Asianet Suvarna News Asianet Suvarna News

Irrigation Project: 'ಕೊಪ್ಪಳ ಏತ ನೀರಾವರಿ ಯೋಜನೆ ಸಿದ್ದರಾಮಯ್ಯ ಕೊಡುಗೆ'

*  ಸಚಿವ ಹಾಲಪ್ಪ ಆಚಾರ್‌ ತಿಳಿದುಕೊಂಡು ಮಾತನಾಡಬೇಕು
*  ಟೆಂಡರ್‌ ಆಗದೆ ಅಡಿಗಲ್ಲು ಹಾಕಿದ್ದು ಅಡ್ಡಗಾಲು ಅಲ್ಲವೇ?
*  ಮಾಜಿ ಸಚಿವ ಬಸವರಾಜ ರಾಯರಡ್ಡಿ ಪ್ರಶ್ನೆ
 

Siddaramaiah Contribute to Koppal Lift Irrigation Project Says Basavaraj Rayareddy grg
Author
Bengaluru, First Published Jan 8, 2022, 10:21 AM IST

ಕೊಪ್ಪಳ(ಜ.08):  ಕೊಪ್ಪಳ ಏತ ನೀರಾವರಿ ಯೋಜನೆ(Koppal Lift Irrigation Project)ಮತ್ತು ಕೊಪ್ಪಳ, ಬಾಗಲಕೋಟೆ, ವಿಜಯಪುರ ಜಿಲ್ಲೆಯ 78 ಕೆರೆ ತುಂಬಿಸುವ ಯೋಜನೆ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ಅವರ ಕೊಡುಗೆ ಎಂದು ಮಾಜಿ ಸಚಿವ ಬಸವರಾಜ ರಾಯರೆಡ್ಡಿ(Basavaraj Rayareddy) ಹೇಳಿದ್ದಾರೆ. ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ಹಾಲಪ್ಪ ಆಚಾರ್‌(Halappa Achar) ಈ ಯೋಜನೆಯನ್ನು ತಾವು ಮಾಡಿದ್ದಾಗಿ ಹೇಳುವ ಜತೆಗೆ ಸಿದ್ದರಾಮಯ್ಯನವರು ನಯಾಪೈಸೆ ಅನುದಾನ(Grants) ನೀಡಿಲ್ಲ ಎಂದು ಹೇಳಿದ್ದಾರೆ. ಇಂಥ ಯೋಜನೆಯನ್ನು ಯಾರೋ ಒಬ್ಬರು ಮಾಡಿದ್ದಾರೆ ಎಂದರೆ ಮೂರ್ಖತನವಾಗುತ್ತದೆ. ಇದನ್ನು ಸರ್ಕಾರ ಮಾತ್ರ ಮಾಡಲು ಸಾಧ್ಯ. ನಾನೊಬ್ಬನೇ ಇದನ್ನು ಮಾಡಿದ್ದೇನೆ ಎಂದು ಎಲ್ಲಿಯೂ ಹೇಳಿಕೊಂಡಿಲ್ಲ ಎಂದರು.

ಇದೇ ವೇಳೆ ಮಾಹಿತಿ ಹಕ್ಕು ಕಾಯ್ದೆ ಅಡಿ ಕೃಷ್ಣಾ ಭಾಗ್ಯ ಜಲನಿಗಮದಿಂದ(Krishna Bhagya Water Board) ಪಡೆದಿರುವ ದಾಖಲೆ ಬಿಡುಗಡೆ ಮಾಡಿದರು. ಈ ಯೋಜನೆ ಅನುಷ್ಠಾನಕ್ಕೆ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಮ್ಮಿಶ್ರ ಸರ್ಕಾರದ ಎಚ್‌.ಡಿ. ಕುಮಾರಸ್ವಾಮಿ(HD Kumaraswamy) ಹಾಗೂ ಜಲಸಂಪನ್ಮೂಲ ಸಚಿವರಾಗಿದ್ದ ಡಿ.ಕೆ. ಶಿವಕುಮಾರ(DK Shivakumar) ಕಾರಣ ಎಂದು ಅವರು ಬರೆದಿರುವ ಪತ್ರಗಳ ಪ್ರತಿ ಸಹ ಬಿಡುಗಡೆ ಮಾಡಿದರು.

Upper Krishna Project: ಕೊಪ್ಪಳ ಏತ ನೀರಾವರಿ ಯೋಜನೆಗೆ 2,715 ಕೋಟಿ ವೆಚ್ಚ: ಸಚಿವ ಕಾರಜೋಳ

ಕೃಷ್ಣಾ ಭಾಗ್ಯಜಲನಿಗಮದ ಮೂಲಕ ಪಡೆದಿರುವ ದಾಖಲೆ ತೋರಿಸಿ, 23.1. 2013ರಲ್ಲಿ ಆಗಿನ ಮುಖ್ಯಮಂತ್ರಿ ಮೊದಲ ಹೆಡ್‌ವರ್ಕ್‌ಗೆ ಶಿಲಾನ್ಯಾಸ ಮಾಡಿದ್ದಾರೆ. 4.1. 2012ರಂದು ಮೊದಲ ಕಾಮಗಾರಿಗೆ ಹಾಗೂ 13.2.2014 ಎರಡೇ ಕಾಮಗಾರಿಗೆ ಟೆಂಡರ್‌ ಕರೆಯಲಾಗಿದೆ. 13.9. 2013ರಂದು ಕರಾರು ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ರಾಯರಡ್ಡಿ ತಿಳಿಸಿದರು.

