ಬಸವಕಲ್ಯಾಣ(ಮಾ.31): ದುಡ್ಡಿನ ಮದದ ಮೇಲೆ ಉಪಚುನಾವಣೆ ಗೆಲ್ಲಲು ಹೊರಟಿರುವ ಬಿಜೆಪಿ ಸರ್ಕಾರಕ್ಕೆ ಅಭಿವೃದ್ಧಿಯ ಕುರಿತು ಹೇಳಿಕೊಳ್ಳಲು ಏನೂ ಉಳಿದಿಲ್ಲ. ಜನತೆ ಓಟು ಮಾರಿಕೊಳ್ಳಬೇಡಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಬಿಜೆಪಿ ಆಡಳಿತದ ವಿರುದ್ಧ ಕಿಡಿಕಾರಿದ್ದಾರೆ.

ಬಸವಕಲ್ಯಾಣ ಉಪ ಚುನಾವಣೆಯ ನಿಮಿತ್ತ ರಥ ಮೈದಾನದಲ್ಲಿ ಮಂಗಳವಾರ ಆಯೋಜಿಸಿದ್ದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಸಾವಿರಾರು ಕೋಟಿ ರು.ಗಳನ್ನು ಸಾಲ ಮಾಡಿಕೊಂಡು ದಿವಾಳಿಯಾಗಿ, ಅಭಿವೃದ್ಧಿ ನಿರ್ಲಕ್ಷಿಸಿದೆ ಎಂದು ಆರೋಪಿಸಿದರು.

ಬಸವಕಲ್ಯಾಣ ಉಪಸಮರ: ಅಕ್ರಮ ಪುರಾವೆ ನೀಡಿದ್ರೆ ಮೈದಾನದಲ್ಲೇ ನೇಣಿಗೆ ಶರಣು, ಸಲಗರ

ಪ್ರಧಾನಿ ಮೌನ ಯಾಕೆ:

ನನ್ನ ಅವಧಿಯ ಸರ್ಕಾರಕ್ಕೆ 10 ಪರ್ಸಂಟ್‌ ಸರ್ಕಾರ ಎಂದು ಜರಿದಿದ್ದ ಪ್ರಧಾನಿ ಮೋದಿ, ಈಗಿನ 30 ಪರ್ಸಂಟ್‌ ಪಡೆಯುವ ಯಡಿಯೂರಪ್ಪ ಸರ್ಕಾರದ ಕುರಿತು ಮೌನ ಯಾಕೆ ಎಂದು ಪ್ರಶ್ನಿಸಿದರು. ಬಿಜೆಪಿಯವರು ದುಷ್ಟರು, ಡೋಂಗಿಗಳು. ಜನರನ್ನು ದಾರಿ ತಪ್ಪಿಸುವುದೇ ಅವರ ಕೆಲಸ. ಜನರ ಭಾವನೆಗಳನ್ನು ಕೆರಳಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ನನ್ನ ರಾಜಕೀಯ ಜೀವನದ 40 ವರ್ಷಗಳ ಕಾಲಾವಧಿಯಲ್ಲಿ ಇಂತಹ ಕೆಟ್ಟ ಸರ್ಕಾರವನ್ನು ನಾನು ನೋಡೇ ಇಲ್ಲ. ಇಂಥ ಲಂಚಗುಳಿತನದ ಬಿಜೆಪಿ ಸರ್ಕಾರವನ್ನು ಬೇರು ಸಮೇತ ಕಿತ್ತೊಗೆಯಿರಿ. ಕರ್ನಾಟಕ ಉಳಿಯಬೇಕಾದರೆ ಬಿಜೆಪಿ ಸರ್ಕಾರ ಹೋಗಲೇಬೇಕು ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.