ಬೆಂಗಳೂರು(ಮಾ.20): ‘ಕೊರೋನಾ ನಿಯಂತ್ರಣಕ್ಕೆ 5,372 ಕೋಟಿ ರು. ಖರ್ಚು ಮಾಡಿರುವುದಾಗಿ ಸರ್ಕಾರ ಹೇಳಿದೆ. ಸರ್ಕಾರ ಹಣ ಖರ್ಚು ಮಾಡಿದ್ದರೆ ಸೋಂಕು ಮತ್ತೆ ಏಕೆ ಉಲ್ಬಣಿಸುತ್ತಿದೆ? ಕೊರೋನಾ ಹೆಸರಿನಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂಬುದಕ್ಕೆ ಎರಡನೇ ಅಲೆ ಆರಂಭವೇ ಸಾಕ್ಷಿ’ ಎಂದು ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ. 

ಈ ಬಗ್ಗೆ ಸರಣಿ ಟ್ವೀಟ್‌ ಮಾಡಿರುವ ಅವರು, ‘ಕೊರೊನಾ ವೈರಸ್‌ಗೆ ಲಸಿಕೆ ಬಂದಿದೆ. ಆದರೆ ಸರ್ಕಾರಕ್ಕೆ ತಗಲಿರುವ ಭ್ರಷ್ಟಾಚಾರದ ವೈರಸ್‌ಗೆ ಎಲ್ಲಿಂದ ಲಸಿಕೆ ತರಬೇಕು? ಮೊದಲ ಅಲೆಯ ನಿಯಂತ್ರಣದಲ್ಲಿನ ಲೋಪ-ದೋಷವನ್ನು ಎರಡನೇ ಅಲೆ ವೇಳೆಯಾದರೂ ತಿದ್ದಿಕೊಳ್ಳಿ. ಕೊರೋನಾವನ್ನು ಭ್ರಷ್ಟಾಚಾರಕ್ಕೆ ದುರ್ಬಳಕೆ ಮಾಡಿಕೊಳ್ಳದೆ ಕೆಲಸ ಮಾಡಿ ಜನರನ್ನು ಉಳಿಸಿ’ ಎಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಸೀಡಿ ಹಗರಣಕ್ಕೆ ಸಿದ್ದರಾಮಯ್ಯ ಎಂಟ್ರಿ : ಹೊಸ ಚರ್ಚೆಗೆ ನಾಂದಿ

‘ಕೊರೋನಾ ನಿಯಂತ್ರಣಕ್ಕಾಗಿ ಸಂಪನ್ಮೂಲ ವ್ಯಯಮಾಡಬೇಕಾಗಿದೆ ಎಂಬ ಕುಂಟುನೆಪ ಹೇಳಿ ಅಭಿವೃದ್ಧಿ ಚಟುವಟಿಕೆಗಳಿಗೆ ಅನುದಾನಗಳನ್ನು ಕಡಿತಗೊಳಿಸಿದಿರಿ. ನೀವು ಕೊರೋನಾ ನಿಯಂತ್ರಣಕ್ಕೆ ಅಷ್ಟೊಂದು ಆದ್ಯತೆ ನೀಡಿದ್ದರೆ ಕೊರೋನಾ ಏಕೆ ನಿಯಂತ್ರಣ ತಪ್ಪಿದೆ? ಈವರೆಗೆ 5,372 ಕೋಟಿ ರು. ಖರ್ಚು ಮಾಡಲಾಗಿದೆ ಎಂದು ಹೇಳಿದ್ದೀರಿ. ಆದರೆ ಯಾವ ಉದ್ದೇಶಗಳಿಗೆ ಹಣ ಖರ್ಚು ಮಾಡಿದ್ದೀರಿ ಎಂಬ ಲೆಕ್ಕವಿಲ್ಲ. ಇನ್ನಾದರೂ ಜನರ ಮುಂದೆ ಈ ಬಗೆಗಿನ ವಿವರ ತೆರೆದಿಡಿ’ ಎಂದು ಒತ್ತಾಯಿಸಿದ್ದಾರೆ.