2013-14ರಿಂದ 2018-19ರ ವರೆಗೂ ಐದು ಹಂತದಲ್ಲಿ 1500 ಕೋಟಿ ಬಿಡುಗಡೆಯಾಗಿದೆ ಎಂದ ಅವರು, ಆಗ ಯಾವ ಸರ್ಕಾರ ಅಧಿಕಾರದಲ್ಲಿ ಇತ್ತು ಎನ್ನುವುದನ್ನು ಹಾಲಪ್ಪ ಆಚಾರ್‌ ತಿಳಿದುಕೊಳ್ಳಬೇಕು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಎಷ್ಟುಹಣ ಬಿಡುಗಡೆಯಾಗಿದೆ ಎನ್ನುವುದನ್ನು ಹೇಳಬೇಕು ಎಂದು ಸವಾಲು ಹಾಕಿದರು.

ನಾನು ನೀರಾವರಿ(Irrigation) ಕುರಿತು ಸದನದಲ್ಲಿ ಎಷ್ಟುಬಾರಿ ಮಾತನಾಡಿದ್ದೇನೆ ಎನ್ನುವ ದಾಖಲೆ ಬಿಡುಗಡೆ ಮಾಡುತ್ತೇನೆ. ಇವರು ಎಷ್ಟು ಬಾರಿ ಮಾತನಾಡಿದ್ದಾರೆ ಎನ್ನುವುದನ್ನು ತಿಳಿಸಲಿ. ಒಬ್ಬ ಶಾಸಕರಾಗಿ ಅವರು ಆರೋಪ ಮಾಡುತ್ತಿದ್ದರೆ ರಾಜಕೀಯ ಭಾಷಣ ಎನ್ನಬಹುದು. ಆದರೆ, ಸಚಿವರಾದ ಮೇಲೆಯೂ ಅವರು ತಮ್ಮ ಇಲಾಖೆಯ ಕುರಿತು ಮಾತನಾಡದೆ ನೀರಾವರಿ ಕುರಿತು ಸುಳ್ಳು ಹೇಳುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

'ಕಾಂಗ್ರೆಸ್‌ನಿಂದ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಅನುದಾನ'

ಜಿಲ್ಲೆ ನೀರಾವರಿ ಕ್ಷೇತ್ರವಾಗಲಿದೆ ಎಂದು ಸಚಿವರು ಹೇಳುತ್ತಿದ್ದಾರೆ. ಆದರೆ, ಆಲಮಟ್ಟಿ ಜಲಾಶಯವನ್ನು(Almatti Dam) 524 ಮೀಟರ್‌ಗೆ ಹೆಚ್ಚಳ ಮಾಡದ ಹೊರತು ನೀರು ಬಳಕೆ ಮಾಡಿಕೊಳ್ಳಲು ಬರುವುದಿಲ್ಲ. ಅಷ್ಟಕ್ಕೂ ನೀರಾವರಿಗಾಗಿ ಈ ಯೋಜನೆ ಇದೆಯೇ ಎನ್ನುವುದನ್ನು ಸಚಿವರು ಅರ್ಥ ಮಾಡಿಕೊಳ್ಳದೆ ತಪ್ಪು ಮಾಹಿತಿ ನೀಡಿದರೇ ಹೇಗೆ? ಎಂದ ಅವರು, ಬಿಜೆಪಿ ಸರ್ಕಾರ ಬಂದ ಮೇಲೆ ನೈಯಾಪೈಸೆ ಸಹ ಈ ಯೋಜನೆಗೆ ನೀಡಿಲ್ಲ ಎಂದು ದೂರಿದರು.

ಸಚಿವರ ಬಗ್ಗೆ ದ್ವೇಷವಿಲ್ಲ. ಅವರು ಸಹ ನನ್ನ ಬಗ್ಗೆ ಗೌರವದಿಂದಲೆ ನಡೆದುಕೊಳ್ಳುತ್ತಾರೆ. ಆದರೆ, ಸಚಿವರು ಸುಳ್ಳು ಹೇಳುವುದನ್ನು ಬಿಡಬೇಕು. ಪದೇ ಪದೇ ಸಿದ್ದರಾಮಯ್ಯ ಅವರು ನೈಯಾಪೈಸೆ ಕೊಟ್ಟಿಲ್ಲ ಎಂದು ಹೇಳುತ್ತಿರುವುದರಿಂದ ಈ ದಾಖಲೆ ಬಿಡುಗಡೆ ಮಾಡುತ್ತಿದ್ದೇನೆ. ಯಾರ ಕಾಲದಲ್ಲಿ ಎಷ್ಟು ಹಣ ನೀಡಲಾಗಿದೆ ಎನ್ನುವುದು ಇದರಲ್ಲಿ ಇದೆ ಎಂದರು. ಸುದ್ದಿಗೋಷ್ಠಿಯಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ, ಬಸವರಾಜ ಉಳ್ಳಾಗಡ್ಡಿ ಹಾಗೂ ಹನುಮಂತಗೌಡ ಇದ್ದರು.
 

Follow Us:
Download App:
  • android
  • ios