ಇದುವರೆಗೆ ಜಿಲ್ಲೆಯಲ್ಲಿ ನಡೆದ ಕೋಮು ಹತ್ಯೆಗಳು, ಕೋಮು ಗಲಭೆಗಳಲ್ಲಿ ಆರೋಪಿ ಸ್ಥಾನದಲ್ಲಿರುವ ಒಬ್ಬನೇ ಒಬ್ಬ ಕಾಂಗ್ರೆಸಿಗರನ್ನು ತೋರಿಸಲಿ ಎಂದು ಮಾಜಿ ಸಚಿವ ರಮಾನಾಥ ರೈ ಸವಾಲು ಹಾಕಿದ್ದಾರೆ. ಚರ್ಚ್‌, ಪಬ್‌ ದಾಳಿ ಸೇರಿದಂತೆ ಜಿಲ್ಲೆಯಲ್ಲಿ ಮತೀಯ ಗಲಭೆಗಳ ಪ್ರಕರಣಗಳಲ್ಲಿ ಎಫ್‌ಐಆರ್‌ನಲ್ಲಿ ಆರೋಪಿಗಳಾಗಿರುವವರು ಎರಡು ಮತೀಯವಾದಿ ಪಕ್ಷದವರು ಎಂದಿದ್ದಾರೆ.

ಮಂಗಳೂರು(ಡಿ.23): ಮಂಗಳೂರು ಗಲಭೆಗೆ ಕಾಂಗ್ರೆಸ್‌ ಕಾರಣ ಎಂದು ರಾಜ್ಯ ಸರ್ಕಾರದ ಮಂತ್ರಿಗಳು ಸುಳ್ಳು ಆರೋಪ ಮಾಡುತ್ತಿದ್ದಾರೆ. ಹೀಗೆ ಆರೋಪ ಮಾಡುವವರು ಇದುವರೆಗೆ ಜಿಲ್ಲೆಯಲ್ಲಿ ನಡೆದ ಕೋಮು ಹತ್ಯೆಗಳು, ಕೋಮು ಗಲಭೆಗಳಲ್ಲಿ ಆರೋಪಿ ಸ್ಥಾನದಲ್ಲಿರುವ ಒಬ್ಬನೇ ಒಬ್ಬ ಕಾಂಗ್ರೆಸಿಗರನ್ನು ತೋರಿಸಲಿ ಎಂದು ಮಾಜಿ ಸಚಿವ ರಮಾನಾಥ ರೈ ಸವಾಲು ಹಾಕಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಭಾನುವಾರ ಮಾತನಾಡಿದ ಅವರು, ಚರ್ಚ್‌, ಪಬ್‌ ದಾಳಿ ಸೇರಿದಂತೆ ಜಿಲ್ಲೆಯಲ್ಲಿ ಮತೀಯ ಗಲಭೆಗಳ ಪ್ರಕರಣಗಳಲ್ಲಿ ಎಫ್‌ಐಆರ್‌ನಲ್ಲಿ ಆರೋಪಿಗಳಾಗಿರುವವರು ಎರಡು ಮತೀಯವಾದಿ ಪಕ್ಷದವರು. ಯಾವೊಬ್ಬ ಕಾಂಗ್ರೆಸಿಗನೂ ಆರೋಪಿಯಾಗಿಲ್ಲ. ಜಿಲ್ಲೆಯ ಪೊಲೀಸ್‌ ರೆಕಾರ್ಡ್‌ ನೋಡಿದರೆ ಆರೋಪಿಗಳ್ಯಾರು ಎನ್ನುವುದು ಗೊತ್ತಾಗುತ್ತದೆ. ಅವರಂತಹ ಮತೀಯವಾದಿ ಪಕ್ಷಗಳಿಂದ ನಡೆದ ಘಟನೆಯನ್ನು ಕಾಂಗ್ರೆಸ್‌ ಮಾಡಿದೆ ಎನ್ನುವ ಅಪಪ್ರಚಾರ ಮಾಡಲಾಗುತ್ತಿದೆ. ಕಾಂಗ್ರೆಸ್‌ ಹಿಂದೆಯೂ ಯಾವುದೇ ಗಲಭೆಗೆ ಕಾಂಗ್ರೆಸ್‌ ಕುಮ್ಮಕ್ಕು ನೀಡಿಲ್ಲ, ಮುಂದೆಯೂ ನೀಡಲ್ಲ ಎಂದಿದ್ದಾರೆ.

