ಸೋನಿಯಾ, ರಾಹುಲ್ ಎದುರು ಸಿದ್ದು ವೀರಾವೇಶದ ಮಾತಾಡುತ್ತಾರೆಯೇ?
ರಾಹುಲ್‌ಗಾಂಧಿ, ಸೋನಿಯಾ ಗಾಂಧಿ ಅವರ ಮುಂದೆ ನಿಂತು ಸಿದ್ದರಾಮಯ್ಯ ವೀರಾವೇಶದಿಂದ ಮಾತನಾಡುತ್ತಾರೆಯೇ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಪ್ರಶ್ನಿಸಿದರು.
ಮೈಸೂರು ( ಜ. 07): ರಾಹುಲ್‌ಗಾಂಧಿ, ಸೋನಿಯಾ ಗಾಂಧಿ ಅವರ ಮುಂದೆ ನಿಂತು ಸಿದ್ದರಾಮಯ್ಯ ವೀರಾವೇಶದಿಂದ ಮಾತನಾಡುತ್ತಾರೆಯೇ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಪ್ರಶ್ನಿಸಿದರು.
ಕೋವಿಡ್ ಬಳಿಕ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಏನು ಮಾತನಾಡುತ್ತಾರೆ ಎಂಬುದೇ ಅರಿವು ಇರುವುದಿಲ್ಲ. ಬಸವರಾಜ ಬೊಮ್ಮಾಯಿ ಅವರು ವರಿಷ್ಠರಿಗೆ ಹೆದರುವ ಅಗತ್ಯವಿಲ್ಲ. ರಾಜ್ಯಕ್ಕೆ ಬೇಕಾದ ಯೋಜನೆಗೆ ಅನುಮೋದನೆ ಪಡೆದುಕೊಂಡು ಬರುತ್ತಿದ್ದಾರೆ ಎಂದರು.
ಮೋದಿ ಅವರು ವಿಶ್ವಮೆಚ್ಚಿದ ನಾಯಕರು. ಅವರ ಹುದ್ದೆಗೆ ನೀಡಬೇಕಾದ ಗೌರವವನ್ನು ಬೊಮ್ಮಾಯಿ ಅವರು ನೀಡುತ್ತಿದ್ದಾರೆ. ಅದರಲ್ಲಿ ತಪ್ಪಿಲ್ಲ. ಪ್ರಧಾನಿ ಸಾಮಾನ್ಯರೊಡನೆಯೂ ಬೆರೆಯುವ ಸರಳ ವ್ಯಕ್ತಿತ್ವದವರು. ಆದ್ದರಿಂದ ಬೊಮ್ಮಾಯಿ ಅವರನ್ನು ನಾಯಿ ಮರಿಗೆ ಹೋಲಿಸುವುದು ಸರಿಯಲ್ಲ ಎಂದು ಕಿಡಿಕಾರಿದರು.
ಬಿಜೆಪಿಗರು ಬ್ರಿಟಿಷರ ಋಣ ತೀರಿಸುತ್ತಿದ್ದಾರೆ: ಎಚ್.ಸಿ.ಮಹದೇವಪ್ಪ ಟೀಕೆ
ಯುವತಿಯರ ಪೂರೈಕೆ ಸಂಬಂಧ ಸಿಎಂಗೆ ದೂರು ನೀಡಿದರೆ ಅವರು ತನಿಖೆ ಮಾಡಿಸುತ್ತಾರೆ. ಈ ರೀತಿಯ ದಂಧೆ ಮಾಡುವ ರಾಜಕಾರಣಿಗಳು ಯಾರೂ ಇಲ್ಲ. ಮಾಡುವವರಿಗೆ ಮಾತ್ರ ಸಂಪೂರ್ಣ ಮಾಹಿತಿ ಇರುತ್ತದೆ. ನಾವು ಅಪ್ಪ, ಅಮ್ಮನಿಗೆ ಹುಟ್ಟಿಸಂಸ್ಕಾರ ಕಲಿತಿದ್ದೇವೆ. ಅನ್ನ ತಿನ್ನುವ ನಾಲಿಗೆಯಲ್ಲಿ ಏನೇನೋ ಮಾತನಾಡುವುದಲ್ಲ. ಕುಣಿಯಲಾರದವರು ನೆಲಡೊಂಕು ಎನ್ನುವಂತೆ ಕುಮರಸ್ವಾಮಿ ಅವರು ಚುನಾವಣೆಯಲ್ಲಿ ಗೆಲ್ಲಲಾಗದೆ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಸರ್ಕಾರ ನಡೆಸಲಾಗದೆ ಹೊಟೇಲ್‌ನಲ್ಲಿ ಕುಳಿತು ಅಧಿಕಾರ ನಡೆಸಿದ್ದರು. ಇದೇ ಕಾರಣಕ್ಕೆ ನಾವು ಪಕ್ಷ ತೊರೆಯಬೇಕಾಯಿತು. ಅವರು ಸರಿಯಾಗಿ ಐದು ವರ್ಷ ಸರ್ಕಾರ ನಡೆಸಿದ್ದರೆ ನಾವು ಪಕ್ಷ ಬಿಡುವ ಅಗತ್ಯವೇ ಬರುತ್ತಿರಲಿಲ್ಲ ಎಂದು ತಿರುಗೇಟು ನೀಡಿದರು.
