ಸಿದ್ದರಾಮಯ್ಯ ಎಡ-ಬಲ : 1985 ರಿಂದಲೂ ಸೋಲು-ಗೆಲುವಿನಲ್ಲಿ ಜೊತೆಯಾದ ತ್ರಿಮೂರ್ತಿಗಳು!

ಜನತಾ ಪರಿವಾರವೇ ಇರಲಿ, ಕಾಂಗ್ರೆಸ್ ಇರಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡು ಎಡ-ಬಲದಂತಿರುವ ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಪಶುಸಂಗೋಪನೆ, ರೇಷ್ಮೆ ಹಾಗೂ ಚಾಮರಾಜನಗರ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಅವರು ಸಚಿವರಾಗಿ ಸೋಮವಾರಕ್ಕೆ (ಮೇ 27) ಒಂದು ವರ್ಷ ಪೂರೈಸಿದ್ದಾರೆ.

Siddaramaiah left-right: the trinity that has been together in defeat and victory since 1985 snr

 ಅಂಶಿ ಪ್ರಸನ್ನಕುಮಾರ್

 ಮೈಸೂರು :  ಜನತಾ ಪರಿವಾರವೇ ಇರಲಿ, ಕಾಂಗ್ರೆಸ್ ಇರಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡು ಎಡ-ಬಲದಂತಿರುವ ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಪಶುಸಂಗೋಪನೆ, ರೇಷ್ಮೆ ಹಾಗೂ ಚಾಮರಾಜನಗರ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಅವರು ಸಚಿವರಾಗಿ ಸೋಮವಾರಕ್ಕೆ (ಮೇ 27) ಒಂದು ವರ್ಷ ಪೂರೈಸಿದ್ದಾರೆ.

ಕಳೆದ ವರ್ಷ ಮೇ 20ರಂದು ಸಿದ್ದರಾಮಯ್ಯ ಅವರು ಎರಡನೇ ಬಾರಿ ಮುಖ್ಯಮಂತ್ರಿಯಾದರು. ಮೊದಲ ಎಂಟು ಮಂದಿ ಸಂಪುಟ ಸೇರಿದರು. ನಂತರ ಮೇ 27ರಂದು ಪೂರ್ಣ ಪ್ರಮಾಣದಲ್ಲಿ ಎಲ್ಲಾ 34 ಸ್ಥಾನಗಳನ್ನು ಭರ್ತಿ ಮಾಡಲಾಯಿತು. ಅಂದು ಮೈಸೂರು ಜಿಲ್ಲೆಯಿಂದ ಟಿ.ನರಸೀಪುರ ಕ್ಷೇತ್ರದ ಡಾ.ಎಚ್.ಸಿ.ಮಹದೇವಪ್ಪ ಹಾಗೂ ಪಿರಿಯಾಪಟ್ಟಣ ಕ್ಷೇತ್ರದ ಕೆ. ವೆಂಕಟೇಶ್ ಅವರು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.

ಇಬ್ಬರೂ ಆರನೇ ಬಾರಿ ವಿಧಾನಸಭೆ ಪ್ರವೇಶಿಸಿದವರು. ಮಹದೇವಪ್ಪ ಐದನೇ ಬಾರಿ, ವೆಂಕಟೇಶ್ ಎರಡನೇ ಬಾರಿ ಮಂತ್ರಿಯಾಗಿದ್ದಾರೆ.

ಮಹದೇವಪ್ಪ ಅವರು 1985, 1994, 2004 ರಲ್ಲಿ ಜನತಾ ಪರಿವಾರ, 2008, 2013, 2023 ರಲ್ಲಿ ಕಾಂಗ್ರೆಸ್ ಟಿಕೆಟ್ ಮೇಲೆ- ಒಟ್ಟು ಆರು ಬಾರಿ ಟಿ. ನರಸೀಪುರ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾದವರು. 1989 ರಲ್ಲಿ ಕಾಂಗ್ರೆಸ್ನ ಎಂ. ಶ್ರೀನಿವಾಸಯ್ಯ, 1999 ರಲ್ಲಿ ಬಿಜೆಪಿಯ ಡಾ.ಎನ್.ಎಲ್. ಭಾರತೀಶಂಕರ್, 2008 ರಲ್ಲಿ ಜೆಡಿಎಸ್‌ನ ಎಂ.ಅಶ್ವಿನ್‌ಕುಮಾರ್ ಎದುರು ಸೋತಿದ್ದರು.

