ಶಾರ್ಟ್ ಸೆರ್ಕ್ಯೂಟ್ ಪ್ರಕರಣ; ಬಾಲಕಿಯರ ವಸತಿ ಶಾಲೆಗೆ ಭೇಟಿ ನೀಡಿದ ಗೃಹ ಸಚಿವ ಪರಮೇಶ್ವರ್
'ವಸತಿ ಶಾಲೆ ಯಾವ ರೀತಿಯಾಗಿ ನಡೆಸ್ತಿದ್ದಾರೆ. ಸರ್ಕಾರದ ಸವಲತ್ತು ಮಕ್ಕಳಿಗೆ ಹೇಗೆ ಉಪಯೋಗ ಆಗ್ತಿದೆ ಅನ್ನೋದನ್ನ ನೋಡೋದಿಕ್ಕೆ ಬಂದಿದ್ದೇನೆ' ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ ತಿಳಿಸಿದರು.
ತುಮಕೂರು (ಜೂ.14): 'ವಸತಿ ಶಾಲೆ ಯಾವ ರೀತಿಯಾಗಿ ನಡೆಸ್ತಿದ್ದಾರೆ. ಸರ್ಕಾರದ ಸವಲತ್ತು ಮಕ್ಕಳಿಗೆ ಹೇಗೆ ಉಪಯೋಗ ಆಗ್ತಿದೆ ಅನ್ನೋದನ್ನ ನೋಡೋದಿಕ್ಕೆ ಬಂದಿದ್ದೇನೆ' ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ ತಿಳಿಸಿದರು.
ತುಮಕೂರಿನ ಬಿಹೆಚ್ ರಸ್ತೆಯಲ್ಲಿರುವ ಬಾಲಕಿಯರ ಹಾಸ್ಟೆಲ್ ನಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಪ್ರಕರಣ ಸಂಬಂಧ ಬಾಲಕಿಯರ ಹಾಸ್ಟೆಲ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಸಚಿವರು, ಹಾಸ್ಟೆಲ್‌ನಲ್ಲಿ ಎಲೆಕ್ಟ್ರಿಕ್ ವಸ್ತುಗಳು ಸುಟ್ಟು ಬೆಂಕಿ ಕಾಣಿಸಿಕೊಂಡಿತ್ತು. ಅದಕ್ಕೆ ಏನು ಕಾರಣ ಎಂಬುದನ್ನ ನೋಡೋಕೆ ಬಂದಿದ್ದೇನೆ. ಸದ್ಯ ವಿದ್ಯಾರ್ಥಿಗಳಲ್ಲಿ ಯಾವುದೇ ಆತಂಕ ಇಲ್ಲ. ಸಂತೋಷದಿಂದ ಇದ್ದಾರೆ ಎಂದರು.
ಮಧ್ಯಾಹ್ನದ ಬಿಸಿಯೂಟ ಸೇವಿಸಿ 50ಕ್ಕೂ ಹೆಚ್ಚು ಮಕ್ಕಳು ತೀವ್ರ ಅಸ್ವಸ್ಥ!
ನಾನು ಹಾಸ್ಟೆಲ್‌ಗೆ ಭೇಟಿ ನೀಡಿದಾಗ ಮಕ್ಕಳು ಕೆಲವು ಸಮಸ್ಯೆಗಳನ್ನು ಹೇಳಿದ್ದಾರೆ. ಚಳಿಗಾಲದಲ್ಲಿ ಸ್ನಾನ ಮಾಡಲು ಬಿಸಿನೀರಿನ ವ್ಯವಸ್ಥೆ, ಕುಡಿಯಲು ಶುದ್ಧ ನೀರು ಸೇರಿದಂತೆ ಅವರಿಗೆ ಸಣ್ಣಪುಟ್ಟ ಸವಲತ್ತುಗಳ ಬೇಕೆಂದು ಹೇಳಿದ್ದಾರೆ. ನಾನು ಇದನ್ನೆಲ್ಲ ಗಮನಕ್ಕೆ ತೆಗೆದುಕೊಂಡಿದ್ದೇನೆ. ಸರ್ಕಾರದ ಹಂತದಲ್ಲಿ ಏನೇನು ಸೌಲಭ್ಯ ಒದಗಿಸಬೇಕು ಅದೆಲ್ಲವನ್ನು ಮಾಡುತ್ತೇನೆ. ನಮ್ಮಲ್ಲಿ ಎರಡೂವರೆ ಸಾವಿರ ಮಕ್ಕಳು ಹಾಸ್ಟೆಲ್ ನಲ್ಲಿ ಉಳಿದುಕೊಳ್ಳುವ ಅವಕಾಶ ಇದೆ. 5 ಸಾವಿರಕ್ಕೂ ಹೆಚ್ಚು ಅರ್ಜಿ ಬರ್ತಿದೆ. ಇನ್ನು ಹೆಚ್ಚಿನ ಹಾಸ್ಟೆಲ್ ಗಳನ್ನ ಮಾಡಬೇಕಾದ ಅಗತ್ಯವಿದೆ ಎಂದರು.
