ಉಡುಪಿ (ಅ.11): ರಾಜರಾಜೇಶ್ವರಿ ನಗರದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನವರು ದಕ್ಷ ಜಿಲ್ಲಾಧಿಕಾರಿಯಾಗಿದ್ದ ದಿವಂಗತ ಡಿ.ಕೆ. ರವಿ ಅವರ ಹೆಸರನ್ನು ಹೇಳಿ ಮತ ಯಾಚಿಸಿದರೆ ಅವರಿಗೆ ಒಳ್ಳೆಯದಾಗಲ್ಲ ಎಂದು ಸಂಸದೆ ಶೋಭಾ ಕೆರಂದ್ಲಾಜೆ ಹೇಳಿದ್ದಾರೆ.

ಈ ಚುನಾವಣೆಯಲ್ಲಿ ಡಿ.ಕೆ.ರವಿ ಅವರು ಚರ್ಚೆಯ ವಿಷಯವೇ ಅಲ್ಲ, ಯಾಕೆಂದರೆ ಅವರು ಇಂದು ಬದುಕಿಲ್ಲ. ಆದ್ದರಿಂದ ಚುನಾವಣೆಯ ಸಂದರ್ಭದಲ್ಲಿ ಅವರ ಬಗ್ಗೆ ಚರ್ಚೆ ಮಾಡದಿರುವುದೇ ಒಳ್ಳೆಯದು. ಒಂದು ವೇಳೆ ಕಾಂಗ್ರೆಸ್‌ ಅಭ್ಯರ್ಥಿ, ಡಿ.ಕೆ.ರವಿ ಅವರ ಪತ್ನಿ ಕುಸುಮಾ ಅವರು ಚರ್ಚೆ ಮಾಡಿದರೆ, ನಮ್ಮಲ್ಲೂ ಚರ್ಚೆಗೆ ಸಾಕಷ್ಟುವಿಷಯಗಳಿವೆ ಎಂದು ಶೋಭಾ ಎಚ್ಚರಿಕೆ ನೀಡಿದರು.

'ಪತಿ ಹೆಸರು ನಾನೆಲ್ಲೂ ಬಳಸಲ್ಲ: ರವಿ ತಾಯಿ ಆಶೀರ್ವಾದ ನನಗಿದೆ'

ಡಿ.ಕೆ.ರವಿ ಬದುಕಿದ್ದಾಗ ಕುಸುಮಾ ಕುಟುಂಬ ಅವರಿಗೆ ಏನು ಮಾಡಿತ್ತು ? ಕುಸುಮಾ ಅವರ ತಂದೆ ಏನೇನು ಮಾಡಿದ್ರು? ಡಿ.ಕೆ. ರವಿ ಸತ್ತ ಮೇಲೆ ಕುಸುಮಾ ಎಲ್ಲಿಗೆ ಹೋದರು ? ಯಾಕೆ ಹೋದರು? ಇದೆಲ್ಲವೂ ಈಚೆ ಬರುತ್ತವೆ. ಡಿ.ಕೆ. ರವಿ ಸಾವಿನ ನಂತರ ಅವರ ತಂದೆ ತಾಯಿಗೆ ಆದ ಅವಮಾನ, ಅವರ ಈಗಿನ ಕೆಟ್ಟಪರಿಸ್ಥಿತಿ ಎಲ್ಲವೂ ಚರ್ಚೆಯಾಗುತ್ತವೆ. ಆದ್ದರಿಂದ ಡಿ.ಕೆ. ರವಿ ಹೆಸರು ಪ್ರಸ್ತಾಪಿಸದೆ ಇರುವುದೇ ಒಳ್ಳೆಯದು ಎಂದು ಹೇಳಿದರು.