1994 ರಲ್ಲಿ ಎಚ್.ಡಿ. ದೇವೇಗೌಡ ಹಾಗೂ ಜೆ.ಎಚ್. ಪಟೇಲ್ ಸಂಪುಟದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಗಿದ್ದರು. 2004 ರಲ್ಲಿ ಎನ್. ಧರಂಸಿಂಗ್ ನೇತ್ವತ್ವದ ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾಗಿದ್ದರು. ಬಾಗಲಕೋಟೆ, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ನಿರ್ವಹಿಸಿದ್ದರು. 2013 ರಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಲೋಕೋಪಯೋಗಿ ಸಚಿವರಾಗಿದ್ದರು. ಹಾಸನ, ಕೊಡಗು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ಮೂರು ಜಿಲ್ಲೆಗಳಲ್ಲೂ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಂಘಟಿಸುವ ಅಪರೂಪದ ಅವಕಾಶ ಅವರಿಗೆ ಸಿಕ್ಕಿತ್ತು.

ಪಿರಿಯಾಪಟ್ಟಣದಿಂದ ಕೆ.ವೆಂಕಟೇಶ್ ಅವರು 1985, 1994, 2004 ರಲ್ಲಿ ಜನತಾ ಪರಿವಾರ, 2008, 2013, 2023 ರಲ್ಲಿ ಕಾಂಗ್ರೆಸ್ ಟಿಕೆಟ್ ಮೇಲೆ ಆಯ್ಕೆಯಾದವರು. 1989 ರಲ್ಲಿ ಕಾಂಗ್ರೆಸ್ನ ಕೆ.ಎಸ್. ಕಾಳಮರೀಗೌಡ, 1999 ರಲ್ಲಿ ಬಿಜೆಪಿಯ ಎಚ್.ಸಿ. ಬಸವರಾಜು, 2005 ರಲ್ಲಿ ಜೆಡಿಎಸ್ನ ಕೆ. ಮಹದೇವ್ ಅವರು ಎದುರು ಸೋತವರು.

1994 ರಲ್ಲಿ ಗೆದ್ದಾಗ ಜೆ.ಎಚ್.ಪಟೇಲ್ ಅವರ ಸಂಪುಟದಲ್ಲಿ ಕಾಡಾ ಸಚಿವರಾಗಿದ್ದರು. 2004 ರಲ್ಲಿ ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರ ಇದ್ದರೂ ಮಂತ್ರಿಯಾಗಲಿಲ್ಲ. ನಂತರ ಸಿದ್ದರಾಮಯ್ಯ ಅವರ ಹಿಂದೆ ಕಾಂಗ್ರೆಸ್ಗೆ ಬಂದರು. 2008 ರಲ್ಲಿ ಕಾಂಗ್ರೆಸ್ ಟಿಕೆಟ್ ಮೇಲೆ ಗೆದ್ದರು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿತು. 2013 ರಲ್ಲಿ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆದರೂ ವೆಂಕಟೇಶ್ ಅವರಿಗೆ ಮಂತ್ರಿ ಸ್ಥಾನ ಸಿಗಲಿಲ್ಲ. ಪ್ರಾದೇಶಿಕತೆ, ಜಿಲ್ಲಾ ಹಾಗೂ ಜಾತಿ ಸಮೀಕರಣದಿಂದ ಸಾಧ್ಯವಾಗಲಿಲ್ಲ. ಹೀಗಾಗಿ ಅವರನ್ನು ಬಿಡಿಎ ಅಧ್ಯಕ್ಷರಾಗಿ ನೇಮಿಸಲಾಗಿತ್ತು. 2023 ರಲ್ಲಿ ಗೆದ್ದಾಗ ಎರಡನೇ ಬಾರಿ ಮಂತ್ರಿಯಾದರು.

ಮಹದೇವಪ್ಪ ಹಾಗೂ ವೆಂಕಟೇಶ್ ಇಬ್ಬರೂ ಸಿದ್ದರಾಮಯ್ಯ ಅವರು ಆಪ್ತ ವಲಯಕ್ಕೆ ಸೇರಿದವರು. ಮಹದೇವಪ್ಪ ಅವರು 2013-18 ರಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ವಿ, ಶ್ರೀನಿವಾಸಪ್ರಸಾದ್ ಅವರನ್ನು ಸಂಪುಟದಿಂದ ಕೈಬಿಟ್ಟ ನಂತರ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ಸಿದ್ದರಾಮಯ್ಯ ನೇತೃತ್ವದಲ್ಲಿ ಎರಡನೇ ಅವಧಿಗೆ ಕಾಂಗ್ರೆಸ್ ಸರ್ಕಾರ 2023 ರಲ್ಲಿ ಅಧಿಕಾರಕ್ಕೆ ಬಂದ ನಂತರವೂ ಅವರೇ ಉಸ್ತುವಾರಿ ಮಂತ್ರಿಯಾಗಿದ್ದಾರೆ.

