Asianet Suvarna News Asianet Suvarna News

'ಮೋದಿಯಷ್ಟು ಸುಳ್ಳು ಹೇಳುವ ಮತ್ತೊಬ್ಬ ಪ್ರಧಾನಿಯನ್ನು ಈ ದೇಶ ಕಂಡಿಲ್ಲ'

ಕೇಂದ್ರ-ರಾಜ್ಯ ಸರ್ಕಾರದಿಂದ ಮೀಸಲಾತಿ ನಾಶದ ಹುನ್ನಾರ| ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಒತ್ತು ನೀಡಬೇಕಿತ್ತು| ಸಮಾಜದಲ್ಲಿ ಶೋಷಿತ, ತಳವರ್ಗಗಳ ಹಿತಕಾಯದ ಸರ್ಕಾರ ದೊಡ್ಡ ಕಂಟಕ| ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ಸರ್ಕಾರ: ಸಿದ್ದರಾಮಯ್ಯ|

Siddaramaiah Slam on PM Narendra Modi grg
Author
Bengaluru, First Published Nov 29, 2020, 1:39 PM IST

ದೊಡ್ಡಬಳ್ಳಾಪುರ(ನ.29): ಕೋವಿಡ್‌ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದ್ದು ಬ್ರಹ್ಮಾಂಡ ಭ್ರಷ್ಟಾಚಾರ ಎಸಗಿದೆ. ರೋಗದ ಹೆಸರಿನಲ್ಲಿ ಕೋಟ್ಯಂತರ ರುಪಾಯಿ ದುರುಪಯೋಗ ನಡೆದಿದೆ ಎಂದು ವಿರೋಧ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ. 

ಇಲ್ಲಿನ ಕೆಎಂಎಚ್‌ ಸಮುದಾಯ ಭವನದಲ್ಲಿ ಶನಿವಾರ ನಡೆದ ಕೊರೋನಾ ನಂತರದ ದಿನಗಳಲ್ಲಿ ನೇಕಾರರ ಸಂಕಷ್ಟಗಳ ಕುರಿತ ಚಿಂತನ ಸಭೆಯಲ್ಲಿ ಅವರು ನೇಕಾರ ಸಮುದಾಯದ ಕಷ್ಟಗಳನ್ನು ಆಲಿಸಿ ಮಾತನಾಡಿ, ಕೊರೋನಾ ಸಂಕಷ್ಟಕ್ಕೆ ಒಳಗಾದವರಿಗೆ ಪರಿಹಾರ ನೀಡಿಲ್ಲ. ನೇಕಾರರೂ ಸೇರಿದಂತೆ ಹಿಂದುಳಿದ ವರ್ಗಗಳ ಹಿತವನ್ನು ಕಡೆಗಣಿಸಿದೆ. ಕೊರೋನಾ ನಿರ್ವಹಣೆ ಹೆಸರಿನಲ್ಲಿ ಸುಮಾರು ಎರಡೂವರೆ ಸಾವಿರ ಕೋಟಿ ರುಪಾಯಿ ವೆಚ್ಚ ಮಾಡಿರುವ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ರಾಜ್ಯವನ್ನು ಸಾಲದ ಸುಳಿಗೆ ತಳ್ಳಿದೆ ಎಂದರು.

ಸಾಲದಲ್ಲಿ ದಾಖಲೆ ಬರೆದ ಯಡ್ಡಿ:

ಒಂದೇ ವರ್ಷದಲ್ಲಿ 90 ಸಾವಿರ ಕೋಟಿ ರುಪಾಯಿ ಸಾಲ ಮಾಡಿರುವ ರಾಜ್ಯ ಸರ್ಕಾರ ಸಾಲದಲ್ಲಿ ದಾಖಲೆ ಬರೆದಿದೆ. ರಾಜ್ಯದ ಮೇಲೆ ಒಟ್ಟಾರೆ 4 ಲಕ್ಷ 10 ಸಾವಿರ ಕೋಟಿ ಸಾಲವಿದೆ ಎಂದ ಅವರು, ಅಭಿವೃದ್ಧಿ ನಿಂತ ನೀರಾಗಿದೆ. ಇಂತಹ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಜಾತಿ, ವರ್ಗ, ಭಾಷೆ, ಸಮುದಾಯದ ಹೆಸರಿನಲ್ಲಿ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.

