ಸಿದ್ದರಾಮಯ್ಯ ಕಾಂಗ್ರೆಸ್‌ ಪಕ್ಷದಿಂದ ಮುಖ್ಯಮಂತ್ರಿಯಾಗಿ ಜನರ ವಿಶ್ವಾಸಗಳಿಸಿದ್ದಾರೆ, ಅವರು ಕೋಲಾರದಿಂದ ಸ್ಪರ್ಧೆ ಮಾಡುತ್ತಾರೆ, ಜಿಲ್ಲೆ ಹಾಗೂ ರಾಜ್ಯದ ಒಳತಿಗಾಗಿ ಸಿದ್ಧರಾಮಯ್ಯರ ಗೆಲುವು ಅಗತ್ಯ ಎಂದು ಮಾಜಿ ಸ್ಪೀಕರ್‌ ಕೆ.ಆರ್‌.ರಮೇಶ್‌ ಕುಮಾರ್‌ ಹೇಳಿದರು.

ಕೋಲಾರ (ನ.29): ಸಿದ್ದರಾಮಯ್ಯ ಕಾಂಗ್ರೆಸ್‌ ಪಕ್ಷದಿಂದ ಮುಖ್ಯಮಂತ್ರಿಯಾಗಿ ಜನರ ವಿಶ್ವಾಸಗಳಿಸಿದ್ದಾರೆ, ಅವರು ಕೋಲಾರದಿಂದ ಸ್ಪರ್ಧೆ ಮಾಡುತ್ತಾರೆ, ಜಿಲ್ಲೆ ಹಾಗೂ ರಾಜ್ಯದ ಒಳತಿಗಾಗಿ ಸಿದ್ಧರಾಮಯ್ಯರ ಗೆಲುವು ಅಗತ್ಯ ಎಂದು ಮಾಜಿ ಸ್ಪೀಕರ್‌ ಕೆ.ಆರ್‌.ರಮೇಶ್‌ ಕುಮಾರ್‌ ಹೇಳಿದರು.

ತಾಲೂಕಿನ ವಕ್ಕಲೇರಿ ಕಾಡುಮಲ್ಲೇಶ್ವರ ದೇವಸ್ಥಾನದ ಬಳಿ ಸಿದ್ದರಾಮಯ್ಯ ಸ್ಪರ್ಧೆಯ ವಿಚಾರವಾಗಿ ವಿಶೇಷ ಪೂಜೆ ಸಲ್ಲಿಸಿ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ನಾವು ಎಲ್ಲರೂ ಸೇರಿ ಸಿದ್ದರಾಮಯ್ಯ ಅವರನ್ನು ಕೋಲಾರಕ್ಕೆ ಕರೆತಂದು ಮುಗಿಸುತ್ತೇವೆ ಎಂದು ಕೆಲವರು ಹೇಳುತ್ತಾರೆ. ನಿಮಗೆ ಬೇಕಾಗಿರೋದು ಕೂಡ ಅದೇ ತಾನೇ ಆ ಕೆಲಸ ನಾವು ಮಾಡುತ್ತಾ ಇದ್ದೇವೆ ನಿಮ್ಮ ಕೆಲಸ ಮುಗಿದ್ದಂತೆ ಅಲ್ಲವಾ ನೀವು ಸಂತೋಷವಾಗಿರಿ ಎಂದು ವಿರೋಧಿಗಳಿಗೆ ಟಾಂಗ್‌ ನೀಡಿದರು.

ದೇಶದಲ್ಲಿ ಇಂದಿರಾಗಾಂಧಿ ಹಾದಿಯಲ್ಲಿ ಸಿದ್ದರಾಮಯ್ಯ ಜನ ಮನ್ನಣೆ ಗಳಿಸಿದ್ದಾರೆ. ಅವರಂತೆಯೇ ಬಡವರ, ಮಹಿಳೆಯರ, ರೈತರ ಕಷ್ಟದಲ್ಲಿ ಭಾಗಿಯಾಗಿದ್ದಾರೆ. ಸಿದ್ದರಾಮಯ್ಯ ಇದ್ದ ಕಡೆಗಳಲ್ಲಿ ಜನ ಸೇರುತ್ತಾರೆ ಅವರಿಗೆ ಮೇಕಪ್‌ ಹಾಕಿ ಜನರನ್ನು ಕರೆತರುವ ಅವಶ್ಯಕತೆ ಕಾಂಗ್ರೆಸ್‌ ಪಕ್ಷಕ್ಕೆ ಬಂದಿಲ್ಲ. ಮುಂದಿನ ಚುನಾವಣೆಯಲ್ಲಿ ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿ ಗೆದ್ದು ರಾಜ್ಯದಲ್ಲಿ ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಲು ಅವಕಾಶವನ್ನು ರಾಜ್ಯದ ಕಾಂಗ್ರೆಸ್‌ ಮುಖಂಡರು ಮತ್ತು ಪಕ್ಷದ ಹೈಕಮಾಂಡ್‌ ಅವಕಾಶ ಮಾಡಿಕೊಡಲು ದೇವರು ಆಶೀರ್ವಾದ ಮಾಡಲಿ ಎಂದರು.