ಇನ್ನು ಬಿತ್ತನೆ ಬೀಜ ಹಾಗೂ ಗೊಬ್ಬರ ಕೊರತೆ ವಿಚಾರ ಸಂಬಂಧ ಪ್ರತಿಕ್ರಿಯೆ ನೀಡಿದ ಸಚಿವರು, ಜಿಲ್ಲೆಯಲ್ಲಿ ಒಳ್ಳೆ ಮಳೆಯಾಗಿದೆ. ರೈತರು ಬಿತ್ತನೆ ಮಾಡಬೇಕು. ರೈತರಿಗೆ ಬಿತ್ತನೆ ಬೀಜ ಕೊಡುವ ಕೆಲಸ ಎಲ್ಲಾ ತಾಲೂಕಿನಲ್ಲಿ ನಡೆಯುತ್ತಿದೆ. ಅವರಿಗೆ ಬೇಕಾಗುವಷ್ಟು ಬಿತ್ತನೆ ಬೀಜ ನಮ್ಮಲ್ಲಿ ಸ್ಟಾಕ್ ಇದೆ. ಜಿಲ್ಲೆಯಲ್ಲಿ ಒಟ್ಟು 3.25 ಹೆಕ್ಟೇರ್ ಕೃಷಿ ಭೂಮಿ ಇದೆ. ಅದರಲ್ಲಿ ರಾಗಿ, ಕಡಲೆಕಾಯಿ, ಮೆಕ್ಕೆಜೋಳ ಜಾಸ್ತಿ ಬೆಳಿತಾರೆ. ಅದಕ್ಕೆ ಬೇಕಾದ ಬಿತ್ತನೆ ಬೀಜ ಗೊಬ್ಬರ ಸಂಗ್ರಹ ಮಾಡಲಾಗಿದೆ. ರೈತರಿಗೆ ಯಾವ ತೊಂದರೆಯಾಗದ ರೀತಿ ನೋಡಿಕೊಳ್ತೇವೆ ಎಂದರು.
ಇನ್ನು ಕಲುಷಿತ ನೀರು ಕುಡಿದು ಚಿನ್ನೇನಹಳ್ಳಿ ಗ್ರಾಮದ ಜನರು ಅಸ್ವಸ್ಥಗೊಂಡು ಸಾವಿಗೀಡಾದ ದುರಂತ ಘಟನೆ ಸಂಬಂಧ ಪ್ರತಿಕ್ರಿಯಿಸಿದ ಸಚಿವರು, ಈಗಾಗಲೇ ಡಿಸಿ, ಸಿಇಓ, ಎಸ್ ಪಿ ಅವರು ಪರಿಶೀಲನೆ ಮಾಡಿದ್ದಾರೆ. ಇದೇ ಕಾರಣಕ್ಕೆ ಬೇರೆಯವರು ಸತ್ತಿದ್ದರೆ ಲೆಕ್ಕಕ್ಕೆ ತಗೋಳ್ತಿವಿ. ಬೇರೆ ಕಾರಣಕ್ಕೆ ಸತ್ತಿದ್ರೆ ಪುನರ್ ಪರಿಶೀಲನೆ ಮಾಡಿ ಲೆಕ್ಕಕ್ಕೆ ತಗೋಬೇಕು ಅಂತ ಹೇಳಿದಿನಿ. ಆಸ್ಪತ್ರೆಯಲ್ಲಿ ಇಬ್ಬರು ಸತ್ತಿದ್ದಾರೆ. ಒಬ್ಬರು 76, ಇನ್ನೊಬ್ರು 72 ವರ್ಷ ವಯಸ್ಸಿನವರಾಗಿದ್ದಾರೆ. ಗ್ರಾಮದಲ್ಲಿ ಇನ್ನು ನಾಲ್ಕು ಜನ ಸತ್ತಿದ್ದಾರೆ ಅಂತ ಹೇಳ್ತಿದ್ದಾರೆ. ಅದರಲ್ಲಿ ಒಂದು ಮಗು ಕೂಡಾ ಸತ್ತಿದೆ ಅಂತ ಹೇಳ್ತಿದ್ದಾರೆ. ಎಲ್ಲವನ್ನು ಪರಿಶೀಲನೆ ಮಾಡ್ತಿವಿ. ಡಿಸಿ, ಸಿಇಓ ಗ್ರಾಮಕ್ಕೆ ಭೇಟಿ ಕೊಟ್ಟಿದ್ದಾರೆ. ಈ ಪ್ರಕರಣದಲ್ಲಿ ಪಿಡಿಒ, ಗ್ರಾಮ ಪಂಚಾಯತಿ ಅಧಿಕಾರಿಗಳನ್ನ ಸಸ್ಪೆಂಡ್ ಮಾಡಲಾಗಿದೆ. ಶಾಂಪಲ್ ಗಳನ್ನ ತೆಗೆದುಕೊಂಡು ಅದನ್ನ ಚೆಕ್ ಮಾಡಿ ಏನ್ ಕಾರಣ ಅಂತ ತಗೊಂಡು ಒಂದು ಅಭಿಪ್ರಾಯಕ್ಕೆ ಬರ್ತಿವಿ. ಕೆಲವರು ನೀರಿನಿಂದ ಆಯ್ತು ಅಂತಾರೆ, ಮತ್ತೆ ಕೆಲವರು ತಂಬಿಟ್ಟು ಮಾಡಲು ಬೆಟ್ಟದ ಮೇಲಿಂದ ನೀರು ತಂದಿದ್ವಿ ಅದು ಪವಿತ್ರವಾದ ನೀರು ತಂದು ತಂಬಿಟ್ಟು ಮಾಡಿದ್ವಿ ಅಂತಾರೆ. ಒಟ್ಟಿನಲ್ಲಿ ಘಟನೆಗೆ ನೈಜ ಕಾರಣ ಏನೆಂಬುದನ್ನ ಪರಿಶೀಲನೆ ಮಾಡ್ತೇವೆ. ಬಳಿಕ ನಿಜ ಏನು ಅನ್ನೋದು ಗೊತ್ತಾಗುತ್ತೆ ಎಂದರು.
ಪೋಕ್ಸೋ ಕೇಸ್‌ನಲ್ಲಿ ಅಗತ್ಯ ಬಿದ್ದರೆ ಬಿಎಸ್‌ವೈ ಬಂಧನ: ಗೃಹ ಸಚಿವ ಪರಮೇಶ್ವರ್
ಕೇಂದ್ರ ಸಚಿವ ವಿ ಸೋಮಣ್ಣ ಜಿಲ್ಲಾ ಪ್ರವಾಸ ವೇಳೆ ಡಿಸಿ, ಸಿಇಒ ಗೈರು, ಶಿಷ್ಟಾಚಾರ ಉಲ್ಲಂಘನೆಯಾಗಿರುವ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಸಚಿವರು, ಶಿಷ್ಟಾಚಾರ ಪಾಲನೆ ಮಾಡೋದು. ಅವರ ಅಧಿಕಾರ ಅವಧಿಯಲ್ಲಿ ಹೇಗಿರಬೇಕು ಎಂದು ತಿಳಿಸಿರುತ್ತಾರೆ. ಯಾವುದಕ್ಕೆ ಡಿಸಿ, ಸಿಇಒ, ಎಸ್‌ಪಿ ಇದ್ರೂ ಕೂಡ ಶಿಷ್ಟಾಚಾರ ಅಂತಾ ಬ್ಲೂ ಬುಕ್ ಇದೆ. ಆ ಬ್ಲೂ ಬುಕ್ ಪ್ರಕಾರ ಕೆಲಸ ಮಾಡ್ತಾರೆ. ನನ್ನ ಮೆಚ್ಚಿಸೋಕೆ, ನಿಮ್ಮನ್ನ ಮೆಚ್ಚಿಸೋಕೆ ಮಾಡೊಲ್ಲ. ಅದಕ್ಕೆ ಬೇರೆ ಅಧಿಕಾರಿಗಳನ್ನು ಕಳುಹಿಸುವ ಅವಕಾಶ ಇದೆ. ಡಿಸಿ ಅವರು ಎಸಿ ಅವರನ್ನ ಕಳುಹಿಸುತ್ತಾರೆ. ಎಸಿ ಇಲ್ಲ ಅಂದ್ರೆ ತಹಶೀಲ್ದಾರ್ ಕಳುಹಿಸುತ್ತಾರೆ.. ಎಷ್ಟೋ ಸಾರಿ ನಾನು ಬಂದಾಗಲೂ ಡಿಸಿ ಬರೋದಿಲ್ಲ, ಸಿಇಒ ಬರೋದಿಲ್ಲ. ಅದಕ್ಕೆ ನಾನು ತಪ್ಪು ತಿಳಿದುಕೊಳ್ಳುವುದಿಲ್ಲ. ಅವರ ಕೆಲಸದ ಒತ್ತಡದಲ್ಲಿ ಅವರು ಇರ್ತಾರೆ. ಅಂತಹದ್ದೇನಾದ್ರೂ ಇದ್ರೆ ಸರಿ ಮಾಡ್ಕೊಳ್ಳೋಣ ಎಂದರು.