ನಿವಾರ್ : ಕರ್ನಾಟಕಕ್ಕೆ ಎಷ್ಟು ಎಫೆಕ್ಟ್ ಇದೆ - ಬೆಂಗಳೂರಿಗೂ ತಟ್ಟುತ್ತಾ..?

ಮೀಸಲಾತಿ ನಾಶ, ನ್ಯಾಯ ಮರೀಚಿಕೆ:

ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಮೀಸಲಾತಿ ವ್ಯವಸ್ಥೆಯನ್ನು ನಾಶ ಮಾಡಲು ಹೊರಟಿವೆ. ಇವರಿಂದ ಸಾಮಾಜಿಕ ನ್ಯಾಯ ಮರೀಚಿಕೆಯಾಗಿದೆ. ವಿದ್ಯುತ್‌ ವಲಯ ಖಾಸಗೀಕರಣ ಸೇರಿದಂತೆ ಸರ್ಕಾರದ ಹಲವು ವಿನಾಶಕಾರಿ ನೀತಿಗಳಿಂದ ಸಾಮಾಜಿಕ ನ್ಯಾಯ ಆತಂಕದಲ್ಲಿದೆ. ಈ ದೇಶ ನರೇಂದ್ರ ಮೋದಿ ಅವರಷ್ಟು ಸುಳ್ಳು ಹೇಳುವ ಮತ್ತೊಬ್ಬ ಪ್ರಧಾನಿಯನ್ನು ಕಂಡಿಲ್ಲ. ಸಾಮರಸ್ಯ, ಸಮನ್ವಯತೆಯನ್ನು ಹಾಳು ಮಾಡಿದ್ದು, ಉದ್ಯೋಗ ನಾಶ, ಕೃಷಿಕರು ಹಾಗೂ ದುಡಿಯುವ ವರ್ಗದ ಹಿತಾಸಕ್ತಿ ಕಡೆಗಣಿಸಿದ್ದೇ ಸಾಧನೆ ಎಂದರು.

ಹಿಂದುಳಿದ ವರ್ಗಗಳಿಗೆ ನಿಗಮ ಕೊಡಿ:

ರಾಜ್ಯ ಸರ್ಕಾರ ಹಿಂದುಳಿದ ವರ್ಗಗಳಾದ ಈಡಿಗ, ತಿಗಳ, ನೇಕಾರ ಅಭಿವೃದ್ಧಿ ನಿಗಮಗಳನ್ನು ಸ್ಥಾಪಿಸಲು ಆದ್ಯತೆ ನೀಡಬೇಕಿತ್ತು. ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಒತ್ತು ನೀಡಬೇಕಿತ್ತು. ಸಮಾಜದಲ್ಲಿ ಶೋಷಿತ, ತಳವರ್ಗಗಳ ಹಿತಕಾಯದ ಸರ್ಕಾರ ದೊಡ್ಡ ಕಂಟಕ ಎಂದರು.

ಕೆಪಿಸಿಸಿ ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ಎಂ.ಡಿ.ಲಕ್ಷ್ಮೀನಾರಾಯಣ್‌ ಮಾತನಾಡಿದರು. ಕಾರ‍್ಯಕ್ರಮದಲ್ಲಿ ಶಾಸಕ ಟಿ.ವೆಂಕಟರಮಣಯ್ಯ ಅಧ್ಯಕ್ಷತೆ ವಹಿಸಿದ್ದರು. ಕೆಪಿಸಿಸಿ ಸದಸ್ಯ ಎಂ.ಜಿ.ಶ್ರೀನಿವಾಸ್‌, ನೇಕಾರ ಮುಖಂಡರಾದ ಬಿ.ಜಿ.ಹೇಮಂತರಾಜು, ಪಿ.ಎ.ವೆಂಕಟೇಶ್‌, ಮಾಜಿ ನಗರಸಭಾಧ್ಯಕ್ಷ ತ.ನ.ಪ್ರಭುದೇವ್‌, ಜೆ.ರಾಜೇಂದ್ರ, ಕೆ.ಪಿ.ಜಗನ್ನಾಥ್‌, ವಿವಿಧ ಪಕ್ಷಗಳು, ಸಂಘಟನೆಗಳ ಪ್ರಮುಖರು ಪಾಲ್ಗೊಂಡರು.
 

Follow Us:
Download App:
  • android
  • ios