ಶಿವಕುಮಾರ ಕುಷ್ಟಗಿ

ಗದಗ(ಜೂ.21): ಹರ್ತಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಜನರ ಆರೋಗ್ಯದಲ್ಲಿ ಏನಾದರೂ ಏರುಪೇರಾದರೆ ಆ ವೈದ್ಯನೇ ಅವರಿಗೆಲ್ಲ ಹಲವಾರು ವರ್ಷಗಳಿಂದ ಚಿಕಿತ್ಸೆ ನೀಡುತ್ತಿದ್ದುದು. ಆದರೆ, ಅದೇ ವೈದ್ಯ ಜನರಲ್ಲಿ ಭೀತಿ ಹುಟ್ಟಿಸಿದ್ದಾರೆ.

ಆತನಿಗೇ ಗೊತ್ತಿಲ್ಲದಂತೆ ಮಹಾಮಾರಿ ಕೊರೋನಾ ಒಕ್ಕರಿಸಿದ್ದು, ಅವರಿಂದ ಚಿಕಿತ್ಸೆ ಪಡೆದ ಎಲ್ಲರಲ್ಲಿಯೂ ಈಗ ನಡುಕ ಶುರುವಾಗಿದೆ. ಹರ್ತಿ ಗ್ರಾಮದ ವೈದ್ಯ (ಪಿ-7832) ಸದ್ಯ ಕೊರೋನಾ ಪಾಸಿಟಿವ್‌ ಆಗಿದ್ದು, ಇವರು ಪಕ್ಕದ ಹೊಸೂರು, ಕಣವಿ, ಬೆಳದಡಿ ಗ್ರಾಮಗಳಿಗೆ ನಿತ್ಯವೂ ಸಂಚರಿಸಿ ಆಯಾ ಗ್ರಾಮಗಳಲ್ಲಿರುವ ರೋಗಿಗಳಿಗೆ ಚಿಕಿತ್ಸೆ ನೀಡಿದ್ದು, ವೈದ್ಯ ಸದ್ಯ ಆರೋಗ್ಯ ಇಲಾಖೆಗೆ ನೀಡಿರುವ ಮಾಹಿತಿ ಆಧಾರದಲ್ಲಿ ಎಲ್ಲಾ ನಾಲ್ಕು ಗ್ರಾಮಗಳ 350ಕ್ಕೂ ಹೆಚ್ಚಿನ ಜನರಿಗೆ ಚಿಕಿತ್ಸೆ ನೀಡಿದ್ದು ಅವರೆಲ್ಲರಲ್ಲಿಯೂ ಭಯ ಶುರುವಾಗಿದೆ. ಇವರಲ್ಲಿ ಹಲವಾರು ಜನರು ಗದಗ ನಗರ ಸೇರಿದಂತೆ ನಿತ್ಯವೂ ತಮ್ಮ ತಮ್ಮ ಕೆಲಸ ಕಾರ್ಯಗಳಿಗೆ ವ್ಯಾಪಕ ಪ್ರಮಾಣದಲ್ಲಿ ಸಂಚರಿಸಿದ್ದು, ಗದಗ ತಾಲೂಕಿನ ಮಟ್ಟಿಗೆ ಹರ್ತಿ ವೈದ್ಯನ ಟ್ರಾವೆಲ್‌ ಹಿಸ್ಟರಿ ಗಮನಿಸಿದಲ್ಲಿ ಮುಂಬರುವ ದಿನಗಳಲ್ಲಿ ದೊಡ್ಡ ಆತಂಕ ಎದುರಾಗುವ ಸಾಧ್ಯತೆ ನಿಚ್ಚಳವಾಗಿದೆ.

ಭಾರತೀಯ ಯೋಧರನ್ನ ಚೀನಾ ಕೊಲ್ಲಲಿ ಎಂದಿದ್ದ ದೇಶದ್ರೋಹಿಯ ಬಂಧನ

ವೈದ್ಯನಿಗೆ ಎಲ್ಲಿಂದ ಬಂತು?

