊತ್ತಿದ್ದರೂ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ವೇಳೆ ಪರಿಹಾರದ ಬಗ್ಗೆ ಸುಳ್ಳು ಭರವಸೆ ನೀಡುತ್ತಿದ್ದಾರೆ ಎಂದರು.
ಮುಳುಗಿದ ಹಳ್ಳಿ : 100 ಅಧಿಕ ಮನೆಗಳು ಜಲಾವೃತ
ಚಿಕ್ಕಾಲಗುಡ್ಡ ಗ್ರಾಮದ ಪ್ರವಾಹ ಪೀಡಿತ ಪ್ರದೇಶದಲ್ಲಿ ಹಿರಣ್ಯಕೇಶಿ ನದಿ ಪ್ರವಾಹಕ್ಕೆ ನದಿ ದಡದ ಮನೆಗಳು ಸಂಪೂರ್ಣ ಕುಸಿದು ಬಿದಿದ್ದು, ಅಲ್ಲಿನ ಕುಟುಂಬಗಳನ್ನು ಶಾಶ್ವತವಾಗಿ ಸ್ಥಳಾಂತರಿಸುವುದು ಸೂಕ್ತ. ಈ ಭಾಗದಲ್ಲಿ 2009, 2019 ಹಾಗೂ ಈ ಬಾರಿ ಪ್ರವಾಹದಲ್ಲಿ ಸಾಕಷ್ಟು ಹಾನಿಯಾಗಿದ್ದು, ಮೂರು ಬಾರಿ ಪ್ರವಾಹ ಬಂದಾಗಲೂ ಯಡಿಯೂರಪ್ಪನವರೇ ಮುಖ್ಯಮಂತ್ರಿಯಾಗಿದ್ದರು. ಪ್ರವಾಹಕ್ಕೆ ತುತ್ತಾಗಿ ಮನೆಗಳನ್ನು ಸ್ಥಳಾಂತರ ಮಾಡದೆ ನಿರ್ಲಕ್ಷ್ಯವಹಿಸಲಾಗಿದೆ ಎಂದು ಆಪಾದಿಸಿದರು. ಕೇಂದ್ರ ಸರ್ಕಾರ ಪ್ರವಾಹದ ಪರಿಹಾರ ನೀಡುವಲ್ಲಿ ಮಲತಾಯಿ ಧೋರಣೆ ತೋರುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ದೂರಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೋಳಿ, ಶಾಸಕಿಯರಾದ ಲಕ್ಷ್ಮೇ ಹೆಬ್ಬಾಳ್ಕರ, ಡಾ. ಅಂಜಲಿ ನಿಂಬಾಳ್ಕರ, ಮಾಜಿ ಶಾಸಕರಾದ ಶಾಮ್ ಘಾಟಗೆ, ಅಶೋಕ ಪಟ್ಟಣ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ, ಕಾಕಾಸಾಹೇಬ ಪಾಟೀಲ, ಮಾಜಿ ಸಚಿವ ಎ.ಬಿ.ಪಾಟೀಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ ಮುಡಶಿ, ಚಿಕ್ಕೋಡಿ ಜಿಲ್ಲಾ ಕಾರ್ಮಿಕ ಘಟಕದ ಅಧ್ಯಕ್ಷ ಮಹೇಶ ಹಟ್ಟಿಹೋಳಿ, ಪುರಸಭೆ ಸದಸ್ಯ ಡಾ. ಜಯಪ್ರಕಾಶ ಕರಜಗಿ, ವಿನೋದ ನಾಯಿಕ, ಅಪ್ಪಾಜಿ ಮರಡಿ, ಮುಖಂಡರಾದ ಮಹಾವೀರ ಮೋಹಿತೆ, ದಿಲೀಪ ಹೊಸಮನಿ ಸೇರಿದಂತೆ ಇತರರು ಇದ್ದರು.
ಕೋಮಗಲಭೆಯಲ್ಲಿ ಬಿಜೆಪಿ ನಿರತ
2019ರಲ್ಲಿ ಕಂಡು ಕೇಳರಿಯದ ಪ್ರವಾಹ ರಾಜ್ಯದಲ್ಲಿ ಬಂದಿತ್ತು. ದೊಡ್ಡ ಪ್ರಮಾಣದಲ್ಲಿ ಹಾನಿಯಾಗಿತ್ತು. ಆಗ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪನವರು ಹಾಗೂ ಬಿಜೆಪಿ ನಾಯಕರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ಪರಿಹಾರ ತರಬೇಕಾಗಿತ್ತು. ಪ್ರವಾಹ ಬಂದು ಮನೆ, ಬೆಳೆ ಹಾನಿಯಾದರೂ ಸೌಜನ್ಯಕ್ಕಾದರೂ ಪ್ರಧಾನಿ ಮೋದಿ ರಾಜ್ಯದ ಕಡೆ ನೋಡಲಿಲ್ಲ. ಬಿಜೆಪಿ ಸರ್ಕಾರ ಕೇವಲ ಭ್ರಷ್ಟಾಚಾರ ಮತ್ತು ಕೋಮುಗಲಭೆಯಲ್ಲಿ ನಿರತವಾಗಿದೆ. ಕಾಂಗ್ರೆಸ್ ಪಕ್ಷದಿಂದ ನಾಲ್ಕು ಸಮಿತಿ ಮಾಡಿ ಪ್ರವಾಹ ಪೀಡಿತ ಪ್ರದೇಶಗಳಿಗೆ ನಿಯೋಗ ಕಳುಹಿಸಿ ಮಾಹಿತಿ ಪಡೆದು ಸಂತ್ರಸ್ತರಿಗೆ ಪರಿಹಾರ ಕೊಡಿಸುವ ಪ್ರಯತ್ನ ಮಾಡಲಾಗುವುದು ಎಂದು ಮಾಜಿ ಸಿಎಂ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.