ಚುಂಚನಕಟ್ಟೆ ಶ್ರೀರಾಮ ಸಹಕಾರ ಸಕ್ಕರೆ ಕಾರ್ಖಾನೆಯನ್ನು ಗುತ್ತಿಗೆಗೆ ಪಡೆದಿರುವ ನಿರಾಣಿ ಶುಗರ್ಸ್‌ ನವರು ಸೆ. 16 ರಿಂದ ಕಬ್ಬು ಅರೆಯುವ ಕಾರ್ಯ ಆರಂಭಿಲಿದ್ದಾರೆ ಎಂದು ಶಾಸಕ ಸಾ.ರಾ. ಮಹೇಶ್‌ ಹೇಳಿದರು.

ಕೆ.ಆರ್‌. ನಗರ (ಸೆ.12): ಚುಂಚನಕಟ್ಟೆ ಶ್ರೀರಾಮ ಸಹಕಾರ ಸಕ್ಕರೆ ಕಾರ್ಖಾನೆಯನ್ನು ಗುತ್ತಿಗೆಗೆ ಪಡೆದಿರುವ ನಿರಾಣಿ ಶುಗರ್ಸ್‌ ನವರು ಸೆ. 16 ರಿಂದ ಕಬ್ಬು ಅರೆಯುವ ಕಾರ್ಯ ಆರಂಭಿಲಿದ್ದಾರೆ ಎಂದು ಶಾಸಕ ಸಾ.ರಾ. ಮಹೇಶ್‌ ಹೇಳಿದರು. ಸಾಲಿಗ್ರಾಮ ತಾಲೂಕು ಚುಂಚನಕಟ್ಟೆಶ್ರೀರಾಮ ಸಕ್ಕರೆ ಕಾರ್ಖಾನೆಯ ಕಬ್ಬು ಅರೆಯುವ ಕಾರ್ಯಕ್ಕೆ ಪೂರ್ವ ಭಾವಿಯಾಗಿ ಬಾಯ್ಲರ್‌ಗೆ ಅಗ್ನಿ ಸ್ಪರ್ಶ ಮಾಡಿ ಮಾತನಾಡಿ ಅವರು ಈ ವಿಷಯ ತಿಳಿಸಿದರು. ಕಳೆದ 12 ವರ್ಷಗಳಿಂದ ಕಬ್ಬು ಅರೆಯುವ ಕಾರ್ಯ ಸ್ಥಗಿತಗೊಳಿಸಿದ್ದ ಕಾರ್ಖಾನೆ ಪ್ರಸಕ್ತ ತಿಂಗಳಲ್ಲಿ ಕಾರ್ಯಾರಂಭ ಮಾಡಲಿದ್ದು ಇದರಿಂದ ರೈತರಿಗೆ ಅನುಕೂಲವಾಗಲಿದೆ. ಕಾರ್ಖಾನೆಯವರು ರೈತರಿಗೆ ಯಾವುದೇ ತೊಂದರೆ ನೀಡಬಾರದು ಎಂದು ಆಡಳಿತ ಮಂಡಳಿಯವರಿಗೆ ಸೂಚಿಸಿದರು.