2004, 2013 ರಲ್ಲಿ ಮಂತ್ರಿ ಸ್ಥಾನ ಮಿಸ್ ಮಾಡಿಕೊಂಡಿದ್ದ ವೆಂಕಟೇಶ್ ಕೊನೆಗೂ ಮಂತ್ರಿಯಾದರು. ಆದರೆ ಅವರಿಗೆ ಅವಿಭಜಿತ ಮೈಸೂರು ಜಿಲ್ಲೆಗೆ ಸೇರಿದ ಚಾಮರಾಜನಗರದ ಉಸ್ತುವಾರಿ ನೀಡಲಾಗಿದೆ.

 ಬದಲಾಗುತ್ತಾ ಉಸ್ತುವಾರಿ? 

ಮಹದೇವಪ್ಪ ಅವರ ಪುತ್ರ ಸುನಿಲ್ ಬೋಸ್ ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ. ಅವರು ಗೆದ್ದರೆ ಸಂಸದರಾಗುತ್ತಾರೆ. ಹೀಗಾಗಿ ಮಹದೇವಪ್ಪ ಅವರನ್ನೇ ಚಾಮರಾಜನಗರ ಜಿಲ್ಲಾ ಉಸ್ತುವಾರಿಯಾಗಿ ಮಂತ್ರಿ ಮಾಡಬೇಕು. ಇದರಿಂದ ಅನುಕೂಲವಾಗುತ್ತದೆ ಎಂಬುದು ವೆಂಕಟೇಶ್ ಅವರ ಅಭಿಪ್ರಾಯ ಎನ್ನಲಾಗಿದೆ. ಇದಲ್ಲದೇ ತಮಗೂ ಕೂಡ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಕೆಲಸ ಮಾಡಿ, ವಿಶ್ವವಿಖ್ಯಾತ ದಸರಾ ಮಹೋತ್ಸವ ನಡೆಸಲು ಅವಕಾಶ ಮಾಡಿಕೊಡುವಂತೆ ಕೇಳಿದ್ದಾರೆ ಎನ್ನಲಾಗಿದೆ. ಇದಕ್ಕೆ ಸಿಎಂ ಸಿದ್ದರಾಮಯ್ಯ ಅವರಿಂದ ಪೂರಕ ಭರವಸೆ ಸಿಕ್ಕಿದೆ ಎನ್ನಲಾಗಿದೆ.

ಆದರೆ, ಡಾ.ಎಚ್.ಸಿ. ಮಹದೇವಪ್ಪ, ಕೆ. ವೆಂಕಟೇಶ್ ಇಬ್ಬರೂ ಜೊತೆಯಾಗಿಯೇ ಸುದ್ದಿಗಾರರೊಂದಿಗೆ ಮಾತನಾಡಿ, ಆ ರೀತಿ ಏನಿಲ್ಲ. ನಾವು ಒಟ್ಟಾಗೆ ಕೆಲಸ ಮಾಡಿಕೊಂಡು ಹೋಗುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.

1985 ರಿಂದಲೂ ಸೋಲು-ಗೆಲುವಿನಲ್ಲಿ ಜೊತೆಯಾದ ತ್ರಿಮೂರ್ತಿಗಳು!

ಮೈಸೂರು ಭಾಗದಲ್ಲಿ 1985ರಿಂದಲೂ ಸಿದ್ದರಾಮಯ್ಯ, ಡಾ.ಎಚ್.ಸಿ.ಮಹದೇವಪ್ಪ, ಕೆ.ವೆಂಕಟೇಶ್ ಅವರು ಸೋಲು- ಗೆಲುವಿನಲ್ಲಿ ಜೊತೆಗಾರರು!.

ಸಿದ್ದರಾಮಯ್ಯ ಒಂದು ಉಪ ಚುನಾವಣೆ ಸೇರಿದಂತೆ ಒಂಭತ್ತು ಚುನಾವಣೆಗಳಲ್ಲಿ ಗೆದ್ದಿದ್ದಾರೆ. ಉಳಿದಿಬ್ಬರು ತಲಾ ಆರು ಬಾರಿ ಗೆದ್ದಿದ್ದಾರೆ. ಆದರೆ ಮೂವರಿಗೂ ಮೂರು ಬಾರಿ ಸೋಲಾಗಿದೆ.