ಪ್ರಿಯಾಂಕ ಖರ್ಗೆ ಎಳಸು
ಆಡಳಿತ ಕೇಂದ್ರವಾದ ವಿಧಾನಸೌಧವನ್ನು ಶಾಪಿಂಗ್ ಮಾಲ್‌ಗೆ ಹೋಲಿಸಿದ ಪ್ರಿಯಾಂಕ ಖರ್ಗೆ ಎಳಸು. ಶಕ್ತಿಸೌಧವನ್ನು ಮಾಲ್‌ಗೆ ಹೋಲಿಸಿದವರನ್ನು ಶಾಸಕ ಎಂದು ಹೇಳಲಾಗುತ್ತದೆಯೇ? ನೀನು ಮಂತ್ರಿ ಆಗಿದ್ದಾಗ ಮಾಲ್ ಅನ್ನಿಸಲಿಲ್ಲವೇ? ಕಾಂಗ್ರೆಸ್ ಸರ್ಕಾರ ಇದ್ದಾಗ ಅಂದಿನ ಸಚಿವ ಪುಟ್ಟರಂಗಶೆಟ್ಟಿಕಚೇರಿಯಲ್ಲಿ 25 ಲಕ್ಷ ದೊರಕಿದಾಗ ವಿಧಾನಸೌಧ ಏನಾಗಿತ್ತು ಎಂದು ಅವರು ಪ್ರಶ್ನಿಸಿದರು.
ಸ್ಯಾಂಟ್ರೊ ರವಿ ಗೃಹಸಚಿವ, ಬಿಜೆಪಿ ರಾಜ್ಯ ಉಪಾಧ್ಯಕ್ಷರ ಜೊತೆ ಫೋಟೋ ತೆಗೆಸಿಕೊಂಡಿರುವುದಕ್ಕೆ ಪ್ರತಿಕ್ರಿಯಿಸಿ, ಶಾಸಕರು, ಸಚಿವರ ಬಳಿಗೆ ನಿತ್ಯ ಹತ್ತಾರು ಮಂದಿ ಸೆಲ್ಫಿ ಮತ್ತು ಫೋಟೋ ಕ್ಲಿಕ್ಕಿಸಿಕೊಳ್ಳಲು ಬರುತ್ತಾರೆ. ಹಾಗಂತ ಅವರರೆಲ್ಲರ ಪೂರ್ವ ಪರ ತಿಳಿದುಕೊಳ್ಳಲು ಸಾಧ್ಯವೇ? ಫೋಟೊ ತೆಗೆಯುವುದು ಬೇಡ ಎಂದರೆ ದುರಹಂಕಾರ ಎಂದುಕೊಳುತ್ತಾರೆ ಎಂದು ಅವರು ಹೇಳಿದರು.