ಕಾರ್ಖಾನೆ ಪ್ರಸ್ತುತ ನಿತ್ಯ 1,250 ಟನ್‌ ಕಬ್ಬು ಅರೆಯಲಿದ್ದು, ಮುಂದಿನ ದಿನಗಳಲ್ಲಿ ಕನಿಷ್ಠ 5 ಸಾವಿರ ಟನ್‌ ಕಬ್ಬು ಅರೆಯುವ ಸಾಮರ್ಥ್ಯ ಹೊಂದಲಿದ್ದು ಇದರಿಂದ ರೈತರು ಮತ್ತು ಕಾರ್ಮಿಕರಿಗೆ ಅನುಕೂಲವಾಗಲಿದೆ. ಶ್ರೀರಾಮ ಸಹಕಾರ ಸಕ್ಕರೆ ಕಾರ್ಖಾನೆ ವ್ಯಾಪ್ತಿಯಲ್ಲಿನ ಎಲ್ಲಾ ತಾಲೂಕುಗಳ ಭಾಗದಲ್ಲಿ ಉತ್ತಮವಾದ ನೀರಾವರಿ ಮತ್ತು ರಸ್ತೆ ವ್ಯವಸ್ಥೆ ಇದ್ದು ರೈತರು ಕಬ್ಬು ಬೆಳೆದು ಲಾಭ ಗಳಿಸಬೇಕು ಎಂದು ಕಿವಿಮಾತು ಹೇಳಿದರು. ಕಾರ್ಖಾನೆ ಕಬ್ಬು ಅರೆಯುವ ಕಾರ್ಯ ಆರಂಭಿಸುವುದರಿಂದ ಈ ಭಾಗದ ಮತ್ತು ಇತರ ತಾಲೂಕುಗಳ ಸಾವಿರಾರು ಮಂದಿ ರೈತರು ಮತ್ತು ಕಾರ್ಮಿಕರಿಗೆ ಉದ್ಯೊಗ ಸಿಗಲಿದ್ದು ಹಲವು ಜನರ ಜೀವನಕ್ಕೆ ದಾರಿಯಾಗಲಿದೆ ಎಂದರು.

ಆಡಿಯೋ ವೈರಲ್: ಕಾನೂನು ಕುಣಿಕೆಯಲ್ಲಿ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ

ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಎಚ್‌.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಕಾರ್ಖಾನೆಯನ್ನು ಖಾಸಗಿಯವರಿಗೆ ಗುತ್ತಿಗೆ ನೀಡುವ ಪ್ರಕ್ರಿಯೆ ಆರಂಭಿಸಿದ್ದು ಅನಂತರ ಬಿಜೆಪಿ ಸರ್ಕಾರದಲ್ಲಿ ಮುಖ್ಯಮಂತ್ರಿಗಳಾಗಿದ್ದ ಬಿ.ಎಸ್‌. ಯಡಿಯೂರಪ್ಪ ಮತ್ತು ಪ್ರಸ್ತುತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಎಲ್ಲಾ ಸಹಕಾರ ನೀಡಿದ್ದಾರೆ ಎಂದು ಅವರು ಕೃತಜ್ಞತೆ ವ್ಯಕ್ತಪಡಿಸಿದರು. ಕಾರ್ಖಾನೆ ಆರಂಭಿಸಿ ಅನಂತರ ಸ್ಥಳೀಯರಿಗೆ ಉದ್ಯೋಗದಲ್ಲಿ ಅವಕಾಶ ನೀಡುವುದರ ಜೊತೆಗೆ ಕಬ್ಬು ಬೆಳೆಗಾರರ ಹಿತ ಕಾಪಾಡಲು ಆಡಳಿತ ಮಂಡಳಿ ಮೊದಲ ಆದ್ಯತೆ ನೀಡುವದರೊಂದಿಗೆ ಕಾಲ ಕಾಲಕ್ಕೆ ನನಗೆ ಕಾರ್ಖಾನೆಯ ಅಭಿವೃದ್ಧಿ ಮತ್ತು ಸ್ಥಿತಿ ಗತಿಗಳ ಬಗ್ಗೆ ವರದಿ ನೀಡಬೇಕು ಎಂದು ಶಾಸಕರು ಸೂಚಿಸಿದರು.

