Asianet Suvarna News Asianet Suvarna News

ಸೌದಿ ದೊರೆ ಅವಹೇಳನ ಆರೋಪ: ಕೋಟೇಶ್ವರದ ಯುವಕನ ಬಂಧನ!

ಸೌದಿ ದೊರೆ ಅವಹೇಳನ ಆರೋಪ: ಕೋಟೇಶ್ವರದ ಯುವಕನ ಬಂಧನ| ಫೇಸ್‌ಬುಕ್‌ನಲ್ಲಿ ಮಂಗಳೂರು ಗೋಲಿಬಾರ್‌ ಬಗ್ಗೆ ಬರೆದಿದ್ದ ಯುವಕ| ಆತನ ಕಚೇರಿಗೆ ಬಂದು ತರಾಟೆಗೆ ತೆಗೆದುಕೊಂಡಿದ್ದ ಕರಾವಳಿ ಯುವಕರು| ಇದೀಗ ಆತನ ಹೆಸರಲ್ಲಿ ನಕಲಿ ಖಾತೆ ಸೃಷ್ಟಿಸಿ ಅವಹೇಳನಕಾರಿ ಬರಹ ಆರೋಪ

A Youth From Kundapur Arrested By Saudi Police For Disgracing King In Social Media
Author
Bangalore, First Published Dec 23, 2019, 7:49 AM IST

ಕುಂದಾಪುರ[ಡಿ.23]: ಸೌದಿ ಅರಸನ ವಿರುದ್ಧ ಫೇಸ್‌ಬುಕ್‌ನಲ್ಲಿ ಅವಹೇಳನಕಾರಿ ಪೋಸ್ಟ್‌ವೊಂದನ್ನು ಶೇರ್‌ ಮಾಡಿದ ಆರೋಪದ ಮೇಲೆ ಉಡುಪಿ ಜಿಲ್ಲೆಯ ಕೋಟೇಶ್ವರ ಮೂಲದ ಯುವಕನೋರ್ವನನ್ನು ಸೌದಿ ಪೊಲೀಸರು ವಿಚಾರಣೆಗೆ ಕರೆದೊಯ್ದಿರುವ ಘಟನೆ ಸೌದಿಅರೇಬಿಯಾದಲ್ಲಿ ನಡೆದಿದೆ. ಇಲ್ಲಿನ ಕೋಟೇಶ್ವರ ಸಮೀಪದ ಬೀಜಾಡಿ ನಿವಾಸಿ ಹರೀಶ್‌ ಬಂಗೇರ ಅವರನ್ನು ಸೌದಿ ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ.

ಸೌದಿ ಅರೇಬಿಯಾದ ಕಂಪನಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿರುವ ಹರೀಶ್‌ ಬಂಗೇರ ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಗೋಲಿಬಾರ್‌ ಹತ್ಯೆಯನ್ನು ‘‘ಹರೀಶ್‌ ಬಂಗೇರ ಎಸ್‌’’ ಎನ್ನುವ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಶೇರ್‌ ಮಾಡಿಕೊಂಡಿದ್ದರು. ಕೂಡಲೇ ಅಲ್ಲಿ ಕೆಲಸ ಮಾಡುವ ಕರಾವಳಿಯ ಯುವಕರು ಹರೀಶ್‌ ಕೆಲಸ ನಿರ್ವಹಿಸುತ್ತಿರುವ ಕಚೇರಿಗೆ ತೆರಳಿ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು ಎನ್ನಲಾಗಿದೆ. ಅದಾದ ಬಳಿಕ ಘಟನೆಯ ಬಗ್ಗೆ ಹರೀಶ್‌ ಕ್ಷಮೆ ಕೇಳಿ ವೀಡಿಯೊವೊಂದನ್ನು ಅಪ್ಲೋಡ್‌ ಮಾಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟುವೈರಲ್‌ ಕೂಡ ಆಗಿತ್ತು.

ನಕಲಿ ಖಾತೆ ಸೃಷ್ಟಿ: ಆರೋಪ

ಇದೀಗ ಕಿಡಿಗೇಡಿಗಳು ಹರೀಶ್‌ ಬಂಗೇರ ಅವರ ಹೆಸರಿನಲ್ಲಿ ‘ಹರೀಶ್‌ ಬಂಗೇರ’ ಎಂಬ ನಕಲಿ ಖಾತೆಯನ್ನು ಸೃಷ್ಟಿಸಿ ಆ ಖಾತೆಯಲ್ಲಿ ಹಿಂದುತ್ವದ ಬಗೆಗಿನ ಬರಹಗಳು ಹಾಗೂ ಸೌದಿ ಅರಸ ಮತ್ತು ಮೆಕ್ಕಾದ ವಿರುದ್ಧ ಅವಹೇಳನಕಾರಿ ಪೋಸ್ಟ್‌ಗಳನ್ನು ಅಪ್ಲೋಡ್‌ ಮಾಡಿ ಹರಿಯಬಿಟ್ಟಿದ್ದಾರೆ ಎಂದು ಹರೀಶ್‌ ಸ್ನೇಹ ವಲಯ ಆರೋಪಿಸಿದೆ.

ಸೌದಿ ಅರಸನನ್ನು ನಿಂದಿಸಿದ ಆರೋಪದ ಮೇಲೆ ಇದೀಗ ಹರೀಶ್‌ ಬಂಗೇರ ಅವರನ್ನು ಸೌದಿ ಪೊಲೀಸರು ವಿಚಾರಣೆಗೆ ಕರೆದೊಯ್ದಿದ್ದಾರೆ. ಹೆಚ್ಚಿನ ಮಾಹಿತಿಗಳು ಇನ್ನಷ್ಟೇ ಲಭ್ಯವಾಗಬೇಕಿದೆ.

Follow Us:
Download App:
  • android
  • ios