ಸಿದ್ದರಾಮಯ್ಯ ಅವರು ಮಹದೇವಪ್ಪ, ವೆಂಕಟೇಶ್ ಅವರಿಗಿಂತ ಒಂದು ಚುನಾವಣೆ ಮೊದಲು ಅಂದರೆ 1983ರಲ್ಲಿ ವಿಧಾನಸಭೆ ಪ್ರವೇಶಿಸಿದರು. 1985, 1994, 2004, 2008, 2013, 2023 ರಲ್ಲಿ ಸಿದ್ದರಾಮಯ್ಯ, ಡಾ.ಎಚ್.ಸಿ. ಮಹದೇವಪ್ಪ, ಕೆ.ವೆಂಕಟೇಶ್ ಗೆದ್ದಿದ್ದಾರೆ. 1989, 1999, 2018ರಲ್ಲಿ ಮೂವರು ಸೋತಿದ್ದಾರೆ. ಸಿದ್ದರಾಮಯ್ಯ ಅವರು 2018 ರಲ್ಲಿ ಬಾದಾಮಿಯಿಂದಲೂ ಸ್ಪರ್ಧಿಸಿ, ಗೆದ್ದು ಬಚಾವ್ ಆಗಿದ್ದರು.

ತನ್ವೀರ್ ಸೇಠ್ ಕಾಯುವುದು ಅನಿವಾರ್ಯ

ಮೈಸೂರಿನ ನರಸಿಂಹರಾಜ ಕ್ಷೇತ್ರದಿಂದ ಒಂದು ಉಪ ಚುನಾವಣೆ ಸೇರಿದಂತೆ 2002, 2004, 2008, 2013, 2018, 2023- ಹೀಗೆ ಸತತ ಆರು ಬಾರಿ ಗೆದ್ದಿರುವ ತನ್ವೀರ್ ಸೇಠ್ ಅವರು ಮಂತ್ರಿಗಿರಿಗಾಗಿ ಕಾಯುವುದು ಅನಿವಾರ್ಯ. ಜಿಲ್ಲೆ. ಜಾತಿ ಮತ್ತು ಪ್ರಾದೇಶಿಕತೆ ಇದಕ್ಕೆ ಕಾರಣ.

ತನ್ವೀರ್ ಸೇಠ್ ಅವರು 2004 ರಲ್ಲಿ ಧರಂಸಿಂಗ್ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಕಾರ್ಮಿಕ ಹಾಗೂ ವಕ್ ಸಚಿವರಾಗಿ ಕೊಡಗು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ನಿರ್ವಹಿಸಿದ್ದರು. 2013 ರಲ್ಲಿ ಮೂರು ಕಾಲು ವರ್ಷದ ನಂತರ ಸಿದ್ದರಾಮಯ್ಯ ಸಂಪುಟ ಸೇರಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರಾಗಿ, ರಾಯಚೂರು ಜಿಲ್ಲಾ ಉಸ್ತುವಾರಿ ನಿರ್ವಹಿಸಿದ್ದರು.

ಸಿಎಂ ಸಿದ್ದರಾಮಯ್ಯ ಸೇರಿದಂತೆ ಮೈಸೂರು ಜಿಲ್ಲೆಯ ಮೂವರು ಸಚಿವರಾಗಿರುವುದರಿಂದ ಅವರಿಗೆ ಸಿಕ್ಕಿಲ್ಲ.

ಆರು ಬಾರಿ ಗೆದ್ದಿದ್ದರೂ ವೆಂಕಟೇಶ್ ಅವರು ಮಂತ್ರಿಯಾಗಿರುವುದು ಈಗ ಎರಡನೇ ಬಾರಿ ಮಾತ್ರ. ಅಲ್ಪಸಂಖ್ಯಾತ ಕೋಟಾದಡಿ ಜಮೀರ್ ಅಹಮದ್ ಖಾನ್, ರಹೀಂ ಖಾನ್ ಅವರಿಗೆ ಅವಕಾಶ ಮಾಡಿಕೊಡಲಾಗಿದೆ. ಹೀಗಾಗಿ ತನ್ವೀರ್ ಸೇಠ್ ಅವರು ಕಾಯುವುದು ಅನಿವಾರ್ಯವಾಗಿದೆ. ಹೀಗಾಗಿಯೇ ಅವರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನ ನೀಡಲಾಗಿದೆ.

ಒಂದು ವೇಳೆ ಎರಡೂವರೆ ವರ್ಷದ ನಂತರ ಇಡೀ ಸಂಪುಟ ಬದಲಾಗಬೇಕಾಗಿ ಬಂದರೇ ಆಗ ತನ್ವೀರ್ ಸೇಠ್, ಪುಟ್ಟರಂಗಶೆಟ್ಟಿ, ಅವರಿಗೆ ಅವಕಾಶ ಸಿಗಬಹುದು. ಅನಿಲ್ ಚಿಕ್ಕಮಾದು, ಎ.ಆರ್. ಕೃಷ್ಣಮೂರ್ತಿ ಅವರು ಕೂಡ ಪ್ರಯತ್ನಿಸಬಹುದು 

Latest Videos
Follow Us:
Download App:
  • android
  • ios