ಆ ನಂತರ ಶಾಸಕರು ಕಾರ್ಖಾನೆಯ ಎಲ್ಲಾ ವಿಭಾಗಗಳನ್ನು ಪರಿಶೀಲಿಸಿ ಅಧಿಕಾರಿಗಳ ಸಭೆ ನಡೆಸಿ ಸೂಕ್ತ ಸಲಹೆ ಮತ್ತು ಸೂಚನೆ ನೀಡಿಜಕುಯಯಾವುದೇ ಸಮಸ್ಯೆ ಮತ್ತು ದೂರುಗಳಿದ್ದರೆ ಕೂಡಲೇ ನನಗೆ ವರದಿ ನೀಡಬೇಕು ಎಂದರು. ನಿರಾಣಿ ಶುಗರ್ಸ್‌ ಮುಖ್ಯಸ್ಥ ಯರಗಟ್ಟಿ, ಪ್ರಧಾನ ವ್ಯವಸ್ಥಾಪಕ ಬೋರೇಗೌಡ, ಮುಖ್ಯ ಎಂಜಿನಿಯರ್‌ ನಾಗೇಗೌಡ, ಕಬ್ಬು ಅಭಿವೃದ್ಧಿ ಅಧಿಕಾರಿ ರವಿಚಂದ್ರನ್‌, ರಾಜ್ಯ ಜೆಡಿಎಸ್‌ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್‌, ಜಿಪಂ ಮಾಜಿ ಸದಸ್ಯ ಎಂ.ಟಿ. ಕುಮಾರ್‌, ಟಿಎಪಿಸಿಎಂಎಸ್‌ ಮಾಜಿ ನಿರ್ದೇಶಕ ಎಸ್‌.ಟಿ. ಕೀರ್ತಿ ಮತ್ತು ಇತರ ರೈತ ಮುಖಂಡರು ಹಾಗೂ ಕಾರ್ಖಾನೆ ಸಿಬ್ಬಂದಿ ಇದ್ದರು.

ಗ್ರಾಮೀಣ ಪ್ರದೇಶದಲ್ಲೂ ಸೈಬರ್ ಅಪರಾಧ ಹೆಚ್ಚಳ; ಎಸ್‌ಪಿ ಆರ್‌. ಚೇತನ್‌

ಪದೇ ಪದೇ ಆಶೀರ್ವದಿಸುತ್ತಿರುವ ಕೋತಿರಾಯ: ಸದಾ ಮಾರುತಿಯನ್ನು ಪೂಜಿಸುವ ಶಾಸಕ ಸಾ.ರಾ. ಮಹೇಶ್‌ ಅವರನ್ನು ಚುಂಚನಕಟ್ಟೆಗೆ ಬರುವ ಸಮಯದಲ್ಲಿ ಇಲ್ಲಿನ ಕೋತಿಗಳು ಹಿಂಬಾಲಿಸುವ ಮೂಲಕ ಆಶೀರ್ವಾದಿಸುತ್ತಿವೆ. ಕಳೆದ ತಿಂಗಳು ಇಲ್ಲಿನ ಶ್ರೀರಾಮ ದೇವಾಲಯದಲ್ಲಿ ವಾರಾಂತ್ಯದ ದಾಸೋಹಕ್ಕೆ ಚಾಲನೆ ನೀಡುವಾಗ ಕುಣಿದು ಕುಪ್ಪಳಿಸಿದ ಕೋತಿರಾಯ ಇಂದು ಕೂಡ ಆಶೀರ್ವದಿಸಿದ. ಶಾಸಕ ಸಾ.ರಾ. ಮಹೇಶ್‌ ಅವರು ಭಾನುವಾರ ಚುಂಚನಕಟ್ಟೆಶ್ರೀರಾಮ ಸಹಕಾರ ಸಕ್ಕರೆ ಕಾರ್ಖಾನೆಯ ಕಬ್ಬು ಅರೆಯುವ ಕಾರ್ಯಕ್ಕೆ ಪೂರ್ವ ಭಾವಿಯಾಗಿ ಅಗ್ನಿ ಸ್ಪರ್ಶ ಮಾಡುವ ಸಮಯದಲ್ಲಿ ಕೋತಿಯೊಂದು ಬಾಳೆಹಣ್ಣು ತಿಂದು ಅನಂತರ ತನ್ನ ಕೈಲಿದ್ದ ಮತ್ತೊಂದು ಬಾಳೆ ಹಣ್ಣನ್ನು ಶಾಸಕರ ಮೇಲೆ ಎಸೆಯುವ ಮೂಲಕ ಆಶೀರ್ವಾದ ಮಾಡಿತು.