ನವದೆಹಲಿ[ಡಿ.23]: ಕರ್ನಾಟಕದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ 17 ಶಾಸಕರನ್ನು ಅನರ್ಹ ಮಾಡಿದ್ದ ಅಂದಿನ ಸ್ಪೀಕರ್‌ ರಮೇಶ್‌ ಕುಮಾರ್‌ ನಡೆಗೆ ಆಂಧ್ರ ಪ್ರದೇಶ ಹಾಲಿ ಸ್ಪೀಕರ್‌ ತಮ್ಮಿನೇನಿ ಸೀತಾರಾಮ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಡೆಹ್ರಾಡೂನ್‌ನಲ್ಲಿ ನಡೆದ ಸ್ಪೀಕರ್‌ಗಳ ಸಭೆಯಲ್ಲಿ ಭಾಗವಹಿಸಿದ ಬಳಿಕ ದೆಹಲಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸಂವಿಧಾನದ 10ನೇ ಪರಿಚ್ಛೇದದ ಬಗ್ಗೆ ತಿಳಿಯುವುದು ಅವಶ್ಯಕ. ಹಲವು ಕಾರಣಗಳಿಂದ ಶಾಸಕರ ಅನರ್ಹತೆ ನಡೆಯುತ್ತಿದೆ. ನ್ಯಾಯಾಂಗ ಕೂಡ ಇದರಲ್ಲಿ ಹಸ್ತಕ್ಷೇಪ ಮಾಡುತ್ತಿದೆ. ಪಕ್ಷಾಂತರ ಕಾಯ್ದೆಯನ್ನು ಗಂಭೀರವಾಗಿ ಪರಿಗಣಿಸುವ ಅವಶ್ಯಕತೆ ಇದ್ದು, ಇದಕ್ಕಾಗಿ ಸಮಿತಿ ರಚಿಸಬೇಕು ಎಂದು ಅಭಿಪ್ರಾಯಪಟ್ಟರು. ರಮೇಶ್‌ ಕುಮಾರ್‌ ತೀರ್ಮಾನವನ್ನು ಪ್ರಶಂಸಿಸಿದರು.

ಕರ್ನಾಟಕದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ 17 ಮಂದಿ ಶಾಸಕರು ಸದ್ದಿಲ್ಲದೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈ ಹೋಟೆಲ್ ಸೇರಿದ್ದರು. ಪಕ್ಷದ ನಾಯಕರು ಅದೆಷ್ಟೇ ಮನವೊಲಿಸಿದರೂ ಶಾಸಕರು ಮರಳಿ ಬರಲು ಒಪ್ಪಿರಲಿಲ್ಲ. ಈ ರಾಜಕೀಯ ನಡೆ ಇಡೇ ದೇಶದಾದ್ಯಂತ ಸದ್ದು ಮಾಡಿತ್ತು. ಹೀಗಿರುವಾಗ ಶಾಸಕರ ವಿರುದ್ಧ ಕ್ರಮ ಕೈಗೊಂಡಿದ್ದ ಅಂದಿನ ಸ್ಪೀಕರ್ ರಮೇಶ್ ಕುಮಾರ್ ಶಾಸಕರನ್ನೆಲ್ಲಾ ಅನರ್ಹಗೊಳಿಸಿದ್ದರು. ಈ ವಿಚಾರ ಸುಪ್ರೀಂ ಮೆಟ್ಟಿಲೇರಿತ್ತು. ವಿಚಾರಣೆ ನಡೆಸಿದ್ದ ಸುಪ್ರೀಂ ಶಾಸಕರು ಅನರ್ಹರಾಗಿರುತ್ತಾರೆ, ಆದರೂ ಉಪ ಚುನಾವಣೆಯಲ್ಲಿ ಸ್ಪರ್ಧಿಸಬಹುದೆಂಬ ತೀರ್ಪುನೀಡಿತ್ತು. ಬಳಿಕ ನಡೆದ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಅನೇಕ ಶಾಸಕರು ಗೆದ್ದು ಅರ್ಹರಾಗಿದ್ದರು.