ಕಾಗವಾಡ/ಅಥಣಿ(ಆ.02): ಬೆಳಗಾವಿ ಜಿಲ್ಲೆಯಲ್ಲಿ ಶನಿ​ವಾ​ರ ನಡೆದ ಸಕ್ಕರೆ ಕಾರ್ಖಾ​ನೆ​ಯ ಕಾರ್ಯಕ್ರಮವೊಂದರಲ್ಲಿ ಜವಳಿ ಸಚಿವ ಶ್ರೀಮಂತ ಪಾಟೀಲ್‌ ಮರಾಠಿಯಲ್ಲಿ ಮಾತ​ನಾ​ಡಿ​ರುವ ವಿಚಾರ ಕನ್ನಡಿಗರ ಅಸಮಾಧಾನಕ್ಕೆ ಕಾರಣವಾಗಿದೆ. ಇದು ವಿವಾದದ ಸ್ವರೂಪ ತಳೆಯುತ್ತಿದ್ದಂತೆ ಎಚ್ಚೆ​ತ್ತು​ಕೊಂಡಿ​ರುವ ಶ್ರೀಮಂತ​ ಪಾಟೀಲ್‌, ತಮ್ಮ ನಡೆ​ಗೆ ಕ್ಷಮೆ​ಯಾ​ಚಿ​ಸಿ​ದ್ದಾ​ರೆ.

ಅಥಣಿ ತಾಲೂಕಿನ ಬಳ್ಳಿಗೇರಿ ಗ್ರಾಮದ ಹೊರವಲಯದಲ್ಲಿ ಶ್ರೀ ಬಸವೇಶ್ವರ ಸಕ್ಕರೆ ಕಾರ್ಖಾನೆ ನಿರ್ಮಾಣಕ್ಕೆ ಭೂಮಿ ಪೂಜೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದರಲ್ಲಿ ಮಹಾರಾಷ್ಟ್ರದ ಕೃಷಿ ಮಂತ್ರಿ ವಿಶ್ವಜೀತ ಕದಂ, ಅಲ್ಲಿನ ವಿಧಾನ ಪರಿಷತ್‌ ಸದಸ್ಯ ಮೋಹನರಾವ್‌ ಕದಂ, ಜತ್ತ ಶಾಸಕ ವಿಕ್ರಮ ಸಾವಂತ್‌, ಸಚಿವ ಶ್ರೀಮಂತ ಪಾಟೀಲ, ಕಾರ್ಖಾನೆ ಯುನಿಟ್‌ ಚೇರ್ಮನ್‌ ರಘುನಾಥ್‌ ಸೇರಿ ಹಲವರು ಉಪಸ್ಥಿತರಿದ್ದರು. ಇದು ಮಹಾರಾಷ್ಟ್ರ ಸಚಿವರ ಕಾರ್ಖಾನೆಯಾಗಿದ್ದರಿಂದ ಕಾರ್ಯಕ್ರಮದಲ್ಲಿ ಮರಾಠಿ ನಾಮಫಲಕವನ್ನೇ ಅಳವಡಿಸಲಾಗಿತ್ತು. ಕನ್ನಡ ನೆಲ​ದಲ್ಲಿ ನಡೆದ ಈ ಕಾರ್ಯ​ಕ್ರ​ಮ​ದ​ಲ್ಲಿ ಅಕ್ಷರಶಃ ಕನ್ನಡವೇ ಮಾಯವಾಗಿತ್ತು.

ಸಿಗದ ರಿಲೀ​ವಿಂಗ್‌ ಆರ್ಡರ್‌: ಪೊಲೀಸ್‌ ಸಿಬ್ಬಂದಿ ಆತ್ಮಹತ್ಯೆ ಯತ್ನ

ಕಾರ್ಯ​ಕ್ರ​ಮ​ದಲ್ಲಿ ಮಾತ​ನಾಡಿದ ಶ್ರೀಮಂತ ಪಾಟೀ​ಲ, ಆರಂಭದಲ್ಲಿ ಮರಾಠಿಯಲ್ಲಿ ತಮ್ಮ ಭಾಷಣ ಪ್ರಾರಂಭಿಸಿ ಬಳಿಕ ಕನ್ನಡದಲ್ಲಿ ಮಾತು ಮುಂದು​ವ​ರೆ​ಸಿ​ದ್ದರು. ಪಾಟೀ​ಲರು ಮರಾ​ಠಿ​ಯ​ಲ್ಲಿ ಮಾತ​ನಾ​ಡಿ​ರು​ವುದು ಕನ್ನಡ​ಪರ ಸಂಘ​ಟ​ನೆ​ಗಳ ಆಕ್ರೋ​ಶಕ್ಕೆ ಗುರಿ​ಯಾ​ಗಿ​ದೆ.

ಸಚಿ​ವರ ಸ್ಪಷ್ಟ​ನೆ: ತಮ್ಮ ನಡೆ ತೀವ್ರ ವಿವಾ​ದಕ್ಕೆ ಗುರಿ​ಯಾ​ಗು​ತ್ತಿ​ದ್ದಂತೆ ಸ್ಪಷ್ಟನೆ ನೀಡಿ​ರುವ ಶ್ರೀಮಂತ ಪಾಟೀಲ ಅವ​ರು, ಅದೊಂದು ಖಾಸಗಿ ಕಾರ್ಯಕ್ರಮವಾಗಿದ್ದು ಅಲ್ಲಿದ್ದ ಮಹಾರಾಷ್ಟ್ರ ಸಚಿವರಿಗೆ ಕನ್ನಡ ಬರುವುದಿಲ್ಲ. ಹಾಗಾಗಿ ಬಳ್ಳಿಗೇರಿಯಲ್ಲಿ ಸದ್ಯ ಆರಂಭ ಆಗುತ್ತಿರುವ ಸಕ್ಕರೆ ಕಾರ್ಖಾನೆಯಲ್ಲಿ ಸ್ಥಳೀಯರಿಗೆ ಉದ್ಯೋಗ ಕೊಡಿ ಎಂದು ಮರಾಠಿಯಲ್ಲಿ ಮನವರಿಕೆ ಮಾಡಿದ್ದೇನೆ. ಯಾರೂ ತಪ್ಪಾಗಿ ಭಾವಿಸಬಾರದು. ಇದ​ರಿಂದ ಯಾರಿಗಾದರೂ ನೋವಾಗಿದ್ದರೆ ನಾನು ಕ್ಷಮೆ ಕೇಳುತ್ತೇನೆ ಎಂದು ತಿಳಿ​ಸಿ​ದ್ದಾ​ರೆ.