ಅಷ್ಟಕ್ಕೂ ಇವರಿಗೆ ಸೋಂಕು ತಗಲಿದ್ದು ಸಹ ಕುತೂಹಲಕಾರಿಯಾಗಿದೆ. ಗದಗ ತಾಲೂಕಿನ ಹರ್ತಿ ಗ್ರಾಮದ ಮಹಿಳೆಯನ್ನು ವಿವಾಹವಾಗಿರುವ ವ್ಯಕ್ತಿಯೋರ್ವ ಪತ್ನಿಯೊಂದಿಗೆ ಗ್ರಾಮಕ್ಕೆ ಬಂದಿದ್ದ. ಆದರೆ ಆತನಿಗೆ ಅರಿವಿಲ್ಲದಂತೆಯೇ ಕೊರೋನಾ ಹೆಮ್ಮಾರಿ ಆವರಿಸಿತ್ತು ಎನ್ನಲಾಗಿದೆ. ಇವರ ಸಂಪರ್ಕದಿಂದಲೇ 40 ವರ್ಷದ ವೈದ್ಯ (ಪಿ.7832)ನಿಗೂ ಸೋಂಕು ತಗುಲಿದ್ದು ಆತಂಕಕ್ಕೆ ಕಾರಣವಾಗಿದೆ.

ಜೂನ್‌ 5ರಂದು ಹುಬ್ಬಳ್ಳಿಯ ಅಳಿಯ (ಪಿ.6255) ಪತ್ನಿಯನ್ನು ಕರೆದುಕೊಂಡು ಮಾವನ ಮನೆಗೆ ಬಂದಿದ್ದಾನೆ. ಆಗ ಅವರಲ್ಲಿ ಕೊರೋನಾದ ಯಾವ ಲಕ್ಷಣವೂ ಇರಲಿಲ್ಲ. ಮಾವನ ಮನೆಗೆ ಬಂದು ಪತ್ನಿ, ಮಗುವನ್ನು ಬಿಟ್ಟು ಜೂನ್‌ 6ರಂದು ವಾಪಸ್‌ ಹುಬ್ಬಳ್ಳಿಗೆ ಹೋಗಿದ್ದಾನೆ. ಆದರೆ ಜೂನ್‌ 7ರಂದು ಅವರ ಆರೋಗ್ಯದಲ್ಲಿ ಏರುಪೇರಾಗಿ, ಹುಬ್ಬಳ್ಳಿ ಕಿಮ್ಸ್‌ ಆಸ್ಪತ್ರೆಗೆ ದಾಖಲಾಗಿದ್ದು, ಅಲ್ಲಿ ಕೋವಿಡ್‌ ಟೆಸ್ವ್‌ ಮಾಡಿದಾಗ ಕೊರೋನಾ ದೃಢವಾಗಿದೆ.

ಧಾರವಾಡ ಜಿಲ್ಲಾಡಳಿತ ಗದಗ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದೆ. ತಕ್ಷಣ ಎಚ್ಚೆತ್ತುಕೊಂಡ ಜಿಲ್ಲಾಡಳಿತ ತಕ್ಷಣ ಅಲರ್ಟ್‌ ಆಗಿ ಅವನ ಮಾವನ ಮನೆಯ ಎಲ್ಲರನ್ನೂ ಕೋವಿಡ್‌ ಟೆಸ್ಟ್‌ ಮಾಡಿದೆ. ಇಬ್ಬರಿಗೆ ಕೊರೊನಾ ಪಾಸಿಟಿವ್‌ ಬಂದಿದೆ. ಅವರ ಪತ್ನಿ, ಮಗಳಿಗೆ ಕೊರೋನಾ ಟೆಸ್ವ್‌ ಮಾಡಿದ್ದು, ಇಬ್ಬರ ವರದಿ ನೆಗೆಟಿವ್‌ ಬಂದಿದೆ. ಪಿ.6255 ಬೆಳೆ ಸಾಲಕ್ಕಾಗಿ ಗ್ರಾಮದ ಕೆವಿಜಿ ಬ್ಯಾಂಕ್‌ಗೆ ಕೂಡಾ ತೆರಳಿದ್ದಾನೆ. ಇಡೀ ಗ್ರಾಮದ ಜನರೇ ಇದರಿಂದ ಆತಂಕಕ್ಕೆ ಒಳಗಾಗಿದ್ದಾರೆ.