ನಾನು ಹಾಗೂ ಕೆ.ಹೆಚ್‌.ಮುನಿಯಪ್ಪ ಇಬ್ಬರು ಕಾಂಗ್ರೆಸ್ಸಿಗರೇ ನಾವಿಬ್ಬರು ಎಲ್ಲೂ ವಿರುದ್ಧ ಹೇಳಿಕೆಗಳನ್ನು ಇದುವರೆಗೂ ನೀಡಿಲ್ಲ, ಒಗ್ಗಟ್ಟಾಗಿದ್ದೇವೆ, ಕಾಂಗ್ರೆಸ್‌ ಪರ ಕೆಲಸ ಮಾಡುತ್ತೇವೆ ಎಂದರು.

ಶಾಸಕ ಕೆ.ಶ್ರೀನಿವಾಸಗೌಡ ಮಾತನಾಡಿ, ಕೋಲಾರದಿಂದ ಸಿದ್ಧರಾಮಯ್ಯ ಸ್ಪರ್ಧೆ ಖಚಿತ, ನಾನು ಸಿದ್ದರಾಮಯ್ಯ ಗೆಲುವಿಗಾಗಿ ಶ್ರಮಿಸುತ್ತೇನೆ. ಅವರಿಗಾಗಿ ಕ್ಷೇತ್ರ ತ್ಯಾಗ ಮಾಡುತ್ತಿದ್ದೇನೆ, ಕೋಲಾರ ಕ್ಷೇತ್ರದಿಂದ ಸ್ಪರ್ಧಿಸುವ ಉದ್ದೇಶದಿಂದಲೇ ಸಿದ್ಧರಾಮಯ್ಯ ನ.13ರಂದು ಕ್ಷೇತ್ರ ಪ್ರವಾಸ ಕೈಗೊಂಡಿದ್ದಾರೆ, ಅವರನ್ನು ಗೆಲ್ಲಿಸುವುದೇ ನನ್ನ ರಾಜಕೀಯ ಗುರಿ, ಕೋಲಾರ ತಾಲೂಕಿನ 23 ಗ್ರಾಪಂಗಳಲ್ಲಿ ಪ್ರವಾಸ ಮಾಡಿ ಅವರ ಪರವಾಗಿ ಕೆಲಸ ಮಾಡುತ್ತೇನೆ. ಕೆ.ಎಚ್‌.ಮುನಿಯಪ್ಪ ಕಳೆದ ಚುನಾವಣೆಯಲ್ಲಿ ಕಾರಣಾಂತರಗಳಿಂದ ಸೋತಿದ್ದಾರೆ, ಜಿಲ್ಲಾ ಕಾಂಗ್ರೆಸ್‌ನಲ್ಲಿ ಯಾವುದೇ ಬಣವಿಲ್ಲ ಎಲ್ಲ ಒಟ್ಟಾಗಿದ್ದಾರೆ, ಈ ಬಗ್ಗೆ ಕೆ.ಎಚ್‌.ಮುನಿಯಪ್ಪ ಮತ್ತು ಸಿದ್ಧರಾಮಯ್ಯ ಕುಳಿತು ಚರ್ಚೆ ಮಾಡಿದ್ದಾರೆ ಎಂದರು.

ವಿಧಾನ ಪರಿಷತ್‌ ಸದಸ್ಯ ನಜೀರ್‌ ಅಹಮದ್‌ ಮಾತನಾಡಿ, ನಾವು ಪಕ್ಷದ ಸಂಘಟನೆಯ ಜೊತೆಯಲ್ಲಿ ಜನರ ವಿಶ್ವಾಸವನ್ನು ಗಳಿಸಬೇಕು. ಸಿದ್ದರಾಮಯ್ಯ ಖಂಡಿತವಾಗಿ ಕೋಲಾರ ಕ್ಷೇತ್ರದಲ್ಲಿ ಸ್ಪರ್ಧೆ ಮಾಡೇ ಮಾಡುತ್ತಾರೆ. ಅವರು ಬರುವ ಮುಂಚೆ ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರನ್ನು ಜೊತೆಯಲ್ಲಿ ಕರೆದುಕೊಂಡು ಹೋಗುತ್ತೇವೆ ನಮ್ಮಲ್ಲಿ ಯಾವುದೇ ಬಣಗಳು ಇಲ್ಲ ಎಲ್ಲರೂ ಒಗ್ಗಟ್ಟಿನಿಂದ ಹೋಗುತ್ತೇವೆ. ಸಿದ್ಧರಾಮಯ್ಯ ಕ್ಷೇತ್ರದ ಆಯ್ಕೆ ಬಗ್ಗೆ ಹೈಕಮಾಂಡ್‌ ನಿರ್ಧಾರ ಮಾಡುವುದು ನಿಜ. ಕೋಲಾರದಿಂದಲೇ ಸ್ಪರ್ಧೆ ಮಾಡುವುದಾಗಿ ಭರವಸೆ ನೀಡಿದ್ದಾರೆ. ನಾವು ಕರೆದಲ್ಲಿ ಕೋಲಾರಕ್ಕೆ ಬರಲು ಸಿದ್ಧರಿದ್ದಾರೆ, ಈ ಹಿನ್ನಲೆಯಲ್ಲಿ ಬೂತ್‌ ಮಟ್ಟದಲ್ಲಿ ಪಕ್ಷವನ್ನು ಸಂಘಟನೆ ಮಾಡುತ್ತಿದ್ದೇವೆ ಎಂದರು.