ಸಿದ್ದರಾಮಯ್ಯ ಗೆಲ್ಲುವುದು ಭ್ರಮೆ
ಕೋಲಾರ ಸಚಿವ ಸಂಪುಟ ವಿಸ್ತರಣೆ ಮುಖ್ಯ ಮಂತ್ರಿಗಳಿಗಿರುವ ಪರಮಾಧಿಕಾರ, ಅವರು ಯಾವ ನಿರ್ಧಾರವನ್ನಾದರೂ ತೆಗದುಕೊಳ್ಳಬಹುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಹೇಳಿದರು. ಸೋಮವಾರ ನಗರದ ಕೆಇಬಿ ಸಮುದಾಯ ಭವನದಲ್ಲಿ ಬಿಜೆಪಿ ಬೂತ್ ವಿಜಯ್ ಅಭಿಯಾನದ ಕಾರ್ಯಕ್ರಮಕ್ಕೂ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿ, ಜಾರಕಿಹೊಳಿ ಅವರು ಒಳ್ಳೆಯ ವ್ಯಕ್ತಿ, ಶಾಸಕ, ಜಾರಕಿಹೊಳಿ ಅವರನ್ನ ಸಚಿವ ಸಂಪುಟಕ್ಕೆ ತೆಗೆದುಕೊಳ್ಳಲು ಯಾವುದೇ ವಿರೋಧವಿಲ್ಲ. ಕೆಲವು ಘಟನೆಗಳಿಂದ ಅದು ಕುತಂತ್ರದ ಸಂಚು, ಹಾಗಾಗಿ ಅವರು ಮೋಸ ಹೋಗಿದ್ದಾರೆ ಎಂದರು. ಅದೇ ರೀತಿ ಈಶ್ವರಪ್ಪ ಅವರು ಸಹ ಪಕ್ಷಕ್ಕೆ ಒಂದು ಶಕ್ತಿ, ಅವರಿಬ್ಬರನ್ನ ಸಚಿವ ಸಂಪುಟಕ್ಕೆ ತೆಗೆದುಕೊಳ್ಳಲು ಯಾವುದೇ ಅಡ್ಡಿಯಿಲ್ಲ, ಮುಖ್ಯಮಂತ್ರಿಗಳು ತೆಗೆದುಕೊಳ್ಳುವ ತೀರ್ಮಾನಕ್ಕೆ ನಾವು ಬದ್ಧ ಎಂದು ತಿಳಿಸಿದರು.
ಕೋಲಾರದಲ್ಲಿ ಬಿಜೆಪಿಗೇ ಗೆಲುವು: ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವ ಮುನಿರತ್ನ ಸಿದ್ದರಾಮಯ್ಯ ಅವರು ಘೋಷಣೆ ಮಾಡಲಿ ಮಾಡದೆ ಇರಲಿ, ಅವರು ಬರಲಿ ಬರದೆ ಇರಲಿ, ಅದು ನಮಗೆ ಬೇಡವಾದ ವಿಷಯ. ನಾವು ಕೋಲಾರವನ್ನ ಗೆದ್ದೆ ಗೆಲ್ಲುತ್ತೇವೆ. ಯಾವುದೇ ಅನುಮಾನವಿಲ್ಲ. ರಾಜಕೀಯ ಎನ್ನುವುದು ಯಾರೂ ಊಹೆ ಮಾಡಲಾಗುವುದಿಲ್ಲ. ನಮ್ಮಲ್ಲಿ ಈಗಾಗಲೇ ಪ್ರಬಲ ಅಭ್ಯರ್ಥಿ ಇದ್ದಾರೆ, ಯಾರೋ ಒಬ್ಬರು ಗಣ್ಯ ವ್ಯಕ್ತಿ, ಮುಖ್ಯಮಂತ್ರಿಗಳಾಗಿದ್ದವರು ಬಂದು ಗೆಲ್ತಾರೆ ಎನ್ನುವುದು ಭ್ರಮೆ. ಈ ಹಿಂದೆ ಸಿದ್ದುನ್ಯಾಮಗೌಡರು ಹೆಗಡೆ ಅವರನ್ನ ಸೋಲಿಸಿದ್ದರು. ಹಾಗಾಗಿ ನಾನೇ ಗೆದ್ದು ಬಿಡುವೆ ಎಂದುಕೊಳ್ಳುವುದು ಭ್ರಮೆ ಎಂದರು.