ಕೊಪ್ಪಳ(ಏ.29): ಹಸಿರು ವಲಯದಲ್ಲಿ ಲಾಕ್‌ಡೌನ್‌ ಸಡಿಲಿಕೆ ಮಾಡಲಾಗಿರುವುದರಿಂದ ಕೊಪ್ಪಳ ಜಿಲ್ಲೆಯಲ್ಲಿ ತುಸು ಸಡಿಲಿಕೆ ಮಾಡಲಾಯಿತು. ಆದರೂ ಆತಂಕದಲ್ಲಿಯೇ ಅಂಗಡಿ, ಮುಂಗಟ್ಟುಗಳನ್ನು ತೆರೆಯಲಾಯಿತು.

ಸಡಿಲಿಕೆ ಮಾಡಿದ್ದರೂ ಮಾಲೀಕರು ಹಿಂದೇಟು ಹಾಕುತ್ತಲೇ ಅಂಗಡಿ ತೆರೆದರು. ಈ ನಡುವೆ ಪೊಲೀಸರೂ ಸರಿಯಾದ ಮಾಹಿತಿ ಇಲ್ಲದೆ ತೆರೆಯುವುದಕ್ಕೆ ಅಡ್ಡಿ ಪಡಿಸುತ್ತಿರುವುದು ಕಂಡು ಬಂದಿದೆ. ಜಿಲ್ಲಾಧಿಕಾರಿ ಹೊರಡಿಸಿದ ಆದೇಶವನ್ನು ಮುಂದಿಟ್ಟುಕೊಂಡು ಅಂಗಡಿಯ ಮಾಲೀಕರು ತೆರೆಯಲು ಮುಂದಾಗುತ್ತಿದ್ದಂತೆ ಪೊಲೀಸರು ವಿರೋಧ ವ್ಯಕ್ತಪಡಿಸಿದರು. ಆದೇಶ ತೋರಿಸಿದರೂ ಪೊಲೀಸರು ಕ್ಯಾರೆ ಎನ್ನುತ್ತಲೇ ಇರಲಿಲ್ಲ. ಇದಾದ ಮೇಲೆ ಮಧ್ಯಾಹ್ನದ ವೇಳಗೆ ಒಂದಿಷ್ಟು ಸಡಿಲಿಕೆ ಮಾಡಲಾಯಿತು. ಅಂಗಡಿಗಳನ್ನು ತೆರೆಯಬಹುದು ಎನ್ನುವುದನ್ನು ಪೊಲೀಸರು ಮನಗಂಡಿದ್ದರಿಂದ ಸಡಿಲಿಕೆ ಪ್ರಾರಂಭವಾಯಿತು.

ಲಾಕ್‌ಡೌನ್‌ನಿಂದ ಹೊರಗಡೆ ಸುಳಿಯದ ಜನ: ತಹಸೀಲ್ದಾರ್‌ ಕಚೇರಿಗೆ ನಾಗರಹಾವು ಎಂಟ್ರಿ..!

ಕದ್ದು ಮುಚ್ಚಿ ವ್ಯಾಪಾರ:

ಸಡಿಲಿಕೆ ಮಾಡಿದ್ದರೂ ನಾನಾ ಷರತ್ತುಗಳನ್ನು ವಿಧಿಸಿರುವುದರಿಂದ ಕದ್ದುಮುಚ್ಚಿಯೇ ವ್ಯಾಪಾರ ಮಾಡಲಾಯಿತು. ಶೇ. 70ರಷ್ಟು ಅಂಗಡಿಗಳು ಮುಚ್ಚಿಯೇ ಇದ್ದವು. ತೆರೆದಿದ್ದ ಅಂಗಡಿಗಳಲ್ಲಿ ಜಿಲ್ಲಾಧಿಕಾರಿ ಹೊರಡಿಸಿರುವ ಆದೇಶದ ಯಾವ ಷರತ್ತನ್ನು ಪಾಲಿಸುತ್ತಿರುವುದು ಕಂಡುಬರಲೇ ಇಲ್ಲ. ಸ್ಪಷ್ಟತೆಯೇ ಇಲ್ಲವಾದ್ದರಿಂದ ನಾವು ಷರತ್ತುಗಳನ್ನು ಪೂರೈಕೆ ಮಾಡಿಲ್ಲ. ಹಾಗೊಂದು ವೇಳೆ ಪೂರ್ಣ ತೆರೆಯುವುದಕ್ಕೆ ಅವಕಾಶ ನೀಡಿದ್ದೇ ಆದಲ್ಲಿ ಎಲ್ಲ ಷರತ್ತು ಪೂರೈಸುವುದಾಗಿ ಮಾಲೀಕರು ಹೇಳುತ್ತಿದ್ದರು.

ಗೊಂದಲ, ಗೊಂದಲ

ಮಾರುಕಟ್ಟೆ ತೆರೆಯುವ ಕುರಿತು ಗೊಂದಲ ಇದ್ದೇ ಇತ್ತು. ಯಾರಲ್ಲಿಯೂ ಸ್ಪಷ್ಟಕಲ್ಪನೆಯೇ ಇರಲಿಲ್ಲ. ಹೀಗಾಗಿ, ಆತಂಕದ ಮಧ್ಯೆಯೇ ದಿನದ ವಹಿವಾಟು ನಡೆಯಿತು. ಮೊದಲ ದಿನವಾಗಿದ್ದರಿಂದ ಎಲ್ಲರೂ ಹೆದರಿ ಹೆದರಿಯೇ ವಹಿವಾಟು ಮಾಡುತ್ತಿರುವುದು ಕಂಡು ಬಂದಿತು.

ನಿಟ್ಟುಸಿರು ಬಿಟ್ಟ ಜನ:

ಲಾಕ್‌ ಸಡಿಲಿಕೆಯಾಗುತ್ತಿದ್ದಂತೆ ಜನರು ನಿಟ್ಟುಸಿರುಬಿಟ್ಟರು. ಅಬ್ಬಾ ಅಂತೂ ಅಂಗಡಿಗಳನ್ನು ತೆರೆಯುವುದಕ್ಕೆ ಅವಕಾಶ ದೊರೆಯಿತು. ಆದರೂ ಇನ್ನು ಕೊರೋನಾ ಹೆಮ್ಮಾರಿ ಅಷ್ಟಾಗಿ ದೇಶದಲ್ಲಿ ಬಾಧಿಸಿಲ್ಲವಾದರೂ ಎಚ್ಚರಿಕೆ ಇರಲೇಬೇಕು. ಹೀಗಾಗಿ, ತೆರೆಯುವುದಕ್ಕೆ ಅವಕಾಶ ಸಿಕ್ಕಿದೆ ಎಂದು ಸಾಮಾಜಿಕ ಅಂತರ ಕಾಯ್ದುಕೊಳ್ಳದಿದ್ದರೆ ಮತ್ತೆ ಅನಾಹುತ ಗ್ಯಾರಂಟಿ. ಆದ್ದರಿಂದ ಜನರೇ ಸ್ವಯಂ ಪ್ರೇರಿತವಾಗಿ ಅಂತರ ಕಾಯ್ದುಕೊಳ್ಳುವ ಅಗತ್ಯವಿದೆ ಎನ್ನುವ ಅಭಿಪ್ರಾಯವೂ ಕೇಳಿ ಬಂತು.