ಎಂಎಲ್ಸಿ ಅನಿಲ್‌ ಕುಮಾರ್‌ ಮಾತನಾಡಿ, ಸಿದ್ದರಾಮಯ್ಯ ಕೋಲಾರಕ್ಕೆ ಬಂದು ಹೋದ ನಂತರ ಕಾರ್ಯಕರ್ತರಲ್ಲಿ ಗೊಂದಲಗಳನ್ನು ಸೃಷ್ಟಿಯಾಗಿದ್ದು, ಕ್ಷೇತ್ರದ 23 ಗ್ರಾಮ ಪಂಚಾಯತಿಗಳಲ್ಲಿ ಪೂರ್ವಭಾವಿ ಸಭೆಗಳನ್ನು ನಡೆಸಿ ಕಾಂಗ್ರೆಸ್‌ ಪಕ್ಷದ ಸಂಘಟನೆಯನ್ನು ಒತ್ತು ನೀಡಲಾಗುತ್ತದೆ. ಯಾರೋ ಕೆಲವರು ಕಾಂಗ್ರೆಸ್‌ ಎಲ್ಲಿದೆ ಅಂತ ವ್ಯಂಗ್ಯ ಮಾಡಿದ್ದರು. 21ಗ್ರಾಪಂ ಸದಸ್ಯರಲ್ಲಿ 13 ಜನ ಸಭೆಗೆ ಬಂದಿದ್ದಾರೆ. ಇದೇ ರೀತಿ ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಸಭೆ ಮಾಡಿ ಡಿಸೆಂಬರ್‌ ಮೂರನೇ ವಾರದಲ್ಲಿ ಮೂರು ದಿನ ಕ್ಷೇತ್ರ ಪ್ರವಾಸವನ್ನು ಸಿದ್ದರಾಮಯ್ಯ ನಡೆಸಲಿದ್ದಾರೆ ಎಂದರು.

ಮಾಜಿ ಸಭಾಪತಿ ವಿ.ಆರ್‌ ಸುದರ್ಶನ್‌, ಹಿರಿಯ ದಲಿತ ಮುಖಂಡ ಸಿ.ಎಂ ಮುನಿಯಪ್ಪ, ಕೋಮುಲ್‌ ನಿರ್ದೇಶಕ ಹನುಮೇಶ್‌, ನಗರಸಭೆ ಸದಸ್ಯ ಅಂಬರೀಶ್‌, ವಕ್ಕಲೇರಿ ಗ್ರಾಪಂ ಅಧ್ಯಕ್ಷ ಮೈಲಾಂಡಹಳ್ಳಿ ಮುರಳಿ, ಮಾಜಿ ಅಧ್ಯಕ್ಷರಾದ ವಕ್ಕಲೇರಿ ರಾಜಪ್ಪ, ಲೋಕೇಶ್‌, ಕಾಂಗ್ರೆಸ್‌ ಮುಖಂಡರಾದ ಸೀಸಂದ್ರ ಗೋಪಾಲಗೌಡ, ರಾಜು ಶ್ರನಿವಾಸಪ್ಪ, ಕುರುಬರಪೇಟೆ ಸೋಮಶೇಖರ್‌, ನಾರಾಯಣಪ್ಪ, ಇನಾಯತ್‌, ವರದೇನಹಳ್ಳಿ ವೆಂಕಟೇಶ್‌, ಮಾರ್ಜೇನಹಳ್ಳಿ ಬಾಬು, ಅನ್ವರ್‌ ಪಾಷ, ನದೀಂ ಯುವ ಕಾಂಗ್ರೆಸ್‌ ನವೀನ್‌ ಇದ್ದರು.