ತಪ್ಪಿತಸ್ಥರು ಯಾರು ಗೊತ್ತಾಗಲಿ:

ಮಂಗಳೂರಿನಲ್ಲಿ ಗಲಭೆ ನಡೆಯಲು ರಾಜ್ಯ ಸರ್ಕಾರದ ವೈಫಲ್ಯ ಕಾರಣ. ಇದನ್ನು ಮುಚ್ಚಿ ಹಾಕಲು ಕಾಂಗ್ರೆಸ್‌ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಕಾಂಗ್ರೆಸ್‌ ಕುಮ್ಮಕ್ಕು ನೀಡಿದ್ದು ಹೌದಾಗಿದ್ದರೆ, ರಾಜ್ಯ ಸರ್ಕಾರ ಈ ಪ್ರಕರಣವನ್ನು ಹಾಲಿ ಹೈಕೋರ್ಟ್‌ ನ್ಯಾಯಾಧೀಶರ ನೇತೃತ್ವದ ನ್ಯಾಯಾಂಗ ತನಿಖೆಗೆ ಒಪ್ಪಿಸಲಿ. ಆಗ ತಪ್ಪಿತಸ್ಥರು ಯಾರು ಎನ್ನುವುದು ಗೊತ್ತಾಗುತ್ತದೆ ಎಂದು ರಮಾನಾಥ ರೈ ಒತ್ತಾಯಿಸಿದ್ದಾರೆ.

ಸರ್ಕಾರದಿಂದ ಹತ್ಯೆ:

ಘರ್ಷಣೆಗೆ ಮುಖ್ಯ ಕಾರಣ ಸಿಎಂ ಮತ್ತು ಗೃಹ ಸಚಿವರು. ಯಾವ ಗಲಭೆಯೂ ನಡೆಯದಿದ್ದರೂ ಕೇವಲ ಪ್ರತಿಭಟನೆಯ ಹಕ್ಕು ದಮನಿಸುವುದಕ್ಕಾಗಿ ಏಕಾಏಕಿ ಸೆ.144 ಹೇರಿಕೆ ಮಾಡಿದ್ದು ಕಾರಣ. ಉದ್ದೇಶಪೂರ್ವಕವಾಗಿ ಗಲಭೆ ನಡೆಯಲೆಂದೇ ಹಾಕಿದ್ದಾರೆ. ಇಬ್ಬರು ಸಾವಿಗೀಡಾದದ್ದು ಸರ್ಕಾರದ ಕೃಪೆಯಿಂದ ನಡೆದ ಹತ್ಯೆ ಎಂದವರು ಆರೋಪಿಸಿದ್ದಾರೆ.

ನಳಿನ್‌, ಶೋಭಾ ಚರಿತ್ರೆ ಗೊತ್ತಿದೆ:

ಕಾಂಗ್ರೆಸ್‌ ಇತಿಹಾಸದಲ್ಲಿ ಎಂದಿಗೂ ಪ್ರಚೋದನಕಾರಿ ಭಾಷಣ ಮಾಡಿಲ್ಲ. ಆದರೆ ಮುಖ್ಯಮಂತ್ರಿ ಯಡಿಯೂರಪ್ಪ ಮಂಗಳೂರಿಗೆ ಬಂದಿದ್ದಾಗ ಜಿಲ್ಲೆಯಲ್ಲಿ ಕೋಮು ಘರ್ಷಣೆಗೆ ಕಾರಣರಾಗಿರುವ ಸಂಸದರಾದ ನಳಿನ್‌ ಕುಮಾರ್‌ ಮತ್ತು ಶೋಭಾ ಕರಂದ್ಲಾಜೆ ಕೂಡ ಬಂದಿದ್ದಾರೆ. ಇವರಿಬ್ಬರ ಚರಿತ್ರೆ ಏನು ಎನ್ನುವುದು ಎಲ್ಲರಿಗೂ ಗೊತ್ತಿದೆ ಎಂದು ರೈ ಟೀಕಿಸಿದರು.

ಅಂಗಡಿ ಹೇಳಿಕೆಗೆ ಖಂಡನೆ:

ಅನೇಕ ವರ್ಷ ಮಂತ್ರಿಗಳಾಗಿದ್ದವರು ಕೂಡ ಯಾರೂ ಸುರೇಶ್‌ ಅಂಗಡಿಯಂತೆ ಮಾತನಾಡಿದ ಉದಾಹರಣೆಯಿಲ್ಲ. ‘ಬಂದೂಕು ಇರುವುದು ಪೂಜೆಗಲ್ಲ’ ಎಂದರೆ ಏನರ್ಥ? ಸರ್ಕಾರದ ಮಂತ್ರಿಗಳೇ ಇಂಥ ಬೇಜವಾಬ್ದಾರಿ ಪ್ರಚೋದನಕಾರಿ ಹೇಳಿಕೆ ನೀಡಿ ಕುಮ್ಮಕ್ಕು ನೀಡುತ್ತಿದ್ದಾರೆ. ಕಾಂಗ್ರೆಸಿಗರು ಮಾತನಾಡಿದರೆ ತಪ್ಪಾಗಿ ಬಿಂಬಿಸುತ್ತಾರೆ ಎಂದು ರೈ ಕಿಡಿಕಾರಿದ್ದಾರೆ.

ರಮೇಶ್‌ ಕುಮಾರ್‌ ಬಗ್ಗೆ ಆಂಧ್ರ ಸ್ಪೀಕರ್‌ ಮೆಚ್ಚುಗೆ!

ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಹರೀಶ್‌ ಕುಮಾರ್‌, ಎಂಎಲ್ಸಿ ಐವನ್‌ ಡಿಸೋಜ, ಮುಖಂಡರಾದ ಅಬ್ದುಲ್‌ ರವೂಫ್‌, ಎ.ಸಿ. ವಿನಯರಾಜ್‌, ಶಶಿಧರ ಹೆಗ್ಡೆ, ನವೀನ್‌ ಡಿಸೋಜ, ಡಿ.ಕೆ. ಅಶೋಕ್‌, ಟಿ.ಕೆ. ಸುಧೀರ್‌ ಮತ್ತಿತರರಿದ್ದರು.

ಸಿದ್ದು ತಡೆ ಪ್ರಜಾಪ್ರಭುತ್ವಕ್ಕೆ ಧಕ್ಕೆ

ವಿಪಕ್ಷ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಮಂಗಳೂರಿಗೆ ಬರಲು ಸರ್ಕಾರ ತಡೆಯೊಡ್ಡಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ತಂದಿದೆ. ಸಂತ್ರಸ್ತರಿಗೆ ಸಾಂತ್ವನ ಹೇಳುವ ಜವಾಬ್ದಾರಿ ವಿಪಕ್ಷ ನಾಯಕರಿಗೂ ಇದೆ. ಅದನ್ನು ನಿಭಾಯಿಸಲು ಸರ್ಕಾರ ಬಿಟ್ಟಿಲ್ಲ. ಆದರೂ ಅವರು ಬಂದೇ ಬರಲಿದ್ದಾರೆ ಎಂದು ರಮಾನಾಥ ರೈ ಹೇಳಿದ್ದಾರೆ.

ಸೌದಿ ದೊರೆ ಅವಹೇಳನ ಆರೋಪ: ಕೋಟೇಶ್ವರದ ಯುವಕನ ಬಂಧನ!